ಮಕ್ಕಳಿಗೆ ಖಾರ ಪದಾರ್ಥ ನೀಡಲು ಯಾವಾಗ ಆರಂಭ ಮಾಡಬೇಕು?
ಸಾಮಾನ್ಯವಾಗಿ ಶಿಶುವಿಗೆ ಆರು ತಿಂಗಳು ಆದ ಬಳಿಕ ತಾಯಿ ಹಾಲಿನ ಜೊತೆಗೆ ಘನ ಆಹಾರಗಳನ್ನು ನೀಡಲಾಗುತ್ತದೆ. ಆದರೆ ಕೆಲವು ತಾಯಂದಿರಿಗೆ ತಮ್ಮ ಮಕ್ಕಳಿಗೆ ಯಾವಾಗ ಮಸಾಲೆ ಪದಾರ್ಥಗಳನ್ನು ಅಥವಾ ಖಾರವಾದ ಆಹಾರಗಳನ್ನು ನೀಡಬೇಕು ಎಂಬ ಅನುಮಾನವಿರುತ್ತದೆ. ಅದರಲ್ಲಿಯೂ ಅಂತಹ ಆಹಾರಗಳು ಮಕ್ಕಳಿಗೆ ಒಳ್ಳೆಯದೋ? ಅಲ್ಲವೋ? ಇದರಿಂದ ಪ್ರಯೋಜನಗಳಿರಬಹುದೇ ಎಂಬ ಪ್ರಶ್ನೆ ತಾಯಂದಿರನ್ನು ಕಾಡುತ್ತದೆ ಅಂತಹ ಅನುಮಾನಗಳಿಗೆ ಉತ್ತರ ಇಲ್ಲಿದೆ.

ಶಿಶುವಿನ ಬೆಳವಣಿಗೆ ಆಗುತ್ತಿದ್ದಂತೆ ಅಂದರೆ ಸುಮಾರು ಆರು ತಿಂಗಳ ನಂತರ ಮಕ್ಕಳಿಗೆ ಘನ ಆಹಾರ (Solid food) ಗಳನ್ನು ನೀಡಲಾಗುತ್ತದೆ. ತಾಯಿ ಹಾಲಿನ ಜೊತೆಗೆ ಅನ್ನ, ಹಣ್ಣು (Fruit) ಮತ್ತು ತರಕಾರಿಗಳ ರಸ, ಗಂಜಿ ಹೀಗೆ ಮೆತ್ತಗಿರುವ ಆಹಾರಗಳನ್ನು ಮಗುವಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ಮಕ್ಕಳಿಗೆ ಈ ಸಮಯದಲ್ಲಿ ನೀಡುವ ಆಹಾರಗಳು ಅವರ ಆರೋಗ್ಯಕರ ಬೆಳವಣಿಗೆಗೆ (Healthy growth) ಸಹಾಯ ಮಾಡುತ್ತದೆ. ಹಾಗಾಗಿ ತಾಯಂದಿರು ಮಕ್ಕಳಿಗೆ ಒಳ್ಳೆಯ ಆಹಾರಗಳನ್ನು ತಿನ್ನಿಸುತ್ತಾರೆ. ಆದರೆ ಕೆಲವು ತಾಯಂದಿರಿಗೆ, ತಮ್ಮ ಮಕ್ಕಳಿಗೆ ಮಸಾಲೆ ಪದಾರ್ಥಗಳು (Spice) ಅಥವಾ ಖಾರವಾದ ಆಹಾರಗಳನ್ನು ಯಾವಾಗ ನೀಡಬೇಕು ಎಂಬ ಅನುಮಾನವಿರುತ್ತದೆ. ಅದರಲ್ಲಿಯೂ ಅಂತಹ ಆಹಾರಗಳು ಮಕ್ಕಳಿಗೆ ಒಳ್ಳೆಯದೋ? ಅಲ್ಲವೋ? ಇದರಿಂದ ಪ್ರಯೋಜನಗಳಿರಬಹುದೇ ಎಂಬ ಪ್ರಶ್ನೆ ಕೆಲವು ತಾಯಂದಿರನ್ನು ಕಾಡುವುದು ಸುಳ್ಳಲ್ಲ. ಈ ರೀತಿ ಕಾಡುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಸಾಮಾನ್ಯವಾಗಿ ಮಕ್ಕಳಿಗೆ ಆರು ತಿಂಗಳು ಆಗುವ ವರೆಗೆ ಯಾವುದೇ ರೀತಿಯ ಘನ ಆಹಾರಗಳನ್ನು ನೀಡುವುದಿಲ್ಲ. ಅದರ ನಂತರ ಸ್ವಲ್ಪ ಸ್ವಲ್ಪವೇ ಅನ್ನ, ಗಂಜಿ ಹೀಗೆ ಮೆತ್ತಗಿರುವ ಆಹಾರಗಳನ್ನು ನೀಡಲಾಗುತ್ತದೆ. ಈ ಸಮಯದಲ್ಲಿ ಮಕ್ಕಳಿಗೆ ಹಲ್ಲು ಬಂದಿರುವುದಿಲ್ಲ ಹಾಗಾಗಿ ಜಗಿದು ತಿನ್ನುವುದಕ್ಕೆ ಸಾಧ್ಯವಿರದ ಕಾರಣ ತೆಳ್ಳಗಿನ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತದೆ. ಅದಲ್ಲದೆ ಜೀರ್ಣ ಕ್ರಿಯೆಗೆ ಪೂರಕವಾಗಿರುವ ಆಹಾರಗಳನ್ನು ನೀಡುವುದು ಬಹಳ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಬಳಿಕ ಒಂದು ವರ್ಷದ ನಂತರ ಮಸಾಲೆ ಪದಾರ್ಥಗಳನ್ನು ನೀಡಲು ಆರಂಭ ಮಾಡುತ್ತಾರೆ. ಆದರೆ ಮಕ್ಕಳಿಗೆ ಏಳು ತಿಂಗಳು ಕಳೆದ ನಂತರ ಸ್ವಲ್ಪ ಸ್ವಲ್ಪವೇ ಮಸಾಲೆ ಪದಾರ್ಥಗಳನ್ನು ನೀಡಬಹುದು. ಮಕ್ಕಳು ಅದನ್ನು ಇಷ್ಟ ಪಟ್ಟು ಸೇವನೆ ಮಾಡುತ್ತಿದ್ದರೆ ಅದನ್ನು ಮುಂದುವರಿಸಬಹುದು. ಆದರೆ ಅತಿ ಖಾರವಿರುವ ಯಾವುದೇ ಆಹಾರಗಳನ್ನು ಅಥವಾ ಮಸಾಲೆ ಅಧಿಕವಾಗಿರುವ ಆಹಾರಗಳನ್ನು ನೀಡಬಾರದು.
ಮಕ್ಕಳಿಗೆ ಮಾಂಸಾಹಾರಗಳನ್ನು ನೀಡಬಹುದೇ?
ಸಾಮಾನ್ಯವಾಗಿ ಒಂದು ವರ್ಷದ ನಂತರ ಮಕ್ಕಳಿಗೆ ಮಾಂಸಾಹಾರಗಳನ್ನು ನೀಡಲಾಗುತ್ತದೆ. ಮಕ್ಕಳಿಗೆ ಈ ಸಮಯದಲ್ಲಿ ತಿಂದ ಎಲ್ಲಾ ಆಹಾರಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ ಹಾಗಾಗಿ ಸಲ್ಪ ಸ್ವಲ್ಪವೇ ನೀಡಿ. ಮಕ್ಕಳಿಗೆ ಕೆಲವು ಆಹಾರಗಳು ಒಗ್ಗುವುದಿಲ್ಲ. ಅಂದರೆ ಕೆಲವು ಆಹಾರಗಳ ಸೇವನೆ ಮಕ್ಕಳಿಗೆ ಅಲರ್ಜಿ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಚಿಕನ್ ಅಥವಾ ಇನ್ನಿತರ ಮಾಂಸಾಹಾರಗಳನ್ನು ಕೊಡುವಾಗ ಮಿತಿ ಇರಲಿ.
ಇದನ್ನೂ ಓದಿ: ಹುಡುಗರಂತೆ ಗಡ್ಡ, ಮೀಸೆ ಬರುತ್ತಾ? ಈ ಸಮಸ್ಯೆ ತಡೆಯಲು ಇಲ್ಲಿದೆ ವೈದ್ಯರ ಸಲಹೆ
ಯಾವ ಮಸಾಲೆ ಪದಾರ್ಥಗಳು ಮಕ್ಕಳಿಗೆ ಒಳ್ಳೆಯದು?
ಆರು ತಿಂಗಳ ನಂತರದ ಮಗುವಿಗೆ ಆಹಾರದಲ್ಲಿ ಚಿಟಿಕೆಯಷ್ಟು ಇಂಗು, ಅರಿಶಿನ, ಗರಮ್ ಮಸಾಲ, ದಾಲ್ಚಿನ್ನಿ, ಜೀರಿಗೆ, ಲವಂಗ, ಏಲಕ್ಕಿ ಇವುಗಳನ್ನು ಆಹಾರದಲ್ಲಿ ನೀಡಬಹುದು. ಇವುಗಳನ್ನು ಬಾಯಿಗೆ ಸಿಗುವ ರೀತಿ ನೀಡಬಾರದು ಬದಲಾಗಿ, ಅವುಗಳನ್ನು ಪುಡಿ ಮಾಡಿ ಬೇರೆ ಆಹಾರಗಳಲ್ಲಿ ಅವುಗಳನ್ನು ಮಿಕ್ಸ್ ಮಾಡಿ ಕೊಡಬಹುದು. ಉದಾಹರಣೆಗೆ: ಕಿಚಡಿ, ಸೂಪ್ ಅಥವಾ ದಾಲ್‍ನಂತಹ ಆಹಾರದಲ್ಲಿ ಈ ರೀತಿಯ ಮಸಾಲೆ ಪದಾರ್ಥಗಳನ್ನು ಅಗತ್ಯಕ್ಕೆ ಅಥವಾ ರುಚಿಗೆ ತಕ್ಕಂತೆ ಚಿಟಿಕೆಯಷ್ಟು ಬೆರೆಸಿ ಕೊಡಬೇಕು. ಇವು ಮಗುವಿನ ಜೀರ್ಣಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಅಜೀರ್ಣ, ಗ್ಯಾಸ್ ಮುತಾಂದ ಸಮಸ್ಯೆಗಳನ್ನು ತಡೆಯಲು ನೆರವಾಗುತ್ತದೆ.
ಆದರೆ ಮಕ್ಕಳಿಗೆ ಯಾವುದೇ ರೀತಿಯ ಆಹಾರಗಳನ್ನು ಆರಂಭಿಸುವ ಮೊದಲು ಯಾವಾಗಲೂ ವೈದ್ಯರನ್ನು ಕೇಳಿ ಆ ಬಳಿಕವೇ ಅದನ್ನು ಮಕ್ಕಳಿಗೆ ನೀಡಿ. ಏಕೆಂದರೆ ಎಲ್ಲಾ ಮಕ್ಕಳ ಆರೋಗ್ಯ ಒಂದೇ ರೀತಿಯಾಗಿ ಇರುವುದಿಲ್ಲ. ಹಾಗಾಗಿ ಇಂತಹ ವಿಷಯದಲ್ಲಿ ವೈದ್ಯರ ಸಲಹೆ ಬಹಳ ಮುಖ್ಯವಾಗಿರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ