Potential of Potassium: ಪೊಟ್ಯಾಶಿಯಂ ನಮ್ಮ ದೇಹಕ್ಕೆ ಏಕೆ ಅಗತ್ಯ, ಇದರ ಆರೋಗ್ಯ ಪ್ರಯೋಜನಗಳೇನು?
ಪೊಟ್ಯಾಸಿಯಂ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ಖನಿಜಗಳಲ್ಲಿ ಒಂದಾಗಿದೆ. ಇದು ಸ್ನಾಯುಗಳು ಮತ್ತು ನರಗಳು ಸರಿಯಾಗಿ ಕಾರ್ಯನಿರ್ವಹಿಸುವಲ್ಲಿ ಪ್ರಮುಖ ಪ್ರಾತವನ್ನು ವಹಿಸುತ್ತದೆ. ಪೊಟ್ಯಾಸಿಯಂ ನಮ್ಮ ದೇಹಕ್ಕೆ ಏಕೆ ಅಗತ್ಯ, ಅದರ ಆರೋಗ್ಯ ಪ್ರಯೋಜನಗಳಾವುವು ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನಾವು ಸೇವಿಸುವ ಆಹಾರದಲ್ಲಿನ ಪ್ರತಿಯೊಂದು ಪೋಷಕಾಂಶಗಳು ದೇಹಕ್ಕೆ ಅಗತ್ಯವಾಗಿದೆ. ಉದಾಹರಣೆಗೆ ವಿಟಮಿನ್ ಎ ಯಂತಹ ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡುವಂತೆ ಪೊಟ್ಯಾಶಿಯಂ ದೇಹದ ನರಗಳು ಮತ್ತು ಸ್ನಾಯುಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಪೊಟ್ಯಾಶಿಯಂ ಒಂದು ಖನಿಜವಾಗಿದ್ದು, ಇದು ದೇಹಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶಗಳಲ್ಲಿ ಒಂದಾಗಿದೆ. ಇವುಗಳು ನಾವು ಸೇವಿಸುವ ಅನೇಕ ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತವೆ. ನಮ್ಮ ಜೀವಕೋಶಗಳಲ್ಲಿ ದ್ರವಗಳ ಮಟ್ಟವನ್ನು ನಿರ್ವಹಿಸುವುದರಲ್ಲಿ ಮತ್ತು ರಕ್ತದೊತ್ತಡ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಪೊಟ್ಯಾಶಿಯಂ ಭರಿತ ಆಹಾತವನ್ನು ಸೇವಿಸುವುದು ಏಕೆ ಮುಖ್ಯ:
ದೇಹವನ್ನು ಆರೋಗ್ಯಕರವಾಗಿಡಲು ಜೀವಸತ್ವಗಳ ಜೊತೆಗೆ ಖನಿಜಗಳು ಸಹ ಅಗತ್ಯ. ಪೊಟ್ಯಾಸಿಯಂ ಸಹ ಅಗತ್ಯವಾದ ಖನಿಜ ಮತ್ತು ಎಲೆಕ್ಟ್ರೋಲೈಟ್ ಆಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಜೀವಕೋಶಗಳಿಗೆ ಪೋಷಕಾಂಶಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ಪೊಟ್ಯಾಶಿಯಂ ಸ್ನಾಯುಗಳು ಮತ್ತು ನರಗಳ ಸರಿಯಾದ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ. ಅಲ್ಲದೆ ಒಟ್ಟಾರೆ ಉತ್ತಮ ಆರೋಗ್ಯಕ್ಕಾಗಿ ಶಾರೀರಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ನಿಮ್ಮ ದೈನಂದಿನ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಪೊಟ್ಯಾಶಿಯಂ ಇರಬೇಕೆಂದು ತಜ್ಞರು ಹೇಳುತ್ತಾರೆ.
ಒಂದು ದಿನದಲ್ಲಿ ನಾವು ಎಷ್ಟು ಪ್ರಮಾಣದಲ್ಲಿ ಪೊಟ್ಯಾಶಿಯಂ ಸೇವಿಸಬೇಕು:
ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ಹಾಗಾಗಿ ಯಾವುದೇ ಒಂದು ಆಹಾರ ಅಥವಾ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವ ಅಗತ್ಯವಿದೆ. ಇನ್ನು ಯಾರಿಗೆ ಎಷ್ಟು ಪ್ರಮಾಣದಲ್ಲಿ ಪೊಟ್ಯಾಸಿಯಂ ಅಗತ್ಯವಿದೆ ಎಂದು ನೋಡುವುದಾರೆ, 14 ರಿಂದ 18 ವರ್ಷ ವಯಸ್ಸಿನ ಹುಡುಗಿಯರು 2,300 ಮಿಗ್ರಾಂ, ಮಹಿಳೆಯರು 2,600 ಮಿಗ್ರಾಂ, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ 2,500 ರಿಂದ 2,900 ಮಿಗ್ರಾಂ ಪೊಟ್ಯಾಸಿಯಂ ಅಗತ್ಯವಿದೆ. ಅದೇ ರೀತಿ 14 ರಿಂದ 18 ವರ್ಷದ ಯುವಕರಿಗೆ 3,000 ಮಿಗ್ರಾಂ ಹಾಗೂ ಅದಕ್ಕಿಂತ ಮೇಲ್ಪಟ್ಟ ಪುರುಷರಿಗೆ 3,400 ಗ್ರಾಂ ಪೊಟ್ಯಾಸಿಯಂ ಅಗತ್ಯವಿದೆ.
ಇದನ್ನೂ ಓದಿ: Health Tips for 2023: ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪಾಲಿಸಿ
ಪೊಟ್ಯಾಸಿಯಂ ಭರಿತ ಆಹಾರಗಳು:
ಬಾಳೆಹಣ್ಣು, ಆಲುಗಡ್ಡೆ, ಸಿಹಿಗೆಣಸು, ದಾಳಿಂಬೆ, ಪಾಲಕ್, ಟೊಮಟೊ, ಎಳನೀರು, ಧಾನ್ಯಗಳು, ಅವರೆಕಾಳು, ಅಣಬೆ, ಅವಕಾಡೊ, ಸೌತೆಕಾಯಿ, ಕುಂಬಳಕಾಯಿ ಹಸಿರು ಎಲೆ ತರಕಾರಿಗಳು, ಒಣಹಣ್ಣು ಮತ್ತು ಬೀಜಗಳು, ಮೊಸರು, ಹಾಲು, ಮೀನು, ಮಾಂಸ ಇತ್ಯಾದಿಗಳು ಪೊಟ್ಯಾಸಿಯಂಭರಿತ ಆಹಾರಗಳಾಗಿವೆ.
ಪೊಟ್ಯಾಶಿಯಂ ಭರಿತ ಆಹಾರಗಳನ್ನು ಸೇವಿಸುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳು:
ದೇಹದಲ್ಲಿ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸುತ್ತದೆ:
ಪೊಟ್ಯಾಶಿಯಂನ ಮುಖ್ಯ ಕಾರ್ಯವೆಂದರೆ ದೇಹದಲ್ಲಿನ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸುವುದು. ಇದರಿಂದ ದೇಹವು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಪೊಟ್ಯಾಸಿಯಂ ಮತ್ತು ಸೋಡಿಯಂನ ಸರಿಯಾದ ಅನುಪಾತವು ದೇಹದ ಎಲೆಕ್ಟ್ರೋಲೈಟ್ ಸಮತೋಲನಕ್ಕೆ ಮುಖ್ಯವಾಗಿದೆ, ಇದು ಸರಿಯಾದ ಸ್ನಾಯುಗಳ ಸಂಕೋಚನ ಮತ್ತು ನರಗಳ ಪ್ರಸರಣಕ್ಕೆ ಅವಶ್ಯಕವಾಗಿದೆ.
ರಕ್ತದೊತ್ತಡವನ್ನು ನಿರ್ವಹಿಸುತ್ತದೆ:
ನೀವು ಹೆಚ್ಚು ಪೊಟ್ಯಾಶಿಯಂ ಭರಿತ ಆಹಾರವನ್ನು ಸೇವಿಸಿದಾಗ, ಬೆವರು ಮತ್ತು ಮೂತ್ರದಿಂದ ನೀವು ಹೆಚ್ಚು ಸೋಡಿಯಂ ಅಂಶವನ್ನು ದೇಹದಿಂದ ಹೊರಹಾಕುತ್ತೀರಿ ಎಂದು ತಜ್ಞರು ಹೇಳುತ್ತಾರೆ. ಇದು ದೇಹವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:
ನಮ್ಮ ಜೀವನದ ಗುಣಮಟ್ಟ ಮತ್ತು ದೀರ್ಘಾಯುಷ್ಯಕ್ಕೆ ಹೃದಯ ಹೃದಯದ ಆರೋಗ್ಯವು ಬಹಳ ಮುಖ್ಯವಾಗಿದೆ. ಹಲವಾರು ವೈದ್ಯಕೀಯ ಅಧ್ಯಯನಗಳು ಪೊಟ್ಯಾಸಿಯಂ ಭರಿತ ಆಹಾರಗಳು ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ ಎಂದು ಹೇಳಿವೆ. ಮಾತ್ರವಲ್ಲದೆ ಇದು ಹಲವಾರು ಗಂಭೀರ ಹೃದಯರಕ್ತನಾಳಗಳ ಕಾಯಿಲೆಗಳಿಗೆ ಕಾರಣವಾಗುವ ಆರೋಗ್ಯ ಸಮಸ್ಯೆಗಳ ಅಪಾಯವನ್ನು ತಡೆಯುತ್ತದೆ.
ಮೂತ್ರಪಿಂಡದ ಕಲ್ಲುಗಳನ್ನು ಅಭಿವೃದ್ಧಿ ಪಡಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ:
ಮೂತ್ರದಲ್ಲಿ ಕಲ್ಲು, ಸಾಮಾನ್ಯವಾಗಿ ಕಂಡುಬರುವ ಮೂತ್ರಕೋಶದ ಸಮಸ್ಯೆಯಾಗಿದೆ. ಮೂತ್ರದಲ್ಲಿ ಅಸಹಜವಾಗಿ ಹೆಚ್ಚಿದ ಕ್ಯಾಲ್ಸಿಯಂ ಮಟ್ಟಗಳ ಕಾರಣದಿಂದ ಮೂತ್ರ ಪಿಂಡದಲ್ಲಿ ಕಲ್ಲುಗಳು ಕಾಣಿಸಿಕೊಳ್ಳುತ್ತವೆ. ಪೊಟ್ಯಾಸಿಯಂಯುಕ್ತ ಆಹಾರವನ್ನು ಸೇವಿಸುವ ಮೂಲಕ ಈ ರೋಗದ ಅಪಾಯವನ್ನು ತಡೆಯಬಹುದು.
ದೇಹದ ನರನಾಡಿಗಳನ್ನು ಬಲವಾಗಿರಿಸುತ್ತದೆ:
ದೇಹದಲ್ಲಿನ ಜೀವಕೋಶಗಳಲ್ಲಿ ಎಲೆಕ್ಟ್ರೋಕೆಮಿಕಲ್ ಅಂಶದ ಸಮತೋಲನವನ್ನು ಕಾಪಾಡಿಕೊಳ್ಳಲು ಪೊಟ್ಯಾಸಿಯಂ ಉತ್ತಮವೆಂದು ಪರಿಗಣಿಸಲಾಗಿದೆ. ಇದು ನರಗಳ ಸಂಕೇತಗಳನ್ನು ರವಾನಿಸಲು ಬೇಕಾದ ಪ್ರಮುಖ ಅಂಶವಾಗಿದೆ. ಇದು ನಿಮ್ಮ ನರಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ನರ ಸಂಬಂಧಿತ ಅಪಾಯಗಳನ್ನು ತಡೆಯುತ್ತದೆ.
ಮೂಡ್ ಸ್ವಿಂಗ್ಗಳನ್ನು ತಡೆಯುತ್ತದೆ:
ಪೊಟ್ಯಾಶಿಯಂ ನಮ್ಮ ದೇಹದಲ್ಲಿನ ಹಾರ್ಮೋನುಗಳಿಗೆ ಉತ್ತಮವೆಂದು ಪರಿಗಣಿಸಲಾಗಿದೆ. ಇದು ಸಿರೊಟೋನಿನ್ ಮತ್ತು ಕಾರ್ಟಿಸೋಲ್ ಸೇರಿದಂತೆ ನಮ್ಮ ದೇಹದಲ್ಲಿ ವಿವಿಧ ರೀತಿಯ ಹಾರ್ಮೋನುಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಮತ್ತು ನಿಮ್ಮ ಒತ್ತಡದ ನರಗಳನ್ನು ಸಡಿಲಗೊಳಿಸಿ, ನಮ್ಮನ್ನು ಶಾಂತವಾಗಿರಿಸುತ್ತದೆ. ಮಾತ್ರವಲ್ಲದೆ ಇದರಿಂದ ಆಗಾಗ್ಗೆ ಉಂಟಾಗುವ ಮೂಡ್ ಸ್ವಿಂಗ್ ಗಳನ್ನು ತಡೆಗಟ್ಟಬಹುದು.
ದೇಹದಲ್ಲಿ ದ್ರವಾಂಶವನ್ನು ಸಮತೋಲನದಲ್ಲಿಡುತ್ತದೆ:
ಪೊಟ್ಯಾಶಿಯಂನ ಪ್ರಮುಖ ಪಾತ್ರವೆಂದರೆ ನಮ್ಮ ಜೀವಕೋಶಗಳಲ್ಲಿ ನೀರಿನಾಂಶದ ಮಟ್ಟವನ್ನು ಕಾಪಾಡಿಕೊಳ್ಳುವುದು. ದೇಹದಿಂದ ಹೆಚ್ಚುವರಿ ಸೋಡಿಯಂ ಮತ್ತು ಟಾಕ್ಸಿನ್ ಗಳನ್ನು ನಿಯಮಿತವಾಗಿ ಹೊರಹಾಕುವ ಮೂಲಕ ಈ ಕಾರ್ಯ ನಡೆಯುತ್ತದೆ.
ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ:
ಪೊಟ್ಯಾಶಿಯಂ ಮೂಳೆ ಖನಿಜ ಸಾಂದ್ರತೆಯನ್ನು ಹೆಚ್ಚಿಸುವುದರೊಂದಿಗೆ ಮೂಳೆ ಮತ್ತು ಸ್ನಾಯುಗಳ ಆರೋಗ್ಯವನ್ನು ಸುಧಾರಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: