
ಬೆಂಗಳೂರು,ಜೂ.26: ಇಂದಿನ ಆಧುನಿಕ ಜೀವನಶೈಲಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಿಂದ ಹಿಡಿದು ಕಚೇರಿಗಳಲ್ಲಿ ಕೆಲಸ ಮಾಡುವ ಬಹುತೇಕರು ದಿನದ 8 ರಿಂದ 10 ಗಂಟೆಗಳ ಕಾಲ ಕುಳಿತಲ್ಲೇ ಕಳೆಯುತ್ತಾರೆ. ಆದರೆ, ಹೀಗೆ ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು ಧೂಮಪಾನದಷ್ಟೇ ಅಪಾಯಕಾರಿ ಹಾಗೂ ಇದು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಖಿನ್ನತೆಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.
ಇದಕ್ಕೆ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಪರಿಹಾರವೊಂದನ್ನು ಇತ್ತೀಚಿನ ಜಾಗತಿಕ ಸಂಶೋಧನೆಯೊಂದು ಕಂಡು ಹಿಡಿದೆ. ಖ್ಯಾತ ವೈದ್ಯಕೀಯ ನಿಯತಕಾಲಿಕೆ ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ (BJSM) ಪ್ರಕಟಿಸಿರುವ ಹೊಸ ಅಧ್ಯಯನದ ಪ್ರಕಾರ, ಪ್ರತಿ ಗಂಟೆಗೆ ಕೇವಲ 5 ನಿಮಿಷಗಳ ಕಾಲ ನಡೆಯುವುದು ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದ ಮೇಲಾಗುವ ನಕಾರಾತ್ಮಕ ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಈ ಬಗ್ಗೆ ಬೆಂಗಳೂರು ಪೋಸ್ಟ್ ಎಂಬ ಎಕ್ಸ್ ಖಾತೆ ಪೋಸ್ಟ್ ಮಾಡಿದೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಯೋಗ, ಸ್ಟ್ರೆಚಿಂಗ್ ಸುರಕ್ಷಿತವೇ? ತಜ್ಞರು ನೀಡಿರುವ ಮಾಹಿತಿ ನಿಮಗಾಗಿ
ಅಮೆರಿಕದ ಕೊಲಂಬಿಯಾ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಸೇರಿದಂತೆ ಹಲವು ತಜ್ಞರು ಸುಮಾರು 11,000ಕ್ಕೂ ಹೆಚ್ಚು ಜನರ ಮೇಲೆ ನಡೆಸಿರುವ ಈ ಸಂಶೋಧನೆಯಲ್ಲಿ ಕುತೂಹಲಕಾರಿ ಆರೋಗ್ಯ ರಹಸ್ಯಗಳು ಕಂಡು ಬಂದಿದೆ. ಕೆಲಸದ ಮಧ್ಯೆ ಗಂಟೆಗೊಮ್ಮೆ ಐದು ನಿಮಿಷಗಳ ಕಾಲ ಎದ್ದು ಲಘುವಾಗಿ ನಡೆಯುವುದರಿಂದ ಮನುಷ್ಯನ ಮನಸ್ಥಿತಿಸುಧಾರಿಸುತ್ತದೆ ಮತ್ತು ತೀವ್ರ ಮಾನಸಿಕ ದಣಿವು ನಿವಾರಣೆಯಾಗುತ್ತದೆ. ಜತೆಗೆ ಒಂದೇ ಸಮನೆ ಕುಳಿತುಕೊಳ್ಳುವುದರಿಂದ ಕಾಲುಗಳ ರಕ್ತನಾಳಗಳಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಕೇವಲ 5 ನಿಮಿಷಗಳ ವಾಕಿಂಗ್ ದೇಹದಲ್ಲಿ ಗ್ಲೂಕೋಸ್ ಮತ್ತು ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ಮತ್ತೆ ಚುರುಕುಗೊಳಿಸಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
⚡ A reminder for all of us who spend hours at a desk.
Researchers found that a 5-minute walk every hour may help improve mood, reduce fatigue and counter some of the health risks linked to prolonged sitting.
📚 Source: British Journal of Sports Medicine
Tag someone who needs… pic.twitter.com/8zLhQYRwfY
— Bengaluru Post (@bengalurupost1) June 26, 2026
ಸಂಶೋಧನೆಯ ಪ್ರಕಾರ, ಗಂಟೆಗೊಮ್ಮೆ ಇಂತಹ ಚಿಕ್ಕ ಬ್ರೇಕ್ ತೆಗೆದುಕೊಳ್ಳುವುದರಿಂದ ಉದ್ಯೋಗಿಗಳ ಕೆಲಸದ ಜವಾಬ್ದಾರಿ ಅಥವಾ ಉತ್ಪಾದಕತೆಗೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ. ಬದಲಿಗೆ ಇದು ಮೆದುಳಿಗೆ ಆಮ್ಲಜನಕದ ಸರಬರಾಜನ್ನು ಹೆಚ್ಚಿಸಿ ಕೆಲಸದಲ್ಲಿ ಮತ್ತಷ್ಟು ಉತ್ಸಾಹ ಮೂಡಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ