
ಇತ್ತೀಚಿನ ದಿನಗಳಲ್ಲಿ ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಇದು ಕೂಡ ಒಂದು ಸಮಸ್ಯೆಯಾಗಿದ್ದು ಹಲವರು ಇದರಿಂದ ಬಳಲುತ್ತಿದ್ದಾರೆ. ನಿದ್ರೆ ತಡವಾಗಿ ಬರುವುದು, ಮಧ್ಯರಾತ್ರಿ ಪದೇ ಪದೇ ಎಚ್ಚರವಾಗುವುದು ಅಥವಾ ಸಾಕಷ್ಟು ಸಮಯ ಮಲಗಿದರೂ ವಿಶ್ರಾಂತಿ ಸಿಗದಿರುವುದು ಸಾಮಾನ್ಯವಾಗಿದೆ. ಹೆಚ್ಚಿನವರು ಇದನ್ನು ಒತ್ತಡ ಅಥವಾ ಬ್ಯುಸಿ ಜೀವನಶೈಲಿಯ ಪರಿಣಾಮ ಎಂದು ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ದೇಹದಲ್ಲಿನ ಕೆಲವು ಅಗತ್ಯ ವಿಟಮಿನ್‌ಗಳು ಮತ್ತು ಪೋಷಕಾಂಶಗಳ ಕೊರತೆ ಕೂಡ ನಿದ್ರೆಯ ಗುಣಮಟ್ಟವನ್ನು ಹಾಳು ಮಾಡಬಹುದು. ಹೌದು, ನಿದ್ರೆ (Sleep) ಬರದಿರುವುದಕ್ಕೆ ಇದು ಒಂದು ಕಾರಣವಾಗಿರಬಹುದು. ಹಾಗಾದರೆ ಯಾವ ವಿಟಮಿನ್ ಕೊರತೆಯಾದಾಗ ಈ ರೀತಿಯ ಸಮಸ್ಯೆಯಾಗುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತಜ್ಞರ ಪ್ರಕಾರ, ವಿಟಮಿನ್ ಡಿ, ವಿಟಮಿನ್ ಬಿ12, ಮ್ಯಾಗ್ನೀಶಿಯಂ ಮತ್ತು ಐರನ್ ದೇಹದ ನಿದ್ರೆ ಸಂಬಂಧಿತ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವುಗಳ ಕೊರತೆಯಿಂದ ಕೆಲವರಲ್ಲಿ ನಿದ್ರೆ ಸರಿಯಾಗಿ ಬಾರದಿರುವುದು, ದಣಿವು ಮತ್ತು ಮಾನಸಿಕ ಅಸ್ವಸ್ಥತೆಗಳಂತಹ ಸಮಸ್ಯೆಗಳು ಕಾಣಿಸಬಹುದು.
ವಿಟಮಿನ್ ಡಿ
ಸಾಮಾನ್ಯವಾಗಿ ವಿಟಮಿನ್ ಡಿ ಕೊರತೆಯು ನಿದ್ರೆಯ ಅವಧಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಇದರ ಕೊರತೆಯಿಂದ ದೇಹದಲ್ಲಿ ಆಯಾಸ ಮತ್ತು ನಿದ್ರಾಹೀನತೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ವಿಟಮಿನ್ ಬಿ12
ವಿಟಮಿನ್ ಬಿ12 ನರಮಂಡಲದ ಆರೋಗ್ಯಕ್ಕೆ ಅಗತ್ಯ. ಇದರ ಕೊರತೆಯಿಂದ ನಿದ್ರೆ ಸರಿಯಾಗಿ ಬರದಿರಬಹುದು. ಅಥವಾ ಪದೇ ಪದೇ ಎಚ್ಚರವಾಗಿ ನಿದ್ರೆಗೆ ಭಂಗ ಉಂಟಾಗಬಹುದು.
ಮ್ಯಾಗ್ನೀಶಿಯಂ
ಮ್ಯಾಗ್ನೀಶಿಯಂ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದರ ಕೊರತೆಯಿಂದ ಆತಂಕ, ಸ್ನಾಯು ಸೆಳೆತ ಮತ್ತು ನಿದ್ರಾಹೀನತೆ ಕಾಣಿಸಬಹುದು.
ಐರನ್
ಐರನ್ ಕೊರತೆಯಿಂದ ದೇಹದಲ್ಲಿ ಆಮ್ಲಜನಕದ ಸರಬರಾಜು ಕಡಿಮೆಯಾಗಬಹುದು. ಇದರಿಂದ ದಣಿವು, ಅಶಾಂತಿ ಮತ್ತು ನಿದ್ರೆಗೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?
ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರ ಸಲಹೆಯೊಂದಿಗೆ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ.
ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಬೆಳೆಸಿಕೊಳ್ಳಿ. ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ಬಳಕೆಯನ್ನು ಕಡಿಮೆ ಮಾಡಿ. ಸಮತೋಲಿತ ಆಹಾರ ಸೇವನೆ ಮಾಡಿ, ಸಾಕಷ್ಟು ನೀರು ಕುಡಿಯಿರಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ. ಜೊತೆಗೆ ಯೋಗ, ಧ್ಯಾನ ಮತ್ತು ಒತ್ತಡ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಉತ್ತಮ. ಇವು ನಿದ್ರೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ