Number 6 Yearly Numerology 2025: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 6ಕ್ಕೆ 2025ರ ವರ್ಷಭವಿಷ್ಯ
ಜನ್ಮ ಸಂಖ್ಯೆ 1ರ ವರ್ಷ ಭವಿಷ್ಯ 2025: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 6ಕ್ಕೆ 2025ರಲ್ಲಿ ಯಾವೆಲ್ಲ ಲಾಭ ಇದೆ. ಹಾಗೂ ಯಾವೆಲ್ಲ ತೊಂದರೆಗಳು, ಗುಣ- ಸ್ವಭಾವ, ಸಾಮಾನ್ಯ ಸಂಗತಿಗಳು, ಆರೋಗ್ಯ,ಆಸ್ತಿ, ಹಣ, ಹೂಡಿಕೆ, ಪ್ರೇಮ-ಮದುವೆ, ಉದ್ಯೋಗಗಳಲ್ಲಿ ಅನೇಕ ರೀತಿ ತೊಂದರೆಗಳು ಅಥವಾ ನೋವುಗಳು ಬರುವುದು. ಹಾಗೂ ಇಲ್ಲಿ ನಿಮ್ಮ ಅದೃಷ್ಟದ ಬಗ್ಗೆಯೂ ತಿಳಿಸಲಾಗಿದೆ. 2025ಕ್ಕೆ ನಿಮ್ಮ ನಡವಳಿಕೆಗಳು ಹೇಗಿದೆ ಎಂಬ ಬಗ್ಗೆಯೂ ಇಲ್ಲಿ ತಿಳಿಸಲಾಗಿದೆ.
ಜನ್ಮಸಂಖ್ಯೆ 6 ಅಂದರೆ, ವರ್ಷದ ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 6 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ಗುಣ- ಸ್ವಭಾವ
ಸಂಖ್ಯೆ 6ರ ಅಧಿಪತಿ ಶುಕ್ರ ಗ್ರಹ. ಅಂದರೆ ಈ ದಿನ ಜನಿಸಿದವರಲ್ಲಿ ಆಕರ್ಷಣೆ ಇರುತ್ತದೆ. ಅದು ರೂಪಿನಲ್ಲಿ ಆಗಿರಬಹುದು, ಧರಿಸುವ ದಿರಿಸಿನಲ್ಲಿ ಇರಬಹುದು, ಆಡುವ ಮಾತಿನಲ್ಲಿಯೇ ಆಗಬಹುದು. ಒಟ್ಟಿನಲ್ಲಿ ಇತರರನ್ನು ಸೆಳೆಯುವಂಥ ಒಂದಾದರೂ ಅಂಶ ಇವರಲ್ಲಿ ಇರುತ್ತದೆ. ಸುಗಂಧ ದ್ರವ್ಯಗಳು, ಬ್ರ್ಯಾಂಡೆಡ್ ಬಟ್ಟೆ- ಗ್ಯಾಜೆಟ್ ಗಳು, ಒಡವೆಗಳು ಇವರಿಗೆ ಅಚ್ಚುಮೆಚ್ಚು. ಇದು ಈ ದಿನಾಂಕಗಳಲ್ಲಿ ಹುಟ್ಟಿದ ಸ್ತ್ರೀ- ಪುರುಷರು ಇಬ್ಬರಿಗೂ ಅನ್ವಯ ಆಗುತ್ತದೆ. ಸಿನಿಮಾ ರಂಗ, ಫ್ಯಾಷನ್ ಡಿಸೈನಿಂಗ್, ಫ್ಯಾಷನ್ ಕ್ಷೇತ್ರದಲ್ಲಿಯೇ ಮಾಡೆಲ್ ಗಳಾಗುವವರು ಈ ಸಂಖ್ಯೆಯವರು ಹೆಚ್ಚಾಗಿರುತ್ತಾರೆ. ಇವರಲ್ಲಿ ಹಲವರಿಗೆ ಪ್ರೀತಿ- ಪ್ರೇಮ, ಮದುವೆ ವಿಚಾರದಲ್ಲಿ ತುಂಬ ಗೊಂದಲಗಳು ಆಗುತ್ತವೆ. ಮಾನಸಿಕ ತುಮುಲಗಳು ಈ ವಿಚಾರದಲ್ಲಿ ಹೆಚ್ಚಾಗಿರುತ್ತವೆ. ಇನ್ನು ಇವರು ಯಾರ ಜತೆಗೆ ಸ್ನೇಹ ಮಾಡುತ್ತಾರೆ ಎಂಬುದನ್ನು ಗಮನಿಸಿದಾಗಲೂ ಅದು ಕೂಡ ಯಾರು ವಿಲಾಸಿಗಳಾಗಿರುತ್ತಾರೆ, ಪಾರ್ಟಿ- ಗೆಟ್ ಟು ಗೆದರ್ ಇಂಥವುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ಅಂಥವರ ಜೊತೆಗೆ ಈ ಸಂಖ್ಯೆಯ ವ್ಯಕ್ತಿಗಳ ಸ್ನೇಹ ಜಾಸ್ತಿಯಿರುತ್ತದೆ. ಇನ್ನು ಕಲಾಸಕ್ತಿಯೂ ಹೆಚ್ಚಿಗೆ ಇರುವಂಥವರು ಸಾಂಸ್ಕೃತಿಕ ಕಲೆ ಹಾಗೂ ಆ ರಂಗದಲ್ಲಿಯೂ ಛಾಪು ಮೂಡಿಸುತ್ತಾರೆ.
ಸಾಮಾನ್ಯ ಸಂಗತಿಗಳು
ನೀವು ಈಗ ವಾಸಿಸುತ್ತಿರುವ ಸ್ಥಳದಿಂದ ದೂರಕ್ಕೆ ತೆರಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಅದು ನೀವೇ ಆರಿಸಿಕೊಳ್ಳುವ ಉದ್ಯೋಗದ ಕಾರಣಕ್ಕೋ ಅಥವಾ ವ್ಯಾಪಾರ- ವ್ಯವಹಾರದ ಕಾರಣಗಳಿಗೋ ಈಗಿರುವ ಜಾಗದಿಂದ ಬೇರೆ ಕಡೆಗೆ ಹೋಗಬೇಕಾಗುತ್ತದೆ. ನಿಮ್ಮಲ್ಲಿ ಕೆಲವರು ಭವಿಷ್ಯದ ದೃಷ್ಟಿಯಿಂದ ಕೆಲವು ಕೋರ್ಸ್ ಗಳಿಗೆ ಸೇರುವ ನಿರ್ಧಾರವನ್ನು ಮಾಡುತ್ತೀರಿ. ಅದೇ ರೀತಿ ಲೋಕಸೇವಾ ಆಯೋಗ ಪರೀಕ್ಷೆಗಳು, ಬ್ಯಾಂಕಿಂಗ್ ಪರೀಕ್ಷೆಗಳು, ಸರ್ಕಾರಿ ಕೆಲಸಕ್ಕಾಗಿ ಸಿದ್ಧಗೊಳ್ಳುವುದಕ್ಕೆ ಬೇಕಾದ ಪರೀಕ್ಷೆಗಳನ್ನು ತೆಗೆದುಕೊಳ್ಳುವುದಕ್ಕಾಗಿ ಗಂಭೀರ ಪ್ರಯತ್ನಗಳನ್ನು ಶುರು ಮಾಡುತ್ತೀರಿ. ಕೌಟುಂಬಿಕ ಸಂಗತಿಗಳು ಹೆಚ್ಚು ಚಿಂತೆಗೆ ಕಾರಣ ಆಗಲಿದೆ. ನೀವು ಬಹಳ ಇಷ್ಟಪಟ್ಟು ಖರೀದಿ ಮಾಡಿದ್ದ ವಸ್ತುಗಳನ್ನು ಅಥವಾ ವಾಹನವನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬರಲಿದ್ದೀರಿ. ಹೊಸದಾಗಿ ಆಗುವ ಸ್ನೇಹಿತರ ಬಗ್ಗೆ ತುಂಬ ಸಲುಗೆಯಿಂದ ವರ್ತಿಸುವುದು ಒಳ್ಳೆಯದಲ್ಲ. ಇನ್ನು ನೀವೇ ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಇತರರಿಗೆ ವಹಿಸುವುದಕ್ಕೆ ಹೋಗಬೇಡಿ.
ಆರೋಗ್ಯ
ನಿಮ್ಮ ದೇಹವು ಉಷ್ಣಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತದೆ. ನೀವೇನಾದರೂ ಮಾಂಸಾಹಾರಿಗಳಾಗಿದ್ದಲ್ಲಿ ಆಹಾರ ಸೇವನೆ ವಿಚಾರವಾಗಿ ಬಹಳ ಜಾಗ್ರತೆಯನ್ನು ವಹಿಸಿ. ಮೂಳೆ, ಅಸ್ಥಿ ಮಜ್ಜೆಗೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಎದುರಾಗಬಹುದು. ಯಾರಿಗೆ ಮಧುಮೇಹ ಇರುತ್ತದೋ ಅಂಥವರಿಗೆ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಏರುಪೇರಾಗಲಿದೆ. ನೀವೇನಾದರೂ ಹೊಸ ವೈದ್ಯಕೀಯ ಪದ್ಧತಿಯನ್ನು ಅನುಸರಿಸುವುದಕ್ಕೆ ತೀರ್ಮಾನ ಮಾಡಿದಲ್ಲಿ ಒಂದಕ್ಕೆ ನಾಲ್ಕು ಬಾರಿ ಸರಿಯಾಗಿ ಆಲೋಚಿಸಿ, ಆ ನಂತರ ತೀರ್ಮಾನವನ್ನು ಮಾಡಿ. ಮುಖ್ಯವಾಗಿ ಧನ್ವಂತರಿ ಆರಾಧನೆಯನ್ನು ಮಾಡಿಕೊಳ್ಳಿ. ಮನೆಯ ಬಳಿ ದೇವಸ್ಥಾನವಿದ್ದಲ್ಲಿ ಅಲ್ಲಿಗೆ ತೆರಳಿ. ಹಾಗೆ ಇಲ್ಲದಿದ್ದಲ್ಲಿ ಮನೆಯಲ್ಲಿಯೇ ಧನ್ವಂತರಿ ಚಿತ್ರವನ್ನು ಇರಿಸಿ, ಪೂಜೆಯನ್ನು ಮಾಡಿ.
ಆಸ್ತಿ-ಹಣ- ಹೂಡಿಕೆ
ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಾಣಲಿದೆ. ಹೂಡಿಕೆ ಮಾಡಬೇಕು, ಉಳಿತಾಯ ಮಾಡಬೇಕು ಎಂದು ಇಷ್ಟು ಸಮಯ ಬರೀ ಆಲೋಚನೆಯೇ ಆಗಿದೆ, ಅದನ್ನು ಕಾರ್ಯ ರೂಪಕ್ಕೆ ತರುವುದು ಸಾಧ್ಯವಾಗುತ್ತಿಲ್ಲ ಎಂದುಕೊಳ್ಳುತ್ತಿರುವವರಿಗೆ ಈ ವರ್ಷ ಅದು ಸಾಧ್ಯವಾಗಲಿದೆ. ವ್ಯವಹಾರಗಳನ್ನು ಮಾಡುವಾಗ ಸಾಧ್ಯವಾದಷ್ಟು ಸಿಟ್ಟು ಮಾಡಿಕೊಳ್ಳಬೇಡಿ. ಅದರಲ್ಲೂ ನನಗೇ ಹೀಗಂದು ಬಿಟ್ಟರಾ, ನನ್ನ ಮಾತಿಗೆ ಎದುರಾಡಿದರಾ ಈ ರೀತಿಯ ವಿಷಯಗಳನ್ನು ದೊಡ್ಡದು ಮಾಡಿ, ವ್ಯವಹಾರವನ್ನು ಮುರಿದುಕೊಳ್ಳಬೇಡಿ. ಈ ವರ್ಷ ನಿಮ್ಮಲ್ಲಿ ಹಲವರಿಗೆ ದುಬಾರಿ ಗ್ಯಾಜೆಟ್ ಗಳ ಮೇಲೆ ಹೂಡಿಕೆ ಮಾಡುವ ಯೋಗವಿದೆ. ಉದಾಹರಣೆಗೆ, ಕ್ಯಾಮೆರಾ, ಡ್ರೋನ್ ಹೀಗೆ. ಹೋಮ್ ಸ್ಟೇ ಅಂಥದ್ದನ್ನು ಆರಂಭಿಸಬೇಕು ಎಂದು ಯೋಜನೆ ಹಾಕಿಕೊಳ್ಳುತ್ತಿರುವವರಿಗೆ ಅದು ಸಾಧ್ಯವಾಗಲಿದೆ.
ಪ್ರೇಮ-ಮದುವೆ ಇತ್ಯಾದಿ
ಈಗಾಗಲೇ ಪ್ರೀತಿ- ಪ್ರೇಮದಲ್ಲಿ ಇರುವಂಥ ಕೆಲವರಿಗೆ ಅದರಲ್ಲಿ ದುಃಖ ತರುವಂಥ ಬೆಳವಣಿಗೆಗಳು ಆಗಲಿವೆ. ದಿಢೀರ್ ಆಗಿ ಆಗುವಂತಹ ಕೆಲವು ಬೆಳವಣಿಗೆಗಳು ಮತ್ತು ಕೌಟುಂಬಿಕ ಕಾರಣಗಳಿಂದಾಗಿ ದೂರವಾಗುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ದಂಪತಿ ಮಧ್ಯೆ ಮಕ್ಕಳ ಶಿಕ್ಷಣ ಹಾಗೂ ಅವರ ಮದುವೆ ವಿಚಾರದಲ್ಲಿ ಅಭಿಪ್ರಾಯ ಭೇದಗಳು ಉದ್ಭವಿಸಲಿವೆ. ಈ ಹಿಂದೆ ನೀವು ಕೊಟ್ಟಿದ್ದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂಬ ಕಾರಣ ನೀಡಿ, ನಿಮಗೆ ಈಗಾಗಲೇ ಆಗಿರುವ ನಿಶ್ಚಿತಾರ್ಥ ಮುರಿದು ಬೀಳಬಹುದು ಅಥವಾ ಆಕ್ಷೇಪ ವ್ಯಕ್ತವಾಗಬಹುದು. ಆದ್ದರಿಂದ ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳಿ.
ಉದ್ಯೋಗ- ವೃತ್ತಿ
ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಉದ್ಯೋಗ ಸ್ಥಳದಲ್ಲಿ ನೀವು ನೀಡಿದ ಸಲಹೆ ಹಾಗೂ ತೆಗೆದುಕೊಂಡು ಕೆಲವು ತೀರ್ಮಾನಗಳಿಂದಾಗಿ ಜವಾಬ್ದಾರಿ ನಿಮ್ಮ ಪಾಲಿಗೆ ಹೊರೆಯಂತೆ ಕಾಡಲಿದೆ. ಕೆಲವು ಬಾರಿ ಉತ್ಸಾಹವೇ ಇಳಿದು ಹೋಗಿ, ಕೆಲವು ದಿನ ರಜಾ ತೆಗೆದುಕೊಂಡು ಪ್ರವಾಸಕ್ಕೆ ತೆರಳಬೇಕು ಅಂದುಕೊಂಡರೂ ಅದು ಕೂಡ ಸಾಧ್ಯವಾಗದೇ ಹೋಗಬಹುದು.ನಿಮ್ಮಲ್ಲಿ ಯಾರು ಯೋಗ ಕಲಿಸುವುದು, ಧಾರ್ಮಿಕ ಪ್ರವಚನ, ದೇವಾಲಯ ಪಾರುಪತ್ತೆದಾರರು ಇಂಥ ವೃತ್ತಿಯಲ್ಲಿ ಇರುವಿರೋ ಅಂಥವರಿಗೆ ಗೌರವ- ಸಮ್ಮಾನಗಳು ದೊರೆಯಲಿವೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವ ಕೆಲವರಿಗೆ ಪ್ರಶಸ್ತಿಗಳು ಬರುವ ಸಾಧ್ಯತೆಗಳಿವೆ. ಮನೆ ದೇವರ ಆರಾಧನೆಯನ್ನು ಮಾಡಿಕೊಳ್ಳಿ. ಸ್ನೇಹಿತರು- ಸಂಬಂಧಿಗಳ ಮೂಲಕ ನಿಮಗೆ ಅವಕಾಶಗಳ ಬಗ್ಗೆ ಏನಾದರೂ ಮಾಹಿತಿ ದೊರೆತಲ್ಲಿ ಕೂಡಲೇ ಅದಕ್ಕೆ ಪ್ರಯತ್ನಿಸುವುದು ಮುಖ್ಯವಾಗುತ್ತದೆ. ಸಮಯ- ಶಿಸ್ತುಪಾಲನೆ ನಿಮ್ಮ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಲಿವೆ.
-ಸ್ವಾತಿ ಎನ್.ಕೆ.