Menstruation Diet: ಮುಟ್ಟಿನ ಸಮಯದಲ್ಲಿ ಈ ಆಹಾರಗಳನ್ನು ಅಪ್ಪಿತಪ್ಪಿಯು ಸೇವಿಸಲೇ ಬೇಡಿ!
ಮುಟ್ಟು ಎನ್ನುವುದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ ಹೆಚ್ಚಿನ ಮಹಿಳೆಯರು ಹಾಗೂ ಯುವತಿಯರಿಗೆ ತಿಂಗಳ ಮೂರು ದಿನಗಳು ಯಾತನದಾಯಕವಾಗಿರುತ್ತದೆ. ಯಾಕಾದ್ರೂ ಮುಟ್ಟಿನ ದಿನ ಹತ್ತಿರ ಬರುತ್ತದೆ ಎಂದು ಕೊಳ್ಳುತ್ತಾ ಮೂರು ದಿನವನ್ನು ಹೇಗೋ ತಳ್ಳುತ್ತಾರೆ. ಆದರೆ ಈ ಸಮಯದಲ್ಲಿ ಸ್ವಚ್ಛತೆಯ ಜೊತೆಗೆ ಆಹಾರ ಕಡೆಗೂ ಗಮನ ನೀಡಬೇಕಾಗುತ್ತದೆ. ಸಿಕ್ಕ ಸಿಕ್ಕ ಆಹಾರ ತಿನ್ನುವ ಬದಲು ಆರೋಗ್ಯಕ್ಕೆ ಪೂರಕವಾದ ಆಹಾರ ಸೇವಿಸಬೇಕು. ಅದರೊಂದಿಗೆ ಬಿಸಿ ನೀರಿನ ಸೇವನೆ ಮಾಡುವುದು ಉತ್ತಮ. ಆದರೆ ಅಪ್ಪಿ ತಪ್ಪಿಯು ಈ ಕೆಲವು ಆಹಾರ ಸೇವನೆ ಮಾಡಲೇಬೇಡಿ.

ಮುಟ್ಟು ಎಂದರೆ ಕಿರಿಕಿರಿ, ನೋವಿನಿಂದ ಕೂಡಿದ ಮೂರು ದಿನ. ಋತುಚಕ್ರದ ಸಮಸ್ಯೆಗಳು ಮಹಿಳೆಯರಲ್ಲಿ ಒಬ್ಬರಿಗೆ ಒಂದೊಂದು ರೀತಿಯಾಗಿರುತ್ತದೆ. ಕೆಲವರು ಸಹಜವಾಗಿಯೇ ಎಲ್ಲಾ ಕೆಲಸಗಳನ್ನು ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಹಾಸಿಗೆಯಿಂದ ಎದ್ದೇಳುವುದೇ ಕಷ್ಟ . ಈ ಸಮಯದಲ್ಲಿ ದೈಹಿಕ ನೋವು ಹಾಗೂ ಮಾನಸಿಕ ಕಿರಿಕಿರಿಯನ್ನು ನಿಭಾಯಿಸಿಕೊಂಡು ಹೋಗುವುದು ತ್ರಾಸದಾಯಕ. ಹೆಚ್ಚಿನವರಲ್ಲಿ ಬೆನ್ನು ನೋವು, ಸ್ನಾಯು ಸೆಳೆತ, ಕಿಬ್ಬೊಟ್ಟೆಯೊಳಗೆ ವಿಪರೀತ ಸೆಳೆತ ಹಾಗೂ ಅಧಿಕ ರಕ್ತಸ್ರಾವ ಕಾಡುತ್ತವೆ. ನೋವನ್ನು ಕಡಿಮೆ ಮಾಡಲೆಂದು ನೋವು ನಿವಾರಕ ಮಾತ್ರೆಗಳನ್ನು ಹೆಚ್ಚಿನವರು ಸೇವಿಸುತ್ತಾರೆ. ಆದರೆ ಈ ಸಮಯದಲ್ಲಿ ಸೇವಿಸುವ ಕೆಲವು ಆಹಾರಗಳು ಕೂಡ ಮುಟ್ಟಿನ ನೋವು ಹೆಚ್ಚು ಮಾಡುತ್ತದೆ. ಹೀಗಾಗಿ ಆಹಾರಗಳ ಸೇವನೆಗಳತ್ತ ಹೆಚ್ಚು ಗಮನ ನೀಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
-
ಸಿಹಿತಿಂಡಿಗಳು :
ಈ ಪಿರಿಯಡ್ಸ್ ಸಮಯದಲ್ಲಿ ಸಿಹಿತಿಂಡಿಗಳನ್ನು ತಿನ್ನಬೇಕೆಂದು ಬಯಕೆಯಾಗುವುದು ಸಹಜ. ಆದರೆ ಆಸೆಯಾದರೂ ಕೂಡ ಈ ಸಿಹಿ ತಿಂಡಿಗಳನ್ನು ಸೇವಿಸಲೇ ಬೇಡಿ. ಸ್ವೀಟ್ ಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣದಲ್ಲಿ ಸಮತೋಲನವನ್ನು ಏರುಪೇರು ಮಾಡುತ್ತವೆ. ಅದಲ್ಲದೇ ನಿಮ್ಮ ಮೂಡನ್ನು ಬದಲಾವಣೆಗೂ ಕಾರಣವಾಗುತ್ತದೆ.
-
ಉಪ್ಪಿನಕಾಯಿ:
ಮಹಿಳೆಯರು ತಿಂಗಳ ಮುಟ್ಟಿನ ಸಮಯದಲ್ಲಿ ಉಪ್ಪಿನಕಾಯಿ ಸೇವನೆಯನ್ನು ಕಡಿಮೆ ಮಾಡುವುದು ಸೂಕ್ತ. ಇದು ಹಾರ್ಮೋನಿನ ಸಮತೋಲನ ತಪ್ಪಿಸುವುದಲ್ಲದೆ, ನೋವಿನ ಪ್ರಮಾಣವನ್ನು ಹೆಚ್ಚಿಸಿ ಕೋಪ, ಸಿಡಿಮಿಡಿ ಹಾಗೂ ಕಿರಿಕಿರಿಯಂತಹ ಭಾವನೆಯನ್ನು ಉಂಟು ಮಾಡುತ್ತದೆ.
-
ಮೈದಾದಿಂದ ತಯಾರಿಸಿದ ಆಹಾರಗಳು:
ಇತ್ತೀಚೆಗಿನ ದಿನಗಳಲ್ಲಿ ಮೈದಾವಿಲ್ಲದೇ ಯಾವುದೇ ಆಹಾರವು ತಯಾರಾಗುವುದಿಲ್ಲ. ಮಾಸಿಕ ಋತುಸ್ರಾವದ ಸಮಯದಲ್ಲಿ ಮೈದಾದಿಂದ ಮಾಡಿದ ಆಹಾರಗಳಿಂದ ದೂರವಿರುವುದು ಉತ್ತಮ. ಇದು ಮಲಬದ್ಧತೆಯನ್ನು ಉಂಟು ಮಾಡುವುದಲ್ಲದೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವಂತೆ ಮಾಡುತ್ತದೆ.
-
ಉಪ್ಪಿನ ಅಂಶ ಹೆಚ್ಚಿರುವ ಆಹಾರಗಳು :
ಯಾವುದೇ ಆಹಾರವು ಉಪ್ಪಿಲ್ಲದೇ ರುಚಿಸುವುದಿಲ್ಲ. ಆದರೆ ಕೆಲವು ತಿಂಡಿ ತಿನಿಸುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಬೆರೆಸಲಾಗುತ್ತದೆ. ಚಿಪ್ಸ್ ಸೇರಿದಂತೆ ಪ್ಯಾಕ್ ಮಾಡಲಾದ ಆಹಾರಗಳಿಂದ ಆದಷ್ಟು ದೂರವಿರಿ. ಇದರಲ್ಲಿ ಉಪ್ಪಿನ ಪ್ರಮಾಣವು ಅಧಿಕವಾಗಿರುತ್ತದೆ.
-
ಕರಿದ ತಿನಿಸುಗಳ ಸೇವನೆ ಬೇಡ:
ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಪಿರಿಯಡ್ಸ್ ಸಮಯದಲ್ಲಿ ಸೇವಿಸಬೇಡಿ. ಈ ಆಹಾರಗಳ ಸೇವನೆಯು ದೇಹದಲ್ಲಿ ಉರಿಯೂತವನ್ನು ಉಂಟು ಮಾಡುತ್ತದೆ. ಸ್ನಾಯು ಸೆಳೆತ, ಸೊಂಟ ನೋವು ಹಾಗೂ ಬೆನ್ನು ನೋವಿನ ಪ್ರಮಾಣವನ್ನು ಹೆಚ್ಚಿಸುತ್ತದೆ.
-
ಕಾಫಿ ಹಾಗೂ ಚಹಾ ಸೇವನೆಯಿಂದ ಆದಷ್ಟು ದೂರವಿರಿ :
ಹೆಚ್ಚಿನವರಿಗೆ ಕಾಫಿ ಹಾಗೂ ಚಹಾವು ರಿಲ್ಯಾಕ್ಸ್ ಆಗಿಸುತ್ತದೆ. ಆದರೆ ಋತುಚಕ್ರದ ಸಮಯದಲ್ಲಿ ಕಾಫಿ ಹಾಗೂ ಟೀ ಸೇವನೆಯು ನೋವನ್ನು ಹೆಚ್ಚು ಮಾಡಬಹುದು. ಕೆಫಿನ್ ಅಂಶವು ಹೇರಳವಾಗಿದ್ದು, ಇದು ಸ್ನಾಯು ಸೆಳೆತವನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಮುಟ್ಟಿನ ಸಮಯದಲ್ಲಿ ಕಾಫಿ ಹಾಗೂ ಟೀ ಸೇವನೆಯನ್ನು ಆದಷ್ಟು ತಪ್ಪಿಸುವುದು ಹಿತಕರ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ