
ಗುರುವು ನವಗ್ರಹರುಗಳಲ್ಲಿ ಅತ್ಯಂತ ಶ್ರೇಷ್ಠ ಗ್ರಹ. ಶುಭ ಗ್ರಹವೆಂದು ಪ್ರಸಿದ್ಧಿ ಪಡೆದಿದೆ. ಗುರುವಿನ ದೃಷ್ಟಿ ಅಥವಾ ಯೋಗ ಬಂದರೆ ಅಶುಭವು ನಾಶವಾಗಿ ಶುಭವಾಗಲಿದೆ. ಅಂತಹ ಶುಭಗ್ರಹ ಸದ್ಯ ಉಚ್ಚಸ್ಥಾನದಲ್ಲಿದ್ದು ಪೂರ್ಣ ಬಲವುಳ್ಳವನಾಗಿದ್ದಾನೆ. ಹೀಗಿರುವಾಗ ಶುಭಫಲಗಳೇ ಈ ತಿಂಗಳಲ್ಲಿ ಇರಲಿದೆ.
ಧನು ಲಗ್ನಕ್ಕೆ ಅಧಿಪತಿಯೇ ಬೃಹಸ್ಪತಿ ಲಗ್ನಾಧಿಪತಿಯು ಧರ್ಮ, ಜ್ಞಾನ, ವ್ಯಕ್ತಿತ್ವ, ಆರೋಗ್ಯ ಮತ್ತು ಆತ್ಮವಿಶ್ವಾಸದ ಸಂಕೇತ. ಕರ್ಕಾಟಕ, ವೃಶ್ಚಿಕ, ಧನು, ಮಕರ, ಮೀನ ಈ ರಾಶಿಯವರಿಗೆ ಶುಭದಾಯಕವಾಗಲಿದೆ…
ಗುರುವು ಕರ್ಕಾಟಕ ರಾಶಿಯಲ್ಲಿ ಉಚ್ಚನಾಗಿದ್ದಾನೆ. ೮ನೇ ರಾಶಿಯಲ್ಲಿ ಆಯುಷ್ಯ, ಗೂಢ ವಿದ್ಯೆ, ಸಂಶೋಧನೆ, ಹಠಾತ್ ಲಾಭ ಅಥವಾ ಹಠಾತ್ ಪರಿವರ್ತನೆಯ ಸ್ಥಾನ. ೮ನೇ ಮನೆಯು ಸಾಧಾರಣವಾಗಿ ದುಃಸ್ಥಾನವೆಂದು ಪರಿಗಣಿತವಾದರೂ, ಲಗ್ನಾಧಿಪತಿಯೇ ಅಲ್ಲಿ ಉಚ್ಛನಾಗಿರುವುದರಿಂದ ಕೆಟ್ಟ ಫಲಗಳಿಗಿಂತ ಶುಭ ಫಲಗಳೇ ಹೆಚ್ಚಿರುತ್ತವೆ. ಜಾತಕರಿಗೆ ಅದ್ಭುತವಾದ ಸಹಜ ಜ್ಞಾನ, ರಹಸ್ಯ ಶಾಸ್ತ್ರಗಳಲ್ಲಿ ಜ್ಯೋತಿಷ್ಯ, ವೇದ, ಮಂತ್ರ ಶಾಸ್ತ್ರ, ಸಂಶೋಧನೆ ಅಪಾರ ಆಸಕ್ತಿ ಮತ್ತು ಪಾಂಡಿತ್ಯ ಸಿದ್ಧಿಸುತ್ತದೆ. ಹಠಾತ್ ಧನಲಾಭ ಅಥವಾ ಪಿತ್ರಾರ್ಜಿತ ಆಸ್ತಿ ಲಭಿಸುವ ಯೋಗವೂ ಉಂಟಾಗುತ್ತದೆ.
ಗುರುವು ಕರ್ಕಾಟಕದಿಂದ ಮೂರು ಪ್ರಮುಖ ಭಾವಗಳ ಮೇಲೆ ತನ್ನ ಶುಭ ದೃಷ್ಟಿಯನ್ನು ಬೀರುತ್ತಿದ್ದಾನೆ. ೧೨ನೇ ಮನೆ ಮೋಕ್ಷ ಮತ್ತು ವಿದೇಶಿ ಪ್ರಯಾಣದ ಮನೆ. ಗುರುವಿನ ಶುಭ ದೃಷ್ಟಿಯಿಂದಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ, ದೇವತಾ ಕಾರ್ಯಗಳಿಗೆ ಮತ್ತು ದಾನ-ಧರ್ಮಗಳಿಗೆ ಹಣ ವಿನಿಯೋಗವಾಗುತ್ತದೆ. ಉದ್ಯೋಗ, ಶಿಕ್ಷಣ ಅಥವಾ ತೀರ್ಥಯಾತ್ರೆಗಾಗಿ ದೂರದ ಊರುಗಳಿಗೆ ಅಥವಾ ವಿದೇಶಕ್ಕೆ ಪ್ರಯಾಣಿಸುವ ಅವಕಾಶ ಒದಗಿಬರುತ್ತದೆ.
೨ನೇ ಭಾವಕ್ಕೆ ಗುರುವಿನ ನೇರ ದೃಷ್ಟಿ ಇರುವುದರಿಂದ ಆರ್ಥಿಕ ಮುಗ್ಗಟ್ಟುಗಳು ನಿವಾರಣೆಯಾಗುತ್ತವೆ. ಹಣ ಉಳಿತಾಯ ಮಾಡುವ ಯೋಜನೆಗಳು ಯಶಸ್ವಿಯಾಗುತ್ತವೆ. ಜಾತಕರ ಮಾತಿನಲ್ಲಿ ಗಾಂಭೀರ್ಯ, ಸತ್ಯಸಂಧತೆ ಮತ್ತು ಗೌರವ ಹೆಚ್ಚಾಗುತ್ತದೆ. ನಿಮ್ಮ ಸಲಹೆಗಳಿಗೆ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಕುಟುಂಬದಲ್ಲಿ ಇದ್ದ ಮನಸ್ತಾಪಗಳು ದೂರವಾಗಿ ಶಾಂತಿ ನೆಲೆಸುತ್ತದೆ.
ಗುರುವಿನ ಶುಭ ದೃಷ್ಟಿ ಚಂದ್ರನ ಮೇಲೆ ಬೀಳುವುದರಿಂದ ಮಾನಸಿಕ ಒತ್ತಡ, ಆತಂಕಗಳು ನಿವಾರಣೆಯಾಗಿ ಮನಸ್ಸಿಗೆ ಶಾಂತಿ ಲಭಿಸುತ್ತದೆ. ತಾಯಿಯ ಆರೋಗ್ಯ ಸುಧಾರಿಸುತ್ತದೆ. ಶನಿ-ಗುರುಗಳ ಈ ಸಂಬಂಧವು ವೃತ್ತಿಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ. ಆಸ್ತಿ, ಜಮೀನು ಅಥವಾ ಹೊಸ ವಾಹನ/ಮನೆ ಖರೀದಿ ಮಾಡುವ ಕನಸು ನನಸಾಗುತ್ತದೆ. ಕಠಿಣ ಪರಿಶ್ರಮಕ್ಕೆ ಸೂಕ್ತ ಫಲ ಮತ್ತು ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ.
ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ
ಮಂಗಳನು ೫ನೇ ಮತ್ತು ೧೨ನೇ ಭಾವಾಧಿಪತಿಯಾಗಿದ್ದು, ಜ್ಞಾನ ಮತ್ತು ಶಕ್ತಿಯ ಕಾರಕ. ಈ ಸಪ್ತಮ ದೃಷ್ಟಿ ಸಂಬಂಧವು ಜಾತಕರಿಗೆ ಅಸಾಧಾರಣ ನಾಯಕತ್ವ ಗುಣ, ಧೈರ್ಯ ಮತ್ತು ತಾಂತ್ರಿಕ/ಆಡಳಿತಾತ್ಮಕ ಕ್ಷೇತ್ರದಲ್ಲಿ ಯಶಸ್ಸನ್ನು ನೀಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರುವವರಿಗೆ ಅಥವಾ ಉನ್ನತ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಇದು ಅತ್ಯಂತ ಅನುಕೂಲಕರ ಸಮಯ.
ನಾಯಕತ್ವದ ಜವಾಬ್ದಾರಿಗಳು ಸಿಗಲಿವೆ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಮತ್ತು ಸಹೋದ್ಯೋಗಿಗಳ ಸಂಪೂರ್ಣ ಸಹಕಾರ ದೊರೆಯುತ್ತದೆ. ಬಡ್ತಿ ಹಾಗೂ ಆದಾಯ ಹೆಚ್ಚಳ ಸಾಧ್ಯ. ಉನ್ನತ ಶಿಕ್ಷಣ, ಪರೀಕ್ಷೆಗಳು ಹಾಗೂ ಸಂಶೋಧನಾ ಕ್ಷೇತ್ರದಲ್ಲಿದ್ದವರಿಗೆ ಅತ್ಯುತ್ತಮ ಫಲಿತಾಂಶ ಸಿಗಲಿದೆ.
ಲಗ್ನಾಧಿಪತಿ ಉಚ್ಛನಾಗಿರುವುದರಿಂದ ದೈಹಿಕ ಬಲ ಹೆಚ್ಚುತ್ತದೆ. ಆದರೆ ೮ನೇ ಮನೆಯಲ್ಲಿ ಗುರು ಇರುವುದರಿಂದ ಜೀರ್ಣಾಂಗ ವ್ಯೂಹ ಅಥವಾ ಯಕೃತ್ತಿಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಜಾಗ್ರತೆ ವಹಿಸುವುದು ಒಳಿತು.
ಗುರುದಶೆಯ ಗರಿಷ್ಠ ಶುಭ ಫಲಗಳನ್ನು ಪಡೆಯಲು ಈ ಕೆಳಗಿನ ಸರಳ ದೈವಿಕ ಕ್ರಮಗಳು ಸಹಕಾರಿ. ಪ್ರತಿದಿನ ಅಥವಾ ಪ್ರತಿ ಗುರುವಾರ ವಿಷ್ಣು ಸಹಸ್ರನಾಮ ಅಥವಾ ದತ್ತಾತ್ರೇಯ ಸ್ತೋತ್ರವನ್ನು ಜಪಿಸುವುದು. ಗುರುವಾರದಂದು ಹಳದಿ ಬಣ್ಣದ ಕಡಲೆ ಬೇಳೆ, ಬಾಳೆಹಣ್ಣು ಅಥವಾ ಹಳದಿ ವಸ್ತ್ರವನ್ನು ಬ್ರಾಹ್ಮಣರಿಗೆ/ದೇವಸ್ಥಾನಕ್ಕೆ ದಾನ ಮಾಡುವುದು. ಹಸುಗಳಿಗೆ ಹಸಿರು ಹುಲ್ಲು ಅಥವಾ ಬೆಲ್ಲ-ಅನ್ನ ನೀಡುವುದು ಶುಭ ತರುತ್ತದೆ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ