ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 7ರ ಭಾನುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಇದನ್ನೂ ಓದಿ: Weekly Horoscope: ಮಾರ್ಚ್ 5ರಿಂದ ಮಾರ್ಚ್ 11ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು. ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಧೃತಿ, ಕರಣ : ಬವ. ಸೂರ್ಯೋದಯ – 06-47am, ಸೂರ್ಯಾಸ್ತ – 06-40pm. ಶುಭಾಶುಭಕಾಲ ರಾಹು ಕಾಲ 15:42 – 17:11, ಯಮಘಂಡ ಕಾಲ 09:46 – 11:15, ಗುಳಿಕ ಕಾಲ 12:44 – 14:13.
ಮೇಷ: ದೇವತಾಕರ್ಯದಲ್ಲಿ ನೀವು ಭಾಗವಹಿಸುವಿರಿ. ಹಣವನ್ನು ಸಂಪಾದಿಸಬೇಕು ಎನ್ನುವ ನಿಮ್ಮ ತೀವ್ರತರವಾದ ಪ್ರಯತ್ನಕ್ಕೆ ಇಂದು ಕೆಲವು ತೊಂದರೆಗಳು, ನಕಾರಾತ್ಮಕ ಸಲಹೆಗಳು ಬರಬಹುದು. ಮಕ್ಕಳ ವಿಚಾರದಲ್ಲಿ ಶುಭವಾದ ವಾರ್ತೆ ಇರಲಿದೆ. ಇರುವುದರಲ್ಲಿ ಸದ್ಯಕ್ಕೆ ಸಂತೋಷಪಡುವುದು ಉತ್ತಮ. ಭೂಮಿಯ ಕ್ರಯ ಹಾಗೂ ವಿಕ್ರಯದ ವಿಚಾರದಲ್ಲಿ ನಿಮಗೆ ಲಾಭವಂತೂ ಸಿಗಲಿದೆ. ಕೃಷಿ ಭೂಮಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಲಾಭವನ್ನು ಕಾಣಬಹುದು. ಸಂಗಾತಿಯ ಜೊತೆ ಖುಷಿಯಿಂದ ಇರಲಿದ್ದೀರಿ. ಆರ್ಥಿಕವಾಗಿ ನೀವು ಸಾಧಾರಿಸಲಿದ್ದೀರಿ. ಸುಬ್ರಹ್ಮಣ್ಯ ಅಷ್ಟೋತ್ತರ ಪಠನದಿಂದ ನಿಮಗೆ ಅಂದುಕೊಂಡಿದ್ದು ಕೈಗೂಡಲಿದೆ.
ವೃಷಭ: ಕಷ್ಟಗಳು ನಿಮ್ಮನ್ನು ಗಟ್ಟಿಯಾಗಿರಿಸುತ್ತವೆ ಎಂಬುದನ್ನು ಮರೆಯಬೇಡಿ. ಕಷ್ಟಗಳು ನಮ್ಮ ಕರ್ಮದ್ದು ಎನ್ನುವ ವಿಚಾರ ನೆನಪಿರಲಿ. ಬಂಧುಗಳು ನಿಮಗೆ ಸಕಾಲಕ್ಕೆ ಸರಿಯಾಗಿ ಸಲಹೆಗಳನ್ನು ಕೊಡುವರು. ದೇವರಲ್ಲಿ ಕಷ್ಟವನ್ನು ಸಹಿಸುವ ಎದುರಿಸುವ ಶಕ್ತಿಯನ್ನು ಕೊಡು ಎಂದು ಕೇಳಿಕೊಳ್ಳಿ. ಸಂಪಾದನೆಗೆ ನೂರು ದಾರಿಗಳಿದ್ದರೂ ನಿಮ್ಮ ಆಯ್ಕೆ ಸ್ಪಷ್ಟವೂ ಯೋಗ್ಯವೂ ಆಗಿರುತ್ತದೆ. ದುಡುಕಿ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಡಿ. ಮಾತುಗಳು ನಿಮ್ಮ ನಿಯಂತ್ರಣದಲ್ಲಿ ಇರಲಿ. ದೈಹಿಕವಾದ ಆಯಾಸವು ಕಾಡಲಿದೆ. ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ನಿಮ್ಮವರ ಮಾತನ್ನು ಕೇಳಬೇಕಾದೀತು. ರಾಜರಾಶ್ವೇಶ್ವರಿಯನ್ನು ಸ್ತುತಿಸಿ.
ಮಿಥುನ: ಸಂಪತ್ತುಗ ಹರಿದು ಬರುವ ದಾರಿಯನ್ನು ಶುದ್ಧವಾಗಿ ಇಟ್ಟುಕೊಳ್ಳಿ. ನಿಮ್ಮ ಬಳಿಯೇ ಸಂಪತ್ತು ಉಳಿದೀತು. ಉಪಕಾರದ ಬುದ್ಧಿಯು ಸರಿಯೇ ಆಗಿದೆ. ಆದರೆ ಸಮಯ ಹಾಗೂ ಸಂದರ್ಭವನ್ನು ನೋಡಿ ಮಾಡಿ. ಪುಣ್ಯಕ್ಷೇತ್ರಗಳಿಗೆ ಹೋಗುವ ಮನಸ್ಸು ಮಾಡುವಿರಿ. ಕುಟುಂಬವು ಯಾವತ್ತೂ ಇರುವಂತೆ ನಿಮ್ಮ ಬೆಂಬಲಕ್ಕೆ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮ ತಲೆಯಲ್ಲಿ ಹತ್ತಾರು ಯೋಜನೆಗಳು ಓಡಬಹುದು. ನಿಮ್ಮ ಆಪ್ತರಿಗೆ ನೀವು ಕಾಳಜಿಯ ಕುರಿತು ಹೇಳುವಿರಿ. ಯಾವ ಪ್ರತ್ಯುತ್ತರವನ್ನೂ ಬಯಸದೇ ಮಾತನಾಡುವ ನಿಮ್ಮ ವಾಚಾಳಿತನವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಿ. ಮೃಷ್ಟಾನ್ನಭೋಜನವನ್ನು ಬಂಧುಗಳಿಗೆ ಮಾಡಿಸಲಿದ್ದೀರಿ. ರಂಗನಾಥನನ್ನು ಧ್ಯಾನ ಮಾಡಿ. ಆರೋಗ್ಯ ಹಾಗೂ ಐಶ್ವರ್ಯಗಳು ನಿಮ್ಮದಾಗಲಿದೆ.
ಕಟಕ: ನಿಮ್ಮ ಕಛೇರಿಯಲ್ಲಿ ನಿಮಗೆ ಮೇಲಿನ ಸ್ಥಾನ ಸಿಗಲಿದೆ. ಹಣದ ಅಗತ್ಯತೆಗಳು ತುಂಬಾ ಇರಲಿವೆ. ನಿಮ್ಮ ಹಣವೂ ಖಾಲಿಯಾಗಿ ಸಂಗಾತಿಯಿಂದ ಹಣವನ್ನು ಪಡೆಯುವಿರಿ. ಖರ್ಚನ್ನು ಕಡಿಮೆಮಾಡಿಕೊಳ್ಳುವ ವಿಚಾರದಲ್ಲಿ ಚಿಂತಿಸುವುದು ಉತ್ತಮ. ಉಳಿದಿರುವ ಕೆಲಸಗಳನ್ನು ಶೀಘ್ರವಾಗಿ ಮಾಡಿ ಮುಗಿಸಿಕೊಳ್ಳಿ. ಅನಗತ್ಯವಾದ ಖರ್ಚು ಅಗತ್ಯದ ವಸ್ತುಗಳನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ಬಂಧುಗಳು ನಿಮ್ಮ ನಡೆತೆಯಿಂದ ದೂರವೂ ಹೋಗಬಹುದು ಅಥವಾ ನಿಮ್ಮಿಬ್ಬರ ನಡುವೆ ಕಲಹವೂ ಆಗಬಹುದು. ಕೆಟ್ಟಿರುವ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ ಇರಲಿದೆ. ಯಂತ್ರಜ್ಞರು ಅಧಿಕವಾದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಕುಲದೇವರನ್ನು ಅನನ್ಯ ಮನಸ್ಸಿನಿಂದ ಧ್ಯಾನಿಸಿ.
ಸಿಂಹ: ಬಹಳ ದಿನಗಳಿಂದ ಕಾಡಿದ ರೋಗವು ಉಪಶಮನವಾಗಲಿದೆ. ಮಾನಸಿಕ ನೆಮ್ಮದಿಗೆ ಸ್ವಲ್ಪ ಕಾಲ ತೆಗೆದುಕೊಳ್ಳಬೇಕಾಗಬಹುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಮಹತ್ತ್ವವು ತಿಳಿದು ಶ್ರದ್ಧೆಯಿಂದ ಓದಿನಲ್ಲಿ ತೊಡಗುವರು. ನೀವಿಂದು ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳುವ ಮನಸ್ಸು ಮಾಡುವಿರಿ. ನಿಮ್ಮೊಳಗೆ ಇಂದು ವಿಚಿತ್ರವಾದ ಕೆಲವು ಆಲೋಚನೆಗಳು ಬರಲಿದ್ದು, ನಿಮಗೇ ಆಶ್ಚರ್ಯವೆನಿಸುವಂತೆ ಮಾಡುವುದು. ತಂದೆ ಮತ್ತು ತಾಯಿಯರು ನಿಮಗೆ ಹಿತವಚನವನ್ನು ಹೇಳುವರು. ಆಪ್ತರನ್ನು ದ್ವೇಷಿಸಬೇಡಿ. ಸೂರ್ಯನನ್ನು ಆರಾಧಿಸಿ. ಜ್ಞಾನವನ್ನೂ ಆರೋಗ್ಯವನ್ನೂ ಕೊಟ್ಟಾನು.
ಕನ್ಯಾ: ನೀವಿಂದು ಬಹಳ ಚುರುಕುತನದಲ್ಲಿ ಇರಲಿದ್ದೀರಿ. ಕೆಲಸಗಳು ಶೀಘ್ರವಾಗಿ ಮುಕ್ತಾಯವನ್ನು ಕಾಣುವುದು. ದಾಂಪತ್ಯದಲ್ಲಿ ಸುಖವನ್ನು ಕಾಣಬಹುದು. ಎಲ್ಲರ ಜೊತೆ ಸಲುಗೆಯಿಂದ ಇರುವ ನಿಮ್ಮ ಬಗ್ಗೆ ಕೆಲವು ಅಪವಾದದ ಮಾತುಗಳು ಕೇಳಿಬರಬಹುದು. ನಿಮ್ಮ ಕುರಿತು ಆಲೋಚನೆಗಳನ್ನು ಮಾಡಿಕೊಳ್ಳಿ. ಹೆಜ್ಜೆಗಳನ್ನು ಇಡುವಾಗ ಜಾಗರೂಕರಾಗಿರಿ. ಕಛೇರಿಯ ಕೆಲಸವು ಅತಿಯಾದ ಒತ್ತಡದ ಕಾರಣದಿಂದ ನಿಮಗೆ ಸಾಕಪ್ಪ ಸಾಕು ಎನಿಸಬಹುದು. ತೀವ್ರವಾದ ಒತ್ತಡವಿದ್ದರೆ ಬಿಡುವುದು ಒಳ್ಳೆಯದು. ಮಾನಸಿಕ ಸ್ಥಿತಿಯು ಶಾಂತವಾಗುವ ತನಕ ವಿರಾಮವನ್ನೂ ಪಡೆಯಿರಿ. ಸಪರಿವಾರ ರಾಮನಿಗೆ ಪರಮಾನ್ನ ನೈವೇದ್ಯ ಮಾಡಿ.
ತುಲಾ: ಆರ್ಥಿಕವಾದ ತೊಂದರೆಗಳು ಬರಬಹುದು. ಕೈಗೆ ಬಂದದ್ದು ಬಾಯಿಗೆ ಬರದೇ ಹೋಗುವ ಸಾಧ್ಯತೆ ಇದೆ. ದ್ವಂದ್ವಗಳು ನಿರ್ಧಾರವನ್ನು ಮಾಡಲಾಗದೇ ಗೊಂದಲವನ್ನು ಸೃಷ್ಟಿಸಿಯಾವು. ಸರಿಯಾದ ನಿರ್ಧಾರಮಾಡುವುದು ಕಷ್ಟವೆನಿಸದರೆ ಆಪ್ತರ ಸಲಹೆಯನ್ನು ಪಡೆಯಿರಿ. ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸುವಿರಿ. ಶೀಘ್ರವಾಗಿ ಕೆಲಸವು ಸಿಗಬಹುದು. ದುರಭ್ಯಾಸದ ಬಗ್ಗೆ ಗಮನವಿರಲಿ. ಕೆಟ್ಟದ್ದನ್ನು ರೂಢಿಸಿಕೊಳ್ಳಬೇಡಿ. ಕಾಲಾನಂತರ ನಿಮಗೆ ಉತ್ತಮವಾದ ಫಲವನ್ನೇ ನೀಡುವುದು. ಚಾಮುಂಡಿಯನ್ನು ಆರಾಧಿಸಿ. ನಿಮ್ಮ ಅಭೀಷ್ಟಗಳು ಸಿದ್ಧಿಯಾಗುವುವು.
ವೃಶ್ಚಿಕ: ನೂತನ ಗೃಹನಿರ್ಮಾಣವನ್ನು ಮಾಡುವ ಸಂಕಲ್ಪ ಮಾಡುವಿರಿ. ಸರ್ಕಾರಿ ನೌಕರರು ಬಡ್ತಿಯನ್ನು ಪಡೆಯಲಿದ್ದೀರಿ. ಕಾರ್ಯವು ಆರಂಭಗೊಂಡಿದ್ದು ನಿಮ್ಮ ಚಿಂತೆಗಳೂ ಆರಂಭವಾಗುವುವು. ನಿಮ್ಮವರೇ ಶತ್ರುಗಳಾಗಿ ನಿಮ್ಮ ಏಳ್ಗೆಯನ್ನು ಸಹಿಸದೇ ತೊಂದರೆಗಳನ್ನು ಕೊಡಬಹುದು. ಅದಕ್ಕೆ ಬೇಕಾದ ಕಾನೂನಿನ ಹಾದಿಯನ್ನು ಅನುಸರಿಸಿ ಸರಿಮಾಡಿಕೊಳ್ಳಿ. ಯಾವುದೇ ಅನೈತಿಕ ಅಥವಾ ಕಾನೂನು ಬಾಹಿರ ಕೆಲಸಗಳನ್ನು ಮಾಡಲು ಹೋಗಬೇಡಿ. ಸಿಕ್ಕಿಹಾಕಿಕೊಳ್ಳಬಹುದು. ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಮಯವೂ ಇದಾಗಲಿದೆ. ಸುಬ್ರಹ್ಮಣ್ಯನನ್ನು ಜಪಿಸಿ. ಸಂಕಷ್ಟಗಳು ದೂರವಾದೀತು.
ಧನು: ಎಂದೋ ಮಾಡಿದ ತಪ್ಪನ್ನು ನೆನಸಿಕೊಂಡು ಇಂದು ದ್ವೇಷವನ್ನು ಸಾಧಿಸುವುದು ಒಳ್ಳೆಯದಲ್ಲ. ಭೂಮಿಗೆ ಸಂಬಂಧಿಸಿದಂತೆ ಹೆಚ್ಚು ಓಡಾಟವನ್ನು ಮಾಡಬೇಕಾಗಿ ಬರಬಹುದು. ನಿಮ್ಮ ಪ್ರಭಾವವು ಎಷ್ಟಿದೆ ಎಂದು ಜೊತೆಗಾರರಿಗೆ ಗೊತ್ತಾಗಲಿದೆ. ಗೃಹೋಪಕರಣಗಳನ್ನು ಖರೀದಿಸುವಿರಿ. ಹಣವನ್ನು ಕೂಡಿಡುವ ಯಾವುದಾದರೂ ಯೋಗ್ಯವಾದ ಮಾರ್ಗವನ್ನು ಆಲೋಚಿಸುವಿರಿ. ಆನಾರೋಗ್ಯದಿಂದ ಅಲಸಿಗಳಾಗುವಿರಿ. ಗಮನಿಸಿಕೊಂಡು ಮಾಡಬೇಕಾದ ಕೆಲಸದಕಡೆಗೆ ಹೊರಡಿ. ಗುರುವಿನ ದರ್ಶನವನ್ನು ಪಡೆಯಿರಿ. ಪ್ರತಿಕೂಲ ಸಂದರ್ಭದಲ್ಲಿ ಅಲ್ಪ ಸಹಾಯವಾದೀತು.
ಮಕರ: ಕಲಿತ ವಿದ್ಯೆಗೆ ತಕ್ಕುದಾದ ವೃತ್ತಿಯಿಲ್ಲ ಎಂದು ಅನ್ನಿಸಬಹುದು. ಯಂತ್ರಜ್ಞರಾಗಿರುವವರು ಹೊಸದಾದ ಉದ್ಯೋಗವನ್ನು ಆರಂಭಿಸುವ ಯೋಜನೆಯೊಂದನ್ನು ಕೈಗೊಂಡಿದ್ದರೆ ಉತ್ತಮ. ನಿಮಗೆ ಬೇಕಾದ ಸಲಹೆ ಸಹಕಾರಗಳು ಸಿಗಲಿವೆ. ಅನುಭವಿಗಳ ಜೊತೆ ಮಾತುಕತೆ ನಡೆಸಿ. ಬಂಧುಗಳ ಮಾತು ನಿಮಗೆ ಕಹಿ ಎನಿಸಬಹುದು. ಅವರನ್ನು ದೂರವಿಡಲು ಮನಸ್ಸು ಮಾಡುವಿರಿ. ಆತ್ಮಸ್ಥೈರ್ಯವನ್ನು ಬಿಡಬೇಡಿ. ಏನನ್ನಾದರೂ ಸಾಧಿಸಬೇಕು ಎನ್ನುವ ಛಲವನ್ನು ನೀವು ಬಿಡಬೇಡಿ. ಒಂದೊಂದಾಗಿ ಬೆಳವಣಿಗೆಯನ್ನು ಹೊಂದುವುದು. ವ್ಯವಹಾರದಲ್ಲಿ ವಂಚನೆಗೆ ಅವಕಾಶವನ್ನು ಕೊಡಬೇಡಿ. ಹನುಮಾನ್ ಚಾಲೀಸ್ ಪಠಣ ಮಾಡಿ. ಆರೋಗ್ಯದಲ್ಲಿ ದೃಢತೆ ಬರಲಿದೆ.
ಕುಂಭ: ನೀವು ಕೊಟ್ಟಿರುವ ಸಂಪತ್ತು ತಾನಾಗಿಯೇ ಬರಲಿದೆ. ಅಧಿಕವಾದ ಉತ್ಸಾಹದಿಂದ ಏನನ್ನಾದರೂ ಮಾಡಲು ಹೋಗಬೇಡಿ. ಅದನ್ನು ಮುಂದುವರಿಸುವುದು ಕಷಗಟವಾದೀತು. ಸಾಮರ್ಥ್ಯ ಮತ್ತು ಸಂಪತ್ತಿಗೆ ಯೋಗ್ಯವಾಗಿ ಯೋಚನೆ ಹಾಗೂ ಯೋಜನೆಗಳು ಇರಲಿ. ದಾಂಪತ್ಯದಲ್ಲಿ ಸುಖ ಹಾಗೂ ನೆಮ್ಮದಿಯನ್ನು ಪಡೆಯುವಿರಿ. ನಿಮ್ಮ ಮನೆಗೆ ಅತಿಥಿಗಳ ಆಗಮನವಾಗಲಿದೆ. ಸತ್ಕರಿಸಿ. ಅನಿರೀಕ್ಷಿತ ಬಂಧುಗಳ ಆಗಮನದಿಂದ ನಿಮ್ಮ ಕಾರ್ಯಕ್ಕೆ ತೊಂದರೆಯಾದರೂ ತೋರಿಸಿಕೊಳ್ಳಲು ಹೋಗದೇ ಸಂತೋಷದಿಂದ ಇರಿ. ಶಿವಾರ್ಚನೆಯನ್ನು ಮಾಡಿ. ಕಷ್ಟಗಳನ್ನು ಸಹಿಸುವ ಸಾಮರ್ಥ್ಯ ಬರಲಿದೆ.
ಮೀನ: ವ್ಯರ್ಥವಾದ ಮಾತುಗಳಿಂದ ಏನೂ ಪ್ರಯೋಜನವಾಗದು. ಮಾತನ್ನು ಕಡಿಮೆ ಮಾಡಿ. ಉಪಯೋಗಕ್ಕೆ ಬಾರದ ಕೆಲಸವನ್ನು ಬಿಟ್ಟುಬಿಡುವುದು ಒಳ್ಳೆಯದು. ಧಾರ್ಮಿಕಕಾರ್ಯಗಳು ಮನೆಯಲ್ಲಿ ನಡೆಯಲಿವೆ. ಸ್ಥಳವಲ್ಲದ ಸ್ಥಳದಲ್ಲಿ ನಿಮ್ಮ ಪರಾಕ್ರಮವನ್ನು ತೋರಿಸಬೇಡಿ. ಅಪ್ರಯೋಜಕವಾದೀತು. ಕಾಲಹರಣವನ್ನು ಮಾಡದೇ ಒಳ್ಳೆಯ ಕೆಲಸದಲ್ಲಿ ಮಗ್ನರಾಗಿ. ಸ್ವಲ್ಪ ಆಯಾಸವು ಬಾಧಿಸಬಹುದು. ತಕ್ಕ ವಿಶ್ರಾಂತಿಯಿಂದ ಪರಿಹಾರವನ್ನು ಮಾಡಿಕೊಳ್ಳಿ. ದೂರದ ಊರಿಗೆ ಹೋಗುವ ಸಂದರ್ಭ ಬಂದರೂ ಬರಬಹುದು. ತಯಾರಾಗಿರಿ. ಗುರುಸಮಾಧಿಗೆ ಅರ್ಚನೆಯನ್ನು ಮಾಡಿ.
ಲೇಖನ-ಲೋಹಿತಶರ್ಮಾ, ಇಡುವಾಣಿ