ಬೇರೆಯವರ ಚಪ್ಪಲಿ, ಶೂ ಬಳಸುವ ಅಭ್ಯಾಸ ಇದ್ದರೆ ಈ ವಿಷಯ ನೆನಪಿಟ್ಟುಕೊಳ್ಳಿ
ಸಾಮಾನ್ಯವಾಗಿ ಕೆಲವರಿಗೆ ತಮ್ಮ ಬಳಿ ಇರುವ ಬೂಟು, ಚಪ್ಪಲಿಗಿಂತಲೂ ಬೇರೆಯವರ ಹತ್ತಿರ ಇರುವ ಪಾದರಕ್ಷೆಗಳು ತುಂಬಾ ಇಷ್ಟವಾಗುತ್ತದೆ. ಅದರಲ್ಲಿಯೂ ಫ್ಯಾಷನ್ ಪ್ರೀಯರಿಗೆ, ದಿನಕ್ಕೊಂದು ಚಪ್ಪಲಿ ಬದಲಿಸಲು ತಮ್ಮ ಬಳಿ ಇರುವುದು ಸಾಲುವುದಿಲ್ಲ. ಅದಕ್ಕಾಗಿಯೇ ಅವರು ಬೇರೆಯವರಿಂದ ಎರವಲು ಪಡೆಯುತ್ತಾರೆ. ಈ ರೀತಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಅನಿವಾರ್ಯವಾಗಿ ಬೇರೆಯವರ ಚಪ್ಪಲಿ ಅಥವಾ ಶೂ ಬಳಸುವ ಸಂದರ್ಭಗಳಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗದುಕೊಳ್ಳಬೇಕಾಗುತ್ತದೆ.

ಹಾಸ್ಟೆಲ್, ಪಿಜಿಗಳಲ್ಲಿ ಇರುವವರು ಅಥವಾ ಮನೆಯಲ್ಲಿಯೇ ಇರುವ ಅಕ್ಕ-ತಂಗಿ ಮತ್ತು ಅಣ್ಣ- ತಮ್ಮಂದಿರು ಒಬ್ಬರ ಚಪ್ಪಲಿ, ಶೂ (Shoe) ಗಳನ್ನು ಮತ್ತೊಬ್ಬರು ಬಳಸುತ್ತಾರೆ. ಅದರಲ್ಲಿಯೂ ಪೇಟೆಗಳಲ್ಲಿ ವಾಸ ಮಾಡುವವರು ಡ್ರೆಸ್ ಗಳಿಗೆ ಒಪ್ಪುವಂತ ಚಪ್ಪಲಿ ಹಾಕಲು ತಮ್ಮ ರೂಮ್ ನಲ್ಲಿರುವ ಎಲ್ಲರ ಶೂ, ಚಪ್ಪಲಿಯನ್ನು ಹಾಕಿಕೊಳ್ಳುತ್ತಾರೆ. ಆದರೆ ಬೇರೊಬ್ಬರ ಬೂಟು, ಚಪ್ಪಲಿ ಹಾಕಿಕೊಳ್ಳುವುದರಿಂದ, ಅದರಲ್ಲಿಯೂ ವಿಶೇಷವಾಗಿ ಬೇಸಿಗೆ (Summer) ಯಲ್ಲಿ ಈ ರೀತಿಯ ಅಭ್ಯಾಸಗಳು ಹಲವಾರು ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು. ಫ್ಯಾಷನ್ (Fashion) ಪ್ರೀಯರಾಗಿರಬೇಕು ಆದರೆ ಬೇರೆಯವರ ಚಪ್ಪಲಿ ಬಳಸುವಾಗಲೂ ಸಹ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಇಲ್ಲವಾದಲ್ಲಿ ನಿಮಗೆ ತಿಳಿಯದಂತೆ ಹಲವಾರು ಆರೋಗ್ಯ (Health) ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ಅದಕ್ಕಾಗಿಯೇ ವೈದ್ಯರು ಬೇರೆಯವರ ಪಾದರಕ್ಷೆಗಳನ್ನು ಬಳಸಬೇಡಿ ಎಂದು ಸಲಹೆ ನೀಡುತ್ತಾರೆ. ಹಾಗಾದರೆ ಬೇರೆಯವರ ಚಪ್ಪಲಿ ಧರಿಸಬಾರದೇ? ಈ ಅಭ್ಯಾಸದಿಂದ ಯಾವ ರೀತಿ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಂಭಾವ್ಯ ಸಮಸ್ಯೆಗಳೇನು?
ಪಾದದ ಸೋಂಕು:
ಬೇರೆಯವರ ಚಪ್ಪಲಿ, ಶೂಗಳಲ್ಲಿರುವ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾಗಳಿಂದ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು. ಇದರಿಂದ ಕಾಲು ಅಥವಾ ಪಾದಗಳಲ್ಲಿ ಗುಳ್ಳೆಗಳು ಕಂಡು ಬರಬಹುದು. ಕೆಲವರಲ್ಲಿ ಇದು ತುರಿಕೆ ಮತ್ತು ಅಲರ್ಜಿಗೂ ಕಾರಣವಾಗುತ್ತದೆ.
ಅಸ್ವಸ್ಥತೆ:
ಬೇರೆಯವರ ಚಪ್ಪಲಿ ಅಥವಾ ಬೂಟುಗಳು ಯಾವಾಗಲೂ ನಮ್ಮ ಕಾಲಿಗೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಈ ರೀತಿ ಸಮಸ್ಯೆಯಿಂದ ಗುಳ್ಳೆಗಳು, ಚಡಪಡಿಕೆ ಅಥವಾ ಒತ್ತಡ ಹೆಚ್ಚಾಗಬಹುದು.
ಚಪ್ಪಲಿ ಅಥವಾ ಬೂಟುಗಳ ವಾಸನೆ:
ಬೇರೊಬ್ಬರ ಚಪ್ಪಲಿ, ಬೂಟುಗಳನ್ನು ಧರಿಸುವುದರಿಂದ ಪಾದಗಳಿಂದ ವಾಸನೆ ಬರಬಹುದು. ಈ ರೀತಿ ವಾಸನೆ ಬರುವುದಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಒಬ್ಬರ ಚಪ್ಪಲಿಯಿಂದ ಮತ್ತೊಬ್ಬರ ಚಪ್ಪಲಿಗೆ ವರ್ಗಾವಣೆಗೊಳ್ಳುತ್ತದೆ. ಅದಲ್ಲದೆ ಈ ಅಭ್ಯಾಸ ಕೆಲವರಲ್ಲಿ ತುರಿಕೆ ಮತ್ತು ಕಜ್ಜಿಗೂ ಕಾರಣವಾಗಬಹುದು.
ನೈರ್ಮಲ್ಯದ ಬಗ್ಗೆ ಕಾಳಜಿ ಇರುವುದಿಲ್ಲ:
ಚಪ್ಪಲಿ, ಬೂಟುಗಳನ್ನು ಹಂಚಿಕೊಳ್ಳುವುದರಿಂದ ಬೆವರು, ಕೊಳೆ ಮತ್ತು ಚರ್ಮದ ಕಿರಿಕಿರಿಗೆ ಕಾರಣವಾಗುವುದರಿಂದ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಗೋವುಗಳು ಪ್ಲಾಸ್ಟಿಕ್ ತಿಂದರೆ ಏನಾಗುತ್ತದೆ ತಿಳಿದಿದೆಯೇ?
ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?
- ಪ್ರತಿನಿತ್ಯವೂ ಸ್ವಚ್ಛವಾದ ಸಾಕ್ಸ್ ಧರಿಸಿ. ಈ ರೀತಿ ಮಾಡುವುದರಿಂದ ತೇವಾಂಶ ಮತ್ತು ಬ್ಯಾಕ್ಟೀರಿಯಾ ವರ್ಗಾವಣೆಯಾಗುವುದು ಕಡಿಮೆ ಆಗುತ್ತದೆ.
- ಗಾಳಿಯಾಡುವಂತಹ ಬೂಟುಗಳನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಬೆವರುವ ಪ್ರಮಾಣ ಕಡಿಮೆಯಾಗುತ್ತದೆ.
- ಸಾಧ್ಯವಾದಷ್ಟು ಶೂ ಲೈನರ್ ಗಳನ್ನು ಬಳಕೆ ಮಾಡಿ.
- ಸಾಧ್ಯವಾದಾಗಲೆಲ್ಲಾ, ನಿಮಗೆ ಚೆನ್ನಾಗಿ ಹೊಂದಿಕೊಳ್ಳುವ, ಸ್ವಚ್ಛವಾಗಿರುವ ನಿಮ್ಮದೇ ಚಪ್ಪಲಿಯನ್ನು ಧರಿಸಿ.
- ನಿಮ್ಮ ಪಾದಗಳನ್ನು ನಿಯಮಿತವಾಗಿ ತೊಳೆಯಿರಿ. ವಿಶೇಷವಾಗಿ ಕಾಲ್ಬೆರಳುಗಳ ಮಧ್ಯೆ ಸಾಬೂನು ಬಳಸಿ ಚೆನ್ನಾಗಿ ಸ್ವಚ್ಛ ಮಾಡಿ. ಜೊತೆಗೆ ಅವುಗಳನ್ನು ಗಾಳಿಯಲ್ಲಿ ಚೆನ್ನಾಗಿ ಒಣಗಿಸಿಕೊಳ್ಳಿ. ತೇವಾಂಶ ಇರುವುದನ್ನು ತಪ್ಪಿಸಿ.
- ಪ್ರತಿನಿತ್ಯವೂ ಕಾಲಿಗೆ ಮಾಯಿಶ್ಚರೈಸರ್ ಹಚ್ಚಿ.
ಶೂ ನೈರ್ಮಲ್ಯವನ್ನು ಹೇಗೆ ಕಾಪಾಡಬೇಕು?
- ಬೂಟುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಅದಲ್ಲದೆ ಶೂಗಳ ಹೊರಭಾಗ ಮತ್ತು ಒಳಭಾಗವನ್ನು ಸ್ವಚ್ಛಗೊಳಿಸಲು ಮೃದುವಾದ ಬ್ರಷ್ ಮತ್ತು ಸಾಬೂನನ್ನು ಬಳಸಿ.
- ಶೂ, ಮತ್ತು ಚಪ್ಪಲಿಯನ್ನು ಸ್ವಚ್ಛಗೊಳಿಸಿದ ನಂತರ ಬಿಸಿಲು ಮತ್ತು ಗಾಳಿಯಲ್ಲಿ ಅವುಗಳನ್ನು ಒಣಗಲು ಬಿಡಿ ಅಥವಾ ಶೂ ಡ್ರೈಯರ್ ಬಳಸಿ.
- ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟಲು ಆಂಟಿಫಂಗಲ್ ಪುಡಿಗಳು ಅಥವಾ ಸ್ಪ್ರೇಗಳನ್ನು ಬಳಕೆ ಮಾಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ