ರಾತ್ರಿ 2ರವರೆಗೆ ಫೋನ್, ಬೆಳಗ್ಗೆ 7ಕ್ಕೆ ಅಲಾರಂ! ನಾವು ಸ್ಲೀಪ್ ಕ್ರೈಸಿಸ್‌ನತ್ತ ಸಾಗುತ್ತಿದ್ದೇವೆಯೇ ತಿಳಿದುಕೊಳ್ಳಿ

ರಾತ್ರಿ 2ರವರೆಗೆ ಮೊಬೈಲ್ ಅಥವಾ ವೆಬ್ ಸೀರಿಸ್ ನೋಡಿ ಬೆಳಗ್ಗೆ 7ಕ್ಕೆ ಎದ್ದರೆ ನಿದ್ರೆಯ ಕೊರತೆ ಉಂಟಾಗಬಹುದು. ನಿರಂತರವಾಗಿ ಕಡಿಮೆ ನಿದ್ರೆ ಮಾಡುವುದರಿಂದ ಗಮನ, ಮನಸ್ಥಿತಿ ಮತ್ತು ದೈನಂದಿನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ವೀಕೆಂಡ್‌ನಲ್ಲಿ ಹೆಚ್ಚು ಹೊತ್ತು ಮಲಗಿ ಈ ನಿದ್ರೆ ಹಾಳಾಗಿರುವುದನ್ನು ಸರಿದೂಗಿಸಿಕೊಳ್ಳುತ್ತೇವೆ ಎನ್ನುವ ಮನಸ್ಥಿತಿಯಲ್ಲಿರುವವರು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

ರಾತ್ರಿ 2ರವರೆಗೆ ಫೋನ್, ಬೆಳಗ್ಗೆ 7ಕ್ಕೆ ಅಲಾರಂ! ನಾವು ಸ್ಲೀಪ್ ಕ್ರೈಸಿಸ್‌ನತ್ತ ಸಾಗುತ್ತಿದ್ದೇವೆಯೇ ತಿಳಿದುಕೊಳ್ಳಿ
Late Night Scrolling
Image Credit source: Getty Images

Updated on: Sep 22, 2026 | 8:00 PM

“ಇನ್ನೊಂದು ಎಪಿಸೋಡ್ ಮಾತ್ರ… ಇನ್ನೊಂದು ರೀಲ್ ನೋಡಿದ ಮೇಲೆ ಮಲಗುತ್ತೇನೆ…” ಎಂದುಕೊಂಡು ಸಮಯ ನೋಡಿದಾಗ ರಾತ್ರಿ 1 ಅಥವಾ 2 ಗಂಟೆಯಾಗಿರುತ್ತದೆ. ಬೆಳಗ್ಗೆ ಅಲಾರಂ ಹೊಡೆಯುತ್ತಿದ್ದಂತೆ ಎದ್ದು ಕೆಲಸಕ್ಕೆ ಹೊರಡಬೇಕಾಗುತ್ತದೆ. ಹೀಗೆ ಪ್ರತಿದಿನ ನಿದ್ರೆಯನ್ನು ಕಡಿಮೆ ಮಾಡಿಕೊಳ್ಳುವ ಅಭ್ಯಾಸ ನಿಧಾನವಾಗಿ ಸ್ಲೀಪ್ ಡೆಬ್ಟ್ (Sleep Debt) ಹೆಚ್ಚಿಸಬಹುದು. ವಿಶೇಷವಾಗಿ ನಗರಗಳಲ್ಲಿರುವ ಯುವಕ ಯುವತಿಯರಲ್ಲಿ ತಡರಾತ್ರಿ ಸ್ಕ್ರೀನ್ ಬಳಕೆ ಮತ್ತು ಬೆಳಗ್ಗೆ ಬೇಗ ಏಳುವ ರೂಟೀನ್ ಸಾಮಾನ್ಯವಾಗುತ್ತಿದೆ. ಹಾಗಿದ್ದರೆ ರಾತ್ರಿ ಫೋನ್ ನಿದ್ರೆ ಹಾಳು ಮಾಡುವುದಕ್ಕೆ ನಿಜವಾದ ಕಾರಣವೇನು, ವೀಕೆಂಡ್‌ನಲ್ಲಿ 10-12 ಗಂಟೆ ಮಲಗಿ ಈ ನಿದ್ರೆಯನ್ನು ಸರಿದೂಗಿಸಿಕೊಳ್ಳುವುದು ಸರಿಯೇ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಭಾರತದಲ್ಲಿ ನಿದ್ರೆಯ ಕೊರತೆ ಹೆಚ್ಚುತ್ತಿದೆಯೇ?

2025ರ LocalCircles ‘How India Sleeps’ ಸಮೀಕ್ಷೆಯಲ್ಲಿ 348 ಜಿಲ್ಲೆಗಳ 43,000ಕ್ಕೂ ಹೆಚ್ಚು ಜನರಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಸಮೀಕ್ಷೆಯಲ್ಲಿ 59% ಮಂದಿ ರಾತ್ರಿ ನಿರಂತರವಾಗಿ 6 ಗಂಟೆಗೂ ಕಡಿಮೆ ನಿದ್ರೆ ಮಾಡುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ, Wakefitನ 2025ರ Great Indian Sleep Scorecardನಲ್ಲಿ 58% ಭಾರತೀಯರು ರಾತ್ರಿ 11 ಗಂಟೆಯ ನಂತರ ಮಲಗುವುದಾಗಿ ಮತ್ತು 44% ಮಂದಿ ಬೆಳಗ್ಗೆ ಎದ್ದ ನಂತರ ಫ್ರೆಶ್ ಆಗಿ ಅನಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಅಂಕಿಅಂಶಗಳು ನಿದ್ರೆಯ ಅವಧಿ ಮಾತ್ರವಲ್ಲ, ನಿದ್ರೆಯ ಗುಣಮಟ್ಟವೂ ಮುಖ್ಯ ಎಂಬುದನ್ನು ತೋರಿಸುತ್ತವೆ.

ರಾತ್ರಿ ಫೋನ್ ಬಳಕೆ ನಿದ್ರೆ ಹಾಳು ಮಾಡುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ರಾತ್ರಿ ಮಲಗುವ ಮುನ್ನ ಮೊಬೈಲ್‌ನಲ್ಲಿ ರೀಲ್ಸ್, ವಿಡಿಯೋ ಅಥವಾ ವೆಬ್ ಸೀರಿಸ್ ನೋಡುವುದು ಮೆದುಳನ್ನು ಹೆಚ್ಚು ಸಕ್ರಿಯವಾಗಿರಿಸಬಹುದು. “ಇನ್ನೊಂದು ವಿಡಿಯೋ” ಎಂದು ಆರಂಭಿಸಿದ ಸ್ಕ್ರೋಲಿಂಗ್ ಎಷ್ಟು ಹೊತ್ತು ಮುಂದುವರಿಯುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಸ್ಕ್ರೀನ್ ಬೆಳಕು ಮಾತ್ರವಲ್ಲ, ನಿರಂತರವಾಗಿ ಬದಲಾಗುವ ಆಸಕ್ತಿದಾಯಕ ಕಂಟೆಂಟ್ ಕೂಡ ಮಲಗುವ ಸಮಯವನ್ನು ಮುಂದೂಡಬಹುದು. ಆದ್ದರಿಂದ ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಸ್ಕ್ರೀನ್ ಬಳಕೆಯನ್ನು ಕಡಿಮೆ ಮಾಡುವುದು ಸಹಾಯಕವಾಗಬಹುದು.

ಇದನ್ನೂ ಓದಿ: ಜೋರಾಗಿ ಗೊರಕೆ ಹೊಡೆಯುವುದು, ರಾತ್ರಿ ಪದೇಪದೇ ಎಚ್ಚರವಾಗುವುದು ಗಂಭೀರ ಸಮಸ್ಯೆಯ ಸೂಚನೆ!

7 ಗಂಟೆಗಿಂತ ಕಡಿಮೆ ನಿದ್ರೆ ಸಾಕೇ?

ಸಿಡಿಸಿ ಪ್ರಕಾರ 18ರಿಂದ 60 ವರ್ಷದ ವಯಸ್ಕರು ಸಾಮಾನ್ಯವಾಗಿ ಪ್ರತಿದಿನ ಕನಿಷ್ಠ 7 ಗಂಟೆಗಳ ನಿದ್ರೆ ಮಾಡಬೇಕು. ನಿರಂತರವಾಗಿ ಕಡಿಮೆ ನಿದ್ರೆ ಮಾಡಿದರೆ ಗಮನ, ಪ್ರತಿಕ್ರಿಯೆ ವೇಗ, ಮನಸ್ಥಿತಿ ಮತ್ತು ದೈನಂದಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ನಿದ್ರೆಯ ಕೊರತೆಯಿಂದ ಕೆಲಸದ ವೇಳೆ ನಿದ್ದೆ ಬರುವುದು, ಏಕಾಗ್ರತೆ ಕಡಿಮೆಯಾಗುವುದು ಮತ್ತು ತಪ್ಪುಗಳನ್ನು ಮಾಡುವ ಸಾಧ್ಯತೆ ಹೆಚ್ಚಾಗಬಹುದು.

ವೀಕೆಂಡ್‌ನಲ್ಲಿ 10-12 ಗಂಟೆ ಮಲಗಿದರೆ ಸಾಕೇ?

ವಾರದ ದಿನಗಳಲ್ಲಿ ಕಡಿಮೆ ನಿದ್ರೆ ಮಾಡಿ ವೀಕೆಂಡ್‌ನಲ್ಲಿ 10-12 ಗಂಟೆ ಮಲಗುವುದರಿಂದ ಎಲ್ಲ ನಿದ್ರೆಯ ಕೊರತೆಯೂ ಸಂಪೂರ್ಣವಾಗಿ ಸರಿಯಾಗುತ್ತದೆ ಎಂದು ಭಾವಿಸುವುದು ಸರಿಯಲ್ಲ. ವೀಕೆಂಡ್‌ನಲ್ಲಿ ಹೆಚ್ಚು ಮಲಗುವುದರಿಂದ ಕೆಲವರಿಗೆ ತಾತ್ಕಾಲಿಕವಾಗಿ ಆರಾಮ ಸಿಗಬಹುದು. ಆದರೆ ಪ್ರತಿದಿನದ ನಿದ್ರೆಯ ವೇಳಾಪಟ್ಟಿಯನ್ನು ನಿಯಮಿತವಾಗಿಟ್ಟುಕೊಳ್ಳುವುದು ಹೆಚ್ಚು ಮುಖ್ಯ.

ಉತ್ತಮ ನಿದ್ರೆಗಾಗಿ ಈ ಅಭ್ಯಾಸ ಬೆಳೆಸಿಕೊಳ್ಳಿ

ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಒಂದೇ ಸಮಯಕ್ಕೆ ಏಳಲು ಪ್ರಯತ್ನಿಸಿ. ಮಲಗುವ ಮುನ್ನ ಮೊಬೈಲ್, ಟಿವಿ ಬಳಕೆಯನ್ನು ಕಡಿಮೆ ಮಾಡಿ. ರಾತ್ರಿ ಹೆಚ್ಚು ಕ್ಯಾಫೀನ್ ಸೇವಿಸುವುದನ್ನು ತಪ್ಪಿಸಿ. ಮಲಗುವ ಕೋಣೆಯನ್ನು ಕತ್ತಲೆ, ಶಾಂತ ಮತ್ತು ಆರಾಮದಾಯಕವಾಗಿರಿಸಿ. ನಿಯಮಿತವಾಗಿ ಸಾಕಷ್ಟು ಸಮಯ ಮಲಗಿದರೂ ದಣಿವು, ಜೋರಾದ ಗೊರಕೆ, ನಿದ್ರೆಯಲ್ಲಿ ಉಸಿರಾಟಕ್ಕೆ ತೊಂದರೆ ಅಥವಾ ಹಗಲಿನಲ್ಲಿ ಅತಿಯಾದ ನಿದ್ದೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ರಾತ್ರಿ 2 ಗಂಟೆಯವರೆಗೆ ಎಚ್ಚರವಾಗಿದ್ದು ಬೆಳಗ್ಗೆ 7ಕ್ಕೆ ಎದ್ದರೆ, ದೇಹಕ್ಕೆ ಸಿಗಬೇಕಾದ ನಿದ್ರೆಯ ಸಮಯ ಕಡಿಮೆಯಾಗುತ್ತದೆ. ಹೀಗಾಗಿ ವೀಕೆಂಡ್‌ನ ದೀರ್ಘ ನಿದ್ರೆಗಿಂತ ಪ್ರತಿದಿನದ ಉತ್ತಮ ನಿದ್ರೆ ಮಾಡುವ ಅಭ್ಯಾಸವೇ ಬಹಳ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us