
ವಯಸ್ಸು ಹೆಚ್ಚಾದಂತೆ ನಾನಾ ರೀತಿಯ ಕಾಯಿಲೆಗಳು ಬರುವುದು ಸಾಮಾನ್ಯ. ಅದರಲ್ಲಿಯೂ ಮಹಿಳೆಯರಲ್ಲಿ ಮುಟ್ಟು ಅಥವಾ ಋತುಚಕ್ರದ (Menstrual cycle) ನಂತರ, ರೋಗಗಳು ಬರುವ ಸಂಭವ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಒಂದು ವಯಸ್ಸಿನ ನಂತರ ಮುಟ್ಟಾಗುವುದಿಲ್ಲ. ಇದನ್ನು ಋತುಬಂಧ (Menopause) ಅಥವಾ ಮೆನೋಪಾಸ್ ಎನ್ನಲಾಗುತ್ತದೆ. ಇದು ಮಹಿಳೆಯರ ಋತುಚಕ್ರದ ಅಂತ್ಯ ಅಥವಾ ನಿಲ್ಲುವ ಸೂಚನೆಯಾಗಿರುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರ ದೇಹದ ಹಾರ್ಮೋನುಗಳಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಇದು ಸಹಜ ಪ್ರಕ್ರಿಯೆಯಾದರೂ ಕೂಡ ನಾವು ಆರೋಗ್ಯದ ಬಗ್ಗೆ ಅಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ ಇಂತಹ ಸಮಯದಲ್ಲಿಯೇ ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ (Heart disease) ಅಪಾಯವನ್ನು ಎದುರಿಸುತ್ತಾರೆ. ಅಷ್ಟೇ ಅಲ್ಲ. ಋತುಚಕ್ರದ ನಿಂತ ನಂತರ, ಮಹಿಳೆಯರಲ್ಲಿ ಹೃದಯಾಘಾತದ ಪ್ರಕರಣಗಳು ಕಂಡು ಬರುತ್ತಿರುವುದು ಹೆಚ್ಚಾಗಿದೆ. ಹಾಗಾದರೆ 45ರ ನಂತರ ಮಹಿಳೆಯರು ತಮ್ಮ ಆರೋಗ್ಯವನ್ನು ಯಾವ ರೀತಿ ಕಾಪಾಡಬೇಕು? ಆಹಾರಕ್ರಮ ಹೇಗಿರಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿ.
ಸಾಮಾನ್ಯವಾಗಿ 50ರ ನಂತರ ಮಹಿಳೆಯರಲ್ಲಿ ಋತುಬಂಧ ಅಥವಾ ಮೆನೋಪಾಸ್ ಕಂಡುಬರುತ್ತದೆ. ಕೆಲವರಲ್ಲಿ 45ರ ನಂತರ ಕಂಡು ಬರಬಹುದು. ಇದು ಋತುಚಕ್ರದ ಅಂತ್ಯವನ್ನು ಸೂಚಿಸುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಋತುಬಂಧದ ನಂತರ, ಮಹಿಳೆಯರಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ ಮಟ್ಟಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಇದು ದೇಹದಲ್ಲಿ ವಿವಿಧ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಹೃದಯಾಘಾತ ಮತ್ತು ಹೃದಯ ಸ್ತಂಭನದಂತಹ ಪ್ರಕರಣಗಳು ಹೆಚ್ಚಾಗಬಹುದು. ಮುಟ್ಟಿನ ಸಮಯಕ್ಕೆ ಹೋಲಿಸಿದರೆ ಹೃದ್ರೋಗದ ಅಪಾಯ ಈ ಮೆನೋಪಾಸ್ ಸಮಯದಲ್ಲಿ ಹೆಚ್ಚಾಗಿರುತ್ತದೆ. ಇದು ಸಂಶೋಧನೆಗಳಿಂದಲೂ ದೃಢಪಟ್ಟಿದೆ. ಏಕೆಂದರೆ ಋತುಬಂಧದ ಸಮಯದಲ್ಲಿ ಈಸ್ಟ್ರೊಜೆನ್ ಮಟ್ಟ ಕಡಿಮೆಯಾಗುತ್ತೆ ಇದು ಹೃದಯ ರಕ್ತನಾಳದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ, ಅನಾರೋಗ್ಯಕರ ಕೊಬ್ಬಿನ ಶೇಖರಣೆ ಹೆಚ್ಚಾಗುತ್ತದೆ. ಈ ಎಲ್ಲಾ ಅಂಶಗಳು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ: ಹೆರಿಗೆ ನಂತರ ಮುಟ್ಟು ಯಾವಾಗ ಬರಬೇಕು ಎಂಬುದು ತಿಳಿದಿದೆಯೇ?
ಈ ಸಮಯದಲ್ಲಿ ಆರೋಗ್ಯವಾಗಿರಲು ಒಳ್ಳೆ ನಿದ್ರೆ ಮಾಡಬೇಕು. ಒತ್ತಡ, ಆತಂಕವನ್ನು ನಿವಾರಿಸಿಕೊಳ್ಳಲು ಧ್ಯಾನ, ಯೋಗ, ಪ್ರಾಣಾಯಾಮಗಳನ್ನು ಮಾಡಬೇಕು. ಇದರಿಂದ ಮನಸ್ಸು ಶಾಂತವಾಗಿರುತ್ತದೆ. ಅದರ ಜೊತೆಗೆ ನಿಮ್ಮಿಷ್ಟದ ಹವ್ಯಾಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಮಾನಸಿಕವಾಗಿ ಸದೃಢವಾಗಿರುವುದರತ್ತ ಗಮನಹರಿಸಿ. ಸಾಧ್ಯವಾದರೆ ವ್ಯಾಯಾಮ, ವಾಕಿಂಗ್, ನೃತ್ಯ ಹೀಗೆ ದೈಹಿಕವಾಗಿ ಸಕ್ರಿಯವಾಗಿರಿ. ವಯಸ್ಸಾದಂತೆ ಕಡಿಮೆಯಾಗುವ ಸ್ನಾಯುವಿನ ಬಲ ಮತ್ತು ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಇವೆಲ್ಲಾ ಅಗತ್ಯವಾಗಿರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Sat, 21 June 25