
ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲಿನ ಕೆಲಸ. ಅದರಲ್ಲಿಯೂ ಚರ್ಮ ಸಂಬಂಧಿ ಸಮಸ್ಯೆ (Skin Disease) ಇರುವವರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಶೀತ ಮತ್ತು ಕಡಿಮೆ ಆರ್ದ್ರತೆಯಿಂದ, ಚರ್ಮವು ಬಿಗಿಯಾಗುವುದಲ್ಲದೆ ಸೂಕ್ಷ್ಮವಾಗುತ್ತದೆ. ಹಾಗಾಗಿ ಈ ಋತುವಿನಲ್ಲಿ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆ ಇರುವವರು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಈ ಸಮಯದಲ್ಲಿ ಸ್ನಾನದ ಅಭ್ಯಾಸಗಳು ಸಹ ಪ್ರಮುಖ ಪಾತ್ರವಹಿಸುತ್ತವೆ, ಏಕೆಂದರೆ ಕೆಲವೊಮ್ಮೆ ಸರಿಯಾಗಿ ಸ್ನಾನ ಮಾಡದಿರುವುದರಿಂದ ಚರ್ಮದ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಹೌದು, ಹೆಚ್ಚಿನವರು ಚಳಿಗಾಲದಲ್ಲಿ ನೀರಿನ ತಾಪಮಾನದತ್ತ ಗಮನ ಹರಿಸುವುದಿಲ್ಲ ಅಥವಾ ಸ್ನಾನದ ನಂತರ ಚರ್ಮದ ಆರೈಕೆ ಮಾಡದೆಯೇ ನಿರ್ಲಕ್ಷಿಸುತ್ತಾರೆ. ಇದು ತುರಿಕೆ, ಸುಡುವಿಕೆ ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ. ಆದ್ದರಿಂದ, ಚರ್ಮರೋಗಗಳಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ತಮ್ಮ ದಿನಚರಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಆ ಮೂಲಕ ಸಮಸ್ಯೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಹಾಗಾದರೆ ಚರ್ಮರೋಗಿಗಳು ಸ್ನಾನ ಮಾಡುವಾಗ ಯಾವ ರೀತಿ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಮ್ಯಾಕ್ಸ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ಸೌಮ್ಯ ಸಚ್‌ದೇವ ಹೇಳುವ ಪ್ರಕಾರ, ಚಳಿಗಾಲದಲ್ಲಿ ಚರ್ಮರೋಗಗಳಿಂದ ಬಳಲುತ್ತಿರುವವವರು ಕೆಲವು ಸರಳ ಸಲಹೆಗಳನ್ನು ಅನುಸರಿಸಬೇಕು. ಈ ಋತುವಿನಲ್ಲಿ ತುಂಬಾ ಬಿಸಿ ಅಥವಾ ತಣ್ಣನೆಯ ನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಉಗುರು ಬೆಚ್ಚಗಿನ ನೀರು ಚರ್ಮ ರೋಗಗಳನ್ನು ಶಮನಗೊಳಿಸುತ್ತದೆ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಸ್ನಾನದ ಸಮಯವನ್ನು ಸೀಮಿತಗೊಳಿಸಿ ಏಕೆಂದರೆ ನೀರಿನಲ್ಲಿ ಹೆಚ್ಚು ಹೊತ್ತು ಇರುವುದು ಚರ್ಮವನ್ನು ಒಣಗಿಸಬಹುದು.
ಚರ್ಮದ ಮೇಲೆ ಹೆಚ್ಚು ಪರಿಣಾಮ ಬೀರದಂತೆ ಹಗುರವಾದ ಮತ್ತು ಸೌಮ್ಯವಾದ ಕ್ಲೆನ್ಸರ್ ಬಳಸಿ. ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದ ತೇವಾಂಶವನ್ನು ಹಾಗೆಯೇ ಇಡುತ್ತದೆ ಮತ್ತು ಕಿರಿಕಿರಿ ಅಥವಾ ಬಿಗಿತದ ಭಾವನೆಯನ್ನು ಕಡಿಮೆ ಮಾಡುತ್ತದೆ ಮತ್ತು ದೈನಂದಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಸರಿಯಾದ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಚಳಿಗಾಲದಲ್ಲಿಯೂ ಸಹ ಚರ್ಮವನ್ನು ರಕ್ಷಿಸಬಹುದು.
ಇದನ್ನೂ ಓದಿ: ನಿರಂತರ ಆಯಾಸವಾಗಿ ಕೈ, ಕಾಲುಗಳಲ್ಲಿ ಜುಮ್ಮೆನಿಸುತ್ತಾ? ಹಾಗಿದ್ರೆ ನಿಮ್ಮ ದೇಹದಲ್ಲಿ ಈ ವಿಟಮಿನ್ ಕೊರತೆ ಇದೆ ಎಂದರ್ಥ!
ಚಳಿಗಾಲದಲ್ಲಿ ಚರ್ಮವನ್ನು ಆರೋಗ್ಯವಾಗಿಡಲು, ಸ್ನಾನ ಮಾಡುವುದರ ಜೊತೆಗೆ ಕೆಲವು ವಿಷಯಗಳತ್ತ ಗಮನ ಹರಿಸುವುದು ಮುಖ್ಯ. ಸ್ನಾನದ ನಂತರ ತಕ್ಷಣ ಮಾಯಿಶ್ಚರೈಸರ್ ಹಚ್ಚುವುದು ಪ್ರಯೋಜನಕಾರಿಯಾಗಿದೆ ಇದರಿಂದ ಚರ್ಮದ ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಹುದು. ಅಷ್ಟೇ ಅಲ್ಲ, ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಕೂಡ ಚರ್ಮದ ಆರೋಗ್ಯಕ್ಕೆ ಮುಖ್ಯವೆಂದು ಪರಿಗಣಿಸಲಾಗಿದೆ. ಶೀತ ಗಾಳಿಯಿಂದ ರಕ್ಷಿಸಲು, ಹೊರಗೆ ಹೋಗುವಾಗ ಚರ್ಮವನ್ನು ಆದಷ್ಟು ಮುಚ್ಚಿಕೊಳ್ಳಿ. ಹೆಚ್ಚು ಸೋಪು ಅಥವಾ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದನ್ನು ಕಡಿಮೆಮಾಡಿ. ಸಮತೋಲಿತ ಆಹಾರ ಸೇವನೆ ಮತ್ತು ಸಾಕಷ್ಟು ಪ್ರಮಾಣದಲ್ಲಿ ವಿಶ್ರಾಂತಿ ಕೂಡ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಚರ್ಮದ ಸಮಸ್ಯೆಗಳು ಉಲ್ಬಣಗೊಂಡರೆ, ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ