ನೆಟ್ಟಿಗೆ ತೆಗೆಯುವ ಅಭ್ಯಾಸದಿಂದ ಈ ಸಮಸ್ಯೆಗಳು ಬರಬಹುದು ಎಚ್ಚರ!
ಅನೇಕರಿಗೆ ಕುಳಿತಲ್ಲಿ, ನಿಂತಲ್ಲಿ ಬೆರಳನ್ನು ಒತ್ತಿ ನೆಟ್ಟಿಗೆ ತೆಗೆಯುವ ಅಭ್ಯಾಸವಿರುತ್ತದೆ. ಈ ರೀತಿ ಮಾಡಿದಾಗ ಸಾಮಾನ್ಯವಾಗಿ ಒಂದು ರೀತಿಯ ಶಬ್ದ ಕೇಳಿಬರುತ್ತದೆ. ಅದನ್ನು ಕೇಳಿದರೆ ಕೆಲವರಿಗೆ ನೆಮ್ಮದಿ ಸಿಗುತ್ತದೆ. ಆದರೆ ಈ ರೀತಿ ಮಾಡುವುದರಿಂದ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳುತ್ತಾರೆ. ಇದರ ಹಿಂದಿರುವ ವೈಜ್ಞಾನಿಕ ಕಾರಣವೇನು? ಇದಲ್ಲದೆ, ನೆಟ್ಟಿಗೆ ತೆಗೆಯುವಾಗ ಮೂಳೆ ಮುರಿಯಬಹುದು ಅಥವಾ ಕೈಗಳಿಗೆ ಹಾನಿಯಾಗಬಹುದು ಎಂದು ಕೆಲವರು ಹೇಳುತ್ತಾರೆ. ಹಾಗಾದರೆ ಇದು ಎಷ್ಟು ನಿಜ? ಆರೋಗ್ಯಕ್ಕೂ ಈ ಶಬ್ದಕ್ಕೂ ಸಂಬಂಧವಿದೆಯೇ? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ನಾವು ನರ್ವಸ್ ಆದಾಗ ಅಥವಾ ಕನ್ಫ್ಯೂಸ್ ಆದಂತಹ ಸಮಯದಲ್ಲಿ ಬೆರಳಲ್ಲಿ ನೆಟಿಗೆ ಅಥವಾ ನೆಟ್ಟಿಗೆ (cracking knuckles) ತೆಗೆಯುತ್ತೇವೆ. ಈ ರೀತಿ ಅಭ್ಯಾಸ ಬಹಳ ಸಾಮಾನ್ಯ. ಕೆಲವರಂತೂ ಸುಮ್ಮನೆ ಕುಳಿತಿರುವಾಗ, ಕೈಗಳಲ್ಲಿ ನೋವು ಕಂಡು ಬಂದಾಗ ಹೀಗೆ ಕಾರಣಗಳಿಲ್ಲದೆ ಒಂದೊಂದೇ ಬೆರಳುಗಳಿಂದ ನೆಟ್ಟಿಗೆ ತೆಗೆಯುತ್ತಾರೆ. ಆದರೆ ನೀವು ಎಂದಾದರೂ ಈ ರೀತಿ ಪದೇ ಪದೇ ಟಪ್, ಟಪ್ ಎಂದು ನೆಟ್ಟಿಗೆ ತೆಗೆಯುವುದು ಒಳ್ಳೆಯದೇ ಅಥವಾ ಇದರಿಂದ ಹಾನಿ ಇದೆಯೇ ಎಂದು ಯೋಚಿಸಿದ್ದೀರಾ? ಹೀಗೆ ನೆಟ್ಟಿಗೆ ತೆಗೆಯುವಾಗ ಬೆರಳುಗಳಿಂದ ಯಾಕೆ ಶಬ್ದ ಬರುತ್ತದೆ? ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ಜೊತೆಗೆ ಅನೇಕ ಆಸಕ್ತಿದಾಯಕ ಸಂಗತಿಗಳು ಇವೆ. ಇದಲ್ಲದೆ, ನೆಟ್ಟಿಗೆ ತೆಗೆಯುವಾಗ ಮೂಳೆ ಮುರಿಯಬಹುದು ಅಥವಾ ಕೈಗಳಿಗೆ ಹಾನಿಯಾಗಬಹುದು ಎಂದು ಕೆಲವರು ಎಚ್ಚರಿಸುತ್ತಾರೆ. ಹಾಗಾದರೆ ಇದು ಎಷ್ಟು ನಿಜ? ಆರೋಗ್ಯಕ್ಕೂ ಈ ಶಬ್ದಕ್ಕೂ ಸಂಬಂಧವಿದೆಯೇ? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ನೆಟ್ಟಿಗೆ ತೆಗೆಯುವಾಗ ಶಬ್ದ ಬರುವುದಕ್ಕೆ ಕಾರಣವೇನು?
ಪ್ರತಿ ಬಾರಿಯೂ ನೆಟ್ಟಿಗೆ ತೆಗೆಯುವಾಗ ಒಂದು ಶಬ್ದ ಕೇಳಿಬರುತ್ತದೆ. ಕೆಲವೊಮ್ಮೆ ಅದು ಚಿಕ್ಕದಾಗಿ ಕೇಳಿಸಿದರೆ ಇನ್ನು ಕೆಲವೊಮ್ಮೆ ಜೋರಾಗಿ ಕೇಳುತ್ತದೆ. ಕೆಲವರಂತೂ ಈ ಶಬ್ದ ಕೇಳುವುದಕ್ಕಾಗಿಯೇ ಈ ರೀತಿ ನೆಟ್ಟಿಗೆ ತೆಗೆಯುತ್ತಾರೆ. ಕ್ರಮೇಣ, ಇದು ಅಭ್ಯಾಸವಾಗುತ್ತದೆ. ಆದರೆ, ಈ ರೀತಿ ಮಾಡುವುದರಿಂದ ನಿಜವಾಗಿಯೂ ಒಳ್ಳೆಯದೇ? ಆಗಾಗ ಮಾಡುವುದರಿಂದ ಯಾವ ರೀತಿಯ ತೊಂದರೆಯಾಗುತ್ತೆ? ಇದರಿಂದ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆಯೇ ಎಂಬುದರ ಕುರಿತು ಸಂಶೋಧನೆಗಳು ನಡೆದಿವೆ. ಅವುಗಳ ಪ್ರಕಾರ, ನಾವು ನೆಟಿಗೆ ಅಥವಾ ನೆಟ್ಟಿಗೆ ತೆಗೆದಾಗ ಶಬ್ದ ಬರುವುದಕ್ಕೆ ನಮ್ಮ ಕೀಲುಗಳ ನಡುವೆ ರೂಪುಗೊಳ್ಳುವ ಗುಳ್ಳೆಗಳು ಕಾರಣವಾಗಿದೆ. ಅಂದರೆ, ಕೀಲುಗಳ ನಡುವೆ ಸೈನೋವಿಯಲ್ ಎಂಬ ದ್ರವವಿರುತ್ತದೆ. ಇದು ಮೂಳೆ ಚಲನೆಗೆ ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಬೆರಳುಗಳಿಂದ ನೆಟ್ಟಿಗೆ ತೆಗೆದಾಗ, ಈ ದ್ರವದಲ್ಲಿ ಗುಳ್ಳೆಗಳು ರೂಪುಗೊಂಡು ಶಬ್ದ ಸೃಷ್ಟಿಯಾಗುತ್ತದೆ. ಅಷ್ಟೇ ಅಲ್ಲ, ಆ ಸಮಯದಲ್ಲಿ ಸಾರಜನಕ ಅನಿಲ ಬಿಡುಗಡೆಯಾಗುವುದರಿಂದಲೂ ಶಬ್ದ ಉಂಟಾಗುತ್ತದೆ. ಸೈನೋವಿಯಲ್ ದ್ರವವು ತುಂಬಾ ತೆಳುವಾಗಿರುತ್ತದೆ. ಇದು ಎರಡು ಮೂಳೆಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇದು ಬೆರಳುಗಳಲ್ಲಿ ಮಾತ್ರವಲ್ಲದೆ ಎಲ್ಲಾ ಕೀಲುಗಳಲ್ಲಿಯೂ ಇರುತ್ತದೆ. ಈ ದ್ರವವು ಮೂಳೆಗಳು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ಪಾಲಕ್, ಬಾಳೆಹಣ್ಣಿಗಿಂತ ದುಪ್ಪಟ್ಟು ಶಕ್ತಿ ಇರುವ ಈ ತರಕಾರಿ ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಒಳ್ಳೆಯದಲ್ಲ
ನೆಟ್ಟಿಗೆ ತೆಗೆದ್ರೆ ಸಂಧಿವಾತ ಬರುತ್ತಾ?
ಬಯೋಮೆಕಾನಿಕ್ಸ್ ದೃಷ್ಟಿಕೋನದಿಂದ ನೋಡಿದರೆ, ಕೀಲುಗಳ ನಡುವಿನ ಒತ್ತಡ ಹೆಚ್ಚಾದಾಗ ಈ ಶಬ್ದ ಸಂಭವಿಸುತ್ತದೆ. ಸರಳವಾಗಿ ಹೇಳುವುದಾದರೆ, ಇದು ಒತ್ತಡದ ಅಲೆಗಳಿಂದ ಉತ್ಪತ್ತಿಯಾಗುವ ಶಬ್ದ. ನೀವು ನಿಮ್ಮ ಗೆಣ್ಣುಗಳನ್ನು ಅಂದರೆ ಬೆರಳುಗಳನ್ನು ಪ್ರೆಸ್ ಮಾಡಿದಾಗ, ಕೀಲುಗಳಲ್ಲಿ ಒತ್ತಡ ಹೆಚ್ಚಾಗಿ ಅದರಿಂದ ಆ ರೀತಿಯ ಶಬ್ದ ಕೇಳಿಬರುತ್ತದೆ. ಆದರೆ ಈ ರೀತಿ ಮಾಡುವ ನಿಮ್ಮ ಅಭ್ಯಾಸ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕೆಲವರು ಹೇಳುತ್ತಾರೆ. ನಿಮ್ಮ ಬೆರಳುಗಳಿಂದ ನಿರಂತರವಾಗಿ ನೆಟ್ಟಿಗೆ ತೆಗೆಯುವುದರಿಂದ ಕೀಲುಗಳಿಗೆ ಹಾನಿಯಾಗುವುದಲ್ಲದೆ ಅವು ಮುರಿಯುವ ಅಪಾಯವೂ ಇರುತ್ತದೆ. ಇದಲ್ಲದೆ, ಕೆಲವರಿಗೆ ಸಂಧಿವಾತದಂತಹ ಸಮಸ್ಯೆ ಕಾಡುವ ಅಪಾಯವೂ ಇರುತ್ತದೆ. ಆದರೆ ಈ ವಿಷಯದ ಕುರಿತು ಹಲವು ರೀತಿಯ ಅಭಿಪ್ರಾಯಗಳಿದ್ದು. ಕೆಲವರು ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳುತ್ತಾರೆ, ಆದರೆ ಇನ್ನು ಕೆಲವರು ಇದು ಯಾವುದೇ ರೀತಿ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ ಎನ್ನುತ್ತಾರೆ. ಏಕೆಂದರೆ ಈ ರೀತಿ ಮಾಡುವುದರಿಂದ ಸಂಧಿವಾತದಂತಹ ಸಮಸ್ಯೆಗಳು ಬರುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಪದೇ ಪದೇ ಈ ರೀತಿ ಮಾಡುವುದು ಇನ್ನಿತರ ಸಮಸ್ಯೆಗೆ ಕಾರಣವಾಗಬಹುದು. ಇದು ಕೇವಲ ಬೆರಳುಗಳಿಗೆ ಮಾತ್ರ ಸೀಮಿತವಾಗಿಲ್ಲ, ಕೆಲವರು ಬಲವಂತವಾಗಿ ತಮ್ಮ ಕುತ್ತಿಗೆ ಮತ್ತು ಹಿಮ್ಮಡಿ, ಸೊಂಟ ಇನ್ನು ಕೆಲವರು ಮೊಣಕೈನ ಭಾಗದಲ್ಲಿಯೂ ನೆಟ್ಟಿಗೆ ತೆಗೆಯುತ್ತಾರೆ. ಆದರೆ ಈ ರೀತಿ ಅಭ್ಯಾಸ ಒಳ್ಳೆಯದಲ್ಲ. ಅದಲ್ಲದೆ, ಇದರಿಂದ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ತಿಳಿದು ಪದೇ ಪದೇ ಈ ರೀತಿ ಮಾಡುವುದು ಕೂಡ ಒಳ್ಳೆಯದಲ್ಲ. ಏಕೆಂದರೆ ಇದು ವ್ಯಸನವಾಗಿ ಮಾರ್ಪಟ್ಟರೆ ಕೀಲುಗಳಲ್ಲಿ ಬಿರುಕು ಜೊತೆಗೆ ಮೂಳೆ ಸವೆತಕ್ಕೂ ಕಾರಣವಾಗಬಹುದು. ಆದ್ದರಿಂದ, ತಜ್ಞರ ಪ್ರಕಾರ, ಈ ಅಭ್ಯಾಸವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಬಹಳ ಸೂಕ್ತ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








