
ಸೇಬು ಆರೋಗ್ಯಕ್ಕೆ ಪ್ರಯೋಜನಕಾರಿ ಹಣ್ಣುಗಳಲ್ಲಿ ಒಂದಾಗಿದೆ. ಇದರಲ್ಲಿ ನಾರಿನಾಂಶ, ವಿಟಮಿನ್ ಸಿ, ಪೊಟ್ಯಾಸಿಯಂ ಸೇರಿದಂತೆ ಹಲವು ಪೋಷಕಾಂಶಗಳು ಇರುತ್ತವೆ. ಆದರೆ ಸೇಬನ್ನು ಕತ್ತರಿಸಿದ ಸ್ವಲ್ಪ ಸಮಯದ ನಂತರ ಅದರ ಬಿಳಿ ಅಥವಾ ತಿಳಿ ಕೆನೆ ಬಣ್ಣ ಬದಲಾಗಿ ಕಂದು ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಿರಬಹುದು. ಹೀಗೆ ಬಣ್ಣ ಬದಲಾಗುವುದಕ್ಕೆ ಕಾರಣವೇನು ಎಂಬುದು ಹಲವರಿಗೆ ತಿಳಿದಿಲ್ಲ. ಆದರೆ ಇಂತಹ ಸೇಬನ್ನು ತಿನ್ನುವುದು ಸುರಕ್ಷಿತವೇ ಮತ್ತು ಈ ರೀತಿಯಾದ ಸೇಬುಗಳ ಪೋಷಕಾಂಶ ಕಡಿಮೆಯಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಸೇಬು ಕತ್ತರಿಸಿದಾಗ ಬಣ್ಣ ಬದಲಾಗುವುದಕ್ಕೆ ಮುಖ್ಯ ಕಾರಣ ಎಂಜೈಮ್ಯಾಟಿಕ್ ಬ್ರೌನಿಂಗ್ (Enzymatic Browning) ಎಂಬ ಪ್ರಕ್ರಿಯೆ. ಸೇಬಿನ ಒಳಭಾಗದಲ್ಲಿರುವ ಪಾಲಿಫಿನಾಲ್ ಆಕ್ಸಿಡೇಸ್ (PPO) ಎಂಬ ಕಿಣ್ವವು ಕತ್ತರಿಸುವಾಗ ಹೊರಗಿನ ಗಾಳಿಯಲ್ಲಿರುವ ಆಮ್ಲಜನಕದ ಸಂಪರ್ಕಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಆಕ್ಸಿಡೀಕರಣ ಪ್ರಕ್ರಿಯೆ ಆರಂಭವಾಗುತ್ತದೆ. ಇದರಿಂದ ಕ್ವಿನೋನ್ ಎಂಬ ಸಂಯುಕ್ತಗಳು ರೂಪುಗೊಂಡು, ನಂತರ ಕಂದು ಬಣ್ಣದ ವರ್ಣದ್ರವ್ಯಗಳು ಉತ್ಪತ್ತಿಯಾಗುತ್ತವೆ. ಇದೇ ಕಾರಣಕ್ಕೆ ಕತ್ತರಿಸಿದ ಸೇಬಿನ ಮೇಲ್ಮೈ ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತದೆ. ಆಲೂಗಡ್ಡೆ, ಬಾಳೆಹಣ್ಣು ಮತ್ತು ಪೇರಳೆಯಲ್ಲಿಯೂ ಇಂತಹ ಬದಲಾವಣೆ ಕಾಣಬಹುದು.
ಸೇಬು ಕಂದು ಬಣ್ಣಕ್ಕೆ ತಿರುಗಿದ ತಕ್ಷಣ ಅದು ಹಾಳಾಗಿದೆ ಎಂದರ್ಥವಲ್ಲ. ಸಾಮಾನ್ಯವಾಗಿ ಇದು ಆಮ್ಲಜನಕದ ಸಂಪರ್ಕದಿಂದ ಉಂಟಾಗುವ ನೈಸರ್ಗಿಕ ರಾಸಾಯನಿಕ ಪ್ರಕ್ರಿಯೆಯಾಗಿದೆ. ಆದರೆ ಸೇಬನ್ನು ಬಹಳ ಸಮಯ ಕತ್ತರಿಸಿ ಹೊರಗಿಟ್ಟಿದ್ದರೆ ಎಚ್ಚರಿಕೆ ವಹಿಸಬೇಕು. ಸೇಬಿನಿಂದ ಅಸಹಜ ವಾಸನೆ ಬರುತ್ತಿದ್ದರೆ, ಅಂಟು ಅಂಟಾಗಿದ್ದರೆ, ಅತಿಯಾಗಿ ಮೃದುವಾಗಿದ್ದರೆ ಅಥವಾ ಅದರ ಮೇಲೆ ಬೂಷ್ಟು ಕಾಣಿಸಿಕೊಂಡಿದ್ದರೆ ತಿನ್ನಬಾರದು. ಇವು ಹಣ್ಣು ಹಾಳಾಗಿರುವ ಸೂಚನೆಗಳಾಗಿರಬಹುದು.
ಇದನ್ನೂ ಓದಿ: ಬಾಯಿ ಹುಣ್ಣು ಸಮಸ್ಯೆಗೆ ಜೇನುತುಪ್ಪ, ತುಪ್ಪ, ಅರಿಶಿನ ಬಳಸಬಹುದೇ? ಈ ಮನೆಮದ್ದುಗಳ ಬಗ್ಗೆ ತಿಳಿಯಿರಿ
ಸೇಬು ಕಂದು ಬಣ್ಣಕ್ಕೆ ತಿರುಗುವ ಸಂದರ್ಭದಲ್ಲಿ ಅದರಲ್ಲಿರುವ ಕೆಲವು ಫಿನಾಲಿಕ್ ಸಂಯುಕ್ತಗಳು ಮತ್ತು ವಿಟಮಿನ್ ಸಿ ಪ್ರಮಾಣದಲ್ಲಿ ಬದಲಾವಣೆ ಉಂಟಾಗಬಹುದು. ಆಕ್ಸಿಡೀಕರಣದಿಂದ ಕೆಲವು ಉತ್ಕರ್ಷಣ ನಿರೋಧಕಗಳ ಚಟುವಟಿಕೆಯ ಮೇಲೂ ಪರಿಣಾಮ ಬೀರಬಹುದು. ಆದರೆ ಬಣ್ಣ ಬದಲಾದ ಮಾತ್ರಕ್ಕೆ ಸೇಬಿನಲ್ಲಿರುವ ಪೋಷಕಾಂಶಗಳು ಕಡಿಮೆಯಾಗುಗುತ್ತವೆ ಎಂದರ್ಥವಲ್ಲ. ನಾರಿನಾಂಶ, ಕಾರ್ಬೋಹೈಡ್ರೇಟ್ ಮತ್ತು ಇತರ ಹಲವು ಪೋಷಕಾಂಶಗಳು ಉಳಿದಿರುತ್ತವೆ.
ಕತ್ತರಿಸಿದ ಸೇಬು ಹೆಚ್ಚು ಸಮಯ ತಾಜಾವಾಗಿರಲು ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು.
ನಿಂಬೆ ರಸ: ಸೇಬಿನ ತುಂಡುಗಳಿಗೆ ಸ್ವಲ್ಪ ನಿಂಬೆ ರಸ ಹಚ್ಚುವುದರಿಂದ ಆಕ್ಸಿಡೀಕರಣ ಪ್ರಕ್ರಿಯೆ ನಿಧಾನವಾಗುತ್ತದೆ.
ತಣ್ಣೀರು: ಕತ್ತರಿಸಿದ ಸೇಬಿನ ತುಂಡುಗಳನ್ನು ಸ್ವಲ್ಪ ಸಮಯ ತಣ್ಣೀರಿನಲ್ಲಿ ಇಡುವುದರಿಂದ ಗಾಳಿಯ ಸಂಪರ್ಕ ಕಡಿಮೆಯಾಗುತ್ತದೆ.
ಗಾಳಿಯಾಡದ ಡಬ್ಬಿ: ಸೇಬಿನ ತುಂಡುಗಳನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಫ್ರಿಜ್‌ನಲ್ಲಿ ಇಡುವುದರಿಂದ ಬಣ್ಣ ಬದಲಾಗುವ ವೇಗವನ್ನು ಕಡಿಮೆ ಮಾಡಬಹುದು.
ಒಟ್ಟಿನಲ್ಲಿ, ಸೇಬು ಕತ್ತರಿಸಿದ ನಂತರ ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ ಪ್ರಕ್ರಿಯೆ. ಸರಿಯಾದ ರೀತಿಯಲ್ಲಿ ಸಂಗ್ರಹಿಸಿದರೆ ಸೇಬಿನ ತಾಜಾತನವನ್ನು ಹೆಚ್ಚು ಸಮಯ ಕಾಪಾಡಿಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ