ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸೀಸನಲ್ ರೋಗಗಳಿಂದ ದೂರವಿರಲು ಈ ರೀತಿ ಮಾಡಿ!

ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳು ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ತಾಪಮಾನ ಬದಲಾದಾಗ, ನಮ್ಮ ಆಂತರಿಕ ವ್ಯವಸ್ಥೆಗಳು ಬಾಹ್ಯ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತವೆ. ಇದು ತಾತ್ಕಾಲಿಕವಾಗಿ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಹಾಗೂ ಒಳ್ಳೆಯ ಅಭ್ಯಾಸಗಳನ್ನು ನಿಯಮಿತವಾಗಿ ಪಾಲಿಸಿದರೆ ದೇಹದ ರೋಗನಿರೋಧಕ ಶಕ್ತಿ ಉತ್ತಮವಾಗಿರಿಸಿಕೊಳ್ಳಬಹುದು. ಹಾಗಾದರೆ ನಮ್ಮ ದಿನಚರಿ ಹೇಗಿರಬೇಕು, ಯಾವ ಆಹಾರಗಳಿಂದ ದೂರವಿದ್ದರೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸೀಸನಲ್ ರೋಗಗಳಿಂದ ದೂರವಿರಲು ಈ ರೀತಿ ಮಾಡಿ!
Seasonal Infections
Image Credit source: Getty Images

Updated on: Jun 11, 2026 | 5:45 PM

ದೇಶದ ಹಲವೆಡೆ ಹವಾಮಾನದಲ್ಲಿ ಬದಲಾವಣೆಯಾಗುತ್ತಿರುವುದನ್ನು ನೀವು ಕಾಣಬಹುದು. ಕೆಲವು ಕಡೆ ಮಳೆ ಸುರಿಯುತ್ತಿದ್ದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಈ ರೀತಿ ಹವಾಮಾನ ಬದಲಾಗುವ ಸಮಯದಲ್ಲಿ ಜ್ವರ, ಶೀತ, ಗಂಟಲು ಸೋಂಕು, ಫ್ಲೂ ಮುಂತಾದ ಸಮಸ್ಯೆಗಳು ಕಂಡುಬರುವುದು ಸಾಮಾನ್ಯ. ಆದರೆ ಈ ರೀತಿಯಾಗುವುದಕ್ಕೆ ಪ್ರಮುಖ ಕಾರಣ ದೇಹದ ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದು. ವೈದ್ಯರ ಪ್ರಕಾರ, ಏನೇ ಮಾಡಿದರೂ ಒಂದು ರಾತ್ರಿಯಲ್ಲಿ ಇಮ್ಯೂನಿಟಿ (Immunity) ಹೆಚ್ಚಿಸಿಕೊಳ್ಳುವ ಯಾವುದೇ ತ್ವರಿತ ವಿಧಾನಗಳಿಲ್ಲ. ಆದರೆ ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಹಾಗೂ ಒಳ್ಳೆಯ ಅಭ್ಯಾಸಗಳನ್ನು ನಿಯಮಿತವಾಗಿ ಪಾಲಿಸಿದರೆ ದೇಹದ ರೋಗನಿರೋಧಕ ಶಕ್ತಿ ಉತ್ತಮವಾಗಿರಿಸಿಕೊಳ್ಳಬಹುದು. ಇದರಿಂದ ಸೀಸನಲ್ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾದರೆ ನಮ್ಮ ದಿನಚರಿ ಹೇಗಿರಬೇಕು, ಯಾವ ಆಹಾರಗಳಿಂದ ದೂರವಿದ್ದರೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಮತೋಲನ ಆಹಾರ ಸೇವನೆ:

ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಖನಿಜಾಂಶಗಳು ದೊರೆಯಲು ಹಣ್ಣು, ತರಕಾರಿ, ಧಾನ್ಯ, ಡ್ರೈ ಫ್ರೂಟ್ಸ್ ಹಾಗೂ ಪ್ರೋಟೀನ್‌ಯುಕ್ತ ಆಹಾರ ಸೇವನೆ ಅಗತ್ಯ. ವಿಶೇಷವಾಗಿ ನಿಂಬೆ, ಕಿತ್ತಳೆ, ನೆಲ್ಲಿಕಾಯಿ ಮುಂತಾದ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್-ಸಿ ಸಮೃದ್ಧವಾಗಿದ್ದು, ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬಾದಾಮಿ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಲಭ್ಯವಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಸಾಕಷ್ಟು ನೀರು ಮತ್ತು ನಿದ್ರೆ:

ದೇಹ ಸರಿಯಾಗಿ ಕಾರ್ಯನಿರ್ವಹಿಸಲು ದಿನಪೂರ್ತಿ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಜೊತೆಗೆ ಪ್ರತಿದಿನ ಸರಿಯಾಗಿ ನಿದ್ರೆ ಮಾಡದಿದ್ದರೆ ರೋಗನಿರೋಧಕ ಶಕ್ತಿ ಕುಗ್ಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಆರೋಗ್ಯವಾಗಿರಲು ಮಾತ್ರೆ ತಗೋಳೋದು ಬಿಟ್ಟು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಕೊಡಿ!

ವ್ಯಾಯಾಮ ಮತ್ತು ಒತ್ತಡ ನಿಯಂತ್ರಣ:

ಪ್ರತಿದಿನ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡುವುದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ. ದೀರ್ಘಕಾಲದ ಒತ್ತಡ ದೇಹದ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. ಆದ್ದರಿಂದ ಮನಸ್ಸನ್ನು ಶಾಂತವಾಗಿಡುವುದು ಮತ್ತು ಒತ್ತಡ ನಿಯಂತ್ರಿಸುವುದು ಮುಖ್ಯ.

ಭಾರತೀಯ ಮಸಾಲೆಗಳ ಆರೋಗ್ಯ ಲಾಭಗಳು:

ಅರಿಶಿನ, ಶುಂಠಿ, ಬೆಳ್ಳುಳ್ಳಿ, ಮೆಣಸು ಹಾಗೂ ದಾಲ್ಚಿನ್ನಿಯಲ್ಲಿ ನೈಸರ್ಗಿಕ ಆಂಟಿ-ವೈರಲ್ ಮತ್ತು ಆಂಟಿ-ಬ್ಯಾಕ್ಟೀರಿಯಲ್ ಗುಣಗಳಿವೆ. ಪ್ರತಿದಿನ ಅರಿಶಿನ ಹಾಲು ಕುಡಿಯುವುದು ಆರೋಗ್ಯಕ್ಕೆ ಲಾಭಕರ. ತುಳಸಿ, ಪುದೀನಾ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯಗಳು ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.

ಯಾವ ಆಹಾರಗಳಿಂದ ದೂರ ಇರಬೇಕು?

ಜಂಕ್ ಫುಡ್, ಹೆಚ್ಚು ಎಣ್ಣೆಯ ಆಹಾರ, ಸಾಫ್ಟ್ ಡ್ರಿಂಕ್ಸ್ ಮತ್ತು ಅತಿಯಾದ ಸಕ್ಕರೆ ಇರುವ ಪದಾರ್ಥಗಳನ್ನು ಕಡಿಮೆ ಮಾಡುವುದು ಉತ್ತಮ. ಧೂಮಪಾನ ಮತ್ತು ಮದ್ಯಪಾನವೂ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು. ಆರೋಗ್ಯಕರ ಆಹಾರ, ಸರಿಯಾದ ನಿದ್ರೆ, ವ್ಯಾಯಾಮ ಮತ್ತು ಒಳ್ಳೆಯ ಜೀವನಶೈಲಿಯೇ ದೇಹವನ್ನು ಒಳಗಿನಿಂದ ಬಲಪಡಿಸಿ ಸೀಸನಲ್ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us