Heart Health: ಹೃದಯದ ಚಟುವಟಿಕೆಗೆ ನಿಮಗೆ ತಿಳಿಯದೇ ಈ ಅಂಶಗಳು ಹಾನಿಮಾಡಬಹುದು; ಗಮನವಿಡಿ
Health Tips: ಹೃದಯದ ಆರೋಗ್ಯವು ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಆಹಾರ ಪದ್ಧತಿ, ಆರೋಗ್ಯ ಪರಿಸ್ಥಿತಿಗಳು ಮೊದಲಾದ ಸಾಮಾನ್ಯ ಅಂಶಗಳು ಪ್ರಭಾವ ಬೀರುವುದು ಸಾಮಾನ್ಯವಾಗಿ ಎಲ್ಲರಿಗೆ ತಿಳಿದಿರುತ್ತದೆ. ಆದರೆ ಈ ಅಂಶಗಳ ಹೊರತಾಗಿ, ಹೃದಯಕ್ಕೆ ಹಾನಿಕಾರಕವಾಗುವ ಕೆಲವು ಚಟುವಟಿಕೆಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.
ನವದೆಹಲಿ: ಹೃದಯದ ಆರೋಗ್ಯವು (Heart Health) ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಆಹಾರ ಪದ್ಧತಿ, ಆರೋಗ್ಯ ಪರಿಸ್ಥಿತಿಗಳು ಮೊದಲಾದ ಸಾಮಾನ್ಯ ಅಂಶಗಳು ಪ್ರಭಾವ ಬೀರುವುದು ಸಾಮಾನ್ಯವಾಗಿ ಎಲ್ಲರಿಗೆ ತಿಳಿದಿರುತ್ತದೆ. ಆದರೆ ಈ ಅಂಶಗಳ ಹೊರತಾಗಿ, ಹೃದಯದ ರಕ್ತನಾಳಗಳಿಗೆ ಹಾನಿಕಾರಕವಾಗುವ ಕೆಲವು ಚಟುವಟಿಕೆಗಳಿವೆ. ಈ ಚಟುವಟಿಕೆಗಳ ಬಗ್ಗೆ ಬಹಳಷ್ಟು ಜನರಿಗೆ ಅರಿವಿರುವುದಿಲ್ಲ. ಅಥವಾ ಅವುಗಳಿಂದ ಏನೂ ಹಾನಿಯಿಲ್ಲ ಎಂದು ಜನರು ತಿಳಿದಿರುತ್ತಾರೆ. ಅಂತಹ ಚಟುವಟಿಕೆಗಳ ಬಗ್ಗೆ ಜನರು ಗಮನವಿಡಬೇಕು ಎನ್ನುತ್ತಾರೆ ತಜ್ಞರು. ಅವು ಯಾವೆಲ್ಲಾ ಚಟುವಟಿಕೆಗಳು? ಇಲ್ಲಿದೆ ಮಾಹಿತಿ.
ಹೃದಯಕ್ಕೆ ಹಾನಿ ಮಾಡುವ ಚಟುವಟಿಕೆಗಳು:
ಅತಿ ಅಥವಾ ಕಡಿಮೆ ವ್ಯಾಯಾಮ: ದೈಹಿಕ ಚಟುವಟಿಕೆಯು ಹೃದಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಹೆಚ್ಚು ಅಥವಾ ಕಡಿಮೆ ವ್ಯಾಯಾಮವು ಹೃದಯದ ಮೇಲೆ ಒತ್ತಡ ಹೇರುತ್ತದೆ. ದೈಹಿಕವಾಗಿ ನಿಷ್ಕ್ರಿಯರಾಗಿರುವುದೂ ಕೂಡ ಹೃದಯದ ಚಟುವಟಿಕೆಗೆ ಹಾನಿಯನ್ನುಂಟುಮಾಡುತ್ತದೆ.
ಒಂಟಿತನ: ಕೆಲವರು ಇಚ್ಛೆಪಟ್ಟು ಏಕಾಂಗಿಯಾಗಿದ್ದು, ಎಲ್ಲರಿಂದ ದೂರಾಗಿರುತ್ತಾರೆ. ಮತ್ತೆ ಕೆಲವರು ಹಲವು ಕಾರಣಗಳಿಂದ ಒಂಟಿಯಾಗುತ್ತಾರೆ. ಏಕಾಂಗಿಯಾಗಿರುವುದು ಶಾಂತಿ ನೀಡುತ್ತದೆ. ಆದರೆ ಒಂಟಿಯಾಗಿದ್ದು ಮಾನಸಿಕ ಸಮಸ್ಯೆ ಎದುರಿಸುತ್ತಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಒಳಿತು. ಕಾರಣ ಮಾನಸಿಕ ಅನಾರೋಗ್ಯವು ದೀರ್ಘಕಾಲಿಕವಾಗಿ ಗಂಭೀರ ಪರಿಣಾಮ ಬೀರಬಹುದು. ಇದು ಹೃದಯನಾಳದ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂದಹಾಗೆ ಇಲ್ಲಿ ಹೇಳಿರುವುದು ತಾತ್ಕಾಲಿಕ ಒಂಟಿತನಗಳಲ್ಲ. ದೀರ್ಘವಾದ, ಮಾನಸಿಕ ಸಮಸ್ಯೆ ಉಂಟುಮಾಡುವ ಒಂಟಿತನ.
ಋಣಾತ್ಮಕ ಪರಿಣಾಮ ಬೀರುವ ಸಂಬಂಧಗಳು: ನಿಮ್ಮನ್ನು ಸುತ್ತುವರೆದಿರುವ ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಮ್ಮ ಮೇಲೆ ಪರಿಣಾಮ ಬೀರುತ್ತಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ನೀವು ಸಂಬಂಧಗಳಲ್ಲಿ ಕಠಿಣ ಸಂದರ್ಭ ಎದುರಿಸುತ್ತಿದ್ದರೆ, ಅದು ನಿಮ್ಮಲ್ಲಿ ಸಾಕಷ್ಟು ಒತ್ತಡದ ಪರಿಸ್ಥಿತಿ ಉಂಟುಮಾಡಬಹುದು. ಯಾವುದೇ ಒತ್ತಡವು ಹೃದಯದ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದನ್ನು ಗಮನದಲ್ಲಿಡಿ.
ಅತಿಯಾಗಿ ಸ್ಕ್ರೀನ್ ನೋಡುತ್ತಾ ಸಮಯ ತಳ್ಳುವುದು: ಇತ್ತೀಚೆಗೆ ನೀವು ಸ್ಕ್ರೀನ್ಗಳನ್ನು- ಲ್ಯಾಪ್ಟಾಪ್, ಮೊಬೈಲ್ ಇತ್ಯಾದಿ- ಹೆಚ್ಚಾಗಿ ನೋಡುತ್ತಿದ್ದೀರಾ? ಹೌದು ಎಂದಾದರೆ ಅದು ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ. ಸ್ಕ್ರೀನ್ ಸಮಯದಲ್ಲಿನ ಹೆಚ್ಚಳವು ಕಣ್ಣುಗಳ ಅನಾರೋಗ್ಯಕ್ಕೆ, ನಿದ್ರಾಹೀನತೆಗೆ ಕಾರಣವಾಗಬಹುದು. ಎಲ್ಲಾ ನ್ಯೂನ್ಯತೆಗಳು ಸೇರಿ ಒಟ್ಟಾರೆ ನಿಮ್ಮ ಹೃದಯದ ಆರೋಗ್ಯಕ್ಕೆ ಹೊಡೆತ ನೀಡಬಹುದು. ಆದ್ದರಿಂದ ಈ ಬಗ್ಗೆ ಮೊದಲೇ ಎಚ್ಚರ ವಹಿಸಿ.
ನಿಮ್ಮ ಕೆಲಸದ ಸಮಯ: ನಿಮ್ಮ ಶಿಫ್ಟ್ ನಿಮ್ಮ ನಿದ್ರೆಯ ವೇಳಾಪಟ್ಟಿಯನ್ನು ಅಡ್ಡಿಪಡಿಸುತ್ತಿದೆಯೇ? ಹೌದು ಎಂದಾದರೆ ನೀವು ಈ ಬಗ್ಗೆ ಗಮನಹರಿಸಲೇ ಬೇಕು. ಕಾರಣ, ಇದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಜೈವಿಕ ಚಕ್ರವು ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. ಆದ್ದರಿಂದ ಈ ಬಗ್ಗೆ ಗಮನವಿಡಿ.
(ವಿ.ಸೂ: ಇಲ್ಲಿ ನೀಡಿರುವ ವಿಚಾರಗಳು ಸಾಮಾನ್ಯ ಅಂಶಗಳನ್ನು ಆಧರಿಸಿದ್ದು, ಮಾಹಿತಿಯ ದೃಷ್ಟಿಯಿಂದ ನೀಡಲಾಗಿದೆ. ಇದನ್ನು ಅನುಸರಿಸುವ ಮುನ್ನ ನಿಮ್ಮ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ)
ಇದನ್ನೂ ಓದಿ: Health Tips: ನಿಮ್ಮ ಹಲ್ಲುಗಳ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಈ 7 ಆಹಾರ ಪದಾರ್ಥಗಳನ್ನು ಸೇವಿಸಿ
ಇದನ್ನೂ ಓದಿ: Summer Tips: ಬೇಸಿಗೆಯಲ್ಲಿ ಆರೋಗ್ಯಕರ ಮತ್ತು ಫಿಟ್ ಆಗಿರಲು ಬಯಸುವಿರಾ? ಇಲ್ಲಿದೆ ಮಾಹಿತಿ