ಪಿತ್ತಕೋಶದಲ್ಲಿ ಕಲ್ಲು ಕಂಡುಬರುವುದಕ್ಕೆ ಕಾರಣವೇನು? ಇದು ಬರದಂತೆ ತಡೆಯಲು ಏನು ಮಾಡಬೇಕು?

ಇತ್ತೀಚಿನ ದಿನಗಳಲ್ಲಿ ಪಿತ್ತಕೋಶದಲ್ಲಿ ಕಲ್ಲುಗಳು ಕಂಡುಬರುವ ಸಮಸ್ಯೆ ಚಿಕ್ಕ ವಯಸ್ಸಿನವರಲ್ಲಿಯೇ ಬಹಳ ಸಾಮಾನ್ಯವಾಗಿದೆ. ಆತಂಕಕಾರಿ ವಿಷಯವೆಂದರೆ ಈ ಆರೋಗ್ಯ ಸಮಸ್ಯೆ ಕಿರಿಯ ವಯಸ್ಸಿನವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದು ಸಣ್ಣ ಕಣದಿಂದ ಹಿಡಿದು ಗಾಲ್ಫ್ ಚೆಂಡಿನ ಗಾತ್ರದವರೆಗೂ ಇರಬಹುದು. ಅನೇಕರಲ್ಲಿ ಇದು ಕಂಡುಬರುವಾಗ ಯಾವುದೇ ರೀತಿಯ ಲಕ್ಷಣಗಳು ಕೂಡ ಕಂಡುಬರುವುದಿಲ್ಲ. ಹಾಗಾದರೆ ಈ ರೀತಿಯಾಗುವುದಕ್ಕೆ ಕಾರಣಗಳೇನು, ಅದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪಿತ್ತಕೋಶದಲ್ಲಿ ಕಲ್ಲು ಕಂಡುಬರುವುದಕ್ಕೆ ಕಾರಣವೇನು? ಇದು ಬರದಂತೆ ತಡೆಯಲು ಏನು ಮಾಡಬೇಕು?
Gallbladder Stone
Image Credit source: Getty images

Updated on: May 28, 2026 | 9:55 PM

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೇ ಪಿತ್ತಕೋಶದಲ್ಲಿ ಕಲ್ಲು (Gall Bladder Stone) ಕಂಡುಬರುವ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಸಮತೋಲನ ಆಹಾರ ಪದ್ಧತಿ, ಕಡಿಮೆ ನೀರು ಕುಡಿಯುವುದು, ಫಾಸ್ಟ್ ಫುಡ್ ಸೇವನೆ ಮತ್ತು ಜೀವನಶೈಲಿಯ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿದೆ. ತಜ್ಞರ ಪ್ರಕಾರ, ಪಿತ್ತಕೋಶದಲ್ಲಿ ಪಿತ್ತರಸ (Bile) ಒಳಗೆ ಕೊಲೆಸ್ಟ್ರಾಲ್ ಅಥವಾ ಬಿಲಿರೂಬಿನ್ ಅತಿಯಾಗಿ ಜಮೆಯಾಗುವಾಗ ಕಲ್ಲು ರೂಪಗೊಳ್ಳುತ್ತದೆ. ಇದು ಸಣ್ಣ ಕಣದಿಂದ ಹಿಡಿದು ಗಾಲ್ಫ್ ಚೆಂಡಿನ ಗಾತ್ರದವರೆಗೂ ಇರಬಹುದು. ಅನೇಕರಲ್ಲಿ ಇದು ಕಂಡುಬರುವಾಗ ಯಾವುದೇ ರೀತಿಯ ಲಕ್ಷಣಗಳು ಕೂಡ ಕಂಡುಬರುವುದಿಲ್ಲ. ಆದರೆ ಈ ಸಮಸ್ಯೆ ಉಂಟಾದರೆ ಹೊಟ್ಟೆಯ ಮಧ್ಯಭಾಗ ಮತ್ತು ಬಲಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು.

ಗಾಲ್ ಸ್ಟೋನ್‌ಗಳ ವಿಧಗಳು:

ವೈದ್ಯರ ಪ್ರಕಾರ ಗಾಲ್ ಸ್ಟೋನ್‌ಗಳು ಮುಖ್ಯವಾಗಿ ಎರಡು ವಿಧಗಳಾಗಿವೆ. ಕೊಲೆಸ್ಟ್ರಾಲ್ ಸ್ಟೋನ್ ಮತ್ತು ಪಿಗ್ಮೆಂಟ್ ಸ್ಟೋನ್. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಅಥವಾ ಪಿತ್ತಕೋಶದ ಒಳಪದರದಲ್ಲಿ ದೋಷ ಉಂಟಾದಾಗ ಕೊಲೆಸ್ಟ್ರಾಲ್ ಸ್ಟೋನ್ ರೂಪಗೊಳ್ಳುತ್ತದೆ. ಕೆಲವರಲ್ಲಿ ಇದು ವಂಶಪಾರಂಪರ್ಯ ಕಾರಣಗಳಿಂದಲೂ ಕಾಣಿಸಬಹುದು. ಪಿಗ್ಮೆಂಟ್ ಸ್ಟೋನ್‌ಗಳು ಸಾಮಾನ್ಯವಾಗಿ ರಕ್ತಕಣಗಳ ಒಡೆತ (Hemolysis) ಹೆಚ್ಚಾದಾಗ ಉಂಟಾಗುತ್ತವೆ. ಸಣ್ಣ ವಯಸ್ಸಿನವರಲ್ಲಿ ಹೆಚ್ಚಾಗಿ ಈ ರೀತಿಯ ಕಪ್ಪು ಬಣ್ಣದ ಸಣ್ಣ ಕಲ್ಲುಗಳು ಕಂಡುಬರುತ್ತವೆ.

ಯುವಕರಲ್ಲಿ ಈ ಸಮಸ್ಯೆ ಹೆಚ್ಚುತ್ತಿರುವುದಕ್ಕೆ ಕಾರಣವೇನು?

ಅನಿಯಮಿತ ಆಹಾರ ಪದ್ಧತಿ, ಹೆಚ್ಚು ಎಣ್ಣೆಯುಕ್ತ ಆಹಾರ ಸೇವನೆ, ತ್ವರಿತವಾಗಿ ತೂಕ ಇಳಿಸುವ ಕ್ರ್ಯಾಶ್ ಡಯಟ್ ಮತ್ತು ದೇಹದಲ್ಲಿ ನೀರಿನ ಕೊರತೆ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಜಿಮ್‌ಗೆ ಹೋಗುವವರು, ಹೆಚ್ಚು ಹೊರಗಡೆ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಕೇವಲ ನೀರು ಕಡಿಮೆ ಕುಡಿದ್ರೆ ಮಾತ್ರವಲ್ಲ, ಈ ಆಹಾರಗಳ ಸೇವನೆ ಮಾಡಿದ್ರೂ ಕಿಡ್ನಿ ಸ್ಟೋನ್ ಆಗುತ್ತೆ!

ತಪ್ಪದೇ ಗಮನಿಸಬೇಕಾದ ಲಕ್ಷಣಗಳು:

  • ಹೊಟ್ಟೆಯ ಬಲಭಾಗದಲ್ಲಿ ತೀವ್ರ ನೋವು
  • ವಾಂತಿ ಅಥವಾ ಅಜೀರ್ಣ
  • ಊಟದ ನಂತರ ಹೊಟ್ಟೆ ಉಬ್ಬರ
  • ಜ್ವರ ಅಥವಾ ಅಸ್ವಸ್ಥತೆ

ಪಿತ್ತಕೋಶದ ಕಲ್ಲು ತಡೆಯಲು ಏನು ಮಾಡಬೇಕು?

ತಜ್ಞರ ಪ್ರಕಾರ ದಿನಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯಂತ ಮುಖ್ಯ. ಎಣ್ಣೆಯಲ್ಲಿ ಕರಿದ ಆಹಾರ, ಪಿಜ್ಜಾ, ಬರ್ಗರ್, ಸಮೋಸಾ ಮೊದಲಾದ ಫಾಸ್ಟ್ ಫುಡ್ ಕಡಿಮೆ ಮಾಡಬೇಕು. ಓಟ್ಸ್, ಹಣ್ಣುಗಳು, ಹಸಿ ತರಕಾರಿ ಮತ್ತು ಸಂಪೂರ್ಣ ಧಾನ್ಯಗಳಲ್ಲಿ ಇರುವ ಫೈಬರ್ ಅಂಶವನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಜೊತೆಗೆ ಉಪಹಾರವನ್ನು ಬಿಟ್ಟುಬಿಡದೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us