Mars transit in Cancer: ಕರ್ಕಾಟಕ ರಾಶಿಯಲ್ಲಿ ಕುಜ ಸಂಚಾರ; ದ್ವಾದಶ ರಾಶಿಗಳು ಎಚ್ಚರ ಎಚ್ಚರ!

ಯಾರಿಗೆ ತಮ್ಮ ಜನ್ಮ ರಾಶಿಯಲ್ಲಿಯೂ ಕುಜ ನೀಚ ಸ್ಥಿತಿಯಲ್ಲಿ ಇರುತ್ತದೋ ಅಂಥವರಿಗೆ ಸಮಸ್ಯೆಗಳು ತೀವ್ರ ರೂಪ ಪಡೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಮೇಲೆ ಕುಜ ಗ್ರಹದ ಕರ್ಕಾಟಕ ರಾಶಿ ಸಂಚಾರದ ಪ್ರಭಾವ ಹೇಗಿರುತ್ತದೆ ಎಂಬುದರ ವಿವರ ಇಲ್ಲಿದೆ.

Mars transit in Cancer: ಕರ್ಕಾಟಕ ರಾಶಿಯಲ್ಲಿ ಕುಜ ಸಂಚಾರ; ದ್ವಾದಶ ರಾಶಿಗಳು ಎಚ್ಚರ ಎಚ್ಚರ!
Mars in Cancer
Follow us
| Updated By: Digi Tech Desk

Updated on: Oct 20, 2024 | 9:02 PM

ಇದೇ ಅಕ್ಟೋಬರ್ ಇಪ್ಪತ್ತನೇ ತಾರೀಕು ಕರ್ಕಾಟಕ ರಾಶಿಗೆ ಕುಜ ಗ್ರಹದ ಪ್ರವೇಶ ಆಗುತ್ತದೆ. ಕರ್ಕಾಟಕ ರಾಶಿಯಲ್ಲಿ ಕುಜ ಗ್ರಹವು ನೀಚ ಸ್ಥಿತಿಯಾಗುತ್ತದೆ. ಆ ರಾಶಿಯಲ್ಲಿ ಮಂಗಳನ ಪ್ರವೇಶ ಆದ ಮೇಲೆ ಹನ್ನೆರಡು ರಾಶಿಗಳಿಗೂ ಒಂದಲ್ಲಾ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪ್ರಕೃತಿಯ ಮೇಲೂ ಭೌಗೋಳಿಕ ರಾಜಕೀಯದ ಮೇಲೂ ನಕಾರಾತ್ಮಕವಾದ ಪರಿಣಾಮ ಇರುತ್ತದೆ. ಕುಜ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವಾಗಲೇ ಭೂಕಂಪ, ವಿದ್ಯುತ್ ಅಥವಾ ಅಗ್ನಿ ಅವಘಡ ಅಥವಾ ಯುದ್ಧದ ಸನ್ನಿವೇಶ, ದೊಡ್ಡ ಮಟ್ಟದ ಅಪಘಾತ ಇಂಥವೆಲ್ಲ ಸಂಭವಿಸುತ್ತವೆ. ಅದರಲ್ಲೂ ತನ್ನ ನೀಚ ಸ್ಥಿತಿಯ ರಾಶಿಗೆ ಪ್ರವೇಶ ಮಾಡುವುದರಿಂದ ಇದು ಮತ್ತೂ ಭೀಕರವಾಗುತ್ತದೆ. ಅದೂ ಈ ಬಾರಿ ಕರ್ಕಾಟಕ ರಾಶಿಯಲ್ಲಿ ಕುಜ ಗ್ರಹವು ದೀರ್ಘವಾದ ಸಮಯ ಇರುತ್ತದೆ. ವಕ್ರೀ ಸಂಚಾರವಾಗಿ, ಮತ್ತೆ ಮಿಥುನ ರಾಶಿಗೆ ಹೋಗಿ, ವಾಪಸ್ ಕರ್ಕಾಟಕ ರಾಶಿಗೆ ಇನ್ನೊಮ್ಮೆ ಕುಜ ಗ್ರಹ ಸಂಚರಿಸುತ್ತದೆ. ಕುಜ ಅಂದರೆ ಭೂಮಿಯನ್ನು ಸೂಚಿಸುತ್ತಾನೆ. ಅದೇ ರೀತಿ ಅಗ್ನಿ, ಎಲೆಕ್ಟ್ರಿಕಲ್ ಉಪಕರಣಗಳು, ಯುದ್ಧ, ಮನುಷ್ಯರಲ್ಲಿನ ರಕ್ತಕ್ಕೆ ಕುಜನೇ ಕಾರಕ. ಆದ್ದರಿಂದ ತನ್ನ ಕಾರಕತ್ವದ ಎಲ್ಲದರ ಮೇಲೂ ನಕಾರಾತ್ಮಕ ಪ್ರಭಾವವನ್ನೇ ತೋರಿಸುತ್ತಾನೆ.

ಮೇಷ ಈ ರಾಶಿಯವರಿಗೆ ನಾಲ್ಕನೇ ಮನೆಯಲ್ಲಿ ಕುಜ ಸಂಚಾರ ಇರುತ್ತದೆ. ತಾಯಿಯ ಆರೋಗ್ಯದ ವಿಚಾರದಲ್ಲಿ ಬಹಳ ಜಾಗ್ರತೆಯನ್ನು ವಹಿಸಬೇಕು. ಚಾಲಕ ವೃತ್ತಿಯಲ್ಲಿ ಇರುವಂಥವರು ವಾಹನಗಳನ್ನು ಸರಿಯಾಗಿ ಸರ್ವೀಸ್ ಮಾಡಿಸುವುದರ ಜೊತೆಗೆ ಚಾಲನೆ ವೇಳೆ ಸಾಮಾನ್ಯಕ್ಕಿಂತ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಇನ್ನು ಆಲೋಚನೆಯಲ್ಲಿಯೇ ಒಂದು ಬಗೆಯ ಉದ್ವಿಗ್ನತೆ ಇರುತ್ತದೆ. ಸಮಾಧಾನ- ತಾಳ್ಮೆಯಿಂದ ಆಲೋಚಿಸಿ, ಮಾಡಬೇಕಾದ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಸವಾಲಾಗಲಿದೆ. ವಿದ್ಯಾರ್ಥಿಗಳಿಗೆ ಸ್ನೇಹಿತರ ಜೊತೆಗೆ ಜಗಳ- ಕಲಹ, ಮನಸ್ತಾಪಗಳು ಕಾಣಿಸಿಕೊಳ್ಳುತ್ತವೆ. ಗುರು- ಹಿರಿಯರು ಹೇಳುವಂಥ ಉತ್ತಮ ಸಲಹೆಗಳು, ಬುದ್ಧಿ ಮಾತುಗಳನ್ನು ಕೇಳಿಸಿಕೊಳ್ಳುವ ಮನಸ್ಥಿತಿ ಇರುವುದಿಲ್ಲ. ನಿಮ್ಮಲ್ಲಿ ಕೆಲವರಿಗೆ ಸಣ್ಣ- ಪುಟ್ಟ ಅಪಘಾತಗಳಾದರೂ ಆಗುವ ಸಾಧ್ಯತೆ ಇರುತ್ತದೆ. ಹೆಣ್ಣುಮಕ್ಕಳು ಮನೆಯಲ್ಲಿ ಬಳಸುವಂಥ ದ್ರವ ರೂಪದ ಪದಾರ್ಥಗಳನ್ನು ಸರಿಯಾಗಿ ಪರಿಶೀಲಿಸುವುದು ಮುಖ್ಯವಾಗುತ್ತದೆ. ಬೆಂಕಿಯ ಮುಂದೆ ಕೆಲಸ ಮಾಡುತ್ತಿದ್ದೀರಿ ಅಂತಾದರೆ ಸಾಮಾನ್ಯಕ್ಕಿಂತ ಹೆಚ್ಚಿನ ಲಕ್ಷ್ಯವಿಟ್ಟು ಕೆಲಸ ಮಾಡಿ. ಚೂಪಾದ ವಸ್ತುಗಳನ್ನು ಬಳಸುವಾಗಲೂ ಇದೇ ಎಚ್ಚರಿಕೆ ಅನ್ವಯಿಸುತ್ತದೆ. ಈಗಾಗಲೇ ರಕ್ತದೊತ್ತಡದಂಥ ಸಮಸ್ಯೆಯಿದ್ದಲ್ಲಿ ಅಂಥವರು ಸೂಕ್ತ ವೈದ್ಯೋಪಚಾರ ಪಡೆಯುವುದಕ್ಕೆ ಪ್ರಾಮುಖ್ಯ ನೀಡಿ.

ವೃಷಭ ಈ ರಾಶಿಯವರಿಗೆ ಮೂರನೇ ಮನೆಯಲ್ಲಿ ಕುಜ ಸಂಚಾರ ಇರುತ್ತದೆ. ನಿಮ್ಮ ಹೆಸರು- ಕೀರ್ತಿ, ಪ್ರತಿಷ್ಠೆಗಳಿಗೆ ಮಸಿ ಬಳಿಯುವಂಥ ಪ್ರಯತ್ನಗಳಾಗುತ್ತವೆ. ನಿಮ್ಮಲ್ಲಿ ಯಾರು ಸಾರ್ವಜನಿಕ ಜೀವನದಲ್ಲಿ ಇದ್ದೀರಿ, ಅಂಥವರು ಬಳಸುವ ಪದಗಳ ಬಗ್ಗೆ ಹಾಗೂ ಮುಖದ ಮೇಲೆ ಸಿಟ್ಟು- ಸೆಡವು ತೋರಿಸದಂತೆ ಇರಬೇಕು. ಮದುವೆ ನಿಶ್ಚಯ ಆಗಿರುವಂಥವರು ನಿಮ್ಮ ಹೆಚ್ಚುಗಾರಿಕೆಯನ್ನು ಹೇಳಿಕೊಳ್ಳುವುದಕ್ಕೆ ಹೋಗಿ, ಸಂಬಂಧ ಮುರಿದುಬೀಳುವಂಥ ಸಾಧ್ಯತೆಗಳು ಸಹ ಇರುತ್ತವೆ. ಆದ್ದರಿಂದ ಎಷ್ಟು ಮಾತನಾಡಬೇಕು, ಯಾವ ವಿಚಾರ ಮಾತನಾಡಬೇಕು ಎಂಬ ವಿಚಾರದಲ್ಲಿ ಸ್ಪಷ್ಟತೆ ಇಟ್ಟುಕೊಳ್ಳಿ. ಇನ್ನು ನಿಮಗೆ ಸನ್ಮಾನ ಮಾಡುತ್ತೇವೆ ಅಂತಲೋ ಅಥವಾ ಗೌರವ ಹುದ್ದೆಗಳು ನೀಡುತ್ತೇವೆ ಅಂತಲೋ ನಿಮ್ಮಿಂದ ಹಣ ಪಡೆದುಕೊಂಡು, ವಂಚಿಸುವವರು ಸಹ ಬರುತ್ತಾರೆ. ಹೊಗಳಿಕೆಗೆ ಮರುಳಾದರೆ ದೊಡ್ಡ ಮೊತ್ತದ ಬೆಲೆ ತೆರಬೇಕಾಗುತ್ತದೆ. ಸೋದರ- ಸೋದರಿಯರಿಗೆ ಅಪಘಾತ- ಅವಘಡಗಳು ಸಂಭವಿಸಬಹುದು. ಸೋದರ- ಸೋದರಿಯರ ಜೊತೆಗೆ ಆಸ್ತಿ ವಿಚಾರಕ್ಕೆ ಮನಸ್ತಾಪ- ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ವಿವಾಹಿತರು ಸಂಗಾತಿಯನ್ನು ಅಥವಾ ಅವರ ಕುಟುಂಬದವರನ್ನು ಮೂದಲಿಸುವ- ಹೀಯಾಳಿಸಿ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆಗಳಿವೆ.

ಮಿಥುನ ಈ ರಾಶಿಯವರಿಗೆ ಎರಡನೇ ಮನೆಯಲ್ಲಿ ಕುಜ ಸಂಚಾರ ಇರುತ್ತದೆ. ಸಂಗಾತಿ ಅಥವಾ ಪ್ರಿಯಕರ- ಪ್ರಿಯತಮೆಯ ಜತೆಗೆ ಹಣಕಾಸಿನ ವಿಚಾರಕ್ಕೆ ಮನಸ್ತಾಪಗಳು ಕಾಣಿಸಿಕೊಳ್ಳಲಿವೆ. ಒಂದೋ ನೀವು ವಿಪರೀತ ದುಂದು ವೆಚ್ಚ ಮಾಡುತ್ತಿದ್ದೀರಿ ಅಂತ ಆಕ್ಷೇಪ ಮಾಡಬಹುದು ಅಥವಾ ಜುಗ್ಗತನ ಮಾಡುತ್ತಿದ್ದೀರಿ ಎಂದು ದೂರಬಹುದು. ಸಾಮಾನ್ಯಕ್ಕಿಂತ ನಿಮ್ಮ ಮಾತಿನಲ್ಲಿ ಕಟು ಶಬ್ದಗಳು, ಒರಟುತನ ಇಣುಕುತ್ತವೆ. ಹಂಗಿಸುವುದು, ವ್ಯಂಗ್ಯವಾಡುವುದು ಈ ಥರದ್ದೆಲ್ಲ ಬೇಡವೇ ಬೇಡ. ನಿಮ್ಮಲ್ಲಿ ಯಾರು ಭೂಮಿ ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದೀರಿ ಅಂಥವರು ಕಡಿಮೆ ಬೆಲೆಗೆ ಏನೋ ಸಿಗುತ್ತಿದೆ ಎಂಬ ಕಾರಣಕ್ಕೆ ಪಿಗ್ಗಿ ಬೀಳಬೇಡಿ. ಆತುರ ಮಾಡಿ, ಹಣವನ್ನು ಅಡ್ವಾನ್ಸ್ ನೀಡಿದರೆ ಒಂದೋ ಬರುವುದಿಲ್ಲ. ಅಥವಾ ಪೊಲೀಸ್ ಸ್ಟೇಷನ್- ಕೋರ್ಟ್- ಕಚೇರಿ ಅಲೆದಾಡುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ಆದ್ದರಿಂದ ನಯವಾದ ಮಾತುಗಳು, ಆಮಿಷ ತೋರಿಸುವಂಥ ವ್ಯವಹಾರಗಳ ಬಗ್ಗೆ ಜಾಗ್ರತೆಯನ್ನು ತೆಗೆದುಕೊಳ್ಳಿ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರು, ಕೃಷಿಕ ವೃತ್ತಿಯಲ್ಲಿ ಇರುವವರು, ಎಲೆಕ್ಟ್ರಿಕಲ್ ವಸ್ತುಗಳ ಹೋಲ್-ಸೇಲ್ ಮಾರಾಟಗಾರರು ಇಂಥವರಿಗೆ ವ್ಯಾಜ್ಯಗಳು ಕಾಣಿಸಿಕೊಳ್ಳಲಿವೆ.

ಕರ್ಕಾಟಕ ಈ ರಾಶಿಯವರಿಗೆ ಜನ್ಮ ಸ್ಥಾನದಲ್ಲಿ ಕುಜ ಸಂಚಾರ ಇರುತ್ತದೆ. ಮನೆಯಲ್ಲಿ ಅಥವಾ ಉದ್ಯೋಗ- ವ್ಯವಹಾರ ಮಾಡುವಂಥ ಸ್ಥಳದಲ್ಲಿ ಶಾರ್ಟ್ ಸರ್ಕೀಟ್, ಬೆಂಕಿ ಅವಘಡ ಆಗಬಹುದು. ಇನ್ನು ವಾಹನ ಚಾಲನೆ ವೇಳೆ ಜಾರಿಬಿದ್ದು, ಬ್ರೇಕ್ ಫೇಲ್ ಆಗಿ ಅಪಘಾತಗಳು ಸಂಭವಿಸಬಹುದು. ಮುಖ್ಯವಾಗಿ ಗಮನದಲ್ಲಿ ಇರಬೇಕಾದ ಸಂಗತಿ ಏನೆಂದರೆ, ಏಕಾಗ್ರತೆ ಸಾಧ್ಯವಿಲ್ಲ ಅಂತಾದಲ್ಲಿ ವಾಹನ ಚಾಲನೆಯನ್ನು ಮಾಡದಿರುವುದು ಕ್ಷೇಮ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳು- ಸಹೋದ್ಯೋಗಿಗಳ ಜೊತೆಗೆ ಮನಸ್ತಾಪ ಆಗಲಿದೆ. ನೀವಾಗಿಯೇ ಕೆಲಸ ಬಿಡುವ ನಿರ್ಧಾರಕ್ಕೆ ಸಹ ಬರುವ ಸಾಧ್ಯತೆಗಳಿವೆ. ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ. ಕೋಪದಲ್ಲಿ ಇರುವಾಗ ಯಾವ ನಿರ್ಧಾರವನ್ನೂ ಮಾಡಬೇಡಿ. ಗರ್ಭಿಣಿಯರು ವೈದ್ಯಕೀಯ ವಿಚಾರಗಳಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಫಾಲೋ ಅಪ್ ಚೆಕಪ್ ಗಳನ್ನು ಆಯಾ ಸಮಯಕ್ಕೆ ಸರಿಯಾಗಿ ಮಾಡಿಸಿಕೊಂಡಿದ್ದೀರಿ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಈ ಹಿಂದೆ ನೀವು ಯಾರ ಮೇಲಾದರೂ ಸಿಟ್ಟಿನಿಂದ ಕೂಗಾಡಿ, ಕಿರುಚಾಡಿ ಅಥವಾ ಅವರಿಗೇನಾದರೂ ಅವಮಾನ ಅಂತ ಮಾಡಿದ್ದಲ್ಲಿ ನಿಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಅವರು ಪ್ರಯತ್ನ ಮಾಡಲಿದ್ದಾರೆ.

ಸಿಂಹ ಈ ರಾಶಿಯವರಿಗೆ ಹನ್ನೆರಡನೇ ಮನೆಯಲ್ಲಿ ಕುಜ ಸಂಚಾರ ಇರುತ್ತದೆ. ಯಾವುದೇ ಕಾರಣಕ್ಕೂ ಸೆಕೆಂಡ್ ಹ್ಯಾಂಡ್ ವಾಹನಗಳನ್ನು, ಸೆಕೆಂಡ್ ಹ್ಯಾಂಡ್ ಗ್ಯಾಜೆಟ್ ಗಳನ್ನು ಖರೀದಿ ಮಾಡಬೇಡಿ. ತಂದೆ ಅಥವಾ ತಂದೆ ಸಮಾನರಾದವರ ಜೊತೆಗಿನ ಮನಸ್ತಾಪ- ಅಭಿಪ್ರಾಯ ಭೇದಗಳಿಂದ ಮಾನಸಿಕ ಕಿರಿಕಿರಿ, ಹಿಂಸೆ ಮಾಡುತ್ತವೆ. ಖರ್ಚು ಹೆಚ್ಚಾಗಲಿದೆ. ಪೊಲೀಸ್ ಇಲಾಖೆ, ಸೈನ್ಯದಲ್ಲಿ ಉದ್ಯೋಗ ಮಾಡುವವರು ಅಥವಾ ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ವರ್ಚಸ್ಸಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಸಹೋದ್ಯೋಗಿಗಳ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಬೇಡಿ. ನಿಮಗೆ ಆಪ್ತರಾದವರು ಹಾಗೂ ಭಾವನಾತ್ಮಕವಾಗಿ ನಂಟಿರುವಂಥ ವ್ಯಕ್ತಿಗಳಿಗೆ ಕೂಡ ಈ ಅವಧಿಯಲ್ಲಿ ಅಪಘಾತಗಳಾಗಬಹುದು ಅಥವಾ ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಇದು ನಿಮ್ಮನ್ನು ಆತಂಕಕ್ಕೆ ದೂಡಲಿದೆ. ಅವರ ಸಲುವಾಗಿ ಹಣ ಹೊಂದಿಸುವಬೇಕಾದ ಸಂದರ್ಭಗಳು ಕೂಡ ಸೃಷ್ಟಿ ಆಗಲಿವೆ. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರ ವಾಹನಗಳನ್ನು ನಿಮಗೆ ಅಗತ್ಯ ಇದೆ ಅಂತಲೋ ಅಥವಾ ಅವರಾಗಿಯೇ ಕೇಳಿದರು ಅಂತಲೋ ಚಾಲನೆ ಮಾಡುವುದಕ್ಕೆ ಹೋಗಬೇಡಿ, ಇದರಿಂದ ನಷ್ಟ ಅನುಭವಿಸಬೇಕಾದೀತು.

ಕನ್ಯಾ ಈ ರಾಶಿಯವರಿಗೆ ಹನ್ನೊಂದನೇ ಮನೆಯಲ್ಲಿ ಕುಜ ಸಂಚಾರ ಇರುತ್ತದೆ. ಕಡಿಮೆ ಖರ್ಚಿನಲ್ಲಿ ಅಥವಾ ಹೆಚ್ಚು ವೆಚ್ಚ ಮಾಡದೆ- ಬಜೆಟ್ ಒಳಗಾಗಿ ಮಾಡಬೇಕು ಅಂತ ಅಂದುಕೊಂಡಿದ್ದ ಕೆಲಸ ಕಾರ್ಯಗಳಿಗೆ ಅಂದಾಜಿಗಿಂತ ಜಾಸ್ತಿ ಹಣ ಕೈ ಬಿಡುತ್ತದೆ. ಇನ್ನೇನು ಲಾಭ ಕೈ ಸೇರುತ್ತದೆ ಅಂದುಕೊಂಡಿದ್ದು ಬಾರದೆ ಹೋಗುತ್ತದೆ ಅಥವಾ ಬೇರೆಯವರ ಪಾಲಾಗುತ್ತದೆ. ಈ ಅವಧಿಯಲ್ಲಿ ರಿಪೇರಿ, ರಿನೋವೇಷನ್ ಇಂಥವುಗಳನ್ನು ಮಾಡದಿರುವುದು ಉತ್ತಮ. ಇದನ್ನು ಮೀರಿ ಕೆಲಸಗಳನ್ನು ಕೈಗೆತ್ತಿಕೊಂಡಲ್ಲಿ ಪದೇಪದೇ ಕೆಲಸಗಾರರನ್ನು ಬದಲಿಸುವ ಅಥವಾ ನಿಮ್ಮ ಬಳಿ ಕೆಲಸಗಾರರು ಅಡ್ವಾನ್ಸ್ ಹಣ ಪಡೆದುಕೊಂಡು, ಬಾರದಿರುವ ಸನ್ನಿವೇಶಗಳು ನಿರ್ಮಾಣ ಆಗುತ್ತವೆ. ಈಗಾಗಲೇ ಆಸ್ತಿ ಹಂಚಿಕೆ ಆಗಿರುವಂಥ ಕುಟುಂಬಗಳಲ್ಲಿಯೂ ಸೋದರ- ಸೋದರಿಯರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರುತ್ತದೆ. ಕಾಗದ ಪತ್ರಗಳ ವ್ಯವಹಾರಗಳನ್ನು ಕಾನೂನುಬದ್ಧವಾಗಿ ಮಾಡಿಕೊಳ್ಳಿ. ಉದ್ಯೋಗ ಅಥವಾ ವ್ಯವಹಾರಕ್ಕಾಗಿ ದೂರ ಪ್ರಯಾಣ ಮಾಡುವಂತಿದ್ದಲ್ಲಿ ಸೂಕ್ತ ಸಿದ್ಧತೆ, ಭದ್ರತೆಯ ವಿಷಯದಲ್ಲಿ ಮುಂಜಾಗ್ರತೆಯನ್ನು ವಹಿಸಿಕೊಳ್ಳುವುದು ಆದ್ಯತೆಯಾಗಲಿ. ವಿಮಾನದಲ್ಲಿ ಪ್ರಯಾಣ ಮಾಡುವಂಥವರು ಬೋರ್ಡಿಂಗ್ ಪಾಸ್, ವೀಸಾ, ಟಿಕೆಟ್ ಮೊದಲಾದವುಗಳ ಕಡೆಗೆ ಲಕ್ಷ್ಯ ನೀಡಿ.

ತುಲಾ ಈ ರಾಶಿಯವರಿಗೆ ಹತ್ತನೇ ಮನೆಯಲ್ಲಿ ಕುಜ ಸಂಚಾರ ಇರುತ್ತದೆ. ಕೆಲಸ ಬದಲಾವಣೆ ಮಾಡುವ ಉದ್ದೇಶ ಇದ್ದಲ್ಲಿ ಈ ಅವಧಿಯಲ್ಲಿ ಮಾಡದಿರುವುದು ಕ್ಷೇಮ. ಒಂದು ವೇಳೆ ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಜಾಸ್ತಿಯಾದರೆ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯುವುದಕ್ಕೆ ಪ್ರಯತ್ನಿಸಿ. ಒಂದು ವೇಳೆ ಈಗ ಕೆಲಸದಲ್ಲಿ ಇಲ್ಲ, ಉದ್ಯೋಗದ ಹುಡುಕಾಟದಲ್ಲಿ ಇದ್ದೀರಿ ಅಂತಾದರೆ ಕೈಗೆ ಬಂದಂತೆ ಆಗಿ, ಜಾರಿ ಹೋಗುವ ಸಾಧ್ಯತೆಗಳಿವೆ. ಆದ್ದರಿಂದ ಕೆಲಸ ಆಯಿತು ಎಂಬುದು ಖಾತ್ರಿ ಆಗುವ ತನಕ ಎಲ್ಲಿಯೂ- ಯಾರ ಬಳಿಯೂ ಹೇಳಿಕೊಂಡು ಬರಬೇಡಿ. ನಿಮ್ಮಲ್ಲಿ ಯಾರು ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಥವಾ ದೈನಂದಿನವಾಗಿ ಬ್ಯಾಂಕ್ ಗೆ ಹಣ ಕಟ್ಟುವ ಅಥವಾ ಬ್ಯಾಂಕ್ ನಿಂದ ಹಣ ವಿಥ್ ಡ್ರಾ ಮಾಡುವುದರಲ್ಲಿ ತೊಡಗಿಕೊಂಡಿದ್ದೀರಿ ಅಂತಹವರು ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮದಲ್ಲದ ತಪ್ಪಿಗೆ ಅಥವಾ ನಿಮ್ಮ ಅಜಾಗರೂಕತೆ- ನಿರ್ಲಕ್ಷ್ಯಕ್ಕೆ ಪರಿತಪಿಸುವಂತೆ ಆಗುತ್ತದೆ. ಗಂಟಲಿನಲ್ಲಿ ಹುಣ್ಣು, ಗಡ್ಡೆ, ಧ್ವನಿ ಪೆಟ್ಟಿಗೆಯಲ್ಲಿ ವಿಪರೀತ ನೋವು ಕಾಡಬಹುದು. ವೈದ್ಯೋಪಚಾರ, ಚಿಕಿತ್ಸೆಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ.

ವೃಶ್ಚಿಕ ಈ ರಾಶಿಯವರಿಗೆ ಒಂಬತ್ತನೇ ಮನೆಯಲ್ಲಿ ಕುಜ ಸಂಚರಿಸುತ್ತದೆ. ಯಾವುದೇ ವೃತ್ತಿಯಲ್ಲಿರಲಿ ಅಥವಾ ಉದ್ಯೋಗದಲ್ಲಿರಲಿ ಆಸಕ್ತಿ ಕಳೆದುಕೊಳ್ಳುವಂತಾಗುತ್ತದೆ. ಲ್ಯಾಂಡ್ ಡೆವಲಪ್ ಮೆಂಟ್ ಅಥವಾ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಆದಾಯದಲ್ಲಿ ಅಥವಾ ಲಾಭದಲ್ಲಿ ಇಳಿಕೆ ಆಗಲಿದೆ. ಶತ್ರುಗಳು ಹಿಂದೆ ನೀಡಲು ಆರಂಭಿಸುತ್ತಾರೆ. ನಿಮ್ಮ ವಿರುದ್ಧ ದೂರುಗಳು ನೀಡುವುದಕ್ಕೆ ಆರಂಭಿಸುತ್ತಾರೆ. ಅದು ಉದ್ಯೋಗದಲ್ಲಿಯೇ ಇರಬಹುದು, ವೃತ್ತಿಯಲ್ಲಿಯೇ ಇರಬಹುದು, ಪ್ರತಿಸ್ಪರ್ಧಿಗಳ ಕೈ ಮೇಲಾಗುತ್ತದೆ. ನಿಮ್ಮ ಪರವಾಗಿ ವಿಚಾರವನ್ನು ಹೇಳುವುದಕ್ಕೋ ಅಥವಾ ಸ್ಪಷ್ಟನೆ ನೀಡುವುದಕ್ಕೋ ಅವಕಾಶವೇ ನೀಡದಂತೆ ನಿಮ್ಮನ್ನು ಶಿಕ್ಷೆಗೆ ಗುರಿ ಪಡಿಸಬಹುದು. ನಾಲ್ಕು ಜನರ ಮುಂದೆ ನಿಮಗೆ ಅವಮಾನ ಮಾಡುವವರು ಹೆಚ್ಚಾಗುತ್ತಾರೆ. ಅದೃಷ್ಟವನ್ನು ನೆಚ್ಚಿಕೊಂಡು ಮಾಡುವಂಥ ಯಾವುದನ್ನೂ ಮಾಡಬೇಡಿ. ಅದರಲ್ಲೂ ಬೆಟ್ಟಿಂಗ್, ಸಟ್ಟಾ ವ್ಯವಹಾರಗಳು ಇಂಥವುಗಳಿಂದ ದೂರ ಇರಿ. ಇನ್ನು ನಿಮ್ಮಲ್ಲಿ ಯಾರಿಗೆ ಸಂಬಂಧಿಕರಿಂದ ಹಣ ಬರಬೇಕಾಗಿರುತ್ತದೋ ಅದು ಬಾರದೆ ನಿಧಾನವಾಗುತ್ತದೆ, ಕೊಡುವುದಿಲ್ಲ ಅಂತಲೂ ಅವರು ಹೇಳಬಹುದು. ನೀವೇನಾದರೂ ಕುಟುಂಬದ ಉದ್ಯಮ, ವ್ಯವಹಾರಗಳನ್ನು ಮುನ್ನಡೆಸುತ್ತಿದ್ದಲ್ಲಿ ನಿಮ್ಮ ಕೆಲವು ದುಡುಕು- ತಪ್ಪು ನಿರ್ಧಾರಗಳಿಂದ ನಷ್ಟ ಅನುಭವಿಸುವಂತಾಗುತ್ತದೆ.

ಧನುಸ್ಸು ಈ ರಾಶಿಯವರಿಗೆ ಎಂಟನೇ ಮನೆಯಲ್ಲಿ ಕುಜ ಗ್ರಹದ ಸಂಚಾರ ಆಗುತ್ತದೆ. ಈ ಹಿಂದೆ ಮಾಡಿಸಿಕೊಂಡ ಶಸ್ತ್ರಚಿಕಿತ್ಸೆ, ಅಥವಾ ಬೇರೆ ಯಾವುದೇ ಔಷಧೋಪಚಾರಗಳು ಅಲರ್ಜಿಯಾಗಿ ಕಾಡಬಹುದು. ಈ ಅವಧಿಯಲ್ಲಿ ಯಾವುದೇ ಕಾರಣಕ್ಕೂ ವೈದ್ಯರು ಅಥವಾ ಔಷಧೋಪಚಾರದ ವಿಧಾನವನ್ನು ಬದಲಿಸಿಕೊಳ್ಳದಿರುವುದು ಕ್ಷೇಮ- ಉತ್ತಮ. ಇನ್ನು ನೀವು ಸಾಲ ಪಡೆದುಕೊಂಡಿದ್ದಲ್ಲಿ, ಅದರಲ್ಲೂ ಚಿನ್ನ ಅಥವಾ ಭೂಮಿ- ವಾಹನವನ್ನು ಅಡಮಾನ ಮಾಡಿ, ಹಣವನ್ನು ಪಡೆದುಕೊಂಡಿದ್ದಲ್ಲಿ ಅವುಗಳು ಹರಾಜಿಗೆ ಬರಬಹುದು. ನಿಮಗೆ ಮಾಹಿತಿ ನೀಡದೆಯೇ ಏಕಾಏಕಿ ಹೀಗೆ ಹರಾಜಿಗೆ ತರುವ ಸಾಧ್ಯತೆಯೂ ಇದೆಯಾದ್ದರಿಂದ ಈ ಬಗ್ಗೆ ಸರಿಯಾದ ವಿಚಾರಣೆ ಮಾಡುವುದು ಒಳ್ಳೆಯದು. ಜಮೀನಿನಲ್ಲಿ ಅಥವಾ ಸೈಟಿನಲ್ಲಿ ಬೋರ್ ವೆಲ್, ಬಾವಿ ತೋಡಿಸಬೇಕು ಎಂಬ ಆಲೋಚನೆಯಲ್ಲಿ ಇರುವವರು ಅಥವಾ ಈಗಾಗಲೇ ಇರುವುದಕ್ಕೆ ಮೋಟಾರ್ ಕೂಡಿಸಬೇಕು ಎಂಬ ಆಲೋಚನೆಯಲ್ಲಿ ಇರುವವರಿಗೆ ನಾನಾ ರೀತಿಯ ಸಮಸ್ಯೆಗಳು ತಲೆದೋರಲಿವೆ. ಸರ್ಕಾರದಿಂದ ಪಡೆದುಕೊಳ್ಳಬೇಕಾದ ಅನುಮತಿ, ಪರವಾನಗಿ ಮೊದಲಾದವುಗಳನ್ನು ಕ್ರಮಬದ್ಧವಾಗಿ ಪಡೆದುಕೊಂಡೇ ಮುಂದುವರಿಯುವುದು ಒಳ್ಳೆಯದು. ಹೀಗೆ ಮಾಡದಿದ್ದಲ್ಲಿ ಭಾರೀ ಮೊತ್ತದ ದಂಡವನ್ನು ತೆರಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ.

ಮಕರ ಈ ರಾಶಿಯವರಿಗೆ ಏಳನೇ ಮನೆಯಲ್ಲಿ ಕುಜ ಸಂಚಾರ ಮಾಡುತ್ತದೆ. ನೀವು ನಿರೀಕ್ಷೆ ಮಾಡಿದಂತೆ ಲಾಭ ಬರುವುದಿಲ್ಲ. ಮನೆಯಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಸಣ್ಣ- ಪುಟ್ಟ ವಿಚಾರಗಳಿಗೂ ಕಲಹ, ಜಗಳ ಆಗುತ್ತದೆ. ನಿಮ್ಮ ಜತೆಗೆ ಎಂಥ ಸವಾಲಿನ ಸಂದರ್ಭದಲ್ಲಿಯೂ ಜೊತೆಗೆ ನಿಲ್ಲುವುದಾಗಿ ಮಾತು ನೀಡಿದ ವ್ಯಕ್ತಿಗಳೂ ನಿಮಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಇನ್ನೊಬ್ಬರನ್ನು ಜೊತೆ ಮಾಡಿಕೊಂಡು ಖರೀದಿಸಬೇಕು ಅಂದುಕೊಂಡಿದ್ದ ಸೈಟು ಅಥವಾ ಜಮೀನನ್ನು ಕೊನೆ ಕ್ಷಣದಲ್ಲಿ ಬೇಡ ಎಂದುಕೊಂಡು ಕೈ ಬಿಡಬೇಕಾಗುತ್ತದೆ. ಬೇರೆ ಊರುಗಳಿಂದ ಬಂದಂಥ ಸಂಬಂಧಿಕರನ್ನು ನಂಬಿಕೊಂಡು ಆರಂಭಿಸಿದ ಉದ್ಯಮ, ವ್ಯವಹಾರಗಳನ್ನು ಅರ್ಧಕ್ಕೆ ನಿಲ್ಲಿಸುವುದು ಅಥವಾ ಸಂಪೂರ್ಣವಾಗಿ ಮುಚ್ಚುವುದೋ ಮಾಡಬೇಕಾಗುತ್ತದೆ. ವಿದೇಶಗಳಲ್ಲಿ ವ್ಯಾಸಂಗಕ್ಕೋ ಅಥವಾ ಉದ್ಯೋಗಕ್ಕೋ ನೀವು ಪ್ರಯತ್ನ ಮಾಡುತ್ತಿರುವವರಾದರೆ ನಾನಾ ಬಗೆಯ ಅಡೆತಡೆಗಳು, ಸವಾಲುಗಳು ಎದ್ದು ನಿಲ್ಲುತ್ತವೆ. ತಾಯಿಯ ಜತೆಗೆ ಮನಸ್ತಾಪಗಳು ಕಾಣಿಸಿಕೊಳ್ಳುತ್ತವೆ. ನೀವು ಆಡುವ ಮಾತುಗಳು ನಾನಾ ಅರ್ಥಗಳನ್ನು ಕಲ್ಪಿಸಿ, ಮಾನಸಿಕವಾಗಿ ಕುಗ್ಗುವಂತೆ ಕೆಲವರು ಮಾಡಲಿದ್ದಾರೆ. ಈ ಹಿಂದೆ ಮಾಡಿಕೊಂಡ ವ್ಯವಹಾರದ ಒಪ್ಪಂದಗಳಿಂದ ನೀವಾಗಿಯೇ ಹೊರಗೆ ಬರುವಂತಾಗುತ್ತದೆ.

ಕುಂಭ ಈ ರಾಶಿಯವರಿಗೆ ಆರನೇ ಮನೆಯಲ್ಲಿ ಕುಜ ಸಂಚಾರ ಆಗುತ್ತದೆ. ಚರ್ಮ ರೋಗಗಳು ಕಾಣಿಸಿಕೊಳ್ಳಬಹುದು. ಕುರು, ಬಾಯಿ ಹುಣ್ಣು, ಸೋರಿಯಾಸಿಸ್ ನಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವು ಈಗಾಗಲೇ ಇದ್ದಲ್ಲಿ ರೋಗ ಉಲ್ಬಣ ಆಗುವ ಸಾಧ್ಯತೆಗಳಿವೆ. ತಲೆ ಸುತ್ತು, ಕಣ್ಣು ಕತ್ತಲೆ ಬರುವಂತಾಗುವುದು, ಎತ್ತರದ ಸ್ಥಳದಲ್ಲಿ ನಿಂತರೆ ದೇಹ ಜೋಲಿ ಬಂದಂತಾಗುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ನಿಮ್ಮಲ್ಲಿ ಯಾರು ಎತ್ತರದ ಸ್ಥಳದಲ್ಲಿ ನಿಂತು ಕೆಲಸ ಮಾಡುತ್ತೀರೋ ಅಂಥವರು ಸಾಮಾನ್ಯಕ್ಕಿಂತ ಹೆಚ್ಚು ಜಾಗ್ರತೆಯನ್ನು ವಹಿಸಿ. ಇನ್ನು ನಿಮಗೆ ಅಂತ ವಹಿಸಿದ ಜವಾಬ್ದಾರಿ- ಕೆಲಸಗಳನ್ನು ಇತರರಿಗೆ ವರ್ಗಾವಣೆ ಮಾಡದಿರುವುದು ಉತ್ತಮ. ಒಂದರ್ಥದಲ್ಲಿ ಇತರರನ್ನು ನೆಚ್ಚಿಕೊಂಡು, ನೀವು ಯಾವುದೇ ಕೆಲಸವನ್ನು ವಹಿಸದಿರುವುದು ಒಳ್ಳೆಯದು. ನಿಮ್ಮಲ್ಲಿ ಯಾರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತೀರೋ ಅಂಥವರು ಹುದ್ದೆಯನ್ನು ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿ ಆಗುತ್ತದೆ. ಕೆಲಸ ಕಾಯಂ ಮಾಡಿಸಿಕೊಡುವುದಾಗಿ ಯಾರಾದರೂ ಹಣ ನೀಡುವಂತೆ ಕೇಳಿದರೂ ಅಂಥ ವ್ಯವಹಾರಗಳಿಗೆ ತಲೆ ಕೂಡ ಹಾಕಬೇಡಿ. ಒಂದು ವೇಳೆ ಹಣ ನೀಡಿದಲ್ಲಿ ಅದು ಕಳೆದುಕೊಳ್ಳುವಂತೆ ಆಗುತ್ತದೆ.

ಮೀನ ಈ ರಾಶಿಯವರಿಗೆ ಐದನೇ ಮನೆಯಲ್ಲಿ ಕುಜ ಗ್ರಹದ ಸಂಚಾರ ಆಗುತ್ತದೆ. ಮಕ್ಕಳ ಆರೋಗ್ಯ, ಶಿಕ್ಷಣ, ಉದ್ಯೋಗ, ಭವಿಷ್ಯ, ವಿವಾಹ, ವೃತ್ತಿ- ವ್ಯಾಪಾರದ ವಿಚಾರಗಳು ನಿಮ್ಮನ್ನು ಚಿಂತೆಗೆ ಗುರಿ ಮಾಡುತ್ತವೆ. ಸರ್ಕಾರಿ ಕೆಲಸದಲ್ಲಿ ಇರುವವರು ಇಲಾಖೆ ವಿಚಾರಣೆಗಳನ್ನು ಎದುರಿಸುವಂತೆ ಆಗುತ್ತದೆ. ವಿದ್ಯಾರ್ಥಿಗಳಾಗಿದ್ದು, ಮುಖ್ಯವಾದ ಪ್ರವೇಶ ಪರೀಕ್ಷೆಗಳು ಬರೆಯುತ್ತಿದ್ದಲ್ಲಿ ಅದರಲ್ಲಿ ಯಶಸ್ಸು ಸಿಗುವುದು ಅಸಾಧ್ಯವಾಗುತ್ತದೆ. ಅದರಲ್ಲೂ ನಿಮ್ಮ ಜನ್ಮ ಜಾತಕದಲ್ಲಿ ಕುಜ ನೀಚ ಸ್ಥಿತಿಯಲ್ಲೂ ಇದ್ದಲ್ಲಿ ಒಂದು ವೇಳೆ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಒಂದಿಲ್ಲೊಂದು ಕಾರಣದಿಂದ ನಿಮಗೆ ಅವಕಾಶಗಳು ಬಾರದಂತೆ ಆಗುತ್ತದೆ. ಆದ್ದರಿಂದ ನರಸಿಂಹ ದೇವರ ಆರಾಧನೆಯನ್ನು ಮಾಡಿಕೊಳ್ಳಿ. ನಿಮ್ಮಲ್ಲಿ ಯಾರಾದರೂ ನರಸಿಂಹ ದೇವರಿಗೋ ಸುಬ್ರಹ್ಮಣ್ಯ ದೇವರಿಗೋ ಹರಕೆ ಹೊತ್ತುಕೊಂಡು, ಪೂರ್ಣ ಮಾಡದಿದ್ದಲ್ಲಿ ಅದನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆಯನ್ನು ನೀಡಿ. ಒಂದು ಕೆಲಸಕ್ಕೆ ಹತ್ತಾರು ಸಲ ಅಲೆದಾಡುವಂತೆ ಆಗುತ್ತದೆ. ಒಂದು ವೇಳೆ ನೀವು ಆಸಕ್ತಿಯನ್ನೇ ಕಳೆದುಕೊಂಡು ಬಿಟ್ಟರೋ ಆ ಕೆಲಸ ಹಾಗೇ ಉಳಿದುಹೋಗುವ ಸಾಧ್ಯತೆ ಹೆಚ್ಚಿದೆ. ಹಾಗೆ ಮಾಡುವುದಕ್ಕೆ ಹೋಗಬೇಡಿ. ಪಟ್ಟು ಹಿಡಿದು ಕೆಲಸ ಮುಗಿಸಿಕೊಳ್ಳಿ.

ಪರಿಹಾರ ಏಳು ಸಾವಿರ ಕುಜ ಗ್ರಹದ ಜಪ, ಶಾಂತಿ ಮಾಡಿಸಬಹುದು. ಮಂಗಳವಾರ ಅಥವಾ ಸ್ವಾತಿ ನಕ್ಷತ್ರ ಇರುವ ದಿನ ನರಸಿಂಹ ದೇವರ ಅಭಿಷೇಕಕ್ಕೆ ದೇವಸ್ಥಾನದಲ್ಲಿ ನೀಡಡಬಹುದು. ಮಂಗಳವಾರದ ದಿನ ತೊಗರಿಬೇಳೆಯನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ, ವೀಳ್ಯದೆಲೆ, ಬಾಳೇಹಣ್ಣು, ಅಡಿಕೆ, ದಕ್ಷಿಣೆ ಸಹಿತವಾಗಿ ದಾನ ಮಾಡಬಹುದು. ತಾಮ್ರದಲ್ಲಿ ಭೂ ವರಾಹ ದೇವರ ಮೂರ್ತಿಯನ್ನು ದಾನವಾಗಿ ನೀಡಬಹುದು. ಈ ಪೈಕಿ ಯಾವುದು ಸಾಧ್ಯವೋ ಅದನ್ನು ಪರಿಹಾರವಾಗಿ ಮಾಡಬಹುದು.

ಲೇಖನ- ಎನ್.ಕೆ. ಸ್ವಾತಿ