AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Biriyani Day 2024: ಮಂಗಳೂರಿನ ಚಿಕನ್ ಬ್ಯಾರಿ ಬಿರಿಯಾನಿ ಆರೋಗ್ಯ ಹೆಚ್ಚಿಸುತ್ತೆ! ಇದನ್ನು ಮಾಡುವುದು ಹೇಗೆ ?

ಬ್ಯಾರಿ ಬಿರಿಯಾನಿ ಬ್ಯಾರಿ ಮುಸ್ಲಿಂ ಸಮುದಾಯದ ವಿಶೇಷತೆಯಾಗಿದೆ. ಅದು ಅಲ್ಲದೆ ಬೇರೆ ಕಡೆಗಳಲ್ಲಿ ತಯಾರಿಸುವ ಇತರ ಬಿರಿಯಾನಿಗಳಿಗಿಂತ ರುಚಿಯಲ್ಲಿ ತುಂಬಾ ಭಿನ್ನವಾಗಿರುತ್ತದೆ. ಈ ಬಿರಿಯಾನಿಯನ್ನು ಬೇಯಿಸುವಾಗ ಸಾಕಷ್ಟು ಹಸಿ ಮೆಣಸಿನಕಾಯಿ ಮತ್ತು ತೆಂಗಿನಕಾಯಿಯನ್ನು ಬಳಸಿ ತಯಾರಿಸಲಾಗುತ್ತದೆ. ಉಳಿದಂತೆ ಇದು ದಮ್ ಬಿರಿಯಾನಿ ಮಾಡುವಂತೆಯೇ ಮಾಡಬಹುದು. ಆದರೆ ಅಕ್ಕಿ ಮತ್ತು ಚಿಕನ್ ಅನ್ನು ಪ್ರತ್ಯೇಕವಾಗಿ ಬೇಯಿಸಿಕೊಳ್ಳಲಾಗುತ್ತಿತ್ತು. ಕಾಲಾನಂತರದಲ್ಲಿ, ಈ ಪಾಕವಿಧಾನಗಳು ಬದಲಾಗಿದ್ದು ರುಚಿ ಮತ್ತು ಆದ್ಯತೆಗೆ ಅನುಗುಣವಾಗಿ ವಿವಿಧ ರೀತಿಯ ಬದಲಾವಣೆಗಳನ್ನು ಮಾಡಲಾಗಿದೆ.

World Biriyani Day 2024: ಮಂಗಳೂರಿನ ಚಿಕನ್ ಬ್ಯಾರಿ ಬಿರಿಯಾನಿ ಆರೋಗ್ಯ ಹೆಚ್ಚಿಸುತ್ತೆ! ಇದನ್ನು ಮಾಡುವುದು ಹೇಗೆ ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 05, 2024 | 11:01 AM

Share

ಬ್ಯಾರಿ ಬಿರಿಯಾನಿ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ (ಮುಸ್ಲಿಂ) ಸಮುದಾಯದವರು ಮಾಡುವ ವಿಶೇಷ ಬಿರಿಯಾನಿಯಾಗಿದೆ. ‘ಬ್ಯಾರಿ’ ಪದದ ಅರ್ಥ ವ್ಯಾಪಾರ ಅಥವಾ ವ್ಯವಹಾರ ಎಂದು ಹೇಳಲಾಗುತ್ತದೆ. ಈ ಬಿರಿಯಾನಿ ಬ್ಯಾರಿ ಸಮುದಾಯದ ವಿಶೇಷತೆಯಾಗಿದೆ. ಅದು ಅಲ್ಲದೆ ಬೇರೆ ಕಡೆಗಳಲ್ಲಿ ತಯಾರಿಸುವ ಇತರ ಬಿರಿಯಾನಿಗಳಿಗಿಂತ ರುಚಿಯಲ್ಲಿ ತುಂಬಾ ಭಿನ್ನವಾಗಿರುತ್ತದೆ. ಈ ಬಿರಿಯಾನಿಯನ್ನು ಬೇಯಿಸುವಾಗ ಸಾಕಷ್ಟು ಹಸಿ ಮೆಣಸಿನಕಾಯಿ ಮತ್ತು ತೆಂಗಿನಕಾಯಿಯನ್ನು ಬಳಸಿ ತಯಾರಿಸಲಾಗುತ್ತದೆ. ಉಳಿದಂತೆ ಇದು ದಮ್ ಬಿರಿಯಾನಿ ಮಾಡುವಂತೆಯೇ ಮಾಡಬಹುದು. ಆದರೆ ಅಕ್ಕಿ ಮತ್ತು ಚಿಕನ್ ಅನ್ನು ಪ್ರತ್ಯೇಕವಾಗಿ ಬೇಯಿಸಿಕೊಳ್ಳಲಾಗುತ್ತಿತ್ತು. ಕಾಲಾನಂತರದಲ್ಲಿ, ಈ ಪಾಕವಿಧಾನಗಳು ಬದಲಾಗಿದ್ದು ರುಚಿ ಮತ್ತು ಆದ್ಯತೆಗೆ ಅನುಗುಣವಾಗಿ ವಿವಿಧ ರೀತಿಯ ಬದಲಾವಣೆಗಳನ್ನು ಮಾಡಲಾಗಿದೆ.

ಬೇಕಾಗುವ ಸಾಮಾಗ್ರಿಗಳು: (4 ಜನರಿಗೆ)

ಮ್ಯಾರಿನೇಟ್ ಮಾಡಲು

1 ಕೆಜಿ ಚಿಕನ್

1/4 ಕಪ್ ದಪ್ಪ ಮೊಸರು

1/2 ಕಪ್ ತೆಂಗಿನಕಾಯಿ ಪೇಸ್ಟ್, ತಾಜಾ ಅಥವಾ ಒಣಗಿದ ತೆಂಗಿನಕಾಯಿಯನ್ನು ನಯವಾಗಿ ರುಬ್ಬಿಕೊಳ್ಳಿ

1/2 ಕಪ್ ಕೊತ್ತಂಬರಿ ಸೊಪ್ಪು

1/4 ಕಪ್ ಪುದೀನಾ ಎಲೆಗಳು

8-10 ಹಸಿರು ಮೆಣಸಿನಕಾಯಿಗಳು, ಅಥವಾ ನಿಮ್ಮ ರುಚಿಗೆ ಅನುಗುಣವಾಗಿ

1 ಟೀ ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್

1 ಟೀ ಸ್ಪೂನ್ ಜೀರಿಗೆ

1 ಟೀ ಸ್ಪೂನ್ ಸೋಂಪು

1 ಟೀ ಸ್ಪೂನ್ ಕೊತ್ತಂಬರಿ ಪುಡಿ

1 ಟೀ ಸ್ಪೂನ್ ಅರಿಶಿನ ಪುಡಿ

2 ಪುಲಾವ್ ಎಲೆಗಳು

1 ಇಂಚಿನ ದಾಲ್ಚಿನ್ನಿ

1 ಸ್ಟಾರ್ ಸೋಂಪು

3 ಏಲಕ್ಕಿ

2 ಲವಂಗ

ಅಗತ್ಯಕ್ಕೆ ತಕ್ಕಷ್ಟು ಉಪ್ಪು

ಬಿರಿಯಾನಿಗೆ ಅನ್ನ ಮಾಡುವ ವಿಧಾನ

2 ಕಪ್ ಬಾಸ್ಮತಿ ಅಕ್ಕಿ, 20 ನಿಮಿಷಗಳ ಕಾಲ ನೆನೆಸಿಡಿ

1/4 ಕಪ್ ತೆಂಗಿನ ಹಾಲು (ಬೇಕಾದಲ್ಲಿ ಮಾತ್ರ)

1 ಟೀ ಸ್ಪೂನ್ ಸೋಂಪು ಕಾಳುಗಳು

2 ಲವಂಗ

1 ಸ್ಟಾರ್ ಸೋಂಪು

1 ಏಲಕ್ಕಿ

1 ಇಂಚಿನ ದಾಲ್ಚಿನ್ನಿ

ಉಪ್ಪು ಅಗತ್ಯಕ್ಕೆ ತಕ್ಕಷ್ಟು

1 ಟೀ ಸ್ಪೂನ್ ತುಪ್ಪ

ಬಿರಿಯಾನಿಯ ಕೊನೆಯಲ್ಲಿ ಬೇಕಾಗುವ ವಸ್ತುಗಳು

1/4 ಕಪ್ ತುಪ್ಪ

1 ದೊಡ್ಡ ಈರುಳ್ಳಿಯನ್ನು ಉದ್ದವಾಗಿ ತೆಳುವಾಗಿ ಕತ್ತರಿಸಿ

ಅಗತ್ಯಕ್ಕೆ ತಕ್ಕಷ್ಟು ಉಪ್ಪು

ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪು

ಅಲಂಕಾರಕ್ಕಾಗಿ ಪುದೀನಾ ಎಲೆಗಳು

ಇದನ್ನೂ ಓದಿ: ನಾಟಿ ಸ್ಟೈಲ್‌ ದೊನ್ನೆ ಬಿರಿಯಾನಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

ಮಾಡುವ ವಿಧಾನ:

ಹಂತ 1- ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳು ಮತ್ತು ಕತ್ತರಿಸಿದ ಹಸಿ ಮೆಣಸಿನಕಾಯಿಗಳನ್ನು ಬ್ಲೆಂಡರ್ ಗೆ ಹಾಕಿ ಸ್ವಲ್ಪ ನೀರನ್ನು ಸೇರಿಸಿ. ನಯವಾಗಿ ರುಬ್ಬಿಕೊಂಡು ಪಕ್ಕಕ್ಕೆ ಇರಿಸಿಕೊಳ್ಳಿ.

ಹಂತ 2- ಒಂದು ಮಿಕ್ಸಿಂಗ್ ಬೌಲ್ ನಲ್ಲಿ, ಮ್ಯಾರಿನೇಟ್ ಮಾಡಲು ಬಳಸುವ (ಮೇಲೆ ತಿಳಿಸಿದಂತೆ) ಪದಾರ್ಥಗಳನ್ನು ತೆಗೆದುಕೊಳ್ಳಿ ಅದಕ್ಕೆ ರುಬ್ಬಿಕೊಂಡ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 4 ರಿಂದ 6 ಗಂಟೆಗಳ ಕಾಲ ಫ್ರಿಜ್ ನಲ್ಲಿಡಿ.

ಹಂತ 3- ಬಾಸ್ಮತಿ ಅಕ್ಕಿಯನ್ನು ಬೇಯಿಸುವ ಮೊದಲು ಕನಿಷ್ಠ 20 ನಿಮಿಷಗಳ ಕಾಲ ತೊಳೆದು ನೆನೆಸಿಡಿ. ಬಳಿಕ ಇದರ ಜೊತೆಗೆ ಏಲಕ್ಕಿ, ಸ್ಟಾರ್ ಸೋಂಪು ಮತ್ತು ಲವಂಗವನ್ನು ತೆಗೆದುಕೊಳ್ಳಿ. ಇದನ್ನು ರೈಸ್ ಕುಕ್ಕರ್ ನಲ್ಲಿ ಹಾಕಿ 4 ಕಪ್ ನೀರು, ತುಪ್ಪ, ತೆಂಗಿನ ಹಾಲು ಮತ್ತು ಅಗತ್ಯವಿರುವಷ್ಟು ಉಪ್ಪು ಸೇರಿಸಿ, ಸ್ವಲ್ಪ ಕುದಿಸಿಕೊಳ್ಳಿ ಬಳಿಕ ಇದಕ್ಕೆ ನೆನೆಸಿದ ಅಕ್ಕಿಯನ್ನು ಸೇರಿಸಿ. ಅಕ್ಕಿ 80- 90% ಬೆಂದ ಬಳಿಕ ಉಳಿದಿರುವ ನೀರನ್ನು ಬಾಗಿಸಿಕೊಂಡು ನಿಧಾನ ಉರಿಯಲ್ಲಿ ಬೇಯಿಸಿಕೊಳ್ಳಿ.

ಹಂತ 4- ಭಾರವಾದ ತಳದ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ. ಚೆನ್ನಾಗಿ ಹುರಿದುಕೊಳ್ಳಿ. ಬಿರಿಯಾನಿ ಅಲಂಕರಿಸಲು ಬೇಕಾಗುವ ಸ್ವಲ್ಪ ಈರುಳ್ಳಿಯನ್ನು ತೆಗೆದಿಟ್ಟುಕೊಳ್ಳಿ.

ಹಂತ 5- ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಮಡಕೆಗೆ ಸೇರಿಸಿ. ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಚಿಕನ್ ನೀರನ್ನು ಬಿಡುಗಡೆ ಮಾಡುವುದರಿಂದ ಹೆಚ್ಚು ನೀರನ್ನು ಸೇರಿಸಬೇಡಿ.

ಹಂತ 6- ಚಿಕನ್ ಅನ್ನು ಚೆನ್ನಾಗಿ ಬೇಯಿಸಿ, ಅಗತ್ಯಕ್ಕೆ ತಕ್ಕಂತೆ ಉಪ್ಪನ್ನು ಸೇರಿಸಿ.

ಹಂತ 7- ಬಿರಿಯಾನಿಯನ್ನು ದಮ್ ಮಾಡಲು ಮಣ್ಣಿನ ಮಡಕೆಯನ್ನು ಬಳಸಬಹುದು. ಇದನ್ನು ದೊಡ್ಡ ಜ್ವಾಲೆಯಲ್ಲಿ ಬಿಸಿ ಮಾಡಿಕೊಂಡು ಬಳಿಕ ಉರಿ ಕಡಿಮೆ ಮಾಡಿಕೊಂಡು ಮಣ್ಣಿನ ಮಡಕೆಗೆ ಒಂದು ಟೀ ಸ್ಪೂನ್ ತುಪ್ಪ ಸೇರಿಸಿ ಗ್ರೇವಿ ಮತ್ತು ಚಿಕನ್ ತುಂಡುಗಳನ್ನು ಹಾಕಿ. ಒಂದು ಪದರ ಅಕ್ಕಿಯನ್ನು ಸೇರಿಸಿ, ಸ್ವಲ್ಪ ಹುರಿದ ಈರುಳ್ಳಿ ಹಾಕಿ, ಬಳಿಕ ಕೆಲವು ಚಿಕನ್ ತುಂಡುಗಳನ್ನು ಸೇರಿಸಿ, ಬಳಿಕ ಸ್ವಲ್ಪ ಕೊತ್ತಂಬರಿ ಮತ್ತು ಪುದೀನಾ ಎಲೆಗಳನ್ನು ಉದುರಿಸಿ.

ಹಂತ 8- ಎರಡನೇ ಪದರದಲ್ಲಿ, ಹುರಿದಿಟ್ಟುಕೊಂಡ ಈರುಳ್ಳಿಯನ್ನು ಸೇರಿಸಿ, ಬಳಿಕ ಕೊತ್ತಂಬರಿ ಪುದೀನಾ ಎಲೆಗಳಿಂದ ಅಲಂಕರಿಸಿ. ಬಳಿಕ ಮಧ್ಯಮ ಅಥವಾ ಕಡಿಮೆ ಉರಿಯಲ್ಲಿ 20 ನಿಮಿಷಗಳ ಕಾಲ ಬಿರಿಯಾನಿಯನ್ನು ದಮ್ ಮಾಡಿ. ಉರಿಯನ್ನು ಆಫ್ ಮಾಡಿ 10 ನಿಮಿಷಗಳ ಕಾಲ ಬಿಡಿ ಬಳಿಕ ಮಡಕೆಯ ಮುಚ್ಚಳ ತೆರೆಯಿರಿ, ಬಿಸಿ ಬಿಸಿ ಇರುವಾಗ ಸಲಾಡ್ ಜೊತೆಗೆ ಬಡಿಸಿ.

ಆರೋಗ್ಯ ಪ್ರಯೋಜನಗಳೇನು?

ಕೋಳಿ ಮಾಂಸದಲ್ಲಿ ನಿಯಾಸಿನ್ ಯಾನೆ ವಿಟಮಿನ್ ಬಿ3 ಇದ್ದು, ಇದೊಂದು ನಿರ್ವಿಷಗೊಳಿಸುವ ಅಂಶವಾಗಿದೆ. ಶಕ್ತಿ ನೀಡುವ ಇದು ದೇಹವನ್ನು ಕಾಡುವಂತಹ ಹಲವಾರು ರೀತಿಯ ಗಂಭೀರ ಸಮಸ್ಯೆಗಳಾಗಿರುವಂತಹ ಕೊಲೆಸ್ಟ್ರಾಲ್, ಕ್ಯಾನ್ಸರ್ ಮತ್ತು ನರವ್ಯವಸ್ಥೆ ಸಮಸ್ಯೆಯನ್ನು ಸರಿಪಡಿಸುವುದು. ನಿದ್ರಾಹೀನತೆ, ಅಲ್ಝೈಮರ್, ನೆನಪಿನ ಶಕ್ತಿ ಕಡಿಮೆ ಆಗುವ ಸಮಸ್ಯೆಯನ್ನು ನಿವಾರಿಸುತ್ತದೆ. ಅದು ಅಲ್ಲದೆ ಬಿರಿಯಾನಿಗೆ ಹಾಕಿರುವ ಮಸಾಲೆಯು ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ