
ಯಕೃತ್ತು (Liver) ನಮ್ಮ ದೇಹದಲ್ಲಿನ ಒಂದು ಪ್ರಮುಖ ಅಂಗವಾಗಿದ್ದು, ಇದನ್ನು ದೇಹದ ಶಕ್ತಿಕೇಂದ್ರ ಎಂದೂ ಕರೆಯಲಾಗುತ್ತದೆ. ಇದು ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ತೆಗೆದು ಹಾಕುವುದು, ರಕ್ತವನ್ನು ಶುದ್ಧೀಕರಿಸುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಸೇರಿದಂತೆ ಅನೇಕ ಅಗತ್ಯ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಇದು ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಾಗಿ ಲಿವರ್ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಆದರೆ ಇಂದಿನ ಕಳಪೆ ಜೀವನಶೈಲಿ, ಆನಾರೋಗ್ಯಕ ಆಹಾರ ಪದ್ಧತಿ ಯಕೃತ್ತಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿವೆ. ಹಾಗಾಗಿ ಲಿವರ್ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್ 19 ವಿಶ್ವ ಯಕೃತ್ತು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
2010 ರಲ್ಲಿ, ಯುರೋಪಿಯನ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ದಿ ಲಿವರ್ (EASL) 1966 ರಲ್ಲಿ ಪ್ರಾರಂಭವಾದ EASL ನ ಸ್ಥಾಪನಾ ವಾರ್ಷಿಕೋತ್ಸವದ ಗೌರವಾರ್ಥವಾಗಿ ಮೊದಲ ಬಾರಿಗೆ ವಿಶ್ವ ಲಿವರ್ ದಿನವನ್ನು ಆಚರಿಸಿತು. ಅಂದಿನಿಂದ ಯಕೃತ್ತಿನ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಲಿವರ್ ದಿನವನ್ನಾಗಿ ಆಚರಿಸಲಾಗುತ್ತದೆ.
ಇದನ್ನೂ ಓದಿ: ಲಿವರ್ ಡಿಟಾಕ್ಸ್ ಡ್ರಿಂಕ್ಸ್: ನಿಜವಾಗಿಯೂ ಪ್ರಯೋಜನಕಾರಿಯೇ ಅಥವಾ ಕೇವಲ ಟ್ರೆಂಡಿ ಪಾನೀಯವೇ?
ಹಸಿರು ಎಲೆ ತರಕಾರಿಗಳು: ಪಾಲಕ್ ಮತ್ತು ಎಲೆಕೋಸು ಸೇರಿದಂತೆ ಹೆಚ್ಚಿನ ಹಸಿರು ತರಕಾರಿಗಳು ಯಕೃತ್ತಿಗೆ ಬಹಳ ಪ್ರಯೋಜನಕಾರಿ. ಅವು ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳ ಉತ್ತಮ ಮೂಲವಾಗಿದ್ದು, ಇವು ಯಕೃತ್ತಿನಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ಯಕೃತ್ತಿನ ಕಿಣ್ವಗಳನ್ನು ಸಕ್ರಿಯಗೊಳಿಸುತ್ತವೆ, ಇದು ದೇಹದ ನಿರ್ವಿಶೀಕರಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಹಾನಿಕಾರಕ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಯಕೃತ್ತನ್ನು ಸೋಂಕುಗಳಿಂದ ರಕ್ಷಿಸುತ್ತದೆ.
ನಿಂಬೆಹಣ್ಣು: ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಮ್ಲಾ, ಕಿತ್ತಳೆ ಮತ್ತು ನಿಂಬೆಹಣ್ಣಿನಂತಹ ಸಿಟ್ರಸ್ ಹಣ್ಣುಗಳು ಯಕೃತ್ತಿಗೆ ಅತ್ಯುತ್ತಮವಾಗಿವೆ. ಇವು ಯಕೃತ್ತನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಯಕೃತ್ತಿನಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅರಿಶಿನ: ಅರಿಶಿನದಲ್ಲಿರುವ ಅಂಶಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಯಕೃತ್ತಿನ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದು ಯಕೃತ್ತನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.ಅರಿಶಿನವು ದೀರ್ಘಕಾಲದವರೆಗೆ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬೀಟ್ರೂಟ್ ರಸ: ಬೀಟ್ರೂಟ್ ರಸವು ನೈಟ್ರೇಟ್‌ಗಳು ಮತ್ತು ಬೀಟಾಲೈನ್‌ಗಳು ಎಂದು ಕರೆಯಲ್ಪಡುವ ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ. ಬೀಟ್ರೂಟ್ ರಸವು ಯಕೃತ್ತನ್ನು ಆಕ್ಸಿಡೇಟಿವ್ ಹಾನಿ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟೊಮೆಟೊ: ಟೊಮೆಟೊಗಳು ಜೀರ್ಣಕಾರಿ ಕಿಣ್ವಗಳು ಮತ್ತು ಯಕೃತ್ತಿನ ಕಿಣ್ವಗಳ ಚಟುವಟಿಕೆಯನ್ನು ಉತ್ತೇಜಿಸಿ ಉತ್ತಮ ಯಕೃತ್ತಿನ ಕಾರ್ಯವನ್ನು ಕಾಪಾಡಿಕೊಳ್ಳಲು ಮತ್ತು ಯಕೃತ್ತನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.
ಗ್ರೀನ್ ಟೀ ಚಹಾ: ಗ್ರೀನ್ ಟೀಯಲ್ಲಿರುವ ಕ್ಯಾಟೆಚಿನ್‌ಗಳು ಯಕೃತ್ತನ್ನು ನಿರ್ವಿಷಗೊಳಿಸಲು ಮತ್ತು ಫ್ಯಾಟಿ ಲಿವರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ಯಕೃತ್ತಿನ ಮೇಲೆ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ದಾಳಿಂಬೆ: ದಾಳಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಯಕೃತ್ತಿನ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ ಮತ್ತು ರಕ್ತವನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ.
ಕರಿದ ಆಹಾರಗಳು, ಜಂಕ್ ಫುಡ್ ಮತ್ತು ಆಲ್ಕೋಹಾಲ್ ನಿಂದ ದೂರವಿರುವುದು ಮುಖ್ಯ. ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಕೂಡ ಯಕೃತ್ತಿಗೆ ಅತ್ಯಗತ್ಯ. ಹೀಗೆ ಆರೋಗ್ಯಕರ ಆಹಾರ ಪದ್ಧತಿ, ಉತ್ತಮ ಜೀವನಶೈಲಿಯನ್ನು ಅನುಸರಿಸುವ ಮೂಲಕ ಯಕೃತ್ತನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿಡಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ