ಮಕ್ಕಳ ಮೂಗಿನಲ್ಲಿ ಇದ್ದಕ್ಕಿದ್ದಂತೆ ರಕ್ತ ಸುರಿಯಲು ಕಾರಣವೇನು ಗೊತ್ತಾ?
ಸಾಮಾನ್ಯವಾಗಿ 3ರಿಂದ 8 ವರ್ಷದೊಳಗಿನ ಮಕ್ಕಳಲ್ಲಿ ಮೂಗಿನಲ್ಲಿ ರಕ್ತ ಸುರಿಯುವ ಸಮಸ್ಯೆ ಕಂಡುಬರುತ್ತದೆ. ಮಕ್ಕಳ ಮೂಗಿನಲ್ಲಿ ಉಂಟಾಗುವ ರಕ್ತಸ್ರಾವಕ್ಕೆ ಕಾರಣಗಳೇನು? ಅಂತಹ ಸಂದರ್ಭದಲ್ಲಿ ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಮಕ್ಕಳ ಆರೋಗ್ಯವನ್ನು ಕಾಪಾಡುವುದು ಬಹಳ ಕಷ್ಟದ ವಿಷಯ. ಎಷ್ಟೇ ಎಚ್ಚರಿಕೆ ವಹಿಸಿದರೂ ಕೂಡ ಕೆಲವೊಮ್ಮೆ ಮಕ್ಕಳ ಆರೋಗ್ಯದಲ್ಲಾಗುವ ತೊಂದರೆಗಳು ಪೋಷಕರನ್ನು ಆತಂಕಕ್ಕೀಡು ಮಾಡುತ್ತದೆ. ಮಕ್ಕಳ ಮೂಗಿನಲ್ಲಿ ಆಗಾಗ ಇದ್ದಕ್ಕಿದ್ದಂತೆ ರಕ್ತ ಸುರಿಯುವುದು ಸಾಮಾನ್ಯ. ಒಂದುವೇಳೆ ನಿಮ್ಮ ಮಕ್ಕಳ ಮೂಗಿನಲ್ಲಿ ರಕ್ತಸ್ರಾವ ಕಂಡುಬಂದರೆ ಅದಕ್ಕೆ ತೀರಾ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಈ ರೀತಿ ಮಕ್ಕಳ ಮೂಗಿನಲ್ಲಿ ಉಂಟಾಗುವ ರಕ್ತಸ್ರಾವಕ್ಕೆ ಕಾರಣಗಳೇನು? ಅಂತಹ ಸಂದರ್ಭದಲ್ಲಿ ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಮಕ್ಕಳ ಮೂಗಿನಲ್ಲಿ ರಕ್ತ ಸುರಿಯಲು ಕಾರಣವೇನು? ಎಂಬುದರ ಬಗ್ಗೆ ಕಿಂಡರ್ ಆಸ್ಪತ್ರೆಯ ಹಿರಿಯ ಇಎನ್ಟಿ ವೈದ್ಯೆಯಾದ ಡಾ. ಸುನಿತಾ ಮಾಧವನ್ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಮಕ್ಕಳ ಮೂಗಿನಲ್ಲಿ ರಕ್ತ ಸುರಿಯುವ ಪ್ರಕರಣಗಳು ಹೆಚ್ಚಾಗುತ್ತಿದೆ. ಮೂಗು ಸೂಕ್ಷ್ಮವಾದ ಅಂಗವಾಗಿದ್ದು, ಇದು ಹೆಚ್ಚಿನ ರಕ್ತನಾಳಗಳನ್ನು ಹೊಂದಿರುತ್ತದೆ. ಆ ಮೂಲಕ ಅಧಿಕ ರಕ್ತ ಪೂರೈಕೆಯನ್ನು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ರಕಸ್ರಾವ ಕಂಡುಬರುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಮಕ್ಕಳಲ್ಲಿ ಮಲಬದ್ಧತೆ ಹೋಗಲಾಡಿಸಲು ಈ ಸಲಹೆಗಳನ್ನು ಪಾಲಿಸಿ
ಸಾಮಾನ್ಯವಾಗಿ 3ರಿಂದ 8 ವರ್ಷದೊಳಗಿನ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಮೂಗಿನ ಮುಂಭಾಗ ಅಥವಾ ಹಿಂಭಾಗದಲ್ಲಿ ಈ ರೀತಿಯ ರಕ್ತಸ್ರಾವ ಕಂಡುಬರುವುದಲ್ಲದೆ, ಕೆಲವೊಮ್ಮೆ ಗಂಟಲ ಮೂಲಕವೂ ರಕ್ತ ಹರಿಯುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಯಿಂದ ಕೆಲವು ಬಾರಿ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೂ ಇರುತ್ತದೆ. ಈ ಸಮಸ್ಯೆಗೆ ಶೇ. 70ರಿಂದ 80ರಷ್ಟು ಪ್ರಕರಣಗಳಲ್ಲಿ ಯಾವುದೇ ನಿಖರವಾದ ಕಾರಣಗಳು ಇರುವುದಿಲ್ಲ. ಸಾಮಾನ್ಯವಾಗಿ ಚಳಿಗಾಲದಲ್ಲಿನ ತಂಪಾದ ಒಣ ಗಾಳಿಯಿಂದಾಗಿ ಮೂಗಿನ ಒಳಭಾಗದಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಮೂಗು ಒಣಗಿ ರಕ್ತಸ್ರಾವ ಉಂಟಾಗುತ್ತದೆ. ಅಲ್ಲದೆ ಚಳಿಗಾಲದಲ್ಲಿ ವೈರಲ್ ಸೋಂಕುಗಳು ಹರಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಎಂದು ಡಾ. ಸುನಿತಾ ತಿಳಿಸಿದ್ದಾರೆ.
ಮೂಗಿನ ರಕ್ತಸ್ರಾವ ನಿಯಂತ್ರಿಸುವುದು ಹೇಗೆ?:
ಮೂಗಿನಲ್ಲಿ ಪದೇ ಪದೇ ಕೈ ಹಾಕುವುದು, ಆಧುನಿಕ ತಂತ್ರಜ್ಞಾನಗಳ ಬಳಕೆ, ಅಲರ್ಜಿಯಿಂದಾಗಿ ಮೂಗನ್ನು ಉಜ್ಜುವುದು ಇತರೆ ಕಾರಣಗಳಿಂದಲೂ ಮೂಗಿನಲ್ಲಿ ರಕ್ತಸ್ರಾವ ಕಂಡುಬರುವುದು ಸಾಮಾನ್ಯ. ಮಕ್ಕಳು ತಮಗೆ ತಿಳಿದೋ ಅಥವಾ ತಿಳಿಯದೆಯೋ ಮೂಗಿನೊಳಗೆ ವಸ್ತುಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ಮಕ್ಕಳು ಅದರ ಬಗ್ಗೆ ಯಾರಿಗೂ ಹೇಳಿಕೊಂಡಿರುವುದಿಲ್ಲ. ಅದರ ಪರಿಣಾಮವಾಗಿ ಸ್ವಲ್ಪ ಸಮಯದ ಬಳಿಕ ಮೂಗಿನಲ್ಲಿ ಹಳದಿ ಸ್ರಾವ ಅಥವಾ ರಕ್ತಸ್ರಾವವಾಗಬಹುದು. ಮಕ್ಕಳು ತಮ್ಮ ಮೂಗಿನಲ್ಲಿ ಬ್ಯಾಟರಿಗಳಂತಹ ಹಾನಿಕಾರಕ ವಸ್ತುಗಳನ್ನು ಹಾಕಿಕೊಂಡಿರುವ ನಿದರ್ಶನಗಳು ಕೂಡ ಇವೆ. ಇದರ ಜೊತೆಗೆ ರಕ್ತಹೀನತೆ, ರಕ್ತಸ್ರಾವದ ಸಮಸ್ಯೆ, ಪ್ಲೇಟ್ಲೆಟ್ ಸಮಸ್ಯೆ, ಲ್ಯುಕೇಮಿಯಾ, ವ್ಯಾಸ್ಕುಲಾರ್ನಲ್ಲಿನ ಅಸಹಜತೆಗಳು, ಯಕೃತ್ತಿನ ಕಾಯಿಲೆ ಕೂಡ ರಕ್ತಸ್ರಾವಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಅಧಿಕ ರಕ್ತದೊತ್ತಡವನ್ನು ಕಂಟ್ರೋಲ್ ಮಾಡಲು ಕಾಳು ಮೆಣಸು ಸೇವಿಸಿ
ಮೂಗಿನಲ್ಲಿ ರಕ್ತಸ್ರಾವ ಕಂಡುಬಂದಾಗ ಈ ರೀತಿ ಮಾಡಿ:
– ಮೂಗಿನಲ್ಲಿ ಸಣ್ಣಪ್ರಮಾಣದಲ್ಲಿ ರಕ್ತ ಕಂಡುಬಂದಾಗ ಕೂಡಲೇ ವಿಶ್ರಾಂತಿ ತೆಗೆದುಕೊಳ್ಳಿ.
– ಆರಾಮವಾಗಿ ಕುಳಿತು ದೀರ್ಘವಾಗಿ ಉಸಿರಾಡಿ.
– ಮೂಗಿನಲ್ಲಿ ಕಿರಿಕಿರಿಯಾದಾಗ ಮೂಗಿನ ಡ್ರಾಪ್ಸ್ ಮತ್ತು ನಂಜುನಿರೋಧಕ ಕ್ರೀಂ ಬಳಸಿ.
– ತೀವ್ರ ರಕ್ತಸ್ರಾವ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
– ಈ ಸಂದರ್ಭದಲ್ಲಿ ಬಾಯಿಯ ಮೂಲಕ ಉಸಿರಾಡಿ.
– ಕಬ್ಬಿಣಾಂಶವುಳ್ಳ ಆಹಾರ ಸೇವನೆಯಿಂದ ರಕ್ತಹೀನತೆಯನ್ನು ಸರಿಪಡಿಸಿಕೊಳ್ಳಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ