ನಿದ್ರೆ ಸರಿಯಾಗಿ ಮಾಡದವರಲ್ಲಿ ಕಣ್ಣಿನ ದೃಷ್ಟಿ ದುರ್ಬಲವಾಗುತ್ತಾ? ಇಲ್ಲಿದೆ ತಜ್ಞರು ನೀಡಿರುವ ಸ್ಪಷ್ಟನೆ

ಇತ್ತೀಚಿಗೆ ಅನೇಕರು ಸರಿಯಾಗಿ ನಿದ್ರೆ ಮಾಡುವುದನ್ನೇ ಮರೆತಿದ್ದಾರೆ. ಆದರೆ ನಿಮಗೆ ತಿಳಿದಿರಲಿ ಇದು ಕಣ್ಣಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾದರೆ ನಿದ್ರೆಯ ಕೊರತೆ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆಯೇ, ಈ ರೀತಿ ನಿದ್ರೆ ಕಡಿಮೆಯಾಗುವುದರಿಂದ ಕಣ್ಣಿನ ದೃಷ್ಟಿ ದುರ್ಬಲವಾಗುತ್ತಾ, ಲಕ್ಷಣಗಳು ಹೇಗಿರುತ್ತವೆ ಮತ್ತು ಈ ರೀತಿಯ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆ ಸರಿಯಾಗಿ ಮಾಡದವರಲ್ಲಿ ಕಣ್ಣಿನ ದೃಷ್ಟಿ ದುರ್ಬಲವಾಗುತ್ತಾ? ಇಲ್ಲಿದೆ ತಜ್ಞರು ನೀಡಿರುವ ಸ್ಪಷ್ಟನೆ
Sleep And Eye Health
Image Credit source: Getty Images

Updated on: Apr 15, 2026 | 4:49 PM

ಇಂದಿನ ವೇಗದ ಜೀವನಶೈಲಿಯಲ್ಲಿ ನಿದ್ರೆಯ (Sleep) ಕೊರತೆ ಸಾಮಾನ್ಯ ಸಮಸ್ಯೆಯಾಗುತ್ತಿದೆ. ರಾತ್ರಿಯಾದರೂ ಮೊಬೈಲ್ ಬಳಕೆ ಮಾಡುತ್ತಾ ಸಮಯ ಕಳೆಯುವವರು ಒಂದು ಕಡೆಯಾದರೆ, ಮತ್ತೊಂದು ಕಡೆ ಕೆಲಸದ ಒತ್ತಡ ಮತ್ತು ಅಸ್ಥಿರ ದಿನಚರಿಯಿಂದ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಇದರ ಪರಿಣಾಮ ಕೇವಲ ದೇಹದ ಮೇಲಷ್ಟೇ ಅಲ್ಲ, ಕಣ್ಣಿನ ಆರೋಗ್ಯದ (Eye Health) ಮೇಲೂ ಬೀಳುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಇದರಿಂದ ಕಣ್ಣಿನ ದೃಷ್ಟಿ ದುರ್ಬಲವಾಗುತ್ತಾ, ಈ ರೀತಿಯ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆಯ ಕೊರತೆ ಮತ್ತು ಕಣ್ಣಿನ ಆರೋಗ್ಯ:

ಆರೋಗ್ಯ ತಜ್ಞರು ಹೇಳುವ ಪ್ರಕಾರ, ನಿದ್ರೆಯ ಕೊರತೆಯಿಂದ ಕಣ್ಣಿನ ಮೇಲೆ ನೇರ ಪರಿಣಾಮ ಬೀಳುತ್ತದೆ. ಇದರಿಂದ ಶಾಶ್ವತವಾಗಿ ದೃಷ್ಟಿ ಕುಂದುತ್ತದೆ ಎನ್ನುವುದು ತಪ್ಪು ಕಲ್ಪನೆ. ಸಾಕಷ್ಟು ನಿದ್ರೆ ಸಿಗದಿದ್ದರೆ ಕಣ್ಣುಗಳಿಗೆ ಅಗತ್ಯ ವಿಶ್ರಾಂತಿ ಸಿಗುವುದಿಲ್ಲ, ಇದರಿಂದ ತಾತ್ಕಾಲಿಕವಾಗಿ ಮಂಕು ದೃಷ್ಟಿ, ಫೋಕಸ್ ಸಮಸ್ಯೆ ಮತ್ತು ಕಣ್ಣು ಭಾರವಾಗುವಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಒಬ್ಬ ವ್ಯಕ್ತಿ ನಿದ್ರೆ ಇಲ್ಲದೆ ಎಷ್ಟು ದಿನ ಬದುಕಬಹುದು? ಒಂದು ದಿನ ನಿದ್ರೆ ಬಿಟ್ಟರೆ ಏನೆಲ್ಲಾ ಆಗುತ್ತೆ ನೋಡಿ

ಲಕ್ಷಣಗಳು ಹೇಗಿರುತ್ತವೆ?

ನಿದ್ರೆ ಕೊರತೆಯಿಂದ ಕಣ್ಣಿನಲ್ಲಿ ಉರಿ, ಒಣಗುವಿಕೆ ಮತ್ತು ಕೆಂಪಾಗುವುದು ಕಂಡುಬರುತ್ತದೆ. ಜೊತೆಗೆ ಬೆಳಕಿಗೆ ಹೆಚ್ಚು ಸಂವೇದನೆ, ತಲೆನೋವು ಮತ್ತು ಕಣ್ಣಿನ ನೋವು ಉಂಟಾಗಬಹುದು. ಕೆಲವರಿಗೆ ಕಣ್ಣುಗಳ ಕೆಳಗೆ ಕಪ್ಪಾಗುವುದು ಮತ್ತು ಊತ ಕೂಡ ಕಾಣಿಸಬಹುದು. ಈ ಲಕ್ಷಣಗಳು ಕಣ್ಣುಗಳಿಗೆ ಸರಿಯಾದ ವಿಶ್ರಾಂತಿ ಸಿಗದಿರುವುದನ್ನು ಸೂಚಿಸುತ್ತವೆ. ಹೆಚ್ಚು ಸಮಯ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ನಿರಂತರವಾಗಿ ಕಣ್ಣಿಗೆ ಒತ್ತಡ ನೀಡುವುದರಿಂದ ಒಣಗುವಿಕೆ ಮತ್ತು ದೃಷ್ಟಿ ಮಂಕಾಗುವುದು ಹೆಚ್ಚಾಗುತ್ತದೆ.

ತಡೆಗಟ್ಟುವ ಕ್ರಮಗಳು

ಪ್ರತಿದಿನ 7 ರಿಂದ 8 ಗಂಟೆ ಸರಿಯಾಗಿ ನಿದ್ರೆ ಪಡೆಯುವುದು ಅತ್ಯಂತ ಮುಖ್ಯ. ಸ್ಕ್ರೀನ್ ಟೈಮ್ ಕಡಿಮೆ ಮಾಡಿ, ಮಧ್ಯಂತರದಲ್ಲಿ ವಿರಾಮ ತೆಗೆದುಕೊಳ್ಳಬೇಕು. ಸಾಕಷ್ಟು ನೀರು ಕುಡಿಯುವುದು ಮತ್ತು ಸಮತೋಲಿತ ಆಹಾರ ಸೇವಿಸುವುದು ಕಣ್ಣಿನ ಆರೋಗ್ಯಕ್ಕೆ ಸಹಕಾರಿ. ನಿದ್ರೆಯ ಕೊರತೆ ಕಣ್ಣಿನ ದೃಷ್ಟಿಯನ್ನು ತಾತ್ಕಾಲಿಕವಾಗಿ ಹಾನಿಗೊಳಿಸಬಹುದು, ಆದರೆ ದೀರ್ಘಕಾಲ ಗಮನಿಸದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಸಮರ್ಪಕ ನಿದ್ರೆ ಮತ್ತು ಕಣ್ಣಿನ ಆರೈಕೆ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us