Fatty liver can be deadly; ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯು ಮಾರಕವಾಗಬಹುದು: ಇಲ್ಲಿದೆ ವೈದ್ಯರ ಸಲಹೆ
ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯು ದೀರ್ಘಕಾಲದ ಅನಾರೋಗ್ಯ ಪರಿಸ್ಥಿತಿಯನ್ನು ಉಂಟುಮಾಡಬಹುದು. ಜೊತೆಗೆ ಜೀವಕ್ಕೆ ಮಾರಕವಾಗಬಹುದು. ಆದ್ದರಿಂದ ಆರಂಭಿಕ ಹಂತದಲ್ಲಿಯೇ ಈ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವ ಮೂಲಕ ರೋಗದ ಉಲ್ಬಣಗೊಳ್ಳುವಿಕೆಯನ್ನು ತಡೆಗಟ್ಟಬಹುದು.
ಯಕೃತ್ತಿನ ಕಾಯಿಲೆಗಳು (Liver Disease) ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದ್ದು, ಆ ಕಾಯಿಲೆ ಉಲ್ಬಣಗೊಂಡಂತೆ ಅದು ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಯಕೃತ್ತಿಗೆ ಸಂಬಂಧಪಟ್ಟ ಕಾಯಿಲೆಗಳಲ್ಲಿ ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯು ಕೂಡಾ ಒಂದು. ಈ ಕಾಯಿಲೆಗೆ ಸಂಬಂಧಿಸಿದ ಪ್ರಕರಣಗಳು ಸ್ಥೂಲಕಾಯತೆ ಮತ್ತು ಮಧುಮೇಹದಂತಹ ಇತರ ದೀರ್ಘಕಾಲದ ಪರಿಸ್ಥಿತಿಗಳೊಂದಿಗೆ ಹೆಚುತ್ತವೆ. ಇದು ಸ್ವಲ್ಪಮಟ್ಟಿಗೆ ಆಲ್ಕೊಹಾಲ್ ಸೇವಿಸುವ ಜನರ ಮೇಲೂ ಪರಿಣಾಮವನ್ನು ಬೀರುತ್ತದೆ. ಪಿತ್ತಜನಕಾಂಗದಲ್ಲಿನ ಹೆಚ್ಚುವರಿ ಕೊಬ್ಬಿನ ಶೇಖರಣೆಯು ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ಗೆ ಕಾರಣವಾಗಬಹುದು. ಈ ಸಮಸ್ಯೆಯು ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ನಂತರದ ಹಂತಗಳಲ್ಲಿ ಈ ಕಾಯಿಲೆಗೆ ತುತ್ತಾದ ಜನರಲ್ಲಿ ಆಯಾಸ, ನೋವು ಅಥವಾ ಹೊಟ್ಟೆಯಲ್ಲಿ ಅಸ್ವಸ್ಥತೆ, ಕಿಬ್ಬೊಟ್ಟೆಯ ಊತ, ಅಂಗೈಯಲ್ಲಿ ಕೆಂಪು ಕಾಣಿಸಿಕೊಳ್ಳುವುದು, ಚರ್ಮ ಮತ್ತು ಕಣ್ಣುಗಳು ಹಳದಿಯಾಗುವಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.
ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ನಿರ್ವಹಿಸುವ ಮಾರ್ಗಗಳು:
ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ದೀರ್ಘಕಾಲದ ಮತ್ತು ಮಾರಣಾಂತಿಕ ಪ್ರಕರಣಗಳ ಉಲ್ಬಣಗೊಳ್ಳುವಿಕೆ ಮತ್ತು ತೊಡಕುಗಳನ್ನು ತಡೆಗಟ್ಟಲು ವೈದ್ಯಕೀಯ ಆರೈಕೆ ಮತ್ತು ನಿರ್ವಹಣೆಯ ಅಗತ್ಯವಿದೆ. ಇದರ ಚಿಕಿತ್ಸೆಯ ಆಯ್ಕೆಗಳು ರೋಗದ ತೀವ್ರತೆ ಮತ್ತು ಸಂಬಂಧಿತ ತೊಡಕುಗಳನ್ನು ಅವಲಂಬಿಸಿರುತ್ತದೆ ಎಂದು ಗ್ಯಾಸ್ಟ್ರೋಎಂಟರಾಲಜಿ ಲೈಬ್ರೇಟ್ ನ ಹಿರಿಯ ಸಲಹೆಗಾರರಾದ ಡಾ. ವಿಜಯ್ ಕುಮಾರ್ ರೈ ಹೇಳುತ್ತಾರೆ.
ಡಾ. ವಿಜಯ್ ಕುಮಾರ್ ರೈ ಸೂಚಿಸಿರುವ ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ದೀರ್ಘಕಾಲದ ಮತ್ತು ಮಾರಣಾಂತಿಕ ಪ್ರಕರಣಗಳಿಗೆ ಕೆಲವು ಚಿಕಿತ್ಸಾ ಆಯ್ಕೆಗಳು ಇಲ್ಲಿವೆ.
ತೂಕ ನಷ್ಟ: ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತೂಕವನ್ನು ಕಳೆದುಕೊಳ್ಳುವುದು ಅಗತ್ಯವಾಗಿರುತ್ತದೆ. ವಿಶೇಷವಾಗಿ ಸ್ಥೂಲಕಾಯತೆಯಿಂದ ಬಳಲುತ್ತಿರುವವರು ತಮ್ಮ ದೇಹ ತೂಕವನ್ನು ಕಡಿಮೆ ಮಾಡಿಕೊಂಡಾಗ ಅದು ಯಕೃತ್ತಿನಲ್ಲಿ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ತೂಕ ನಷ್ಟವು ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗಳಿಗೆ ಸಂಬಂಧಿಸಿದ ಇತರ ಆರೋಗ್ಯ ತೊಡಕುಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಜೀವನಶೈಲಿಯ ಮಾರ್ಪಾಡು: ತೂಕ ನಷ್ಟದ ಜೊತೆಗೆ ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ, ಯೋಗಗಳಂತಹ ಆರೋಗ್ಯಕರ ಜೀವನಶೈಲಿಯ ಮಾರ್ಪಾಡುಗಳು ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಹಣ್ಣುಗಳು, ಧಾನ್ಯಗಳು, ತರಕಾರಿಗಳು, ಪ್ರೋಟೀನ್ ಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ಈ ಕಾಯಿಲೆಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತ ವ್ಯಾಯಾಮವು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಔಷಧಿಗಳು: ಕೆಲವು ಸಂದರ್ಭಗಳಲ್ಲಿ ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ನಿರ್ವಹಿಸಲು ವೈದ್ಯರು ಔಷಧಿಗಳನ್ನು ಶಿಫಾರಸು ಮಾಡಬಹುದು. ಉದಾಹರಣೆಗೆ ಪಿಯೋಗ್ಲಿಟಾಜೋನ್ ಮತ್ತು ವಿಟಮಿನ್ ಇ ನಂತಹ ಔಷಧಿಗಳನ್ನು ಯಕೃತ್ತಿನ ಕಾರ್ಯವನ್ನು ಸುಧಾರಿಸಲು ರೋಗಿಗಳಿಗೆ ನೀಡಲಾಗುತ್ತದೆ. ವೈದ್ಯರ ಶಿಫಾರಸ್ಸಿನ ಮೇರೆಗೆ ಮಾತ್ರ ಈ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಸಂಬಂಧಿತ ಆರೋಗ್ಯ ಪರಿಸ್ಥಿತಿಗಲ ನಿರ್ವಹಣೆ: ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯು ಸಾಮಾನ್ಯವಾಗಿ ಇತರ ಪರಿಸ್ಥಿತಿಗಳಾದ ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳಗಳ ಕಾಯಿಲೆಗಳೊಂದಿಗೆ ಸಂಬಂಧಿಸಿವೆ. ಔಷಧಿಗಳು, ಜೀವನಶೈಲಿಯ ಮಾರ್ಪಾಡುಗಳು ಮತ್ತು ನಿಯಮಿತ ಆರೋಗ್ಯ ತಪಾಸಣೆಯ ಮೂಲಕ ಈ ಪರಿಸ್ಥಿತಿಯನ್ನು ನಿರ್ವಹಿಸಬಹುದು. ಮತ್ತು ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಯಕೃತ್ತಿನ ಕಸಿ: ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಗಂಭೀರತೆಯ ಕೊನೆಯ ಹಂತದಲ್ಲಿ ಯಕೃತ್ತಿನ ಕಸಿ ಅಗತ್ಯವಾಗಬಹುದು. ಯಕೃತ್ತಿನ ಕಸಿ ಒಂದು ಶಸ್ತ್ರ ಚಿಕಿತ್ಸಾ ವಿಧಾನವಾಗಿದ್ದು, ಇದರಲ್ಲಿ ರೋಗಿಯ ಹಾನಿಗೊಳಗಾದ ಪಿತ್ತಜನಕಾಂಗವನ್ನು ತೆಗೆದು ದಾನಿಯಿಂದ ಪಡೆದ ಆರೋಗ್ಯಕರ ಯಕೃತ್ತನ್ನು ಜೋಡಿಸಲಾಗುತ್ತದೆ. ಇದು ಸಂಕೀರ್ಣ ಮತ್ತು ದುಬಾರಿ ವಿಧಾನವಾಗಿದ್ದು, ಮುಂದೆ ಉಂಟಾಗಬಹುದಾದ ತೊಡಕುಗಳನ್ನು ತಡೆಗಟ್ಟಲು ಜೀವಮಾನದ ಔಷಧಿ ಮತ್ತು ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿದೆ.
‘ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗಳಿಗೆ ಸಂಬಂಧಿಸಿದ ತೊಡಕುಗಳ ಉಲ್ಬಣಗೊಳ್ಳುವಿಕೆಯನ್ನು ತಡೆಗಟ್ಟಲು ಆರಂಭಿಕ ವೈದ್ಯಕೀಯ ತಪಾಸಣೆ ಮತ್ತು ರೋಗನಿರ್ಣಯದ ಅಗತ್ಯವಿದೆ. ನಿಯಮಿತ ತಪಾಸಣೆ ಮತ್ತು ಯಕೃತ್ತಿನ ಕಾರ್ಯ ಮತ್ತು ಸಂಬಂಧಿತ ಆರೋಗ್ಯ ಪರಿಸ್ಥಿತಿಗಳ ಮೇಲ್ವಿಚಾರಣೆಯು ಆರಂಭಿಕ ಹಂತದಲ್ಲಿಯೇ ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ಪತ್ತೆಹಚ್ಚಲು ಮತ್ತು ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ’ ಎಂದು ಡಾ. ರೈ ಹೇಳುತ್ತಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:17 pm, Mon, 24 April 23