ಬೇಸಿಗೆ ಕಾಲ ಶುರುವಾಗಿದೆ. ಮನೆಯ ಹೊರಗೆ ಮಾತ್ರವಲ್ಲದೆ ಮನೆಯೊಳಗೂ ಬಿಸಿಲ (Summer) ಧಗೆಗೆ ಪರದಾಡುವಂತಾಗಿದೆ. ಬಿಸಿಲಿನಿಂದ ತತ್ತರಿಸುವ ಜನರು ದೇಹದಲ್ಲಿ ಹೆಚ್ಚು ನೀರಿನಾಂಶ ಇರುವಂತೆ ನೋಡಿಕೊಳ್ಳಬೇಕು. ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಬೇಸಿಗೆಯನ್ನು ಸುಲಭವಾಗಿ ನೀವು ಕಳೆಯಬಹುದು. ಬೇಸಿಗೆಯಲ್ಲಿ ಆದಷ್ಟೂ ಎಣ್ಣೆ ಪದಾರ್ಥವನ್ನು ತಪ್ಪಿಸಿ. ಇವು ಬೇಸಿಗೆಯಲ್ಲಿ ದೇಹವನ್ನು ಬಿಸಿ ಮಾಡುತ್ತವೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಬೇಸಿಗೆಯಲ್ಲಿ ಮಾಂಸಾಹಾರದ ಬದಲು ಸಸ್ಯಾಹಾರ ಸೇವಿಸುವುದು ಉತ್ತಮ. ಈ ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು 5 ಮಾರ್ಗಗಳಿವೆ.
ನೀರನ್ನು ಬಿಡಲೇಬೇಡಿ:
ದಯವಿಟ್ಟು ಯಾವಾಗಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಕೊಂಡೊಯ್ಯಿರಿ. ಆಗಾಗ ನೀರು ಕುಡಿಯುವುದನ್ನು ಮರೆಯಬೇಡಿ. ಬೇಸಿಗೆಯಲ್ಲಿ ದೇಹ ಬೇಗ ನಿರ್ಜಲೀಕರಣಗೊಳ್ಳುವುದರಿಂದ ನೀರನ್ನು ಹೆಚ್ಚೆಚ್ಚು ಸೇವಿಸಿ. ಸಾಧ್ಯವಾದರೆ ಪ್ರತಿ ಗಂಟೆಗೆ ಒಂದು ಲೋಟ ನೀರು ಸೇವಿಸುತ್ತಿರಿ. ಇದು ಶಾಖವನ್ನು ಸುಲಭವಾಗಿ ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ. ನೀರು ಮಾತ್ರವಲ್ಲದೆ ಹಣ್ಣಿನ ರಸ, ಸೂಪ್‌ಗಳು, ಎಳನೀರು ಮತ್ತು ಕಲ್ಲಂಗಡಿಗಳಂತಹ ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳನ್ನು ಹೊಂದಿರುವ ಮೂಲಕವೂ ದೇಹದಲ್ಲಿ ನೀರಿನಂಶ ಹೆಚ್ಚಿಸಿಕೊಳ್ಳಬಹುದು.
ಸ್ವಲ್ಪವಾದರೂ ವ್ಯಾಯಾಮ ಮಾಡಿ:
ದಿನವಿಡೀ ಸುಮ್ಮನೆ ಕುಳಿತುಕೊಳ್ಳುವುದು ಒಳ್ಳೆ ಅಭ್ಯಾಸವಲ್ಲ. ಬೇಸಿಗೆಯಲ್ಲಿ ನಿಮ್ಮ ಹೃದಯರಕ್ತನಾಳದ ಆರೋಗ್ಯಕ್ಕೆ ಸಹಾಯ ಮಾಡಲು ನಡೆಯಿರಿ, ಯೋಗಾಸನ ಮಾಡಿ, ಓಡಿ. ಕ್ರೀಡೆ, ನೃತ್ಯ, ಯೋಗ ಅಥವಾ ಇನ್ನೇನಾದರೂ ಅಭ್ಯಾಸವನ್ನು ರೂಢಿಸಿಕೊಳ್ಳಿ. ನಿಮ್ಮ ದೇಹಕ್ಕೆ ಸ್ವಲ್ಪ ಕೆಲಸ ಕೊಡಿ. ಇಡೀ ದಿನ ಕುಳಿತುಕೊಂಡು ಮಾಡುವ ಕೆಲಸ ನಿಮ್ಮದಾಗಿದ್ದರೆ ಊಟದ ಸಮಯದ ನಂತರ ಸ್ವಲ್ಪ ನಡೆಯಿರಿ ಮತ್ತು ಪ್ರತಿ ಗಂಟೆಗೆ ಒಮ್ಮೆಯಾದರೂ ನಿಲ್ಲುವುದನ್ನು ರೂಢಿಸಿಕೊಳ್ಳಿ.
ಪೌಷ್ಟಿಕಾಂಶವನ್ನು ಹೆಚ್ಚಿಸಿಕೊಳ್ಳಿ:
ಬೇಸಿಗೆಯಲ್ಲಿ ನೀವು ಏನು ತಿನ್ನುತ್ತೀರಿ ಎಂಬುದನ್ನು ಗಮನಿಸುವುದು ಸಹ ಮುಖ್ಯವಾಗಿದೆ. ಒಂದೇ ಸಲ ಭಾರೀ ಊಟ ಮಾಡಿದರೆ ಆಲಸ್ಯ ಅಂದರೆ ಚಲನೆಯ ಕೊರತೆ, ಫಿಟ್ನೆಸ್ ಕೊರತೆ ಉಂಟಾಗುತ್ತದೆ. ಹೀಗಾಗಿ, ಆಗಾಗ ಸ್ವಲ್ಪ ಸ್ವಲ್ಪ ಆಹಾರ ಸೇವಿಸಿ. ದಿನಕ್ಕೆ 3 ಬಾರಿ ಊಟ/ ತಿಂಡಿ ಮಾಡುವ ಬದಲು 4ರಿಂದ 5 ಭಾಗವಾಗಿ ವಿಭಜಿಸಿಕೊಳ್ಳಿ. ಬೇಸಿಗೆಯಲ್ಲಿ ನಿಮ್ಮ ಸಕ್ಕರೆಯ ಸೇವನೆಯನ್ನು ಮಿತಿಗೊಳಿಸಿಕೊಳ್ಳಿ ಮತ್ತು ಮೊದಲೇ ಹೇಳಿದಂತೆ, ರುಚಿಕರವಾದ ಬೇಸಿಗೆಯ ಹಣ್ಣುಗಳು, ತರಕಾರಿಗಳನ್ನು ಅದರಲ್ಲೂ ನೀರಿನಾಂಶ ಹೆಚ್ಚಿರುವ ಹಣ್ಣನ್ನು ಸೇವಿಸಿ.
ನಿಮ್ಮ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಿ:
ಮನಸ್ಸು ಮತ್ತು ದೇಹವು ಪರಸ್ಪರ ಅವಲಂಬಿತವಾಗಿದೆ. ಆದ್ದರಿಂದ ದೈಹಿಕ ಯೋಗಕ್ಷೇಮದಂತೆಯೇ ಮಾನಸಿಕ ಯೋಗಕ್ಷೇಮಕ್ಕೂ ಆದ್ಯತೆ ನೀಡುವುದು ಮುಖ್ಯವಾಗಿದೆ. ಶಾಖವು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ದಣಿಯುವಂತೆ ಮಾಡುತ್ತದೆ. ಆದ್ದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಚೆನ್ನಾಗಿ ನಿದ್ರಿಸಿ:
ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ವಿಷಯಕ್ಕೆ ಬಂದರೆ, ಪೂರ್ಣ ರಾತ್ರಿಯ ನಿದ್ರೆಗಿಂತ ಮುಖ್ಯವಾದುದೇನೂ ಇಲ್ಲ. ಸರಿಯಾದ ನಿದ್ರೆಯ ನೈರ್ಮಲ್ಯವನ್ನು ಅನುಸರಿಸಿ ಮತ್ತು ದಿನಚರಿಯನ್ನು ಕಾಪಾಡಿಕೊಳ್ಳಿ. ಚೆನ್ನಾಗಿ ನಿದ್ರೆ ಮಾಡುವುದರಿಂದ ನಿಮ್ಮ ದೇಹ ಆರೋಗ್ಯವಾಗಿರುತ್ತದೆ. ಆಗಾಗ ದೇಹಕ್ಕೆ ವಿಶ್ರಾಂತಿ ನೀಡಲು ಮರೆಯಬೇಡಿ.
ಇದನ್ನೂ ಓದಿ: Health Tips: ಆಯುರ್ವೇದದ ಪ್ರಕಾರ ಬೇಸಿಗೆಯ ಧಗೆ ತಣಿಸುವ 10 ನೈಸರ್ಗಿಕ ಜ್ಯೂಸ್ಗಳಿವು
Health Tips: ಡಯಟ್ನಲ್ಲಿ ಬಸಳೆ ಸೊಪ್ಪು ಬಳಸುವುದರಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?