Lumpy Skin Disease: ಕೋಲಾರದಲ್ಲಿ ಹಸುಗಳಿಗೆ ಚರ್ಮಗಂಟು ರೋಗ, ಆತಂಕದಲ್ಲಿ ಹೈನೋಧ್ಯಮ

ಕೋಲಾರ ಜಿಲ್ಲೆಯ ಸಾವಿರಾರು ಕುಟುಂಬಗಳು ಹೈನೋಧ್ಯಮವನ್ನೇ ನಂಬಿ ಬದುಕುತ್ತಿವೆ, ಹೀಗಿರುವಾಗ ಹೈನೋಧ್ಯಮವನ್ನೇ ಮಕಾಡೆ ಮಲಗಿಸುವಂತಹ ಆಘಾತಕಾರಿ ರೋಗವೊಂದು ಆ ಜಿಲ್ಲೆಯ ಗೋಪಾಲಕರ ನಿದ್ದೆಗೆಡಿಸಿದೆ,

Lumpy Skin Disease: ಕೋಲಾರದಲ್ಲಿ ಹಸುಗಳಿಗೆ ಚರ್ಮಗಂಟು ರೋಗ, ಆತಂಕದಲ್ಲಿ ಹೈನೋಧ್ಯಮ
Cattle
Follow us
TV9 Web
| Updated By: ನಯನಾ ರಾಜೀವ್

Updated on: Sep 23, 2022 | 12:48 PM

ಕೋಲಾರ ಜಿಲ್ಲೆಯ ಸಾವಿರಾರು ಕುಟುಂಬಗಳು ಹೈನೋಧ್ಯಮವನ್ನೇ ನಂಬಿ ಬದುಕುತ್ತಿವೆ, ಹೀಗಿರುವಾಗ ಹೈನೋಧ್ಯಮವನ್ನೇ ಮಕಾಡೆ ಮಲಗಿಸುವಂತಹ ಆಘಾತಕಾರಿ ರೋಗವೊಂದು ಆ ಜಿಲ್ಲೆಯ ಗೋಪಾಲಕರ ನಿದ್ದೆಗೆಡಿಸಿದೆ, ನಿಂತಲ್ಲೇ ಹಸುಗಳು ಸಾವನ್ನಪ್ಪುತ್ತಿದ್ದು ಮಾರಕ ಕಾಯಿಲೆಯಿಂದ ತತ್ತರಿಸುವ ಗೋ ಪಾಲಕರು ದಿಕ್ಕುಕಾಣದಂತಾಗಿದ್ದಾರೆ..

ಕೋಲಾರ ಹಸುಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ ಗಂಟುರೋಗ..!

ಕೋಲಾರ ಜಿಲ್ಲೆಯಲ್ಲಿ ಬಹುತೇಕ ರೈತರು ಕ್ಷೀರೋಧ್ಯಮವನ್ನೇ ನಂಬಿ ಬದುಕುತ್ತಿರುವ ಜನರೇ ಹೆಚ್ಚು ಸಾವಿರಾರು ಕುಟುಂಬಗಳು ಇದನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಕೋಲಾರ ಜಿಲ್ಲೆಯಲ್ಲಿ ಹೈನೋಧ್ಯಮವನ್ನು ಆತಂಕಕ್ಕೀಡು ಮಾಡುವ ಮಾರಕ ಕಾಯಿಲೆಯೊಂದು ಜಿಲ್ಲೆಯ ಹಸುಗಳಲ್ಲಿ ಕಂಡು ಬಂದಿದೆ.

ಕೋಲಾರ ಜಿಲ್ಲೆಯ ಹಸುಗಳಲ್ಲಿ ಚರ್ಮಗಂಟು ರೋಗ( Lumpy Skin Disease ) ವೊಂದು ಕಾಣಿಸಿಕೊಳ್ಳುವ ಮೂಲಕ ಗೋಪಾಲಕರಲ್ಲಿ ಆತಂಕ ಉಂಟು ಮಾಡಿದೆ. ಜಿಲ್ಲೆಯ ಸಾವಿರಾರು ಹಸುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಳ್ಳುವ ಮೂಲಕ ಗೋಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.

ಚರ್ಮಗಂಟು ರೋಗದ ಲಕ್ಷಣಗಳೇನು ಹೇಗೆ ಹರಡುತ್ತದೆ..! ಮಾರಕ ವೈರಸ್​ನಿಂದ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಬೇಗನೇ ಹರಡುವ ಈ ಚರ್ಮಗಂಟು ರೋಗ ಬಂದೊಡನೆಯೇ ಹಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ, ಜೊತೆಗೆ ಹಸುಗಳು ಆಹಾರ ನೀರು ತಿನ್ನೋದನ್ನು ಬಿಟ್ಟು ಏಕಾಏಕಿ ಹಸುಗಳು ಬಡಕಲಾಗುತ್ತವೆ, ಕೊನೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ಹಸುಗಳಲ್ಲಿ ರೋಗ ಉಲ್ಪಣವಾಗಿ ಸಾವನ್ನಪ್ಪುತ್ತಿವೆ.

ಸದ್ಯ ಜಿಲ್ಲೆಯಲ್ಲಿ ರೋಗ ಹೆಚ್ಚಾಗಿದ್ದು ರೈತರು ಹೇಳುವ ಪ್ರಕಾರ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಹಸುಗಳು ಈ ಗಂಟು ರೋಗದಿಂದ ವಸಾವನ್ನಪ್ಪಿವೆ ಎನ್ನಲಾಗುತ್ತಿದೆ.

ಗಡಿಭಾಗದಲ್ಲಿ ವೈದ್ಯರ ಕೊರತೆ ಚಿಕಿತ್ಸೆ ಕೊಡಿಸಲು ಆಗದೆ ಗೋಪಾಲಕರ ಕಣ್ಣೀರು..! ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಹೋಬಳಿಯ ಪಚ್ಚಾರ್ಲಹಳ್ಳಿ, ಬೀಮಗಾನಹಳ್ಳಿ, ಕಾರಮಾನ ಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ರೋಗ ಉಲ್ಬಣವಾಗಿದ್ದು ಈ ಭಾಗದಲ್ಲಿ ಪಶುವೈದ್ಯರಿಲ್ಲದೆ ರೈತರು ರೋಗ ಲಕ್ಷಣ ಕಂಡ ಕೂಡಲೇ ಹಸುಗಳಿಗೆ ಚಿಕಿತ್ಸೆ ಕೊಡಿಸಲಾಗದೆ ಲಕ್ಷಾಂತರ ರೂ ದುಡ್ಡುಕೊಟ್ಟು ತಂದಿದ್ದ ತಂದಿದ್ದ ಹಸುಗಳು ಸಾವನ್ನಪ್ಪುತ್ತಿವೆ. ಇನ್ನು ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ವೈದ್ಯರಿಲ್ಲದ ಕಾರಣ ರೈತರು ದಿಕ್ಕುಕಾಣದೆ ಕಣ್ಣೀರಾಕುತ್ತಿದ್ದಾರೆ.

ಜೊತೆಗೆ ಗಡಿಭಾಗದಲ್ಲಿ ಖಾಸಗಿ ವೈದ್ಯರುಗಳು ಸರಿಯಾದ ಚಿಕಿತ್ಸೆ ಕೊಡದೆ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ ರೈತ ಚಂದ್ರಪ್ಪ ಹಾಗೂ ಮಂಜುಳಾ ಆರೋಪಿಸಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಚರ್ಮಗಂಟು ರೋಗದಿಂದ ಇವರ ಎರಡು ಹಸುಗಳು ಸಾವನ್ನಪ್ಪಿವೆ.

ಲಸಿಕೆ ಹಾಕಲಾಗುತ್ತಿದೆ ರೋಗ ನಿಯಂತ್ರಣಕ್ಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದ ಇಲಾಖೆ…! ಇನ್ನು ಕೋಲಾರ ಜಿಲ್ಲೆಯಲ್ಲಿ ಸರಿಸುಮಾರು 1,86,285 ಹಸುಗಳು ಸೇರಿದಂತೆ, 2,15,533 ಜಾನುವಾರುಗಳಿವೆ. ಈ ಚರ್ಮ ಗಂಟುರೋಗದ ವೈರಸ್​ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಬೇಗನೆ ಹರಡುತ್ತದೆ. ಜೊತೆಗೆ ಸೊಳ್ಳೆ ಅಥವಾ ಇತರೆ ಕ್ರಿಮಿಗಳಿಂದ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಹರಡುತ್ತಿದೆ.

ಹೆಚ್ಚಾಗಿ ಜಿಲ್ಲೆಯ ಗಡಿ ಗ್ರಾಮದ ಶ್ರೀನಿವಾಸಪುರ, ಕೆಜಿಎಫ್, ಬಂಗಾರಪೇಟೆ​ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಈ ವರೆಗೆ 969 ಕ್ಕೂ ಹೆಚ್ಚು ಹಸುಗಳಲ್ಲಿ ಈ ರೋಗ ಕಂಡು ಬಂದಿದ್ದು, ಸುಮಾರು 592 ಹಸುಗಳಲ್ಲಿ ಗುಣಮುಖ ವಾಗಿದ್ದು, ಇನ್ನು ಸುಮಾರು 500ಕ್ಕೂ ಹೆಚ್ಚು ಹಸುಗಳು ಚರ್ಮ ಗಂಟುರೋಗದಿಂದ ಬಳಲುತ್ತಿದೆ ಅನ್ನೋ ಮಾಹಿತಿ ಪಶುಸಂಗೋಪನಾ ಇಲಾಖೆ ಮಾಹಿತಿ ನೀಡುತ್ತಿದೆ.

ಆದರೆ ರೋಗ ನಿಯಂತ್ರಣಕ್ಕೆ 1,22,000 ಸಾವಿರ ಲಸಿಕೆ ತಂದಿದ್ದು 244 ಹಳ್ಳಿಗಳಲ್ಲಿ ಲಸಿಕೆ ಹಾಕಲಾಗಿದೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ರೋಗ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ಈವರೆಗೆ ಕೇವಲ ನಾಲ್ಕು ಹಸುಗಳು ಸಾವನ್ನಪ್ಪಿವೆ ಜೊತೆಗೆ ರೋಗ ಕಂಡು ಬಂದ ಹಳ್ಳಿಯ ಸುತ್ತಮುತ್ತಲ 5 ಕಿಲೋಮೀಟರ್​ ವ್ಯಾಪ್ತಿಯ ಹಸುಗಳಿಗೆ ಹಾಗೂ ಜಾನುವಾರುಗಳಿಗೆ ಲಸಿಕೆ ಹಾಕುವ ಕೆಲಸವೂ ಆರಂಭವಾಗಿದೆ ಅನ್ನೋದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರಾದ ತುಳಸಿರಾಮ್ ಅವರ ಮಾತು.

ಒಟ್ಟಾರೆ ಮಾರಕ ಚರ್ಮಗಂಟು ರೋಗ ಕೋಲಾರ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ್ದು ಈ ಮೂಲಕ ಜಿಲ್ಲೆಯ ಗೋಪಾಲಕರ ನಿದ್ದೆಗೆಡಿಸಿದೆ. ಕೂಡಲೇ ಪಶು ಸಂಗೋಪನಾ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ರೋಗ ನಿಯಂತ್ರಣ ಮಾಡಬೇಕಿದೆ ಇಲ್ಲವಾದಲ್ಲಿ ಜಿಲ್ಲೆಯ ಹೈನೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳೋದರಲ್ಲಿ ಎರಡು ಮಾತಿಲ್ಲ.

ವರದಿ: ರಾಜೇಂದ್ರ ಸಿಂಹ

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ