
ನೇರಳೆ ಹಣ್ಣು ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪರಂಪರೆಯಲ್ಲಿ ಅತ್ಯಂತ ಮಹತ್ವದ ಔಷಧೀಯ ಫಲಗಳಲ್ಲಿ ಒಂದಾಗಿದೆ. ಸಂಸ್ಕೃತದಲ್ಲಿ ಇದನ್ನು “ಜಂಬೂ”, ಕನ್ನಡದಲ್ಲಿ “ನೇರಳೆ” ಮತ್ತು ಹಿಂದಿಯಲ್ಲಿ “ಜಾಮುನ್” ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು Syzygium cumini. ಈ ಅದ್ಭುತ ಮರದ ಹಣ್ಣು, ಬೀಜ, ಎಲೆ, ತೊಗಟೆ ಮತ್ತು ಬೇರು—ಹೀಗೆ ಪ್ರತಿಯೊಂದು ಭಾಗವೂ ತನ್ನದೇ ಆದ ವಿಶಿಷ್ಟ ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದದ ಪ್ರಕಾರ ನೇರಳೆ ಹಣ್ಣು ಕಷಾಯ (ಒಗರು) ರಸ ಹಾಗೂ ಶೀತ ಸ್ವಭಾವವನ್ನು ಹೊಂದಿದೆ. ವಿಶೇಷವಾಗಿ ಮಧುಮೇಹ, ಜೀರ್ಣಕ್ರಿಯೆ, ರಕ್ತಶುದ್ಧಿ ಮತ್ತು ಬಾಯಿಯ ಆರೋಗ್ಯದ ವಿಷಯಗಳಲ್ಲಿ ಇದರ ಬಳಕೆ ಶತಮಾನಗಳಿಂದ ನಡೆದುಕೊಂಡು ಬಂದಿದೆ.
ನೇರಳೆ ಹಣ್ಣು ಮತ್ತು ಅದರ ಬೀಜಗಳು ಮಧುಮೇಹ (ಡಯಾಬಿಟಿಸ್) ನಿಯಂತ್ರಣಕ್ಕೆ ರಾಮಬಾಣ ಎಂದು ಪ್ರಾಚೀನ ವೈದ್ಯಕೀಯ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಒಣಗಿಸಿದ ಬೀಜದ ಪುಡಿಯನ್ನು ಮಿತ ಪ್ರಮಾಣದಲ್ಲಿ ನೀರಿನೊಂದಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಇದರೊಂದಿಗೆ ಅಜೀರ್ಣ, ಹೊಟ್ಟೆ ನೋವು, ಭೇದಿ ಮತ್ತು ಅತಿಸಾರದಂತಹ ಸಮಸ್ಯೆಗಳಲ್ಲಿ ನೇರಳೆ ಹಣ್ಣು ಉಪಯುಕ್ತವೆಂದು ಪರಿಗಣಿಸಲಾಗಿದೆ. ಊಟದ ನಂತರ ಸ್ವಲ್ಪ ಪ್ರಮಾಣದಲ್ಲಿ ಇದನ್ನು ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಅಲ್ಲದೆ, ನೇರಳೆಯಲ್ಲಿರುವ ಹೇರಳವಾದ ಕಬ್ಬಿಣಾಂಶ ಮತ್ತು ವಿಟಮಿನ್ C ರಕ್ತ ಉತ್ಪಾದನೆಗೆ ನೆರವಾಗುವ ಮೂಲಕ ರಕ್ತಹೀನತೆಯನ್ನು (Anemia) ಕಡಿಮೆ ಮಾಡಿ ರಕ್ತವನ್ನು ಶುದ್ಧಗೊಳಿಸುತ್ತದೆ.
ನೇರಳೆ ಹಣ್ಣಿನ ಬೀಜಗಳನ್ನು ಒಣಗಿಸಿ ಸಿದ್ಧಪಡಿಸುವ ಪುಡಿಯನ್ನು ಮಧುಮೇಹ ಮಾತ್ರವಲ್ಲದೆ ಅತಿಸಾರ ಮತ್ತು ಮೂತ್ರ ಸಂಬಂಧಿತ ತೊಂದರೆಗಳಿಗೂ ಬಳಸಲಾಗುತ್ತದೆ. ಇದರ ಬೀಜದ ಕಷಾಯವು ಮೂತ್ರದ ಸೋಂಕು (UTI), ಮೂತ್ರದ ಉರಿ ಹಾಗೂ ಮೂತ್ರಪಿಂಡದ (ಕಿಡ್ನಿ) ಆರೋಗ್ಯಕ್ಕೆ ಒಳ್ಳೆಯದು. ಇನ್ನು ಗ್ರಾಮೀಣ ಭಾರತದಲ್ಲಿ ನೇರಳೆ ಮರದ ತೊಗಟೆಯನ್ನು ಒಣಗಿಸಿ ಪುಡಿ ಮಾಡಿ ಹಲ್ಲುಜ್ಜಲು ಬಳಸುವ ಪದ್ಧತಿ ಇಂದಿಗೂ ಇದೆ. ಇದು ವಸಡುಗಳನ್ನು ಗಟ್ಟಿಗೊಳಿಸಿ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಈ ತೊಗಟೆಯ ಕಷಾಯದಿಂದ ಮುಖ ತೊಳೆಯುವುದರಿಂದ ಮೊಡವೆಗಳು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.
ತಾಜಾ ನೇರಳೆ ಎಲೆಗಳನ್ನು ಪ್ರತಿದಿನ ಅಗಿಯುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ ಮತ್ತು ಒಸಡುಗಳ ಆರೋಗ್ಯ ಸುಧಾರಿಸುತ್ತದೆ. ಕೆಲವು ಪ್ರಾಚೀನ ಗ್ರಂಥಗಳಲ್ಲಿ ನೇರಳೆ ಎಲೆಯ ರಸವನ್ನು ಮಧುಮೇಹ ನಿರ್ವಹಣೆಗೆ ಸಹಾಯಕವಾಗಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ಹಳ್ಳಿಗಳಲ್ಲಿ ಎಲೆಯ ರಸ ಅಥವಾ ಎಲೆಗಳ ಲೇಪನವನ್ನು ಸಣ್ಣಪುಟ್ಟ ಗಾಯಗಳ ಮೇಲೆ ಹಚ್ಚುವ ಸಂಪ್ರದಾಯವಿದೆ. ಇದು ಆಂಟಿಸೆಪ್ಟಿಕ್ ತರಹ ಕೆಲಸ ಮಾಡಿ ಗಾಯಗಳು ಬೇಗ ವಾಸಿಯಾಗಲು ಸಹಕರಿಸುತ್ತದೆ.
ನೇರಳೆ ಹಣ್ಣು ಆರೋಗ್ಯಕರವಾಗಿದ್ದರೂ, ಇದನ್ನು ಅತಿಯಾಗಿ ಅಥವಾ ತಪ್ಪು ಕ್ರಮದಲ್ಲಿ ಸೇವಿಸಿದರೆ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು:
ಕೆಲವರಲ್ಲಿ ಇದು ಚರ್ಮದ ತುರಿಕೆ ಅಥವಾ ಉಸಿರಾಟದ ತೊಂದರೆಯಂತಹ ಅಲರ್ಜಿ ಉಂಟುಮಾಡಬಹುದು. ಗರ್ಭಿಣಿಯರು ಇದನ್ನು ಸಾಮಾನ್ಯ ಆಹಾರದ ಪ್ರಮಾಣದಲ್ಲಿ ಸೇವಿಸುವುದು ಸುರಕ್ಷಿತವಾದರೂ, ವೈದ್ಯಕೀಯ ಉದ್ದೇಶಕ್ಕೆ ಬಳಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಕಡ್ಡಾಯ. ದಿನಕ್ಕೆ 100 ರಿಂದ 150 ಗ್ರಾಂ ಮಿತಿಯಲ್ಲಿ ಹಣ್ಣನ್ನು ತಿನ್ನುವುದು ಅತ್ಯುತ್ತಮ.
ಇದನ್ನೂ ಓದಿ: ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?
ನೇರಳೆ ಹಣ್ಣು ಸ್ವಭಾವತಃ ಒಗರು ಮತ್ತು ಹುಳಿ ರುಚಿ ಹೊಂದಿದೆ. ಉಪ್ಪು ಹಾಕಿ ತಿಂದಾಗ ಆ ಒಗರು ಕಡಿಮೆಯಾಗಿ ಹಣ್ಣಿನ ನೈಸರ್ಗಿಕ ಸಿಹಿ ಹೆಚ್ಚುತ್ತದೆ. ಇದು ಭಾರತದಾದ್ಯಂತ ಶತಮಾನಗಳಿಂದ ನಡೆದುಬಂದ ಸಂಪ್ರದಾಯವಾಗಿದೆ. ಸ್ವಲ್ಪ ಉಪ್ಪು (ವಿಶೇಷವಾಗಿ ಸೈಂಧವ ಲವಣ ಅಥವಾ ಕಲ್ಲುಪ್ಪು) ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ ಹಾಗೂ ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಕಡಿಮೆಯಾಗುತ್ತದೆ. ಕಷಾಯ ರಸ ಪ್ರಧಾನವಾದ ನೇರಳೆ ಹಾಗೂ ಲವಣ ರಸವಾದ ಉಪ್ಪು ಸೇರಿದಾಗ ರುಚಿಯ ಸಮತೋಲನ ಉಂಟಾಗುತ್ತದೆ. ಆದರೆ ನೆನಪಿಡಿ, ಕೇವಲ ರುಚಿಗಾಗಿ ಸ್ವಲ್ಪ ಮಾತ್ರ ಉಪ್ಪು ಬಳಸಬೇಕು. ಮಧುಮೇಹಿಗಳು ಮತ್ತು ಅಧಿಕ ರಕ್ತದೊತ್ತಡ (BP) ಇರುವವರು ಉಪ್ಪಿಲ್ಲದೆ ತಿನ್ನುವುದೇ ಆರೋಗ್ಯಕ್ಕೆ ಒಳ್ಳೆಯದು.
ನೇರಳೆ ಕೇವಲ ಒಂದು ಹಣ್ಣು ಮಾತ್ರವಲ್ಲ; ಅದು ಭಾರತದ ಸಂಸ್ಕೃತಿ ಮತ್ತು ಭವ್ಯ ಇತಿಹಾಸದ ಅವಿಭಾಜ್ಯ ಅಂಗವಾಗಿದೆ. ಪುರಾಣಗಳ ಪ್ರಕಾರ, “ಜಂಬೂ” (ನೇರಳೆ) ಎಂಬ ವಿಶಿಷ್ಟ ವೃಕ್ಷಗಳು ಯೆಥೇಚ್ಛವಾಗಿ ಬೆಳೆಯುತ್ತಿದ್ದ ಕಾರಣಕ್ಕಾಗಿಯೇ ಭಾರತವನ್ನು ಪ್ರಾಚೀನ ಕಾಲದಲ್ಲಿ “ಜಂಬೂದ್ವೀಪ” ಎಂದು ಕರೆಯಲಾಗುತ್ತಿತ್ತು. ಆದ್ದರಿಂದ ನೇರಳೆ ಹಣ್ಣು ಕೇವಲ ದೈಹಿಕ ಆರೋಗ್ಯ ನೀಡುವುದಲ್ಲದೆ, ನಮ್ಮ ಸಾಂಸ್ಕೃತಿಕ ಪರಂಪರೆಯ ಹೆಮ್ಮೆಯ ಸಂಕೇತವೂ ಆಗಿದೆ. ಹಣ್ಣು ಆರೋಗ್ಯ ನೀಡಿದರೆ, ಬೀಜ ಔಷಧಿಯಾಗುತ್ತದೆ, ಮರ ಪರಿಸರವನ್ನು ಕಾಪಾಡುತ್ತದೆ. ಪ್ರಕೃತಿ ನಮಗೆ ನೀಡಿರುವ ಈ ರುಚಿಕರ ಹಾಗೂ ಪೌಷ್ಟಿಕ ಕೊಡುಗೆಯನ್ನು ಮಿತವಾಗಿ ಬಳಸಿ ಆರೋಗ್ಯ ರಕ್ಷಿಸಿಕೊಳ್ಳೋಣ.
ಲೇಖನ: ಡಾ ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ