Health Tips: ಈ ನಾಲ್ಕು ಬಗೆಯ ಅಕ್ಕಿಗಳಲ್ಲಿದೆ ಆರೋಗ್ಯ ಪ್ರಯೋಜನಗಳು

| Updated By: sandhya thejappa

Updated on: Aug 09, 2021 | 5:45 PM

ಆರೋಗ್ಯದ ದೃಷ್ಟಿಯಿಂದ ಕಂದು ಸೇರಿದಂತೆ ಇತರೆ ಅಕ್ಕಿಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಿಳಿ ಅಕ್ಕಿ ಜೊತೆಗೆ ಕಂದು, ಕೆಂಪು ಮತ್ತು ಕಪ್ಪು ಅಕ್ಕಿ ಲಭ್ಯವಿದೆ.

Health Tips: ಈ ನಾಲ್ಕು ಬಗೆಯ ಅಕ್ಕಿಗಳಲ್ಲಿದೆ ಆರೋಗ್ಯ ಪ್ರಯೋಜನಗಳು
ವಿವಿಧ ಬಗೆಯ ಅಕ್ಕಿ
Follow us on

ಆರೋಗ್ಯವೇ ಭಾಗ್ಯ ಅನ್ನೊ ಈಗಿನ ಜನರು ತಮ್ಮ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದರಲ್ಲೂ ತೂಕ ಇಳಿಸುವವರು, ಮಧುಮೇಹ ಕಾಯಿಲೆ ಇರುವವರು ಅನ್ನ ಸೇವಿಸಲು ಹಿಂದೆ ಸರಿಯುತ್ತಾರೆ. ಸಾಮಾನ್ಯವಾಗಿ ಬಿಳಿ ಅಕ್ಕಿಯಿಂದ ಮಾಡುವ ಅನ್ನ ಅಥವಾ ತಿಂಡಿ ತಿನ್ನುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಕಂದು ಸೇರಿದಂತೆ ಇತರೆ ಅಕ್ಕಿಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಿಳಿ ಅಕ್ಕಿ ಜೊತೆಗೆ ಕಂದು, ಕೆಂಪು ಮತ್ತು ಕಪ್ಪು ಅಕ್ಕಿ ಲಭ್ಯವಿದೆ. ಒಂದೊಂದು ಬಗೆಯ ಅಕ್ಕಿ ತನ್ನದೇ ಆದ ಪ್ರಯೋಜನಗಳು ಮತ್ತು ಪೋಷಕಾಂಶಗಳಿಂದ ಕೂಡಿವೆ.

ಬಿಳಿ ಅಕ್ಕಿ (White rice)
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬಿಳಿ ಅಕ್ಕಿ ಇರುತ್ತದೆ. ಹೆಚ್ಚಾಗಿ ಬಿಳಿ ಅಕ್ಕಿಯನ್ನೇ ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ವಿಧದ ಅಕ್ಕಿಗಳಲ್ಲಿ ಬಿಳಿ ಅಕ್ಕಿಯನ್ನು ಹೆಚ್ಚು ಸಂಸ್ಕರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ಸಂಸ್ಕರಣೆ ಮಾಡಿದಾಗ ಪೌಷ್ಟಿಕಾಂಶದ ಪ್ರಮಾಣ ಕಡಿಮೆಯಾಗುತ್ತವೆ. ಇದು ಉತ್ಕರ್ಷಣ ನಿರೋಧಕಗಳು, ಪ್ರೋಟೀನ್​ಗಳು, ಥಯಾಮಿನ್, ಜೀವಸತ್ವಗಳನ್ನು ಹೊಂದಿರುತ್ತದೆ.

ಕಂದು ಅಕ್ಕಿ (Brown Rice)
ಕಂದು ಅಕ್ಕಿ ಎಂದರೆ ಬ್ರೌನ್ ರೈಸ್. ಇದು ಬಿಳಿ ಅಕ್ಕಿಗಿಂತ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದೆ. ಇದರಲ್ಲಿ ಫ್ಲಾವೊನೈಡ್ ಮತ್ತು ಆಂಟಿ-ಆಕ್ಸಿಡೆಂಟ್ಗಳಿದ್ದು, ಕೆಲ ರೋಗಗಳಿಂದ ಮುಕ್ತವಾಗಿಸುತ್ತದೆ. ಕಂದು ಅಕ್ಕಿಯೂ ಬಿಳಿ ಅಕ್ಕಿಯಂತೆ ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್​ಗಳನ್ನು ಹೊಂದಿದೆ. ಆದಾಗ್ಯೂ, ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುತ್ತದೆ.

ಕೆಂಪು ಅಕ್ಕಿ (Red Rice)
ಈ ಅಕ್ಕಿಯಲ್ಲಿ ಆಂಥೋಸಯಾನಿನ್ ಎಂಬ ಉತ್ಕರ್ಷಣ ನಿರೋಧಕವಿದ್ದು, ಅದು ಅಕ್ಕಿಗೆ ಕೆಂಪು ಬಣ್ಣವನ್ನು ನೀಡುತ್ತದೆ. ಇದು ಉತ್ತಮ ಪ್ರಮಾಣದ ಕಬ್ಬಿಣಾಂಶವನ್ನು ಹೊಂದಿದೆ. ಹೀಗಾಗಿ ಉರಿಯೂತ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಈ ಅಕ್ಕಿಯಿಂದ ಮಾಡುವ ಖಾದ್ಯ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ತೂಕ ಇಳಿಸಿಕೊಳ್ಳುವವರಿಗೆ ಈ ಅಕ್ಕಿ ಬಳಸುವುದು ಹೆಚ್ಚು ಸೂಕ್ತವಾಗಿರುತ್ತದೆ. ಫೈಬರ್, ಪ್ರೋಟೀನ್ ಸೇರಿದಂತೆ ಹಲವು ಪೌಷ್ಟಿಕ ಅಂಶಗಳನ್ನು ಒಳಗೊಂಡಿರುವ ಕೆಂಪು ಅಕ್ಕಿಯ ಖಾದ್ಯ ತಿನ್ನುವುದರಿಂದ ಬೇಗ ಹಸಿವು ಆಗಲ್ಲ. ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ಕಪ್ಪು ಅಕ್ಕಿ (Black Rice)
ಹಲವರಿಗೆ ಕಪ್ಪು ಅಕ್ಕಿ ಬಗ್ಗೆ ಗೊತ್ತಿಲ್ಲ. ಈ ವಿಧದ ಅಕ್ಕಿ ಪ್ರೋಟೀನ್, ಫೈಬರ್, ವಿಟಮಿನ್ ಇ ಮತ್ತು ಆಂಟಿ-ಆಕ್ಸಿಡೆಂಟ್​ಗಳಿಂದ ಸಮೃದ್ಧವಾಗಿದೆ. ಆರೋಗ್ಯಕ್ಕೆ ಈ ಅಕ್ಕಿ ತುಂಬಾ ಒಳ್ಳೆಯದು. ಈ ಅಕ್ಕಿಗೆ ಶ್ರೀಮಂತರ ಅಕ್ಕಿ ಎನ್ನುವ ಹೆಸರಿದೆ. ಕಾರಣ ಚೀನಾ ದೇಶದ ದೊರೆಗಳು ಕಪ್ಪು ಅಕ್ಕಿಯಿಂದ ಮಾಡುವ ಖಾದ್ಯವನ್ನು ಸೇವಿಸುತ್ತಿದ್ದರಂತೆ. ಈ ಅಕ್ಕಿಯಲ್ಲಿ ಮಾಡುವ ಅನ್ನವನ್ನು ಸೇವಿಸುವುದರಿಂದ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಂದ ದೂರವಿರಬಹುದು.

ಯಾವ ಅಕ್ಕಿ ಹೆಚ್ಚು ಪ್ರಯೋಜನಕಾರಿ
ಈ ನಾಲ್ಕು ಬಗೆಯ ಅಕ್ಕಿಗಳಲ್ಲಿ ಕೆಂಪು, ಕಂದು, ಕಪ್ಪು ಅಕ್ಕಿ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇವು ಉತ್ಕರ್ಷಣ ನಿರೋಧಕಗಳು, ಫೈಬರ್, ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಬಿಳಿ ಅಕ್ಕಿಯನ್ನು ಹೆಚ್ಚು ಸಂಸ್ಕರಿಸಲಾಗುತ್ತದೆ. ಹೀಗಾಗಿ ಇದರಲ್ಲಿ ಪೌಷ್ಟಿಕಾಂಶ ಅಂಶ ಕಡಿಮೆ ಇರುತ್ತದೆ.

ಇದನ್ನೂ ಓದಿ

Health Tips: ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿದ್ರೆ ಸಿಗುವ ಪ್ರಯೋಜನಗಳೇನು ಗೊತ್ತಾ?

Health Tips: ಈ ಹಣ್ಣು, ತರಕಾರಿಗಳ ಸಿಪ್ಪೆಯನ್ನು ಎಂದಿಗೂ ಎಸೆಯಬೇಡಿ

(Which is the best rice for good health)