
ಧಾರೆಹುಳಿ (Star Fruit), ಕರಂಬಳ ಹಣ್ಣು, ಕರಂಬೋಲಾ, ಕರಬಲ, ಕರಿಮಾದಲ, ಕಮರದ್ರಾಕ್ಷಿ, ನಕ್ಷತ್ರ ಹುಳಿ ಇತ್ಯಾದಿ ಹೆಸರುಗಳಿಂದ ಕರೆಯುವ ನಕ್ಷತ್ರ ಹಣ್ಣಿನ ಬಗ್ಗೆ ನೀವೂ ಕೂಡ ಕೇಳಿರಬಹುದು. ಇದು ಆಕ್ಷೀಡೇಸಿಯೇ ಕುಟುಂಬಕ್ಕೆ ಸೇರಿದ ಈ ಹಣ್ಣಿನ ವೈಜ್ಞಾನಿಕ ಹೆಸರು “ಅವೆರೋ ಕ್ಯಾರಂಬೋಲ” (Averrhoa carambola). ಈ ಹಣ್ಣನ್ನು ಉಷ್ಣವಲಯದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಜೊತೆಗೆ ಇದು ಬಯಲು ಸೀಮೆ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ತಿನ್ನುವುದಕ್ಕೆ ಬಹಳ ಹುಳಿಯಾಗಿದ್ದರೂ ಕೂಡ ಇದರಲ್ಲಿ ಅನೇಕ ರೀತಿಯ ಆರೋಗ್ಯ (Health) ಪ್ರಯೋಜನಗಳಿವೆ ಎಂಬುವುದನ್ನು ನೀವು ನಂಬಲೇ ಬೇಕು. ಹೌದು. ಈ ನಕ್ಷತ್ರ ಹಣ್ಣು ಅಥವಾ ಸ್ಟಾರ್ ಫ್ರೂಟ್ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಾದರೆ ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು? ಸ್ಟಾರ್ ಫ್ರೂಟ್ ತಿಂದರೆ ಏನಾಗುತ್ತೆ? ಎಂಬುದನ್ನು ತಿಳಿದುಕೊಳ್ಳಿ.
ಸ್ಟಾರ್ ಫ್ರೂಟ್ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಹಣ್ಣಾಗಿದ್ದು ಫ್ಲೇವನಾಯ್ಡ್ ಗಳು, ಪ್ರೊಯಾಂಥೋಸಯಾನಿಡಿನ್ ಗಳು, ಬೀಟಾ-ಕ್ಯಾರೋಟಿನ್ ಮತ್ತು ಗ್ಯಾಲಿಕ್ ಆಮ್ಲಗಳು ಇದರಲ್ಲಿದೆ. ಈ ರೀತಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಆಹಾರವನ್ನು ಸೇವನೆ ಮಾಡುವುದರಿಂದ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎರಡೂ ಪ್ರಯೋಜನಗಳು ಹೃದ್ರೋಗ ಮತ್ತು ನ್ಯೂರೋಡಿಜೆನರೇಟಿವ್ ಕಾಯಿಲೆಗಳ ಅಪಾಯವನ್ನು ಕೂಡ ಕಡಿಮೆ ಮಾಡಬಹುದು.
ನಕ್ಷತ್ರ ಹಣ್ಣಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು ಇದರಲ್ಲಿರುವ ಫೈಬರ್ ಅಂಶ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುವ ಮೂಲಕ ನಮ್ಮ ಆರೋಗ್ಯ ಚೆನ್ನಾಗಿರಲು ಸಹಾಯ ಮಾಡುತ್ತದೆ. ಫೈಬರ್ ಅಂಶ ಕರುಳಿನಲ್ಲಿರುವ ಸಹಾಯಕ ಬ್ಯಾಕ್ಟೀರಿಯಾಗಳಿಗೆ ಇಂಧನವಾಗಿ ಕಾರ್ಯನಿರ್ವಹಿಸುತ್ತದೆ, ಇದು ಆರೋಗ್ಯಕರ ಕರುಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹಾಗಾಗಿ ಫೈಬರ್ ಭರಿತ ಆಹಾರವನ್ನು ಸೇವನೆ ಮಾಡಿದರೆ ಕರುಳಿನ ಕ್ಯಾನ್ಸರ್ ಮತ್ತು ಉರಿಯೂತದ ಕರುಳಿನ ಕಾಯಿಲೆ (ಐಬಿಡಿ) ನಂತಹ ಜೀರ್ಣಕಾರಿ ಅಸ್ವಸ್ಥತೆಗಳಿಂದ ರಕ್ಷಣೆ ಪಡೆಯಬಹುದು. ಜೊತೆಗೆ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ರಕ್ತದಲ್ಲಿನ ಗ್ಲೂಕೋಸ್ (ಸಕ್ಕರೆ) ಮಟ್ಟವನ್ನು ಕಡಿಮೆ ಮಾಡಲು ಈ ಹಣ್ಣು ಸಹಾಯ ಮಾಡುತ್ತದೆ, ಇವೆಲ್ಲವೂ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಮಗುವಿಗೆ ಮೊಲೆ ಹಾಲು ನೀಡುವ ಮೊದಲು ಹೊರಗೆ ಸ್ಪಲ್ಪ ಚೆಲ್ಲಬೇಕು, ಯಾಕೆ ?
ನಕ್ಷತ್ರ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಪ್ರಬಲ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು ಜೀವಕೋಶಗಳ ಹಾನಿಯಿಂದ ರಕ್ಷಿಸುತ್ತದೆ. ಅದಲ್ಲದೆ ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವನೆ ಮಾಡುವುದರಿಂದ ಸ್ತನ, ಅನ್ನನಾಳ, ಗ್ಯಾಸ್ಟ್ರಿಕ್, ಶ್ವಾಸಕೋಶ, ಪ್ಯಾಂಕ್ರಿಯಾಟಿಕ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಂಭವವನ್ನು ಕಡಿಮೆ ಮಾಡುತ್ತದೆ ಮತ್ತು ಅಂಗಾಂಶಗಳನ್ನು ಕ್ಯಾನ್ಸರ್ ಕಾರಕಗಳಿಂದ ರಕ್ಷಿಸುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ಸಂಶೋಧನೆಗಳು ಹೇಳುವ ಪ್ರಕಾರ ವಯಸ್ಕ ಮಹಿಳೆಯರು ಮತ್ತು ಪುರುಷರಿಗೆ ದಿನಕ್ಕೆ ಕ್ರಮವಾಗಿ 75 ಮತ್ತು 90 ಮಿ. ಗ್ರಾಂ. ವಿಟಮಿನ್ ಸಿ ಅಗತ್ಯವಿದೆ. ಇದು ಕ್ಯಾನ್ಸರ್ ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ