ನೀವು ದಿನನಿತ್ಯ 7-10 ತಾಸುಗಳ ಕಾಲ ಸ್ಮಾರ್ಟ್ಫೋನ್(Smartphone) ಬಳಕೆ ಮಾಡುತ್ತಿದ್ದರೆ ನಿಮ್ಮ ಮಾನಸಿಕ ಆರೋಗ್ಯ( Mental Health) ಹದಗೆಡಬಹುದು ಎಂದು ಸಂಶೋಧನೆ ಹೇಳಿದೆ. ಸಾಫಿಯನ್ ಲ್ಯಾಬ್ ನೀಡಿರುವ ಮಾಹಿತಿ ಪ್ರಕಾರ ದಿನದಿಂದ ದಿನಕ್ಕೆ ಸ್ಮಾರ್ಟ್ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ ಇದು 18-24 ವರ್ಷದೊಳಗಿನ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂಬುದು ತಿಳಿದುಬಂದಿದೆ. ವರದಿ ಪ್ರಕಾರ ಜನರು ನಿತ್ಯ 7-10ತಾಸುಗಳ ಕಾಲ ಮೊಬೈಲ್ ಬಳಕೆ ಮಾಡುತ್ತಿದ್ದಾರೆ, ಮಕ್ಕಳು ಕುಟುಂಬದವರ ಜತೆ ಕಾಲ ಕಳೆಯುವ ಪ್ರಮಾಣ ಕೂಡ ಕಡಿಮೆಯಾಗಿದೆ.
ಕೊರೊನಾ ಬಂದ ಬಳಿಕ ಪ್ರಾಥಮಿಕ ಶಾಲಾ ಹಂತದ ಮಕ್ಕಳು ಕೂಡ ಮೊಬೈಲ್ ಬಳಕೆ ಶುರು ಮಾಡಿದ್ದಾರೆ. ದಿನನಿತ್ಯದ ಜೀವನದಲ್ಲಿ ಮೊಬೈಲ್ ಫೋನ್ ಇಂದು ಅನಿವಾರ್ಯವಾಗಿದೆ. ದೂರದ ಸ್ನೇಹಿತರಿಗೆ, ಬಂಧುಗಳಿಗೆ ತುರ್ತು ಸುದ್ದಿ ಮುಟ್ಟಿಸಲು, ಸಂದೇಶ ತಲುಪಿಸಲು, ವ್ಯವಹಾರದ ಮಾತುಕತೆಗೆ ಮೊಬೈಲ್ ಅವಶ್ಯಕ. ಆದರೆ ಅತಿಯಾದರೆ ಅಮೃತವು ವಿಷವೆನ್ನುವಂತೆ ಮೊಬೈಲ್ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ ಕೂಡ.
ಸ್ಮಾರ್ಟ್ ಫೋನ್ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮ
ಬೆನ್ನು ಹುರಿಯ ಸಮಸ್ಯೆ: ಸಾಕಷ್ಟು ಮಂದಿ ಸ್ಮಾರ್ಟ್ ಫೋನ್ ಬಳಕೆದಾರರು ಬೆನ್ನು ಹುರಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ, 2015ರ ಮೊಬೈಲ್ ಸಮೀಕ್ಷೆಯಂತೆ ಶೇ.45 ರಷ್ಷು ಮೊಬೈಲ್ ಬಳಸುವ 16 ರಿಂದ 24 ವರ್ಷದ ಯುವಕರು ಬೆನ್ನು ಹುರಿಯ ನೋವಿನಿಂದ ಬಳಲುತ್ತಿದ್ದಾರೆ. ಇನ್ನೂ ಪ್ರತಿ ದಿನವು ಶೇ.25 ರಷ್ಟು ಬಳಕೆದಾರರಲ್ಲಿ ಬೆನ್ನು ಹುರಿ ನೋವು ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯ ಎನ್ನಲಾಗಿದೆ.
ಆತಂಕ ಮತ್ತು ಖಿನ್ನತೆ: ಸಮೀಕ್ಷೆಯ ಪ್ರಕಾರ ಅತಿಯಾದ ಮೊಬೈಲ್ ಬಳಕೆಯಿಂದ ಬಳಕೆದಾರರಲ್ಲಿ ಖಿನ್ನತೆ ಮತ್ತು ಆತಂಕ ಹೆಚ್ಚಾಗುತ್ತದೆ. ಹೆಚ್ಚಾಗಿ ಗೇಮ್ಸ್, ವೀಡಿಯೋವನ್ನು ವೀಕ್ಷಕರಲ್ಲಿ ಈ ಸಮಸ್ಯೆ ಕಂಡುಬರುತ್ತದೆ.
ನರದ ಸಮಸ್ಯೆ: ಯುವಕರು ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಸುತ್ತಾರೆ. ಹಾಡು, ಗೇಮ್ಸ್, ಸಾಮಾಜಿಕ ಜಾಲತಾಣವನ್ನು ವೀಕ್ಷಿಸುವಲ್ಲಿ ಹೆಚ್ಚಾಗಿ ಸ್ಮಾರ್ಟ್ಫೋನ್ನಲ್ಲಿ ಸಮಯ ಕಳೆಯುತ್ತಾರೆ. ಕುಳಿತಲ್ಲೇ ಕುಳಿತು ಮೊಬೈಲ್ ಬಳಕೆಯಲ್ಲಿ ತಲ್ಲೀನರಾಗುವ ಯುವಕರಲ್ಲಿ ನರದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ.
ಕಣ್ಣಿನ ಸಮಸ್ಯೆ: ಸ್ಮಾರ್ಟ್ಫೋನ್ ಬಳಕೆದಾರರು ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೊಬೈಲ್ ಡಿಸ್ಪ್ಲೇ ಮೂಲಕ ಮೂಡುವ ಬೆಳಕು ಬಳಕೆದಾರರ ಕಣ್ಣಿನ ದೃಷ್ಠಿಗೆ ಹಾನಿಯುಂಟು ಮಾಡುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.
ನಿದ್ರಾಹೀನತೆ: ಶೇ.68 ರಷ್ಟು ಸ್ಮಾರ್ಟ್ಫೋನ್ ಬಳಕೆಯ 18 ರಿಂದ 29 ವರ್ಷದ ಜನರಲ್ಲಿ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯುವಕರಲ್ಲಿ ಈ ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತಿದ್ದು, ರಾತ್ರಿ ವೇಳೆಯಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.
ಸೂಚನೆ: ಈ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಮೀಕ್ಷಾ ವರದಿ ಆಧರಿಸಿದ ಲೇಖನವಾಗಿದೆ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Sun, 15 May 22