Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 26ರ ದಿನ ಭವಿಷ್ಯ
ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 26ರ ಶನಿವಾರದ ದಿನ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಿ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 26ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
Numerology Weekly Horoscope: ಸಂಖ್ಯಾಶಾಸ್ತ್ರ ಪ್ರಕಾರ ನ. 20ರಿಂದ 26ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಜನ್ಮಸಂಖ್ಯೆ 1
ನೀವಂದುಕೊಂಡಂತೆ ಖರ್ಚು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲವೇ ಎಂದು ಪೇಚಾಡಿಕೊಳ್ಳುತ್ತೀರಿ. ಸಣ್ಣದಾದರೂ ಸರಿ ಪ್ರವಾಸಕ್ಕೆ ತೆರಳುವ ಯೋಗ ನಿಮ್ಮ ಪಾಲಿಗಿದೆ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ಸ್ವಲ್ಪ ಮಟ್ಟಿಗೆ ದೇಹಾಯಾಸ ಕೂಡ ಆಗಲಿದೆ. ಅದರರ್ಥ, ನಿಮಗೆ ನಡೆದುಹೋಗುವುದಕ್ಕೋ ಹೊತ್ತು ತರುವುದಕ್ಕೋ ಇಷ್ಟವಿಲ್ಲದಿದ್ದರೆ ಇಲ್ಲ- ಆಗಲ್ಲ ಎಂದು ಹೇಳಲಾಗದೆ ಇಂಥದ್ದೊಂದು ಸ್ಥಿತಿಗೆ ಸಿಲುಕಿಕೊಳ್ಳುತ್ತೀರಿ. ಮಕ್ಕಳ ಜತೆ ಮಾತನಾಡುವಾಗ ಸಂಯಮ ಇರಲಿ.
ಜನ್ಮಸಂಖ್ಯೆ 2
ನಿಮ್ಮ ಚರ್ಮದ ಆರೈಕೆ ಕಡೆಗೆ ಲಕ್ಷ್ಯ ಕೊಡಿ. ಹುಳು- ಹುಪ್ಪಟದಿಂದ ಕಡಿತ, ಅಥವಾ ಯಾವುದಾದರೂ ಕ್ರೀಮ್- ಲೋಷನ್‌ನಿಂದ ಅಲರ್ಜಿ ಇಂಥವುಗಳಿಂದ ಚರ್ಮ ಸಮಸ್ಯೆ ಆಗಬಹುದು. ವಿರಾಮ ಇದೆ ಅಂತಾದರೆ ಅಧ್ಯಾತ್ಮ ಚಿಂತನೆಯ ಕೆಲವು ಆಡಿಯೋ ಅಥವಾ ವಿಡಿಯೋಗಳನ್ನು ಕೇಳಿ- ನೋಡಿ. ಸುಬ್ರಹ್ಮಣ್ಯ ಅಥವಾ ಕುಮಾರಸ್ವಾಮಿ ಚಿತ್ರವನ್ನು ನಿಮ್ಮ ಫೋನ್‌ನ ಸ್ಕ್ರೀನ್‌ಸೇವರ್ ಅಥವಾ ಡಿಪಿ ಆಗಿ ಮಾಡಿಕೊಳ್ಳಿ.
ಜನ್ಮಸಂಖ್ಯೆ 3
ಈ ದಿನ ಪಾರ್ಟಿಗಳಲ್ಲಿ ಭಾಗೀ ಆಗುವುದಕ್ಕೆ ನಿಮ್ಮನ್ನು ಕರೆಯಲಿದ್ದಾರೆ. ಪರಿಚಯಗಳು, ಹೊಸ ಹೊಸ ಜನರ ಸಂಪರ್ಕ ನಿಮ್ಮ ಪಾಲಿಗೆ ಒದಗಿ ಬರಲಿದೆ. ವಿದೇಶಗಳಿಗೆ ಯಾವುದಾದರೂ ಟ್ರಾನ್ಸಿಷನ್‌ಗೆ ಹೋಗಬೇಕೆಂದಿರುವವರಿಗೆ ಒಂದಿಲ್ಲೊಂದು ನಿರಾಶೆ ಆಗುವಂಥ ವರ್ತಮಾನ ಬರಬಹುದು. ಆದರೆ ಇದು ತಾತ್ಕಾಲಿಕ ಗೊಂದಲ ಅಷ್ಟೇ ಆಗಿರುತ್ತದೆ. ಯಾರ ಮೇಲೂ ಸಿಟ್ಟಾಗಬೇಡಿ.
ಜನ್ಮಸಂಖ್ಯೆ 4
ವಾಹನ ಓಡಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಅನಿವಾರ್ಯ ಅಲ್ಲ ಎಂದಾದರೆ ಓಡಿಸಲೇಬೇಡಿ. ಇನ್ನು ಕಾರಿನಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿರಿ. ಈ ದಿನ ಹೇಗಾದರೂ ಸಣ್ಣ ಪೆಟ್ಟಾದರೂ ಆಗುವಂಥ ಯೋಗ ಇದೆ. ಆದ್ದರಿಂದ ಈ ಸಲಹೆಯನ್ನು ಪಾಲಿಸುವುದು ಉತ್ತಮ. ನಿಮಗೆ ಸಾಧ್ಯವಿದಲ್ಲಿ ಮಂಗವೊಂದಕ್ಕೆ ಬಾಳೇಹಣ್ಣು ನೀಡಿ.
ಜನ್ಮಸಂಖ್ಯೆ 5
ಕುಟುಂಬ ಸದಸ್ಯರ ಜತೆಗೆ ಶಾಪಿಂಗ್ ಮಾಡುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಪರ್ಸ್- ವ್ಯಾಲೆಟ್- ಕ್ರೆಡಿಟ್ ಕಾರ್ಡ್ ಹಾಗೂ ವಾಹನದ ಕೀಗಳನ್ನು ನೆನಪಿನಲ್ಲಿರುವಂಥ ಕಡೆ ಇಟ್ಟುಕೊಳ್ಳಿ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಏನಾದರೂ ಆಫರ್‌ಗಳು ಬಂದಲ್ಲಿ ಒಂದೆರಡು ದಿನ ಸಮಯ ಕೇಳಿ.
ಜನ್ಮಸಂಖ್ಯೆ 6
ನೀವು ಹೇಳಿದಂತೆಯೇ ಆಯಿತು, ನಾವು ನಿಮ್ಮ ಮಾತು ಕೇಳಬೇಕಿತ್ತು ಎಂದು ನಿಮ್ಮಿಂದ ದೂರವಾದ ಸ್ನೇಹಿತರು ಅಥವಾ ನಿಮ್ಮ ಜತೆ ಕೆಲಸ ಮಾಡುತ್ತಿದ್ದವರು ಮತ್ತೆ ಬರಬಹುದು. ಈ ಸಲ ತುಂಬ ಕಠಿಣವಾಗಿ ವರ್ತಿಸಬೇಡಿ, ಹಂಗಿಸಬೇಡಿ. ಅಂದಹಾಗೆ ಇದರಲ್ಲಿ ನಿಮ್ಮ ಸಂಬಂಧಿಕರು, ಕುಟುಂಬದವರು ಸಹ ಇರಬಹುದು. ಇನ್ನು ಈ ದಿನ ರುಚಿಕಟ್ಟಾದ ಭೋಜನ ಸವಿಯುವ ಯೋಗ ನಿಮ್ಮ ಪಾಲಿಗಿದೆ.
ಜನ್ಮಸಂಖ್ಯೆ 7
ಈ ದಿನ ಹಳೇ ದ್ವೇಷವೋ ಅಥವಾ ನಿಮ್ಮನ್ನು ಅವಮಾನಿಸಿದವರಿಗೆ ಬದಲು ಕೊಡಬೇಕು ಎಂಬ ಉಮೇದಿಯೋ ಬರುತ್ತದೆ. ಸಾಧ್ಯವಾದಷ್ಟೂ ತಪ್ಪುಗಳನ್ನು ಕಂಡೂ ಕಾಣದವರಂತೆ ಇದ್ದುಬಿಡಿ. ಇಲ್ಲದಿದ್ದಲ್ಲಿ ಬರೀ ತಪ್ಪುಗಳನ್ನು ಹೇಳೋದೇ ಆಯಿತು ಎಂದು ನಿಮ್ಮನ್ನು ಬ್ರ್ಯಾಂಡ್ ಮಾಡುವ ಅಪಾಯ ಇದೆ. ಆಂಜನೇಯ ದೇವಸ್ಥಾನಕ್ಕೆ ತೆರಳಿ, ಹತ್ತು ನಿಮಿಷ ಕೂತಿದ್ದು ಬನ್ನಿ.
ಜನ್ಮಸಂಖ್ಯೆ 8
ಈ ದಿನ ನಿಮ್ಮಲ್ಲೊಂದು ಆತ್ಮವಿಶ್ವಾಸ ಇರುತ್ತದೆ. ನೀವು ಯಾವಾಗಲೋ ಸಹಾಯ ಮಾಡಿದ್ದವರು ಎದುರಾಗಿ, ಮನಸಾರೆ ನಿಮ್ಮನ್ನು ಮೆಚ್ಚಿ, ಕೊಂಡಾಡುವ ಸಾಧ್ಯತೆ ಇದೆ. ಯಾವುದನ್ನು ನೀವು ಬಹಳ ದೂರದ ಮಾತು ಎಂದುಕೊಂಡಿರುತ್ತೀರೋ ಅದು ಇಂದು ಕಣ್ಣೆದುರು ನಿಲ್ಲುವ ಸಮಯ. ಮಾನಸಿಕವಾಗಿ- ದೈಹಿಕವಾಗಿ ಸಿದ್ಧರಾಗಿ.
ಜನ್ಮಸಂಖ್ಯೆ 9
ನಿಮ್ಮ ಮನೆಗಾಗಲೀ, ನಿಮಗಾಗಲೀ ಏನು ಬೇಕು ಮತ್ತು ಎಷ್ಟು ಬೇಕು ಎಂಬ ಸ್ಪಷ್ಟತೆ ಇಟ್ಟುಕೊಳ್ಳಿ. ಕೊಂಡು ತಂದ ಮೇಲೆ ಸುಮ್ಮನಿದ್ದಿದ್ದರೆ ಆಗುತ್ತಿತ್ತು ಎಂದುಕೊಂಡು ಹಳಹಳಿಸಬೇಡಿ. ಯಾರದೋ ಮೇಲಿನ ಸವಾಲಿಗೋ ಪ್ರತಿಷ್ಠೆಗೋ ಖರ್ಚು ಮಾಡುವುದಕ್ಕೆ ಹೋಗದಿರಿ. ನಿಮಗೆ ಸಮಯ ದೊರೆತಲ್ಲಿ, ನಂಬಿಕೆ ಇದ್ದಲ್ಲಿ ಹತ್ತು ನಿಮಿಷ ಪ್ರಶಾಂತವಾದ ಸ್ಥಳದಲ್ಲಿ ಓಂಕಾರ ಧ್ಯಾನ ಮಾಡಿ.
ಲೇಖನ- ಎನ್.ಕೆ.ಸ್ವಾತಿ