ಸುವಾಸನೆಯುಕ್ತ ಸಂಪಿಗೆಯ ಗಿಡದಲ್ಲಿದೆ 10 ಹಲವು ಪ್ರಯೋಜನಗಳು! ಸಂಪಿಗೆ ಕುಸುಮವನ್ನು ತಿನ್ನುವುದರಿಂದ ವೀರ್ಯ ವೃದ್ಧಿಸುತ್ತದೆ!
Sampige or Champaka: ಸಂಪಿಗೆಯ ಇತರೆ ಉಪಯೋಗಗಳು: ಸಂಪಿಗೆ ಮರವನ್ನು ತೇಗದ ಮರದಂತೆ ಉಪಯೋಗಿಸುತ್ತಾರೆ. ವಿಮಾನ ಹಡಗು ನಿರ್ಮಾಣಕ್ಕೆ, ಮಠಾಧೀಶ್ವರರನ್ನು ಹೊರುವ ಅಡ್ಡಪಲ್ಲಕ್ಕಿ, ಆಟದ ಗೊಂಬೆ, ಬರೆಯುವ ಪೆನ್ಸಿಲ್, ಪ್ಲೈವುಡ್ ಪೀಠೋಪಕರಣಗಳ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ.
ಸಂಪಿಗೆ ಹೂವಿನಲ್ಲಿ ಕೆಂಡ ಸಂಪಿಗೆ, ಚೈನಾ ಸಂಪಿಗೆ, ಗಂಧದ ಬಣ್ಣದ ಸಂಪಿಗೆ, ಕಾಡು ಸಂಪಿಗೆ, ನಾಗ ಸಂಪಿಗೆ, ನಾಗಲಿಂಗ ಸಂಪಿಗೆ ಹೀಗೆ ತರಹೇವಾರಿ ಕಾಣಬಹುದು. ಆದರೆ ಇವೆಲ್ಲ ಸುವಾಸಿತ ಹೂ ಪ್ರಕಾರಗಳ ಪೈಕಿ ಔಷಧೀಯ ಗುಣಗಳು ಹೆಚ್ಚಾಗಿರುವುದು ಕೆಂಡಸಂಪಿಗೆಯಲ್ಲಿಯೇ.
ಸಂಪಿಗೆ Sampige or Champaka– ಒಂದು ಹೂವಿನ ಹೆಸರು. ಸಂಸ್ಕೃತದಲ್ಲಿ ಚಂಪಕ ಸುವರ್ಣ, ತೆಲುಗಿನಲ್ಲಿ ಚಂಪಕಮು, ಇಂಗ್ಲಿಷ್‌ನಲ್ಲಿ ಗೋಲ್ಡನ್ ಚಂಪಕ್ ಎಂದು ಕರೆಸಿಕೊಳ್ಳುವ ಈ ಹೂವಿನ ಸಸ್ಯನಾಮ ಮೈಕೇಲಿಯ ಚಂಪಕ. 1737 ರಲ್ಲಿ ಅಂದಿನ ಪ್ರಸಿದ್ದ ವಿಜ್ಞಾನಿ ಮೈಕೆಲ್ ಪಿ.ಎ. ಅವರು ಕಂಡುಹಿಡಿದರು. ವಿವಿಧ ದೇಶಗಳಲ್ಲಿ ಪ್ರಮುಖವಾಗಿ ಶ್ರೀಲಂಕಾ, ಫಿಲಿಪೈನ್ಸ್, ಜಪಾನ್, ಚೀನಾ, ಇಂಡೋನೇಷ್ಯ, ದಕ್ಷಿಣ ಆಫ್ರೀಕಾದ ದಟ್ಟ ಕಾಡುಗಳಲ್ಲಿ ಸಂಪಿಗೆ ಮರ ಬೇರು ಬಿಟ್ಟಿದೆ. ವರ್ಷದ ಮೇ ಅಥವಾ ಅಕ್ಟೋಬರ್ ತಿಂಗಳಲ್ಲಿ ಸಂಪಿಗೆ ಹೂ ಬಿಡುವುದು. ಕೆಂಡಸಂಪಿಗೆ ಬಹು ಸುವಾಸನೆಯುಳ್ಳದ್ದು. ಬಿಳಿ, ಬೂದು, ಕಡುಹಳದಿ, ನೀಲ ಹಳದಿ ಹೀಗೆ ಹಲವಾರು ಬಣ್ಣಗಳಲ್ಲಿ ಬಿಡುತ್ತದೆ.
ಈ ಸುವಾಸನೆಯುಕ್ತ ಸಂಪಿಗೆ ಹೂವುಗಳನ್ನು ಚರ್ಮದ ರೋಗಗಳು, ಗಾಯಗಳು ಮತ್ತು ಹುಣ್ಣುಗಳಂಥ ವಿವಿಧ ರೋಗಗಳ ಚಿಕಿತ್ಸೆಗೆ ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ. ವಾಕರಿಕೆ, ಜ್ವರ, ತಲೆತಿರುಗುವಿಕೆ, ಕೆಮ್ಮು ಮೊದಲಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಚಂಪಾ ಹೂವಿನ ಕಷಾಯ ಬಳಸಲಾಗುತ್ತದೆ.
- * ಕಣ್ಣಿನ ಆರೈಕೆಗೆ ಸುಲಭದ ಮನೆಮದ್ದು: ಕೆಂಡ ಸಂಪಿಗೆ ಹೂವಿನ ಎರಡು ಎಲೆಯನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ದಿನವೂ ಕಣ್ಣು ತೊಳೆಯುವುದರಿಂದ ಕಣ್ಣಿನ ಅನೇಕ ಕಾಯಿಲೆಗಳು ವಾಸಿ ಆಗುತ್ತವೆ. ಇದು ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ ಮತ್ತು ಆರಂಭಿಕ ಕಣ್ಣಿನ ಪೊರೆಯನ್ನು ತೆಗೆದು ಸರಿ ಮಾಡುವ ಸಾಮರ್ಥ್ಯ ಇದೆ.
- * ಸಂಧಿವಾತವಿದ್ದರೆ ಒಂದು ಕಪ್ ಹರಳೆಣ್ಣೆಯಲ್ಲಿ ಸಂಪಿಗೆಯ ಐದಾರು ಹೂಗಳನ್ನು ಹಾಕಿ ಬೆಚ್ಚಗೆ ಮಾಡಿ ನೋವಿರುವ ಜಾಗಕ್ಕೆ ಸವರಿದರೆ ನೋವು ನಿವಾರಣೆಯಾಗುತ್ತದೆ.
- * ತಲೆಕೂದಲು ಉದುರುತ್ತಿದ್ದರೆ, ಹೊಟ್ಟು ಹೆಚ್ಚಾದರೆ, ನಿಂಬೆಹಣ್ಣಿನ ರಸದಲ್ಲಿ ಸಂಪಿಗೆ ಹೂವುಗಳನ್ನು ರಾತ್ರಿ ಪೂರಾ ನೆನೆಹಾಕಿ ಮುಂಜಾನೆ ಹೂಗಳನ್ನು ಹಿಸುಕಿ ತೆಗೆದು ತಲೆಕೂದಲಿನ ಬುಡಕ್ಕೆ ಹಚ್ಚಿ.
- * ಸಂಪಿಗೆ ಚಕ್ಕೆಯನ್ನು ಅರೆಬರೆ ಕುಟ್ಟಿ ನೀರು ಹಾಕಿ ಕುದಿಸಿ ಅರ್ಧಕ್ಕೆ ಇಳಿದಾಗ ಸೋಸಿ ಜ್ವರದಲ್ಲಿ ಮೂರು ಚಮಚದಷ್ಟು ಪ್ರತಿ ಎರಡು ಗಂಟೆಗೆ ಕುಡಿಯುತ್ತಿದ್ದರೆ ಗುಣವಾಗುತ್ತದೆ.
- * ಸಂಪಿಗೆ ಚಕ್ಕೆಯ ಕಷಾಯವನ್ನು ಸತತವಾಗಿ ಆರು ತಿಂಗಳು ಕುಡಿಯುವುದರಿಂದ ರಕ್ತ ಶುದ್ಧವಾಗಿ ಚರ್ಮದ ಕಾಯಿಲೆಗಳು ಗುಣವಾಗುತ್ತದೆ. ಸಂಪಿಗೆ ಚಕ್ಕೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿ ಬಾಯಲ್ಲಿ ಇಟ್ಟು ರಸ ನುಂಗುತ್ತಿದ್ದರೆ ಟಾನ್ಸಿಲ್ಸ್ ಗುಣವಾಗುತ್ತದೆ.
- * ಒಂದು ಚಮಚದಷ್ಟು ಸಂಪಿಗೆ ಹೂವಿನ ರಸವನ್ನು ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ತಿಂದು ಹೂವು ಇಲ್ಲವಾದಲ್ಲಿ ಎಲೆಗಳನ್ನು ಉಪಯೋಗಿಸಬಹುದು. ಒಂಬತ್ತನೇ ದಿನ ಭೇದಿಯಾಗಲು ತೆಗೆದುಕೊಳ್ಳುವುದರಿಂದ ಉದರದ ಕ್ರಿಮಿ ನಾಶವಾಗುತ್ತದೆ.
- * ಸಂಪಿಗೆಯ ಎಳೆಯ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿ ಕಷಾಯ ಮಾಡಿ ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- * ಸಂಪಿಗೆಯ ಕುಸುಮವನ್ನು ಬೆಣ್ಣೆಯಲ್ಲಿ ಲೇಪಿಸಿ, ಅರ್ಧ ಚಮಚ ತಿಂದರೆ ರಕ್ತ ಮೂಲವ್ಯಾಧಿ ಗುಣವಾಗುತ್ತದೆ. ಸಂಪಿಗೆಯ ಕುಸುಮವನ್ನು ಜೇನುತುಪ್ಪ ಸೇರಿಸಿ ತಿಂದರೆ ಬಿಕ್ಕಳಿಕೆ ನಿಲ್ಲುತ್ತದೆ.
- * ಸಂಪಿಗೆಯ ಕುಸುಮವನ್ನು ಪ್ರತಿನಿತ್ಯ ತಿನ್ನುವುದರಿಂದ ವೀರ್ಯ ವೃದ್ಧಿಸುತ್ತದೆ.
- * ಸಂಪಿಗೆಯ ಇತರೆ ಉಪಯೋಗಗಳು: ಸಂಪಿಗೆ ಮರವನ್ನು ತೇಗದ ಮರದಂತೆ ಉಪಯೋಗಿಸುತ್ತಾರೆ. ವಿಮಾನ ಹಡಗು ನಿರ್ಮಾಣಕ್ಕೆ, ಮಠಾಧೀಶ್ವರರನ್ನು ಹೊರುವ ಅಡ್ಡಪಲ್ಲಕ್ಕಿ, ಆಟದ ಗೊಂಬೆ, ಬರೆಯುವ ಪೆನ್ಸಿಲ್, ಪ್ಲೈವುಡ್ ಪೀಠೋಪಕರಣಗಳ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. (ವಾಟ್ಸಪ್ ಲೇಖನ- ಸುಮನಾ ಮಳಲಗದ್ದೆ)