Aries Yearly Horoscope 2024: ಮೇಷ ರಾಶಿ ವರ್ಷ ಭವಿಷ್ಯ; ಧನಸ್ಥಿತಿ, ವೃತ್ತಿ, ಆರೋಗ್ಯ ಸ್ಥಿತಿ ಕುರಿತು ವಾರ್ಷಿಕ ಭವಿಷ್ಯ ಇಲ್ಲಿದೆ
ಮೇಷ ರಾಶಿ ವರ್ಷ ಭವಿಷ್ಯ 2024: ರಾಶಿ ಚಕ್ರದಲ್ಲಿ ಮೇಷವು ಮೊದಲ ರಾಶಿಯಾಗಿದ್ದು, ಕುಜ ಅಂದರೆ ಮಂಗಳ ಇದರ ಅಧಿಪತಿ. 2024ರ ವರ್ಷ ಮಿಶ್ರಫಲವು ಇರಲಿದೆ. ಸುಬ್ರಹ್ಮಣ್ಯನ ಆರಾಧನೆಯಿಂದ ಇಷ್ಟಾರ್ಥವು ಸಿದ್ಧಿಯಾಗುವುದು.
ಮೇಷವು ಮೊದಲ ರಾಶಿಯಾಗಿದ್ದು ಕುಜನು ಇದಕ್ಕೆ ಅಧಿಪತಿಯಾಗಿ ಇರುವನು. ರವಿಯ ಉಚ್ಚಸ್ಥಾನವೂ ಇದಾದ ಕಾರಣ ಆ ರಾಶಿಗೆ ಈ ಎರಡೂ ಗ್ರಹಗಳು ಒಂದಾಗ ಉತ್ತಮ ಫಲವನ್ನು ನೀಡುವರು. ಉಳಿದಂತೆ ಈ ವರ್ಷ ನಿಮಗೆ ಮಿಶ್ರಫಲವು ಇರಲಿದೆ. ಸುಬ್ರಹ್ಮಣ್ಯನ ಆರಾಧನೆಯಿಂದ ಇಷ್ಟಾರ್ಥವು ಸಿದ್ಧಿಯಾಗುವುದು.
2024ರ ಮೇಷರಾಶಿ ಭವಿಷ್ಯ
2024 ಸೋಮವಾರದಿಂದ ಆರಂಭವಾಗಲಿದೆ. ಪರಸ್ಪರ ಮಿತ್ರರಾದ ಕಾರಣ ನಿಮ್ಮ ಮಾನಸಿಕ ಸ್ಥಿತಿಯು ದೃಢವಾಗಿ ಇರಲಿದೆ. ವರ್ಷದ ಮಧ್ಯಾವಧಿಯಲ್ಲಿ ಗುರು ದ್ವಿತೀಯ ಸ್ಥಾನಕ್ಕೆ ಬರಲಿದ್ದು ಶುಭವನ್ನು ಕೊಡುವನು. ಅನಿರೀಕ್ಷಿತ ಸಂಪತ್ತಿನ ಲಾಭವಾಗಲಿದೆ. ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುವಿರಿ. ದ್ವಾದಶದಲ್ಲಿ ರಾಹುವಿರಲಿದ್ದು ನಿಮ್ಮ ಸಂಪತ್ತು ಅನ್ಯ ಕಾರಣಗಳಿಗೆ ಖರ್ಚಾಗುವುದು. ಮೊದಲೇ ಹೂಡಿಕೆಯ ಕಡೆ ಗಮನವಿರಲಿ. ಆಗ ನಿಮ್ಮ ಸಂಪತ್ತನ್ನು ಉಳಿಸಿಕೊಳ್ಳಬಹುದು. ಪದೆ ಪದೆ ಬರುವ ರೋಗಗಳಿಂದ ನಿಮಗೆ ಮುಕ್ತಿ ಸಿಗಲಿದೆ.
ಮೇಷರಾಶಿ ಜನರ ಧನಸ್ಥಿತಿ:
ಆರ್ಥಿಕವಾಗಿ ಶನಿಯು ಏಕಾದಶದಲ್ಲಿ ಇರುವ ಕಾರಣ ಸಂಪತ್ತು ನಿಧಾನವಾಗಿ ಬರಲಿದೆ. ನಿಮ್ಮ ತಾಳ್ಮೆಯ ಪರೀಕ್ಷೆಯೂ ನಡೆಯಲಿದೆ. ಆತುರದಲ್ಲಿ ಏನನ್ನಾದರೂ ಮಾಡಲು ಹೋಗುವುದು ಬೇಡ. ವರ್ಷದ ಆರಂಭದಲ್ಲಿ ವೃತ್ತಿಯಲ್ಲಿ ಸಣ್ಣ ಕಿರಿಕಿರಿಗಳು ಆಗಬಹುದು. ಅನಾರೋಗ್ಯ ಕಾರಣ ಆರ್ಥಿಕ ನಷ್ಟವಾಗುವುದು. ನಿಮ್ಮ ಸ್ಥೈರ್ಯವು ಎಂದಿನಂತೆ ದೃಢವಾಗಿದ್ದರೆ ಎಲ್ಲವೂ ಸಲೀಸಾಗಿ ದಾಟಬಹುದು. ವಿವಾಹ ಮತ್ತು ಪ್ರೇಮ : ಪ್ರೇಮವು ಹಿರಿಯ ಆದೇಶದ ಚೌಕಟ್ಟನ್ನು ಮೀರಿ ಹೋಗದು. ಪ್ರೇಮವು ತಪ್ಪಿದಂತೆ ಕಂಡರೂ ಕಾಲಕ್ರಮೇಣ ಅದು ಸರಿಯಾಗಿ ಸಾಗುವುದು. ಸಾವಧಾನವಾಗಿ ನೀವು ಹಂತ ಹಂತವಾಗಿ ಮುನ್ನಡೆಯುವುದು ಉತ್ತಮ. ವಿವಾಹಕ್ಕೆ ಮಧ್ಯಾವಧಿಯ ಅನಂತರ ಉತ್ತಮವಾಗಿ ಇರುವುದು.
ಮೇಷರಾಶಿ ಜನರ ವೃತ್ತಿ:
ವೃತ್ತಿ ಸ್ಥಾನದ ಅಧಿಪತಿ ಏಕಾದಶಲ್ಲಿ ಇರಲಿದ್ದು ನಿಮಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರುವುದು. ಉನ್ನತ ಸ್ಥಾನವನ್ನು ನೀವು ಪಡೆಯುವ ಅವಕಾಶಗಳು ನಿಮಗೆ ಇರಲಿವೆ. ಆದರೆ ವರ್ಷದ ಮಧ್ಯಾವಧಿಯ ತನಕ ತಾಳ್ಮೆಯಿಂದ ಇರಬೇಕಾಗುವುದು.
ಮೇಷರಾಶಿ ಜನರ ಆರೋಗ್ಯ ಸ್ಥಿತಿ:
ಷಷ್ಠಾಧಿಪತಿಯಾದ ಬುಧನು ವರ್ಷಾರಂಭದಲ್ಲಿ ನವಮಸ್ಥಾನದಲ್ಲಿ ಇರಲಿದ್ದು ವಿದ್ಯೆಗೆ ಸಂಬಂಧಿಸಿದಂತೆ ಗೌರವ, ಆದರಗಳು ಇರಲಿವೆ. ಆರೋಗ್ಯದ ಸ್ಥಿರತೆಯೂ ಇರುವುದು. ಅನಂತರದಲ್ಲಿ ಸ್ವಲ್ಪವೇ ಕ್ಷೀಣಿಸಲಿದ್ದು, ಔಷಧೋಪಚಾರಗಳಿಂದ ಸರಿಯಾಗುವುದು. ಆತಂಕಪಡಬೇಕಾದ ಅವಶ್ಯತೆ ಇರುವುದಿಲ್ಲ.
ಮೇಷರಾಶಿ ಜನರ ವಿದೇಶ ಪ್ರಯಾಣ:
ಈ ವರ್ಷದ ದೂರಪ್ರಯಾಣವನ್ನು ಮಧ್ಯಾವಧಿಯ ಅನಂತರ ಮಾಡಲಿದ್ದೀರಿ. ಕಲಾವಿದರಿಗೆ, ನಟರಿಗೆ ಹೆಚ್ಚಿನ ಪ್ರಯಾಣದ ಅವಕಾಶಗಳು ಪ್ರಾಪ್ತವಾಗುವುದು.
– ಲೋಹಿತ ಹೆಬಾರ್ ಇಡುವಾಣಿ
Published On - 3:28 pm, Mon, 11 December 23