ಹವಾಮಾನ ಬದಲಾದಾಗ ಕೀಲು ಮತ್ತು ಬೆನ್ನು ನೋವು ಹೆಚ್ಚಾಗುವುದೇಕೆ? ತಜ್ಞರು ನೀಡಿದ ಸಲಹೆಗಳಿವು

ಚಳಿಗಾಲ ಆರಂಭವಾಗುತ್ತಿದ್ದಂತೆ ಕೆಲವರಿಗೆ ಮೊಣಕಾಲು, ಸೊಂಟ ಮತ್ತು ಬೆನ್ನು ನೋವು ಹೆಚ್ಚಾಗುತ್ತದೆ. ಹವಾಮಾನದಲ್ಲಿನ ಬದಲಾವಣೆ, ಸ್ನಾಯುಗಳ ಬಿಗಿತ, ದೈಹಿಕ ಚಟುವಟಿಕೆ ಕಡಿಮೆಯಾಗುವುದು ಮತ್ತು ವಿಟಮಿನ್ ಡಿ ಕೊರತೆ ಇದಕ್ಕೆ ಕಾರಣವಾಗಬಹುದು. ಹಾಗಾದರೆ ಚಳಿಗಾಲದಲ್ಲಿ ಕೀಲು ನೋವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಬೆಚ್ಚಗಿನ ಶಾಖ, ಲಘು ವ್ಯಾಯಾಮ ಮತ್ತು ಸರಿಯಾದ ಆಹಾರ ಪದ್ಧತಿಯಿಂದ ಕೀಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯಿರಿ.

ಹವಾಮಾನ ಬದಲಾದಾಗ ಕೀಲು ಮತ್ತು ಬೆನ್ನು ನೋವು ಹೆಚ್ಚಾಗುವುದೇಕೆ? ತಜ್ಞರು ನೀಡಿದ ಸಲಹೆಗಳಿವು
Joint Pain In Winter
Image Credit source: Getty Images

Updated on: Nov 18, 2026 | 7:42 PM

ಹವಾಮಾನ ಬದಲಾದಂತೆ ನಮ್ಮ ದೇಹದಲ್ಲಿಯೂ ಹಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ ಚಳಿಗಾಲ ಆರಂಭವಾಗುತ್ತಿದ್ದಂತೆ ಕೆಲವರಿಗೆ ಮೊಣಕಾಲು ನೋವು, ಸೊಂಟ ನೋವು, ಬೆನ್ನು ನೋವು ಮತ್ತು ಕೀಲುಗಳಲ್ಲಿ ಬಿಗಿತದ ಸಮಸ್ಯೆ ಹೆಚ್ಚಾಗುತ್ತದೆ. ಈಗಾಗಲೇ ಸಂಧಿವಾತ ಅಥವಾ ಮೂಳೆ ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆ ಹೊಂದಿರುವವರಿಗೆ ಈ ತೊಂದರೆ ಹೆಚ್ಚು ಕಾಡಬಹುದು. ಹಾಗಾದರೆ ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುವುದೇಕೆ ಮತ್ತು ಇದನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗಲು ಕಾರಣಗಳೇನು?

ವಾತಾವರಣದ ಒತ್ತಡದಲ್ಲಿ ಬದಲಾವಣೆ: ಡಾ. ನೀಲಾಭ್ ಅವರ ಪ್ರಕಾರ, ವಾತಾವರಣದ ಒತ್ತಡದಲ್ಲಿನ ಬದಲಾವಣೆಗಳು ಕೆಲವು ವ್ಯಕ್ತಿಗಳಲ್ಲಿ ಕೀಲುಗಳ ಸುತ್ತಲಿನ ಅಂಗಾಂಶಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದ ಈಗಾಗಲೇ ನೋವು ಅಥವಾ ಉರಿಯೂತ ಹೊಂದಿರುವವರಿಗೆ ಅಸ್ವಸ್ಥತೆ ಹೆಚ್ಚಾಗಬಹುದು.

Loading...

ರಕ್ತನಾಳಗಳ ಸಂಕುಚನ: ಚಳಿಯಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಚರ್ಮ ಮತ್ತು ಕೈಕಾಲುಗಳಲ್ಲಿನ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಸ್ನಾಯುಗಳಲ್ಲಿ ಬಿಗಿತ ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳಬಹುದು.

ಕೀಲುಗಳ ದ್ರವದಲ್ಲಿ ಬದಲಾವಣೆ: ಕೀಲುಗಳ ಸುಗಮ ಚಲನೆಗೆ ಸಹಾಯ ಮಾಡುವ ಸೈನೋವಿಯಲ್ ದ್ರವದ ಗುಣಲಕ್ಷಣಗಳು ತಾಪಮಾನಕ್ಕೆ ಅನುಗುಣವಾಗಿ ಬದಲಾಗಬಹುದು. ಇದರಿಂದ ಕೆಲವರಿಗೆ ಕೀಲುಗಳನ್ನು ಚಲಿಸುವಾಗ ಬಿಗಿತ ಅನುಭವವಾಗಬಹುದು.

ಸ್ನಾಯುಗಳ ಬಿಗಿತ: ಚಳಿಗಾಲದಲ್ಲಿ ಸ್ನಾಯುಗಳು ಗಟ್ಟಿಯಾಗುವ ಸಾಧ್ಯತೆಯಿದೆ. ಇದರಿಂದ ಮೊಣಕಾಲು, ಸೊಂಟ ಮತ್ತು ಬೆನ್ನಿನ ಭಾಗದಲ್ಲಿ ನೋವು ಹಾಗೂ ಚಲನೆಯ ಅಸ್ವಸ್ಥತೆ ಹೆಚ್ಚಾಗಬಹುದು.

ದೈಹಿಕ ಚಟುವಟಿಕೆ ಕಡಿಮೆಯಾಗುವುದು: ಚಳಿ ಮತ್ತು ವಾಯುಮಾಲಿನ್ಯದ ಕಾರಣದಿಂದ ಅನೇಕರು ಹೊರಗೆ ನಡೆಯುವುದನ್ನು ಕಡಿಮೆ ಮಾಡುತ್ತಾರೆ. ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಸ್ನಾಯುಗಳು ಮತ್ತು ಕೀಲುಗಳಲ್ಲಿ ಬಿಗಿತ ಉಂಟಾಗಬಹುದು.

ವಿಟಮಿನ್ ಡಿ ಕೊರತೆ: ಚಳಿಗಾಲದಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಕಡಿಮೆಯಾಗಬಹುದು. ಇದರಿಂದ ಕೆಲವರಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುವ ಸಾಧ್ಯತೆಯಿದೆ. ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ಮುಖ್ಯವಾಗಿವೆ.

ಚಳಿಗಾಲದಲ್ಲಿ ಕೀಲು ನೋವು ಕಡಿಮೆ ಮಾಡಿಕೊಳ್ಳುವುದು ಹೇಗೆ?

ಬೆಚ್ಚಗಿನ ಶಾಖ ನೀಡಿ: ನೋವಿರುವ ಭಾಗಕ್ಕೆ ಬಿಸಿನೀರಿನ ಚೀಲ ಅಥವಾ ಹೀಟಿಂಗ್ ಪ್ಯಾಡ್ ಬಳಸಿ. ಒಂದೇ ಬಾರಿ 15ರಿಂದ 20 ನಿಮಿಷಗಳ ಕಾಲ ಮಾತ್ರ ಶಾಖ ನೀಡಿ. ಚರ್ಮಕ್ಕೆ ನೇರವಾಗಿ ಅತಿಯಾದ ಬಿಸಿ ತಾಗದಂತೆ ಎಚ್ಚರಿಕೆ ವಹಿಸಿ.

ಬೆಚ್ಚಗಿನ ಬಟ್ಟೆ ಧರಿಸಿ: ಸ್ವೆಟರ್, ಸಾಕ್ಸ್ ಮತ್ತು ಟೋಪಿ ಬಳಸಿ ದೇಹವನ್ನು ಬೆಚ್ಚಗಿಡಿ. ಮೊಣಕಾಲು ನೋವಿದ್ದರೆ ನೀ ವಾರ್ಮರ್ ಬಳಸಬಹುದು.

ನಿಯಮಿತ ವ್ಯಾಯಾಮ ಮಾಡಿ: ಪ್ರತಿದಿನ ಸ್ವಲ್ಪ ನಡೆಯುವುದು, ಲಘು ವ್ಯಾಯಾಮ ಮತ್ತು ಸ್ನಾಯುಗಳನ್ನು ಹಿಗ್ಗಿಸುವ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಳ್ಳಿ. ನೋವು ಹೆಚ್ಚಿಸುವ ವ್ಯಾಯಾಮಗಳನ್ನು ತಪ್ಪಿಸಿ.

ಸಾಕಷ್ಟು ನೀರು ಕುಡಿಯಿರಿ: ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆಯಾದರೂ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದು ಮುಖ್ಯ.

ಒಟ್ಟಿನಲ್ಲಿ, ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುವುದು ಎಲ್ಲರಲ್ಲೂ ಒಂದೇ ರೀತಿಯಲ್ಲಿರುವುದಿಲ್ಲ. ನೋವು ನಿರಂತರವಾಗಿದ್ದರೆ, ಊತ ಅಥವಾ ಚಲಿಸಲು ತೊಂದರೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us