Heart Attacks And Heart Failure ಹೆಚ್ಚುತ್ತಿರುವ ಹೃದಯಾಘಾತ, ಹೃದಯ ವೈಫಲ್ಯಕ್ಕೆ ಕಾರಣಗಳೇನು? ತಡೆಗಟ್ಟಲು ಏನು ಮಾಡಬೇಕು?

| Updated By: Ganapathi Sharma

Updated on: Aug 11, 2023 | 8:35 PM

How to Prevent Heart Disease; ಹೃದ್ರೋಗ ಸಾಧ್ಯತೆಯನ್ನು ತಡೆಗಟ್ಟಲು ಏನು ಮಾಡಬೇಕು? ಸಾಮಾನ್ಯವಾಗಿ ಹೃದಯದ ಆರೋಗ್ಯಕ್ಕೆ ಮಾರಕವಾಗುವ ಚಟುವಟಿಕೆಗಳು ಯಾವುವು? ಹೃದ್ರೋಗ ತಡೆಗೆ ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆ ಏನು? ಯಾವ ಅಭ್ಯಾಸಗಳನ್ನು ಬಿಡಬೇಕು ಎಂಬಿತ್ಯಾದಿ ಮಾಹಿತಿಗಳನ್ನು ತಜ್ಞ ವೈದ್ಯರು ಇಲ್ಲಿ ನೀಡಿದ್ದಾರೆ.

Heart Attacks And Heart Failure ಹೆಚ್ಚುತ್ತಿರುವ ಹೃದಯಾಘಾತ, ಹೃದಯ ವೈಫಲ್ಯಕ್ಕೆ ಕಾರಣಗಳೇನು? ತಡೆಗಟ್ಟಲು ಏನು ಮಾಡಬೇಕು?
ಸಾಂದರ್ಭಿಕ ಚಿತ್ರ
Follow us on

ಒತ್ತಡದ ಮತ್ತು ಪಾಶ್ಚಿಮಾತ್ಯ ಜೀವನಶೈಲಿ (ಅಧಿಕ ಕೊಬ್ಬಿನ ಆಹಾರ, ದೈಹಿಕ ವ್ಯಾಯಾಮದ ಕೊರತೆ, ಧೂಮಪಾನ ಮತ್ತು ಮದ್ಯಪಾನದ ಮಿತಿಮೀರಿದ) ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹೃದ್ರೋಗ (Heart Diseases) ಪ್ರಮಾಣದಲ್ಲಿ ಗಣನೀಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಇದು 30 ಅಥವಾ 40 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಹೃದಯಾಘಾತ(Heart Attack) ಸಾಧ್ಯತೆ ಹೆಚ್ಚಳಕ್ಕೆ ಕಾರಣವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳದ ಹೊರತು ಈ ಸಮಸ್ಯೆಯು ಉಲ್ಬಣಗೊಳ್ಳುತ್ತಲೇ ಇರುತ್ತದೆ. ತೀವ್ರವಾದ ಹೃದಯಾಘಾತ ಸಂಭವಿಸಿದಾಗ ಉತ್ತಮ ಚಿಕಿತ್ಸೆಯ ಮೂಲಕ ಸಾವಿನ ಪ್ರಮಾಣ ಕಡಿಮೆ ಮಾಡಬಹುದು ಮತ್ತು ಮಾಡಲಾಗಿದೆ. ಆದರೆ ಹೃದಯ ಸ್ನಾಯುವಿಗೆ ಗಮನಾರ್ಹ ಹಾನಿಯಾದಾಗ ಅದು ಹೃದಯ ವೈಫಲ್ಯಕ್ಕೆ (Heart Failure) ಕಾರಣವಾಗಬಹುದು. ವೈರಲ್ ಸೋಂಕುಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಕವಾಟದ ಕಾಯಿಲೆ ಅಥವಾ ಆಲ್ಕೋಹಾಲ್​ನ ಅಧಿಕ ಸೇವನೆ ಕೂಡ ಹೃದಯಾಘಾತಕ್ಕೆ ಕಾರಣಗಳಾಗಿವೆ.

ಹೃದಯಾಘಾತದ ಚಿಕಿತ್ಸೆಯು ಔಷಧಿಗಳನ್ನು ನೀಡುವುದು (ಬ್ಲಡ್ ಥಿನ್ನರ್​ಗಳನ್ನು ನೀಡುವುದು ಅಥವಾ ರಕ್ತ ತೆಳುಗೊಳಿಸುವಿಕೆ, ಆ್ಯಂಟಿಕೊಲೆಸ್ಟರಾಲ್ ಔಷಧಗಳು ಮತ್ತು ಆಂಟಿಆಂಜಿನಲ್ ಔಷಧಗಳು), ಪರಿಧಮನಿಯ ಆಂಜಿಯೋಪ್ಲ್ಯಾಸ್ಟಿ ಮತ್ತು ಪರಿಧಮನಿಯ ಬೈಪಾಸ್ ಕಸಿ ಮಾಡುವಿಕೆಯನ್ನು ಒಳಗೊಂಡಿರುತ್ತದೆ. ಹೃದಯಾಘಾತ ಸಂದರ್ಭದಲ್ಲಿ ಹೃದಯದ ಸಮರ್ಪಕ ಕಾರ್ಯನಿರ್ವಣೆಗಾಗಿ ವೈದ್ಯರು ಹೆಚ್ಚುವರಿ ದ್ರವವನ್ನು (ಮೂತ್ರವರ್ಧಕಗಳು ಅಥವಾ ವಾಟರ್​ ಟ್ಯಾಬ್ಲೆಟ್​ಗಳು) ತೊಡೆದುಹಾಕಲು ಔಷಧಿಗಳನ್ನು ಸೂಚಿಸುತ್ತಾರೆ. ಹೃದಯದ ಕಾರ್ಯಚಟುವಟಿಕೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುವ ಇತರ ಔಷಧಿಗಳನ್ನು (ACE ಪ್ರತಿರೋಧಕಗಳು, AT2 ವಿರೋಧಿಗಳು ಮತ್ತು ಬೀಟಾಬ್ಲಾಕರ್​ಗಳು) ಕೂಡ ನೀಡಬಹುದು. ಚಿಕಿತ್ಸೆಯು ಪರಿಧಮನಿಯ ಆಂಜಿಯೋಪ್ಲ್ಯಾಸ್ಟಿ, ಪರಿಧಮನಿಯ ಬೈಪಾಸ್ ಕಸಿ ಮತ್ತು ಕವಾಟವನ್ನು ಬದಲಾಯಿಸುವುದನ್ನು ಸಹ ಒಳಗೊಂಡಿರಬಹುದು. ವಿಶೇಷ ರೀತಿಯ ಪೇಸ್‌ಮೇಕರ್‌ಗಳು (ಹೃದಯ ಮರುಸಿಂಕ್ರೊನೈಸೇಶನ್ ಥೆರಪಿ) ಕೂಡ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದು ರೋಗಿಗಳಲ್ಲಿ ರೋಗಲಕ್ಷಣಗಳು ಮತ್ತು ಆ ಕುರಿತು ಮುನ್ಸೂಚನೆ ತಿಳಿದುಕೊಳ್ಳಳು ನೆರವಾಗುತ್ತದೆ. ವಿಪರೀತ ಸಂದರ್ಭಗಳಲ್ಲಿ ಹೃದಯ ಕಸಿ ಆಯ್ಕೆಯನ್ನು ಪರಿಗಣಿಸಲಾಗುತ್ತದೆ. ಹೆಚ್ಚು ವಿಶಿಷ್ಟ ಮತ್ತು ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿದ್ದರೂ, ಹೃದಯಾಘಾತ ಮತ್ತು ಹೃದಯ ವೈಫಲ್ಯ ಎರಡರಲ್ಲೂ ಮರಣ ಪ್ರಮಾಣವು ಹೆಚ್ಚಾಗಿರುತ್ತದೆ. ಆದ್ದರಿಂದ ಚಿಕಿತ್ಸೆಗಿಂತ ರೋಗ ಬಾರದಂತೆ ತಡೆಗಟ್ಟುವಿಕೆಯೇ ಉತ್ತಮ ಎಂಬ ಹಳೆಯ ಗಾದೆ ಇಲ್ಲಿ ಅನ್ವಯಿಸುತ್ತದೆ.

ಹೃದ್ರೋಗ ಸಾಧ್ಯತೆಯನ್ನು ತಡೆಗಟ್ಟಲು ಏನು ಮಾಡಬೇಕು? ಸಾಮಾನ್ಯವಾಗಿ ಹೃದಯದ ಆರೋಗ್ಯಕ್ಕೆ ಮಾರಕವಾಗುವ ಚಟುವಟಿಕೆಗಳು ಯಾವುವು? ಹೃದ್ರೋಗ ತಡೆಗೆ ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆ ಏನು? ಯಾವ ಅಭ್ಯಾಸಗಳನ್ನು ಬಿಡಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಇಲ್ಲಿ ನೋಡೋಣ

ಧೂಮಪಾನ ತ್ಯಜಿಸಿ

ಒತ್ತಡ ಮತ್ತು ಅನೇಕ ಮಹಿಳೆಯರು ಕೂಡ ಧೂಮಪಾನ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಇದು ಬಹಳ ಮುಖ್ಯವಾದ ಮತ್ತು ಅಪಾಯಕಾರಿ ಅಂಶವಾಗಿದ್ದು, ಇದನ್ನು ನಿಲ್ಲಿಸುವುದು ಹೃದಯದ ಆರೋಗ್ಯದ ದೃಷ್ಟಿಯಿಂದ ಅಹಗತ್ಯ. ಧೂಮಪಾನವನ್ನು ನಿಲ್ಲಿಸಿದ ನಂತರ ಗಮನಾರ್ಹವಾದ ದೀರ್ಘಕಾಲೀನ ಪ್ರಯೋಜನಗಳನ್ನು ಗುರುತಿಸಲಾಗಿದೆ. ವ್ಯಕ್ತಿಗಳು ನಿಕೋಟಿನ್ ಪ್ಯಾಚ್‌ಗಳು ಮತ್ತು ಮಾನಸಿಕ ಸಮಾಲೋಚನೆ ಸೇರಿದಂತೆ ತಜ್ಞರ ಸಹಾಯವನ್ನು ತೆಗೆದುಕೊಳ್ಳಬಹುದಾಗಿದೆ.

ಒತ್ತಡದಿಂದ ಹೊರಬನ್ನಿ

ಇದು ಬಹುಶಃ ಪರಿಹರಿಸಲು ಅತ್ಯಂತ ಕಷ್ಟಕರವಾದ ಸಮಸ್ಯೆಗಳಲ್ಲಿ ಒಂದಾಗಿದೆ. ವ್ಯಕ್ತಿಗಳು ಕೆಲಸದ ಮತ್ತು ವೈಯಕ್ತಿಕ ಮಜೀವನದ ನಡುವೆ ಉತ್ತಮ ಸಮತೋಲನವನ್ನು ಸಾಧಿಸಬೇಕು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವ ಮೂಲಕ ಹೃದಯವನ್ನು ಹಗುರಾಗಿಸಿಕೊಳ್ಳಬೇಕು. ಕುಟುಂಬ, ಸ್ನೇಹಿತರ ನಡುವೆ ಇದ್ದಾಗ ಕೆಲಸದ ಬಗ್ಗೆ ಚರ್ಚೆಗಳನ್ನು ತಪ್ಪಿಸಬೇಕು. ಸಂಗೀತ ಅಥವಾ ಆಟಗಳಂತಹ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಇದರಿಂದ ಒತ್ತಡ ನಿವಾರಣೆ ಸಾಧ್ಯ.

ಇದನ್ನೂ ಓದಿ: ಯುವ ಸಮೂಹದಲ್ಲಿ ಹೆಚ್ಚುತ್ತಿದೆ ಹೃದಯ ವೈಫಲ್ಯ; ಕಾರಣಗಳು, ಮುನ್ನೆಚ್ಚರಿಕೆ, ಚಿಕಿತ್ಸೆಗಳೇನು? ಇಲ್ಲಿದೆ ಮಾಹಿತಿ

ವ್ಯಾಯಾಮ ಅಗತ್ಯ

ನಮ್ಮಲ್ಲಿ ಹೆಚ್ಚಿನವರು ದೀರ್ಘ ಕಾಲ ಕುಳಿತುಕೊಂಡೇ ಮಾಡುವ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ. ಕಡಿಮೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಆದ್ದರಿಂದ ನಾವು ಫಿಟ್ ಆಗಿರಲು ವ್ಯಾಯಾಮ ಅತಿ ಅಗತ್ಯವಾಗಿದೆ. ದೀರ್ಘಕಾಲದವರೆಗೆ ವ್ಯಾಯಾಮ ಮಾಡಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದೂ ಉತ್ತಮ. ನಿಯಮಿತ ವ್ಯಾಯಾಮವನ್ನು ವಾರಕ್ಕೆ 4-5 ಬಾರಿ ಮಾಡಲೇಬೇಕು.

ಆಹಾರ ಪದ್ಧತಿ ಹೇಗಿರಬೇಕು?

ಕಟ್ಟುನಿಟ್ಟಾದ ಆಹಾರಕ್ರಮಕ್ಕಿಂತ ಸರಳವಾದ ಆಹಾರಕ್ರಮವನ್ನು ಅನುಸರಿಸಬೇಕು. ಅಲ್ಪಾವಧಿಗಿಂತ ದೀರ್ಘಾವಧಿಯಲ್ಲಿ ಈ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಒಂದು ಸರಳ ಕ್ರಮವಾಗಿದೆ. ರುಚಿಕರ ಭಕ್ಷ್ಯಗಳ ಬಯಕೆಯನ್ನು ತೀರಿಸಿಕೊಳ್ಳಲು ಮನೆಯಲ್ಲಿಯೇ ವಿವಿಧ ರೀತಿಯ ಅಡುಗೆಗಳನ್ನು ತಯಾರಿಸಬಹುದು. ಸ್ವತಃ ಅಡುಗೆ ಮಾಡುವುದು ಕೂಡ ಒತ್ತಡ ನಿವಾರಣೆಗೆ ನೆರವಾಗಬಲ್ಲದು! ಹೆಚ್ಚೆಚ್ಚು ಉಪ್ಪು ಸೇವನೆಯನ್ನು ತಪ್ಪಿಸಬೇಕು. ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು. ಕರಿದ ಆಹಾರಗಳು ಮತ್ತು ಸಿಹಿತಿಂಡಿಗಳನ್ನು ತಪ್ಪಿಸುವುದು ಉತ್ತಮ.

ಇದನ್ನೂ ಓದಿ: Cardiac Arrest: ಹಠಾತ್ ಹೃದಯ ಸ್ತಂಭನವನ್ನು ನಿಭಾಯಿಸುವುದು ಹೇಗೆ?

ನಿಯಮಿತ ಆರೋಗ್ಯ ತಪಾಸಣೆ

ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಂತಹ ಹೃದ್ರೋಗಕ್ಕೆ ಅಪಾಯಕಾರಿ ಅಂಶವನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ನಾವು ನಿಯಮಿತ ಆರೋಗ್ಯ ತಪಾಸಣೆಗಳನ್ನು ಕೈಗೊಳ್ಳಬೇಕು. ಸುಪ್ತ ಮತ್ತು ಆರಂಭಿಕ ಹೃದ್ರೋಗವನ್ನು ಪತ್ತೆಹಚ್ಚಲು ನಿಯಮಿತ ಹೃದಯ ತಪಾಸಣೆ ಕೂಡ ಮುಖ್ಯವಾಗಿದೆ. ಹೀಗೆ ಮಾಡುವುದರಿಂದ ಆರಂಭಿಕ ಹಂತದಲ್ಲೇ ಚಿಕಿತ್ಸೆ ಆರಂಭಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು.

ಡಾ. ಗಣೇಶ್ ನಲ್ಲೂರು ಶಿವು

(ಲೇಖಕರು ಸೀನಿಯರ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್, ಕಾವೇರಿ ಆಸ್ಪತ್ರೆ, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು)