Horoscope 16 Dec: ದಿನಭವಿಷ್ಯ, ನೌಕರರ ತಪ್ಪಿನಿಂದ ನೀವು ಹಣ ಖರ್ಚು ಮಾಡಬೇಕಾದೀತು
ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಲವರು ದಿನದಿಂದ ರಾಶಿಭವಿಷ್ಯವನ್ನು ಓದುತ್ತಾರೆ. ಒಂದಷ್ಟು ಮಂದಿ ಯಾವುದೇ ಕಾರ್ಯವನ್ನು ಪ್ರಾರಂಭಿಸಬೇಕಾದರೆ ಇಂದಿನ ದಿನ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗವನ್ನೂ ನೋಡುತ್ತಾರೆ. ಹಾಗಿದ್ದರೆ, ಇಂದಿನ ಶುಭಾಶುಭಕಾಲ ಹೇಗಿದೆ? 12 ರಾಶಿಗಳ ರಾಶಿಫಲ ಹೇಗಿದೆ ಎಂಬುದು ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (2023 ಡಿಸೆಂಬರ್ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 51 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:40 ರಿಂದ 11:04ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:52 ರಿಂದ 03:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:51 ರಿಂದ 08:15ರ ವರೆಗೆ.
ಮೇಷ ರಾಶಿ: ನಿಮ್ಮವರನ್ನು ಮನವೊಲಿಸುವುದು ನಿಮ್ಮಿಂದ ಕಷ್ಟವಾದೀತು. ಸ್ನೇಹಿತರ ಜೊತಿಗಿನ ಸಂಪರ್ಕವನ್ನು ಕಡಿತ ಮಾಡಿಕೊಳ್ಳುವಿರಿ. ನೌಕರರ ತಪ್ಪಿನಿಂದ ನೀವು ಹಣವನ್ನು ಖರ್ಚು ಮಾಡಬೇಕಾದೀತು. ಕೃಷಿಯಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುವುದು. ಮಕ್ಕಳು ನಿಮ್ಮಿಂದ ಪ್ರೀತಿಯನ್ನು ಬಯಸುವರು. ಒತ್ತಡ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸವು ಬೇಕಾಗುವುದು. ಅಪರಿಚಿತರು ಆಪ್ತರಾಗುವ ಸಾಧ್ಯತೆ ಇದೆ. ದುರಭ್ಯಾಸಕ್ಕೆ ಅವಕಾಶಗಳು ಬರಲಿದ್ದು ಆಲೋಚಿಸಿ ಮುಂದುವರಿಯಿರಿ. ನಿಮ್ಮ ವರ್ತನೆಯನ್ನು ಕಂಡು ಯಾರಾದರೂ ನಕ್ಕಾರು. ನಿಮ್ಮ ವೇಷಭೂಷಣದ ಬಗ್ಗೆ ಟೀಕಿಸುವರು.ಹೂಡಿಕೆಯ ಬಗ್ಗೆ ಸಂಗಾತಿಯ ನಿಲುವಿಗೆ ಬದ್ಧರಾಗಬೇಲಾದೀತು. ಯಾವುದನ್ನೂ ನೀವು ಮನಸ್ಸಿಗೆ ತೆಗೆದುಕೊಳ್ಳದೇ ನಿಶ್ಚಿಂತೆಯಿಂದ ಇರುವಿರಿ. ಆರ್ಥಿಕತೆಯನ್ನು ಬಲಪಡಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ.
ವೃಷಭ ರಾಶಿ: ಅನವಶ್ಯಕ ಚರ್ಚೆಯಿಂಸ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ನಿಂದನೆಗಳು ಸಹಜವೆಂಬಂತೆ ಆಗಲಿದೆ. ನೀವು ಯಶಸ್ಸನ್ನು ಗಳಿಸದಂತೆ ಹಿತಶತ್ರುಗಳು ಅಡ್ಡಗಾಲು ಹಾಕುವಿರಿ. ಆಭರಣದ ವಿಚಾರದಲ್ಲಿ ಜಾಗರೂಕತೆ ಇರಲಿ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ಮನಸ್ಸಿನ ಚಾಂಚಲ್ಯವನ್ನು ನಿಲ್ಲಿಸಲಾಗದು. ಇಂದು ನೀವು ಖುಷಿ ಕೊಡುವ ಕಾರ್ಯವನ್ನು ಮಾತ್ರ ಮಾಡುವಿರಿ. ನಿಮ್ಮ ಸ್ವಭಾವವು ಕೆಲವರಿಗೆ ಇಷ್ಟವಾಗದೇ ಹೋಗುವುದು. ಸ್ವತಂತ್ರವಾಗಿರಲು ನೀವು ಹೆಚ್ಚು ಇಷ್ಟಪಡುವಿರಿ. ಯಾರ ಮಾತನ್ನೂ ಕೇಳದೇ ನಿಮ್ಮದೇ ದಾರಿಯಲ್ಲಿ ಸಾಗುವಿರಿ. ವೃತ್ತಿಯಲ್ಲಿ ಬದಲಾವಣೆ ಬೇಕು ಎನಿಸುವುದು. ಅಜ್ಞಾತವಾಸದಂತೆ ಇರುವ ನಿಮ್ಮ ಜೀವನಕ್ಕೆ ಹೊಸ ತಿರುವು ಸಿಕ್ಕೀತು. ಅಪರಿಚಿತರು ನಿಮಗೆ ಕೆಲವು ತೊಂದರೆಯನ್ನು ಕೊಡಬಹುದು.
ಮಿಥುನ ರಾಶಿ: ಸೋಲಾದ ಸ್ಥಳದಲ್ಲಿಯೇ ಮೇಲೆ ಬರುವ ಛಲವನ್ನು ಇಟ್ಟುಕೊಳ್ಳುವಿರಿ. ಧರ್ಮಾಚರಣೆಯ ಕಡೆ ಒಲವಿದ್ದರೂ ಸಮಯವು ಸರಿಯಾಗಿ ಸಿಗದೇ ಇದ್ದೀತು. ಸಂಗಾತಿಯ ಮೇಲೆ ಅನುಮಾನವನ್ನು ವ್ಯಕ್ತಪಡಿಸುವಿರಿ. ಅಭಿನಯ ಕ್ಷೇತ್ರದಲ್ಲಿ ನಿಮಗೆ ಅವಕಾಶಗಳು ಸಿಗಲಿವೆ. ನ್ಯಾಯಾಲಯದ ವಿಚಾರವನ್ನು ಬೇಗ ಮುಗಿಸಿಕೊಳ್ಳಲು ಪ್ರಯತ್ನಿಸುವಿರಿ. ಭೋಗವಸ್ತುಗಳ ಖರೀದಿಯನ್ನು ಹೆಚ್ಚು ಮಾಡುವಿರಿ. ಕಛೇರಿಯಲ್ಲಿ ಅನಿರೀಕ್ಷಿತ ಒತ್ತಡವು ಬಂದು ಮುತ್ತಿಕೊಂಡು ದಿಕ್ಕು ತೋಚದಂತೆ ಆಗುವುದು. ದಾಂಪತ್ಯ ಕಲಹವು ಸುಖಾಂತವಾಗಲಿದೆ. ಸ್ಥಳದ ವ್ಯತ್ಯಾಸದಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ. ಉದ್ಯೋಗದ ಕಾರಣ ಪ್ರಯಾಣ ಮಾಡುವ ಸನ್ನಿವೇಶವು ಬರಲಿದೆ. ನಿಷ್ಠುರ ಮಾತುಗಳನ್ನು ಆಡುವುದು ಬೇಡ. ಕುಟುಂಬದ ಜೊತೆ ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ವೈಯಕ್ತಿಕ ಕೆಲಸಗಳನ್ನು ಬಿಡುವಿಲ್ಲದ ಸಮಯದಲ್ಲಿಯೂ ಮಾಡುವಿರಿ.
ಕರ್ಕ ರಾಶಿ: ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು ಕೇಳುವ ಸ್ಥಿತಿ ಬರಬಹುದು. ವಿದ್ಯಾಭ್ಯಾಸವನ್ನು ಪೂರ್ಣ ಮಾಡಿದ ಸಂತೋಷವು ಸಿಗುವುದು. ಎಷ್ಟೋ ದಿನಗಳ ಹಿಂದೆಯೇ ಆಲೋಚಿಸಿದ್ದ ಕಾರ್ಯಗಳನ್ನು ನೀವು ಮತ್ತೆ ಆರಂಭಿಸಲು ಮನಸ್ಸು ಮಾಡುವಿರಿ. ನಿಮ್ಮ ಮಾತಿನಿಂದ ಇತರರಿಗೆ ನೋವಾಗುವುದು. ಪ್ರೇಮವು ಅಪಾಯಕ್ಕೆ ಸಿಕ್ಕಿಕೊಳ್ಳಬಹುದು. ವೇತನವನ್ನು ಹೆಚ್ಚಿಸಲು ಅಧಿಕಾರಿಗಳನ್ನು ಕೇಳಿಕೊಳ್ಳುವಿರಿ. ದೂರದ ಬಂಧುಗಳ ಭೇಟಿಯಿಂಸ ನಿಮಗೆ ಸಂತೋಷವಾಗುವುದು. ಸಹೋದ್ಯೋಗಿಗಳ ಜೊತೆ ವಾದವನ್ನು ಮಾಡುವಿರಿ. ವ್ಯವಹಾರದಲ್ಲಿ ಮಾತನಾಡುವಾಗ ನಿಮ್ಮನ್ನು ಅಳೆಯಬಹುದು. ಶತ್ರುಗಳನ್ನು ತಿಳಿದುಕೊಳ್ಳುವ ಅಸಕ್ತಿಯು ಇರಲಿದೆ. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳುವಿರಿ. ಇಂದಿನ ನಿಮ್ಮ ಕಾರ್ಯಕ್ಕೆ ಸಮಯದ ಮಿತಿಯನ್ನು ಅವಶ್ಯಕ.
ಸಿಂಹ ರಾಶಿ: ಇನ್ನೊಬ್ಬರಿಗೆ ನಿಮ್ಮಿಂದಾದ ನೋವನ್ನು ಸರಿ ಮಾಡಿಕೊಳ್ಳುವಿರಿ. ಸಾಂತ್ವನದಿಂದ ಸ್ನೇಹವು ಮೊದಲಿನಂತಾಗುವುದು. ನಿಮ್ಮ ಅತಿಯಾದ ನಂಬುಗೆಯು ಇಂದು ಹುಸಿಯಾಗಬಹುದು. ಸಂತಾನಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ಟೀಕೆಗಳು ನಡೆಯುವುದು. ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಮಾರ್ಗದರ್ಶನವಾಗಲಿದೆ. ನಿಮ್ಮ ಇಷ್ಟದವರನ್ನು ಭೇಟಿಯಾಗಿ ಕೆಲವು ಸಮಯ ಸಂತೋಷದಿಂದ ಕಳೆಯುವಿರಿ. ಯಾರಂದಲೋ ಪ್ರೇರಿತರಾದ ನಿಮಗೆ ಸಾಮಾಜಿಕ ಕಾರ್ಯವು ಹಿಡಿಸುವುದು. ಉದ್ಯಮದ ವಿಷಯದಲ್ಲಿ ಸಲ್ಲದ ಮಾತುಗಳು ಕೇಳಿಬರಬಹುದು. ಸಂಪತ್ತಿನ ಮೇಲೆ ನಿಮಗೆ ಮೋಹವು ಕಡಿಮೆ ಇರುವುದು. ವಂಚಿಸಿದವರಿಗೆ ಪ್ರತಿವಂಚನೆಯನ್ನು ಮಾಡಲು ಸಮಯವನ್ನು ನಿರೀಕ್ಷಿಸುತ್ತಿರುವಿರಿ. ಆಶಿಸ್ತಿನ ಕೆಲಸಕ್ಕೆ ಹಿರಿಯರು ನಿಂದಿಸಬಹುದು. ಅಪರಿಚಿತ ವ್ಯಕ್ತಿಗಳು ಸಾಲಕ್ಕಾಗಿ ದೂರವಾಣಿಯ ಮೂಲಕ ಪದೆ ಪದೆ ಪೀಡಿಸಬಹುದು.
ಕನ್ಯಾ ರಾಶಿ: ಸ್ಥಿರವಾದ ಮನಃಸ್ಥಿತಿಯಿಂದ ಹೊಸದೇನನ್ನಾದರೂ ಆರಂಭಿಸುವಿರಿ. ಜನರೊಂದಿಗೆ ಸೌಹಾರ್ದವಾದ ಮಾತುಕತೆಗಳಿಂದ ಪ್ರೀತಿಯು ಹುಟ್ಟುವುದು. ಕುಟುಂಬದವರ ಮಾತುಗಳು ಕಿರಿಕಿರಿ ಎನಿಸಬಹುದು. ನಿಮ್ಮ ತಾಳ್ಮೆಯು ಇಂದು ಕಡಿಮೆಯಾಗಿ ಏನಾದರೂ ಹೇಳುವಿರಿ. ಹಣದ ಉಳಿತಾಯದಲ್ಲಿ ಜಿಪುಣರಂತೆ ತೋರುವುದು. ನಿಮಗೆ ನಿರೀಕ್ಷಿತ ಉದ್ಯೋಗವು ಸಿಕ್ಕುವ ಸೂಚನೆ ಬರಲಿದೆ. ಸಾಲವು ಮುಗಿಯುತು ಎಂದುಕೊಳ್ಳುತ್ತಿದ್ದಂತೆ ಇನ್ನೊಂದು ಆರಂಭವಾಗಬಹುದು. ಬಂಧುಗಳಿಂದ ನೀವು ನಿರ್ಲಕ್ಷ್ಯಕ್ಕೆ ಒಳಗಾಗುವಿರಿ. ನಿಮಗೆ ಸಿಕ್ಕ ಅಶುಭ ಸೂಚನೆಯಿಂದ ಭಯವಾಗಬಹುದು. ದಾಂಪತ್ಯದಲ್ಲಿ ನೀವು ಸುಖವನ್ನು ಕಾಣುವಿರಿ. ಇಷ್ಟು ದಿನ ನಿರ್ವಹಿಸುತ್ತಿದ್ದ ಜವಾಬ್ದಾರಿಗಳನ್ನು ಇಂದು ನಿರ್ವಹಿಸಲು ಕಷ್ಟವಾದೀತು. ಅದಕ್ಕೆ ಒತ್ತಡವು ಮುಖ್ಯ ಕಾರಣವಾಗಲಿದೆ.
ತುಲಾ ರಾಶಿ: ನಿಮ್ಮವರ ಅಶಿಸ್ತಿನ ಕೆಲಸವನ್ನು ನೀವು ಸರಿ ಮಾಡಬೇಕಾಗುವುದು. ಕಾಮಗಾರಿಗಳ ವಿಚಾರದಲ್ಲಿ ದೂರು ಬರಬಹುದು. ಬಳಕೆಯಾಗದ ಭೂಮಿಯಿಂದ ಮಾರಾಟ ಮಾಡಿ ಆದಾಯವನ್ನು ಪಡೆಯುವಿರಿ. ಹಣಕ್ಕಾಗಿ ಇನ್ನೊಬ್ಬರಿಗೆ ಮಾನಸಿಕ ಒತ್ತಡವನ್ನೂ ಹಿಂಸೆಯನ್ನೂ ಕೊಡುವಿರಿ. ಹೂಡಿಕೆಯ ಕಡೆ ಅಧಿಕ ಆಲೋಚನೆ ಮಾಡುವಿರಿ. ಗೌಪ್ಯವಾಗಿ ನಿಮಗೆ ಹಣವು ಸಿಗಲಿದೆ. ಅದನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಸಮಯವನ್ನು ನೋಡಿ ನಿಮ್ಮ ವಿಚಾರವನ್ನು ಮೇಲಧಿಕಾರಿಗಳಿಗೆ ಹೇಳಿ. ಮನೆಯಲ್ಲಿ ಇದ್ದು ಕೆಲಸ ಮಾಡುವವರಿಗೆ ಬಂಧನದಂತೆ ಅನ್ನಿಸಬಹುದು. ದಾನದಿಂದ ನಿಮಗೆ ಪ್ರಶಂಸೆಯು ಸಿಗುವುದು. ಆಭರಣಗಳನ್ನು ಖರೀದಿಸುವ ಇಚ್ಛೆ ಇದ್ದರೆ ಖರೀದಿಸಬಹುದು. ಸಲ್ಲದ ಮಾತುಗಳನ್ನಾಡಿ ಅನಂತರ ಪಶ್ಚಾತ್ತಾಪಪಡುವಿರಿ. ನಿಮ್ಮ ವಿವಾಹದ ಮಾತುಕತೆಯಿಂದ ನಿಮಗೆ ಖುಷಿಯಾಗುವುದು.
ವೃಶ್ಚಿಕ ರಾಶಿ: ಆದಾಯವು ಕಡಿಮೆ ಇದ್ದರೂ ಖರ್ಚನ್ನು ಮಾಡಲು ಯಾವುದೇ ಹಿಂಜರಿಕೆ ಇರದು. ಹಣವು ಹೆಚ್ಚಾಗುತ್ತದೆ ಎಂಬ ಸ್ಥೈರ್ಯವು ಇರುವುದು. ಅಂದುಕೊಂಡ ಕಾರ್ಯವು ಮುಗಿಯುತ್ತ ಇರುವಾಗಲೇ ಯಾರಾದರೂ ಅಡ್ಡಿ ಮಾಡುವರು. ಸ್ನೇಹಿತರ ಸಲಹೆಯ ಆಧಾರದ ಮೇಲೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಿರಿ. ಯಾರನ್ನೋ ಮೆಚ್ಚಿಸಲು ಹೋಗಿ ನಿಮ್ಮ ಸಮಯವು ವ್ಯರ್ಥವಾದೀತು. ಸಂದರ್ಭದಲ್ಲಿ ಎಲ್ಲವೂ ಗೊತ್ತಿದೆ ಎಂದು ತೋರಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ಆಪ್ತರ ಜೊತೆಗಿನ ಬಿಚ್ಚು ಮನಸ್ಸಿನ ಮಾತುಕತೆಯಿಂದ ನಿಮ್ಮ ಭಾರವಾದ ಮನಸ್ಸು ಹಗುರಾಗುವುದು. ನೀವು ಇಂದು ಸಿಟ್ಟು ಮಾಡಿಕೊಳ್ಳಬಹುದಾದ ಸನ್ನಿವೇಶಗಳು ಬಾರದು. ಇಂದು ಸ್ತ್ರೀಯರಿಂದ ಸುಖವನ್ನು ಅನುಭವಿಸುವಿರಿ. ನಿಮ್ಮ ತ್ಯಾಗಬುದ್ಧಿಯಿಂದ ಪ್ರಶಂಸೆಯು ಸಿಗುವುದು.
ಧನು ರಾಶಿ: ಪ್ರಭಾವೀ ವ್ಯಕ್ತಿಗಳ ಕಡೆಯಿಂದ ನಿಮಗೆ ಕೆಲಸವು ಸಿಗಬಹುದು. ಅಪಮಾನವನ್ನು ಎದುರಿಸುವುದು ನಿಮಗೆ ಕಷ್ಟವಾದೀತು. ಅವಿವಾಹಿತರು ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ನೂತನ ವಸ್ತುಗಳನ್ನು ಪಡೆದು ಸಂತೋಷಪಡುವಿರಿ. ಗೌರವಾದಿಗಳು ಸಿಕ್ಕಿ ಸಂತೋಪಡುವಿರಿ. ನೀವು ಅಂದುಕೊಂಡ ಹಾಗೆಯೇ ನಡೆಯದು. ಅಮೂಲ್ಯ ವಸ್ತುಗಳನ್ನು ಎಲ್ಲಿಯೋ ಇಟ್ಟು ಹುಡುಕುವಿರಿ. ಧಾರ್ಮಿಕ ಆಚರಣೆಗಳನ್ನು ಹೆಚ್ಚು ಮಾಡಲು ಮನಸ್ಸಾಗುವುದು. ನಿಮ್ಮ ವಾಹನವನ್ನು ಚಲಾಯಿಸಲು ಕಷ್ಟವಾದೀತು. ನಿಮ್ಮವರು ನಿಮ್ಮ ದೋಷವನ್ನೇ ಹೆಚ್ಚು ಹೇಳುವರು. ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆ ಆಗುವುದು. ಸಾಹಿತ್ಯಸಲ್ಲಿ ಆಸಕ್ತಿ ಇರುವವರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳುವರು. ಎಲ್ಲವನ್ನೂ ಬಾಹುಬಲದಿಂದ ಸಾಧಿಸುತ್ತೇನೆ ಎಂಬ ಹುಂಬುತನ ಬೇಡ.
ಮಕರ ರಾಶಿ: ಶತ್ರುಗಳ ಕಾಟವು ಇಲ್ಲದಿದ್ದರೂ ಅವರ ಬಗ್ಗೆ ಕುತೂಹಲ, ಅನುಮಾನವು ಇರುವುದು. ಮಿತ್ರರಿಂದ ಭೂಮಿಯ ಖರೀದಿಯ ವಾರ್ತೆಯು ಇರುವುದು. ಸ್ತ್ರೀಯರು ತಮ್ಮ ಕಾರ್ಯದಲ್ಲಿ ಮುಳುಗುವರು. ತಮ್ಮ ಉದ್ಯಮವನ್ನು ಪ್ರಭಾವೀ ವ್ಯಕ್ತಿಗಳ ಸಹಾಯದಿಂದ ಜನಪ್ರಿಯ ಗೊಳಿಸಿಕೊಳ್ಳುವರು. ಮಕ್ಕಳನ್ನು ದೂರ ಕಳಿಸುವುದು ನಿಮಗೆ ಇಷ್ಟವಾಗದು. ಎಲ್ಲವನ್ನೂ ನೀವೇ ಮಾಡಬೇಕು ಎನ್ನುವ ಮಾನಸಿಕತೆ ಬೇಡ. ಒಂಟಿತನವು ಇಷ್ಟವಾಗುವುದು. ಕುರುಡು ನಂಬಿಕೆಯಿಂದ ನಿಮಗೆ ಇಷ್ಟವಾಗುವುದು. ಕುಟುಂಬದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಗೌಪ್ಯವಾಗಿ ಇರುವುದು. ಸಿಟ್ಟನ್ನು ಯಾರದೋ ಮೇಲೆ ತೀರಿಸಿಕೊಂಡು ಸಮಾಧಾನಪಡುವಿರಿ. ಹಿರಿಯರ ಮಾತಿನಿಂದ ಪ್ರೇರಣೆ ಸಿಗಲಿದೆ. ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದು.
ಕುಂಭ ರಾಶಿ: ಇಂದಿನ ಖರ್ಚನ್ನು ಕಂಡು ಚಿಂತೆಯಾಗುವುದು. ಸರಳತೆಯನ್ನು ರೂಢಿಸಿಕೊಳ್ಳುವಿರಿ. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಭೂಮಿಯ ಉತ್ಪನ್ನದಿಂದ ಕೆಲವು ಅದಾಯವು ಸಿಗಬಹುದು. ಬಂಧುಗಳ ಅನಾರೋಗ್ಯದ ಕಾರಣ ನೀವು ಧನಸಹಾಯವನ್ನು ಮಾಡಬೇಕಾದೀತು. ನಿಮ್ಮ ಸ್ಥಾನವನ್ನು ಕಾಪಾಡಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವಿರಿ. ಹೊಸ ಸಾಲಕ್ಕೂ ಮೊದಲು ಹಳೆಯದನ್ನು ದೂರಮಾಡಿಕೊಳ್ಳುವುದು ಉತ್ತಮ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಏಕಾಗ್ರತೆಯು ಇಲ್ಲವಾಗಬಹುದು. ಮಾತಿನಲ್ಲಿ ಪೇಲವ ಬೇಡ. ದೃಢತೆಯಿಂದ ಮಾತನಾಡಿ. ನೀವೇ ಆಯ್ಕೆ ಮಾಡಿಕೊಂಡ ಕೆಲಸದಲ್ಲಿ ಆಸಕ್ತಿಯು ಕಡಿಮೆ ಇರುವುದು. ನಿಮ್ಮ ನಿರ್ಧಾರಗಳು ಬಲವಾದಂತೆ ಕಾರ್ಯಗಳಲ್ಲಿಯೂ ದೃಢತೆ ಇರಲಿ. ನಿಮ್ಮ ಕಾರ್ಯಗಳ ವಿವರಗಳನ್ನು ಮೇಲಧಿಕಾರಿಗಳು ಕೇಳಬಹುದು.
ಮೀನ ರಾಶಿ: ವಾದದಲ್ಲಿ ಸೋಲನ್ನು ಒಪ್ಪಿಕೊಂಡು ಗೆಲುವಿಗಾಗಿ ಪ್ರಯತ್ನಿಸುವಿರಿ. ಉದ್ಯಮದಲ್ಲಿ ಜಾಣ್ಮೆ ತೋರುವಿರಿ. ಉನ್ನತ ವಿದ್ಯಾಭ್ಯಾಸದ ಕಾರಣ ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ತಾಯಿಯ ಕಡೆಯಿಂದ ನಿಮಗೆ ಆಸ್ತಿಯು ಲಭಿಸುವುದು. ಅಂದುಕೊಂಡ ಕಾರ್ಯಕ್ಕೆ ಬೆಂಬಲು ಪೂರ್ಣವಾಗಿ ಸಿಗದು. ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬಬೇಕು ಎಂಬುದು ಗೊತ್ತಾಗದು. ಅತಿಥಿ ಸತ್ಕಾರದಿಂದ ಖುಷಿಯಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಆಸೆ ಇರುವುದು. ಪತ್ನಿಯ ಅನವಶ್ಯಕ ಖರ್ಚಿಗೆ ಕಡಿವಾಣವನ್ನು ಹಾಕಬೇಕಾದೀತು. ಇದಕ್ಕಾಗಿ ಕೂಗಾಡಿಕೊಳ್ಳಬಹುದು. ಮಕ್ಕಳ ಬಗ್ಗೆ ನಿಮ್ಮ ಲಕ್ಷ್ಯವು ಇರಲಿ. ನಿಮ್ಮ ಇಂದಿನ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳಬೇಡಿ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)