
ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಪ್ರತಿಯೊಂದು ಆಹಾರವನ್ನೂ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಕೇಸರಿ ಬೆರೆಸಿದ ಹಾಲು ಕುಡಿಯುವ ಪದ್ಧತಿ ಹಲವೆಡೆ ಕಂಡುಬರುತ್ತದೆ. ಕೇಸರಿ ಆರೋಗ್ಯಕರವಾಗಿದ್ದರೂ, ಗರ್ಭಾವಸ್ಥೆಯಲ್ಲಿ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಅಥವಾ ಔಷಧೀಯ ಉದ್ದೇಶದಿಂದ ಬಳಸುವುದು ಸುರಕ್ಷಿತವೇ ಎಂದು ತಿಳಿಯಬೇಕಾಗುತ್ತದೆ. ಅದರಲ್ಲಿಯೂ ಕೆಲವರಿಗೆ ಯಾವುದೇ ಹರ್ಬಲ್ ಉತ್ಪನ್ನ ಅಥವಾ ಸಪ್ಲಿಮೆಂಟ್ ಬಳಸುವ ಮೊದಲು ವೈದ್ಯರ ಸಲಹೆ ಪಡೆಯಬೇಕಾಗುತ್ತದೆ. ಹಾಗಾದರೆ ಕೇಸರಿಯಲ್ಲಿ ಏನಿದೆ, ಯಾಕೆ ಗರ್ಭಾವಸ್ಥೆಯಲ್ಲಿ ಇದನ್ನು ಕುಡಿಯಲು ಹೇಳಲಾಗುತ್ತದೆ, ನಿಜವಾಗಿಯೂ ಕೇಸರಿ ಹಾಲು ಮಗುವಿನ ಬಣ್ಣ ಬದಲಿಸುತ್ತದೆಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕೇಸರಿಯಲ್ಲಿ ಹಲವು ಸಸ್ಯಸಂಯುಕ್ತಗಳು ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಅಂಶಗಳಿವೆ. ಸಾಮಾನ್ಯ ಆಹಾರದಲ್ಲಿ ಬಳಸುವ ಪ್ರಮಾಣ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಪ್ಲಿಮೆಂಟ್‌ನಂತೆ ತೆಗೆದುಕೊಳ್ಳುವುದನ್ನು ಒಂದೇ ರೀತಿಯಾಗಿ ನೋಡಬಾರದು. ಬಳಕೆ ಪ್ರಮಾಣ ಒಂದು ಮಿತಿಯಲ್ಲಿದ್ದರೆ ಒಳ್ಳೆಯದು.
ಕೇಸರಿಯನ್ನು ಮನಸ್ಥಿತಿ ಸುಧಾರಣೆ ಸೇರಿದಂತೆ ಹಲವು ಉದ್ದೇಶಗಳಿಗೆ ಬಳಸಲಾಗುತ್ತದೆ. ಆದರೆ ಗರ್ಭಿಣಿಯರಲ್ಲಿ ಕೇಸರಿ ಹಾಲು ಕುಡಿಯುವುದರಿಂದ ಒತ್ತಡ ಅಥವಾ ಆತಂಕ ಖಚಿತವಾಗಿ ಕಡಿಮೆಯಾಗುತ್ತದೆ ಎಂದು ಹೇಳಲು ಸಾಕಷ್ಟು ವೈದ್ಯಕೀಯ ಸಾಕ್ಷ್ಯವಿಲ್ಲ. ಗರ್ಭಾವಸ್ಥೆಯಲ್ಲಿ ನಿರಂತರ ಆತಂಕ ಅಥವಾ ಮನಸ್ಥಿತಿ ಸಮಸ್ಯೆ ಇದ್ದರೆ ವೈದ್ಯರೊಂದಿಗೆ ಮಾತನಾಡುವುದು ಉತ್ತಮ.
ಇದನ್ನೂ ಓದಿ: ಚೀಟ್ ಡೇ ಹೃದಯಕ್ಕೆ ಹಾನಿಕರವೇ? ಇಷ್ಟದ ಆಹಾರ ತಿನ್ನುವಾಗ ಈ ವಿಷಯ ನೆನಪಿರಲಿ!
ಗರ್ಭಾವಸ್ಥೆಯಲ್ಲಿ ವಾಕರಿಕೆ, ವಾಂತಿ, ಗ್ಯಾಸ್ ಮತ್ತು ಮಲಬದ್ಧತೆ ಸಾಮಾನ್ಯವಾಗಬಹುದು. ಕೆಲವರಿಗೆ ಕೇಸರಿ ಹಾಲು ಇಂತಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದು ಎಲ್ಲರಿಗೂ ಒಂದೇ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಹಾರ ಪದ್ಧತಿ, ಸಾಕಷ್ಟು ನೀರು ಮತ್ತು ವೈದ್ಯರು ಸೂಚಿಸುವ ಸುರಕ್ಷಿತ ಕ್ರಮಗಳು ಕೂಡ ಮುಖ್ಯವಾಗುತ್ತದೆ.
ಸಾಮಾನ್ಯವಾಗಿ ಕೇಸರಿ ಹಾಲು ಕುಡಿದರೆ ಮಗು ಹೆಚ್ಚು ಬೆಳ್ಳಗೆ ಹುಟ್ಟುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ನಂಬಿಕೆಗೆ ವೈಜ್ಞಾನಿಕ ಆಧಾರವಿಲ್ಲ. ಮಗುವಿನ ಚರ್ಮದ ಬಣ್ಣ ಮುಖ್ಯವಾಗಿ ಆನುವಂಶಿಕ ಅಂಶಗಳಿಗೆ ಸಂಬಂಧಿಸಿದೆ. ಆದ್ದರಿಂದ ಕೇಸರಿ ಹಾಲನ್ನು ಮಗುವಿನ ಮೈಬಣ್ಣ ಬದಲಿಸುವ ಆಹಾರವೆಂದು ಪರಿಗಣಿಸಬಾರದು.
ಮೊದಲ ಮೂರು ತಿಂಗಳು ಮಾತ್ರ ಕೇಸರಿ ಬೇಡ, ನಂತರದಿಂದ ಸುರಕ್ಷಿತ ಎಂದು ಹೇಳಲು ಸಾಧ್ಯವಿಲ್ಲ. ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ಕೇಸರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಥವಾ ಸಪ್ಲಿಮೆಂಟ್ ರೂಪದಲ್ಲಿ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ವಿಶೇಷವಾಗಿ ಗರ್ಭಾವಸ್ಥೆಯ ತೊಂದರೆಗಳು, ಔಷಧ ಸೇವನೆ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ಹೆಚ್ಚು ಎಚ್ಚರಿಕೆ ಅಗತ್ಯ.
ಎಲ್ಲಾ ಗರ್ಭಿಣಿಯರಿಗೂ ಒಂದೇ ರೀತಿಯ ಪ್ರಮಾಣ ಅನ್ವಯಿಸುವುದಿಲ್ಲ. ಹಾಗಾಗಿ ಕೇಸರಿ ಹಾಲು ಕುಡಿಯಲು ಆರಂಭಿಸುವ ಮೊದಲು ವೈದ್ಯರು ಅಥವಾ ಪ್ರಸೂತಿ ತಜ್ಞರ ಸಲಹೆ ಪಡೆಯುವುದು ಉತ್ತಮ. ಮುಖ್ಯವಾಗಿ ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಔಷಧಿಯಂತೆ ಬಳಸಬಾರದು. ಸಮತೋಲಿತ ಆಹಾರ, ವೈದ್ಯರು ಸೂಚಿಸುವ ಪ್ರೆಗ್ನೆನ್ಸಿ ಸಪ್ಲಿಮೆಂಟ್‌ಗಳು ಮತ್ತು ನಿಯಮಿತ ತಪಾಸಣೆಗಳು ತಾಯಿ-ಮಗುವಿನ ಆರೋಗ್ಯಕ್ಕೆ ಹೆಚ್ಚು ಮುಖ್ಯ. ಕೇಸರಿ ಸೇವಿಸಿದ ನಂತರ ಯಾವುದೇ ಅಸಹಜ ಲಕ್ಷಣ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ