Weekly Numerology: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 13ರಿಂದ 19ರ ತನಕ ವಾರಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಸಂಖ್ಯಾಶಾಸ್ತ್ರವು ಪ್ರತಿ ವ್ಯಕ್ತಿತ್ವದ ತಿರುಳನ್ನು ಕಂಡುಹಿಡಿಯುವುದರ ಮೇಲೆ ಒತ್ತು ನೀಡುವ ಒಂದು ಹಳೆಯ ಅಧ್ಯಯನ ಪದ್ಧತಿಯಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 13ರಿಂದ 19ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 13ರಿಂದ 19ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈಗಾಗಲೇ ಆಗಿರುವಂಥ ಬದಲಾವಣೆಗೆ ಹೊಂದಿಕೊಳ್ಳುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ. ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚುವಂಥ ಬೆಳವಣಿಗೆಗಳು ಆಗಲಿವೆ. ಆದಾಯವನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಪ್ರಯತ್ನವನ್ನು ಮಾಡಿರುವವರಿಗೆ ಇದರ ಫಲವು ದೊರೆಯುವ ಸೂಚನೆ ದೊರೆಯಲಿದೆ. ಸಂಬಂಧಿಕರ ಮನೆಗಳಲ್ಲಿ ಆದ ಕೆಲವು ಬದಲಾವಣೆಗಳು ನಿಮಗೆ ಬೇಸರವನ್ನೋ ಆತಂಕವನ್ನೋ ಉಂಟು ಮಾಡಬಹುದು. ನೀವೇ ಮಾಡಬೇಕಾದ ಕೆಲವು ಕೆಲಸಗಳನ್ನು ಬೇರೆಯವರಿಗೆ ವಹಿಸಿ, ನಿಮ್ಮ ಪರವಾಗಿ ಅವರಿಗೆ ಓಡಾಡಿ, ಆ ಕೆಲಸಗಳನ್ನು ಮುಗಿಸಿಕೊಡುವಂತೆ ಕೇಳಿಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗಾದರೂ ಏರುಪೇರಾಗಿ, ಮುಖ್ಯವಾದ ವ್ಯಕ್ತಿಯೊಬ್ಬರನ್ನು ಭೇಟಿ ಆಗಬೇಕು ಎಂದುಕೊಂಡಿದ್ದು ಮುಂದಕ್ಕೆ ಹಾಕುವ ಪರಿಸ್ಥಿತಿಯು ಎದುರಾಗಲಿದೆ.
ಕೃಷಿಕರು ನಿಮ್ಮದಲ್ಲದ ತಪ್ಪಿಗೆ ಅಥವಾ ನಿಮಗೆ ಯಾವುದೇ ರೀತಿಯಲ್ಲೂ ಸಂಬಂಧಪಡದ ವಿಚಾರಕ್ಕೆ ಇತರರಿಂದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಪರವಾಗಿ ಸಮರ್ಥನೆ ನೀಡುವಂಥ ಸ್ಥಿತಿಯಲ್ಲೂ ನೀವು ಇರುವುದಿಲ್ಲ. ನೀವು ತುಂಬ ಗೌರವದಿಂದ ಕಾಣುವ ವ್ಯಕ್ತಿಯ ಮಾತಿಗೆ ಕಟ್ಟುಬಿದ್ದು ಮುಜುಗರವನ್ನು ಅನುಭವಿಸುವಂತೆ ಆಗಲಿದೆ. ಆದ್ದರಿಂದ ಇದರ ಬಗ್ಗೆ ಗಮನವಿರಲಿ. ವೃತ್ತಿನಿರತರಿಗೆ ಏಕಾಏಕಿ ಕೆಲಸದ ಒತ್ತಡವಾಗಿ, ಅದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆಯುರ್ವೇದ ಅಥವಾ ಬೇರೆ ಯಾವುದಾದರೂ ಪ್ರಾಕೃತಿಕ ವಿಧಾನದಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಮುಂದಾಗಬಹುದು. ಇನ್ನು ಈಗ ಇರುವ ನಿಮ್ಮ ಕ್ಲೈಂಟ್ಸ್ ಪೈಕಿ ಕೆಲವರ ಬಳಿ ಇನ್ನು ಮುಂದೆ ಸೇವೆ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳುವ ಸಾಧ್ಯತೆಗಳು ಸಹ ಇವೆ.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು, ಪುಸ್ತಕಗಳು, ಲ್ಯಾಪ್ ಟಾಪ್ ಇಂಥವುಗಳನ್ನು ಜೋಪಾನವಾಗಿ ಇರಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವವರು ಅಥವಾ ಬೇರೆ ಯಾವುದೇ ರೀತಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುವಾಗ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸುವುದು ಕ್ಷೇಮ. ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಕೆಲವು ಅನಾರೋಗ್ಯ ಸಮಸ್ಯೆ ಆಗಿ, ಸುಸ್ತು, ಆಯಾಸ ಕಾಡಬಹುದು. ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಫಾಲೋ ಅಪ್ ಚೆಕ್ ಅಪ್ ಗಳು ಇದ್ದಲ್ಲಿ ಕಡ್ಡಾಯವಾಗಿ ಮಾಡಿಸಿಕೊಳ್ಳಿ. ಹಣಕಾಸಿನ ವಿಚಾರಕ್ಕೆ ನೀವಾಗಿಯೇ ಯಾರಿಗೂ ಸಲಹೆ ನೀಡುವುದಕ್ಕೆ ಹೋಗಬೇಡಿ. ಒಂದು ವೇಳೆ ಹಾಗೆ ಮಾಡಿದಲ್ಲಿ ನಿಮ್ಮ ವರ್ಚಸ್ಸಿಗೆ ಹಾನಿ ಆಗುವ ಬೆಳವಣಿಗೆ ಆಗುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಜೊತೆಗೆ ಕೆಲಸ ಮಾಡುವವರೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶಗಳಿವೆ. ಅಥವಾ ಈ ಹಿಂದೆ ನೀವು ಕೆಲಸ ಮಾಡಿದ ಸ್ಥಳದಲ್ಲಿನ ಸಹೋದ್ಯೋಗಿಗಳನ್ನು ಭೇಟಿ ಮಾಡುವುದು ಹಾಗೂ ಅವರ ಜೊತೆಗೆ ಸುತ್ತಾಟ, ಹೋಟೆಲ್- ರೆಸ್ಟೋರೆಂಟ್ ಗೆ ತೆರಳುವುದು ಇಂಥ ಯೋಗ ಇದೆ. ಇನ್ನು ನಿಮ್ಮಲ್ಲಿ ಕೆಲವರು ತಂದೆ- ತಾಯಿಯ ಆರೋಗ್ಯ ವಿಚಾರಕ್ಕೆ ಹಣದ ಖರ್ಚು ಮಾಡಬೇಕಾಗಲಿದೆ. ವಿಟಮಿನ್ ಕೊರತೆ ಅಂತಲೋ ಅಥವಾ ಶುಗರ್- ಬಿಪಿ ಇಂಥದ್ದರ ಕಾರಣಕ್ಕೆ ಮಾತ್ರೆ- ಔಷಧಗಳ ಬದಲಾವಣೆಯನ್ನು ಮಾಡಿಸುವುದಕ್ಕೆ ಮುಂದಾಗಲಿದ್ದೀರಿ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಬಡ್ತಿ ನಿರೀಕ್ಷೆ ಮಾಡುತ್ತಾ ಇರುವವರಿಗೆ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಬಹುದು. ತಾತ್ಕಾಲಿಕವಾಗಿಯಾದರೂ ಬೇರೆ ವಿಭಾಗ ಅಥವಾ ಸ್ಥಳಕ್ಕೆ ವರ್ಗಾವಣೆ ಆಗಬಹುದು. ಕೃಷಿಕರಿಗೆ ವಿಲಾಸಿ ವಸ್ತುಗಳಿಗೆ ಖರ್ಚು ಮಾಡಬೇಕಾದಂಥ ಸನ್ನಿವೇಶ ಎದುರಾಗಲಿದೆ. ಮನೆಯಲ್ಲಿ ಮಕ್ಕಳು ಕೇಳಿದಂಥ ವಸ್ತುಗಳನ್ನು ಕೊಡಿಸುವುದಕ್ಕಾಗಿ ಸಣ್ಣ ಮಟ್ಟಿಗಾಗಿ ಅಥವಾ ಸಣ್ಣ ಮೊತ್ತವಾದರೂ ಸಾಲ ಮಾಡುವಂತೆ ಆಗಬಹುದು. ಈ ಮುಂಚೆ ಬ್ಯಾಂಕ್ ನಲ್ಲಿ ಸಾಲಕ್ಕೆ ಪ್ರಯತ್ನವನ್ನು ಪಟ್ಟು ವಿಫಲವಾಗಿದ್ದಲ್ಲಿ ಈ ವಾರ ನಿಮಗೆ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಪ್ರಭಾವಿ ವ್ಯಕ್ತಿಯೊಬ್ಬರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ವೃತ್ತಿನಿರತರು ಹೊಸ ಕ್ಲೈಂಟ್ ಗಳನ್ನು ಪಡೆದುಕೊಳ್ಳುವ ಯೋಗ ಇದೆ. ಪ್ರಚಾರದ ಸಲುವಾಗಿ ನೀವು ಹಿಂದೆ ಮಾಡಿದ್ದ ಪ್ರಯತ್ನಗಳು ಫಲ ನೀಡುವುದಕ್ಕೆ ಆರಂಭಿಸುತ್ತವೆ. ಇನ್ನು ಹೊಸದಾಗಿ ಕಚೇರಿಗಳನ್ನು ತೆರೆಯಬೇಕು ಎಂದು ಆಲೋಚಿಸುತ್ತಿದ್ದಲ್ಲಿ ಅದಕ್ಕೆ ಪೂರಕವಾಗಿಯೂ ಬೆಳವಣಿಗೆಗಳು ಆಗಲಿವೆ. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಒಳ್ಳೆಯ ಹೆಸರು ಬರುವ ಕಾಲವಾಗಿರುತ್ತದೆ. ನೀವು ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧಾನ್ಯತೆ, ಹೆಸರು, ಗೌರವ- ಜವಾಬ್ದಾರಿಗಳು ಹುಡುಕಿಕೊಂಡು ಬರಲಿವೆ. ವಾರದ ಮಧ್ಯ ಭಾಗದಲ್ಲಿ ಪ್ರಯಾಣ ಮಾಡಲೇಬೇಕಾದ ಸನ್ನಿವೇಶಗಳು ಸೃಷ್ಟಿ ಆಗಬಹುದು. ಇದರಿಂದ ನಿಮ್ಮ ದೈನಂದಿನ ಕೆಲಸ- ಕಾರ್ಯಗಳಲ್ಲಿ ಏರುಪೇರು ಆಗಲಿದೆ. ಮಹಿಳೆಯರಿಗೆ ಮಕ್ಕಳ ಸಾಧನೆಯಿಂದ ತೃಪ್ತಿ ದೊರೆಯಲಿದೆ. ಒಂದು ವೇಳೆ ಏನಾದರೂ ಟ್ಯೂಷನ್ ಗೆ ಸೇರಿಸಬೇಕು ಅಂದುಕೊಂಡು, ಹುಡುಕಾಟ ನಡೆಸುತ್ತಿದ್ದಲ್ಲಿ ನಿಮಗೆ ಒಪ್ಪಿಗೆ ಆಗುವಂಥವರು ದೊರೆಯಲಿದ್ದಾರೆ. ಇನ್ನು ಚೀಟಿ ವ್ಯವಹಾರ ಮಾಡುತ್ತಿರುವವರಿಗೆ ಸಣ್ಣ- ಪುಟ್ಟ ಕಿರಿಕಿರಿ, ಕಲಹಗಳು ಆಗಬಹುದು. ನಿಮ್ಮಲ್ಲಿ ಕೆಲವರು ಪೊಲೀಸ್ ಸ್ಟೇಷನ್ ಅಂತ ಅಲೆದಾಡುವಂತೆ ಸಹ ಆಗುವ ಸಾಧ್ಯತೆಗಳಿವೆ. ನೀವು ಈ ಹಿಂದೆ ತೆಗೆದುಕೊಂಡಿದ್ದ ತೀರ್ಮಾನಗಳನ್ನು ಬದಲಿಸುವಂತೆ ಆಗಬಹುದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಮನೆ ಬದಲಾವಣೆ ಮಾಡಲೇಬೇಕು ಎಂಬ ತೀವ್ರ ಪ್ರಯತ್ನವನ್ನು ಮಾಡುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಸಾಧ್ಯತೆ ಹೆಚ್ಚಿದೆ. ಖರ್ಚು ಕೈ ಮೀರುತ್ತದೆ ಎಂಬ ಕಾರಣದಿಂದ ಕೆಲವು ರಾಜೀ ಮಾಡಿಕೊಳ್ಳಬೇಕಾಗಲಿದೆ. ಹಣ ಕೂಡಿಟ್ಟುಕೊಂಡು, ಈ ಬಾರಿ ಖರೀದಿ ಮಾಡಲೇಬೇಕು ಎಂದುಕೊಂಡ ವಸ್ತುವನ್ನು ಕೊಳ್ಳಲು ಸಾಧ್ಯವಾಗದಿರಬಹುದು. ನಿಮ್ಮ ಉದ್ದೇಶಿತ ಹಣ ಸಂಗ್ರಹವು ಬೇರೆ ಕಾರಣಗಳಿಗೆ ಖರ್ಚಾಗಿ ಬಿಡಬಹುದು. ಹೋಟೆಲ್ ಉದ್ಯಮದಲ್ಲಿ ಇರುವವರು, ಕ್ಯಾಟರಿಂಗ್ ಮಾಡುತ್ತಾ ಇರುವವರು ಇಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಮಾರ್ಗೋಪಾಯಗಳು ತೆರೆದುಕೊಳ್ಳಲಿವೆ. ಮನೆಯ ಬಳಕೆಗೆ ಬೇಕಾಗುತ್ತದೆ ಎಂಬ ಕಾರಣಕ್ಕೆ ಸೆಕೆಂಡ್ ಹ್ಯಾಂಡ್ ಸ್ಕೂಟರ್ ಅನ್ನೋ ಕಾರನ್ನೋ ಖರೀದಿ ಮಾಡುವ ಆಲೋಚನೆ ನಿಮ್ಮಲ್ಲಿ ಕೆಲವರಿಗೆ ಮೂಡಲಿದೆ. ಇದಕ್ಕೆ ಪ್ರಯತ್ನ ಸಹ ಮಾಡಲಿದ್ದೀರಿ. ಕೃಷಿಕರಿಗೆ ಬೆಳೆ ನಷ್ಟ ಅಥವಾ ಕೃಷಿ ಜಮೀನಿನಲ್ಲಿ ಇರುವಂಥ ಸಲಕರಣೆ, ವಾಹನ- ಯಂತ್ರೋಪಕರಣಗಳಲ್ಲಿ ಸಮಸ್ಯೆ ಕಾಣಿಸಿಕೊಂಡು, ಹೆಚ್ಚಿನ ಖರ್ಚಾಗಲಿದೆ. ಅಥವಾ ನಿಮ್ಮಲ್ಲಿ ಕೆಲವರು ಸೆಕೆಂಡ್ ಹ್ಯಾಂಡ್ ಯಂತ್ರೋಪಕರಣಗಳನ್ನು ಖರೀದಿಸಿ, ಅದರಲ್ಲಿ ಸಮಸ್ಯೆ ಕಾಣಿಸಿಕೊಂಡು, ಹೆಚ್ಚಿನ ಹಣ ಖರ್ಚು ಮಾಡುವಂತೆ ಆಗಲಿದೆ. ಯಾವುದೇ ದುರಸ್ತಿ ಕಾರ್ಯಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ ನಾಲ್ಕು ಜನರ ಬಳಿ ವಿಚಾರಿಸಿದ ನಂತರವಷ್ಟೇ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ವೃತ್ತಿನಿರತರಿಗೆ ಬದಲಾವಣೆ ಬೇಕು ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗಲಿದೆ. ನಿಮ್ಮಲ್ಲಿ ಕೆಲವರು ಈಗ ನೀಡುತ್ತಿರುವ ಸೇವೆಯ ಜೊತೆಗೆ ಇನ್ನಷ್ಟು ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಆಲೋಚನೆ ಮಾಡುತ್ತೀರಿ. ಮತ್ತೆ ಕೆಲವರು ಸೇರ್ಪಡೆಯನ್ನೇ ಮಾಡಿಕೊಳ್ಳುತ್ತೀರಿ. ವಿದ್ಯಾರ್ಥಿಗಳು ಅಹಂಕಾರಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವಂತೆ ಆಗಬಹುದು. ನಿಮಗೆ ಅನಿಸಿದ್ದನ್ನು ನೇರಾನೇರ ಹೇಳುತ್ತೇನೆ ಎಂಬುದು ಎಲ್ಲ ಸಮಯಕ್ಕೂ ಸೂಕ್ತ ಎನಿಸುವುದಿಲ್ಲ. ಅದೇ ರೀತಿ ನಿಮ್ಮ ಜೊತೆಗೆ ಇರುವವರ ಪರಿಸ್ಥಿತಿ ಮತ್ತು ಸನ್ನಿವೇಶ ಏನಿದೆ ಹಾಗೂ ಯಾವ ಕಾರಣದಿಂದ ಹಾಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಸಹ ಗಮನಿಸಿ, ನಿಮ್ಮ ವರ್ತನೆ ಇದ್ದಲ್ಲಿ ಸ್ನೇಹ- ಸಂಬಂಧಗಳಲ್ಲಿ ಯಾವುದೇ ಸಮಸ್ಯೆ ಬಾರದಂತೆ ಇರುತ್ತದೆ. ಮಹಿಳೆಯರು ಹೊಸ ವಸ್ತ್ರಾಭರಣ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಒಂದು ವೇಳೆ ನೀವೇನಾದರೂ ಕ್ರೆಡಿಟ್ ಕಾರ್ಡ್ ಬಳಸಿಯೋ ಅಥವಾ ನಿಮಗೆ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಖರೀದಿ ಮಾಡುತ್ತಿದ್ದಲ್ಲಿ ಬಜೆಟ್ ಮೇಲೆ ಹಿಡಿತ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕಡಿಮೆ ಬಡ್ಡಿ ಅಥವಾ ಬಡ್ಡಿಯೇ ಇಲ್ಲದ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಮನಸೋ ಇಚ್ಛೆ ಖರ್ಚು ಮಾಡಿದಲ್ಲಿ ಆ ನಂತರ ನೊಂದುಕೊಳ್ಳುವಂತೆ ಆಗಲಿದೆ. ಇನ್ನು ಬ್ಯಾಂಕ್ ವ್ಯವಹಾರಗಳು ಇದ್ದಲ್ಲಿ ಗಡುವಿನ ಒಳಗಾಗಿ ಅವುಗಳನ್ನು ಮುಗಿಸಿಕೊಳ್ಳುವ ಕಡೆಗೆ ಲಕ್ಷ್ಯ ನೀಡುವುದು ಬಹಳ ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲೂ ಫುಡ್ ಪಾಯಿಸನ್, ಆಹಾರಕ್ಕೆ ಸಂಬಂಧಿಸಿದಂತೆಯೇ ಅಲರ್ಜಿಗಳು ಆಗಬಹುದು. ಆದ್ದರಿಂದ ನಿಮ್ಮ ದೇಹಕ್ಕೆ ಒಗ್ಗದ ಆಹಾರಗಳಿಂದ ದೂರ ಇದ್ದುಬಿಡುವುದು ಒಳ್ಳೆಯದು. ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂಬ ಇಚ್ಛೆ ಇದ್ದು, ಅದಕ್ಕಾಗಿ ಪ್ರಯತ್ನವನ್ನು ಸಹ ಮಾಡುತ್ತಿದ್ದೀರಿ ಅಂತಾದಲ್ಲಿ ದೊಡ್ಡ ಮಟ್ಟದಲ್ಲಿ ನೆರವು ದೊರೆಯಲಿದೆ. ಒಂದು ವೇಳೆ ಸಂಬಂಧಿಕರಿಂದ ಸಾಲವೇನಾದರೂ ಪಡೆದುಕೊಂಡಿದ್ದಲ್ಲಿ ಅದು ತಕ್ಷಣ ವಾಪಸ್ ಬೇಕೆಂದು ಕೇಳುವ ಸಾಧ್ಯತೆ ಹೆಚ್ಚಿದೆ. ಆನ್ ಲೈನ್ ನಲ್ಲಿ ಖರೀದಿ ಅಥವಾ ಸ್ನೇಹಿತರು ಕೇಳಿದರು ಎಂಬ ಕಾರಣಕ್ಕೆ ನಿಮ್ಮ ಕ್ರೆಡಿಟ್ ಕಾರ್ಡೋ ಅಥವಾ ಡೆಬಿಟ್ ಕಾರ್ಡೋ ಬಳಸಿ ವ್ಯವಹಾರ ಮಾಡುತ್ತೀರಿ ಎಂದಾದಲ್ಲಿ ಬಹಳ ಜಾಗ್ರತೆಯಿಂದ ಇರಬೇಕಾಗುತ್ತದೆ. ಏಕೆಂದರೆ ಇಂಥ ವ್ಯವಹಾರಗಳಲ್ಲಿ ಹಣ ಕಳೆದುಕೊಳ್ಳುವ ಯೋಗ ಇದೆ. ಕೃಷಿಕರಿಗೆ ಸರ್ಕಾರಿ ಯೋಜನೆಗಳಿಗೆ ಏನಾದರೂ ಪ್ರಯತ್ನವನ್ನು ಪಟ್ಟಿದ್ದಲ್ಲಿ ಅದು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಸಂಘ- ಸಂಸ್ಥೆಗಳಿಂದ ಸನ್ಮಾನ ಆಗುವ, ನಿಮ್ಮ ಸಾಧನೆಯನ್ನು ಗುರುತಿಸಿ, ಉಪನ್ಯಾಸಗಳನ್ನು ಏರ್ಪಡಿಸುವಂಥ ಯೋಗ ಇದೆ. ಈ ಹಿಂದೆ ಹಾಗೂ ಈಗ ನೀವು ಪಟ್ಟ- ಪಡುತ್ತಿರುವ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ವೃತ್ತಿನಿರತರು ಹೆಚ್ಚು ಪ್ರಯಾಣವನ್ನು ಮಾಡುವ ಯೋಗ ಇದೆ. ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲದಷ್ಟು ಬಿಜಿಯಾಗಿ ಇರಲಿದ್ದೀರಿ. ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಯನ್ನು ಗಡುವಿನೊಳಗೆ ಮುಗಿಸಲೇಬೇಕು ಎಂಬ ಒತ್ತಡ ಬಿದ್ದು, ಅದರ ಸಲುವಾಗಿಯೂ ಲಕ್ಷ್ಯ ನೀಡಲೇಬೇಕಾಗುತ್ತದೆ. ಈ ಎಲ್ಲ ಅಂಶಗಳು ಸೇರಿಕೊಂಡು, ನಿಮ್ಮ ದಿನಚರಿಯಲ್ಲಿ ಬದಲಾವಣೆ ಆಗಲಿದೆ. ವಿದ್ಯಾರ್ಥಿಗಳು ಇಂಟರ್ನ್ ಷಿಪ್ ಮಾಡಬೇಕಿದ್ದಲ್ಲಿ ಎಲ್ಲಿ ಮಾಡಬೇಕು ಎಂದೇನಾದರೂ ಆಲೋಚಿಸುತ್ತಾ ಇದ್ದರೆ ಅಂಥವರಿಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಅಥವಾ ನೀವು ಊಹೆ ಕೂಡ ಮಾಡದ ರೀತಿಯಲ್ಲಿ ಪ್ರತಿಷ್ಠಿತ ಸಂಸ್ಥೆ ಅಥವಾ ವ್ಯಕ್ತಿಯಿಂದ ನಿಮಗೆ ಆಹ್ವಾನ ದೊರೆಯಬಹುದು. ಈ ವಾರ ನೀವು ಸಮಯಕ್ಕೆ ಸರಿಯಾಗಿ ಹೇಳಿದ ಸ್ಥಳಕ್ಕೆ ತೆರಳುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ಅವಕಾಶದ ಬಾಗಿಲುಗಳು ನಿಮಗೆ ಹೊಸದಾಗಿ ತೆರೆದುಕೊಳ್ಳಲಿವೆ. ಸಣ್ಣ- ಪುಟ್ಟ ವಿಚಾರಗಳು ಎಂದು ಯಾವುದನ್ನೂ ನಿರ್ಲಕ್ಷ್ಯ ಮಾಡಬೇಡಿ. ಮಹಿಳೆಯರಿಗೆ ಉದ್ಯೋಗ ಮಾಡುತ್ತಿದ್ದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುಲಿವೆ. ನೀವು ಅಂದುಕೊಳ್ಳದ ರೀತಿಯಲ್ಲಿ ಬಡ್ತಿ, ವೇತನ ಹೆಚ್ಚಳ ಆಗಬಹುದು. ಇನ್ನು ತಾತ್ಕಾಲಿಕವಾಗಿಯಾದರೂ ವಿದೇಶಕ್ಕೆ ತೆರಳಬೇಕು ಎಂಬ ಸೂಚನೆ ದೊರೆಯಬಹುದು. ಮನೆಯಲ್ಲಿಯೇ ಇರುವಂಥ ಗೃಹಿಣಿಯರಿಗೆ ವಿಪರೀತ ಕೆಲಸಗಳು ಆಗುತ್ತವೆ. ಒಂದೇ ಕೆಲಸವನ್ನು ನಾಲ್ಕೈದು ಬಾರಿ ಮಾಡುವಂತೆ ಆಗಬಹುದು. ದೈಹಿಕವಾಗಿ ದಣಿವು, ಆಯಾಸ ಆಗಲಿದೆ. ಇದರಿಂದಾಗಿ ಕುಟುಂಬ ಸದಸ್ಯರ ಜೊತೆಗೆ ಜಗಳ- ಕಲಹಗಳು ಆಗಬಹುದು.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಸ್ನೇಹಿತರೋ ಅಥವಾ ಸಂಬಂಧಿಕರೋ ತಾವು ಖರೀದಿ ಮಾಡಿದ ವಸ್ತುಗಳನ್ನು ನಿಮಗೆ ತೋರಿಸುವ ನೆಪದಲ್ಲಿ ಅವಮಾನ ಮಾಡುವ ಸಾಧ್ಯತೆಗಳಿವೆ. ಅಥವಾ ನಿಮಗೆ ಅವರ ಧೋರಣೆ- ಧಾಟಿ ಇಷ್ಟವಾಗದೆ ನೊಂದುಕೊಳ್ಳುವಂತೆ ಆಗುತ್ತದೆ. ದಿಢೀರ್ ದೂರದ ಊರುಗಳಿಗೆ ಪ್ರಯಾಣ ತೆರಳಬೇಕು ಎಂಬ ಒತ್ತಡ ಸೃಷ್ಟಿ ಆಗಲಿದೆ. ಒಂದು ವೇಳೆ ನಿಮ್ಮದೇ ಸ್ವಂತ ವಾಹನದಲ್ಲಿ ತೆರಳುತ್ತೀರಿ ಎಂದಾದಲ್ಲಿ ಅದರ ಸರ್ವೀಸ್ ಆಗಿದೆಯಾ ಹಾಗೂ ಅದರ ಕಂಡೀಷನ್ ಸರಿಯಿದೆಯಾ ಎಂಬುದನ್ನು ಪರಿಶೀಲಿಸಿಕೊಂಡು ತೆರಳುವುದು ಕ್ಷೇಮ. ಮನೆಗಾಗಿ, ಅದರಲ್ಲೂ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಸೆಕ್ಯೂರಿಟಿ ಡಿವೈಸ್ ಗಳನ್ನು ಖರೀದಿ ಮಾಡುವ ಸಾಧ್ಯತೆಗಳಿವೆ. ನಿಮ್ಮ ಆದಾಯ ಅಥವಾ ನಿಮ್ಮ ಬಳಿ ಎಷ್ಟು ಹಣ ಇದೆಯೋ ಅಷ್ಟಕ್ಕೆ ಮಾತ್ರ ಖರ್ಚಿನ ಪ್ರಮಾಣವನ್ನು ಇರಿಸಿಕೊಳ್ಳುವುದು ಒಳ್ಳೆಯದು. ಕೃಷಿಕರು ಬೇರೆಯವರ ಮೇಲೆ ತೋರಿಸಿದ ಕನಿಕರದ ಅಡ್ಡ ಪರಿಣಾಮವನ್ನು ಎದುರಿಸುವಂತಾಗಲಿದೆ. ಸಹಾಯ ಆಗಲಿ ಎಂಬ ಕಾರಣಕ್ಕೆ ನೀವು ನೀಡಿದ ನೆರವು ನಿಮಗೇ ಉಲ್ಟಾ ಹೊಡೆಯಲಿದೆ. ಸುಮ್ಮನೆ ಇದ್ದುಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಲಿದೆ. ಯಾರ ಕಾರಣಕ್ಕೆ ನಿಮ್ಮ ಅವಕಾಶವನ್ನು ಬಿಟ್ಟುಕೊಟ್ಟಿರುತ್ತೀರೋ ಅಂಥವರಿಂದ ಮನಸ್ಸಿಗೆ ನೋವಾಗುವಂಥ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಆಗಲಿದೆ. ವೃತ್ತಿನಿರತರು ತಮ್ಮ ಮಾತಿನ ಮೂಲಕವಾಗಿ ಸಮಸ್ಯೆಗಳನ್ನು ಎಳೆದುಕೊಳ್ಳಲಿದ್ದೀರಿ. ಆದ್ದರಿಂದ ನೀವು ಬಳಸುವ ಪದಗಳು ಹಾಗೂ ಸ್ಥಳ ಯಾವುದು ಇವೆಲ್ಲವನ್ನು ಅಳೆದು ತೂಗಿಯೇ ನಿರ್ಧರಿಸುವುದು ಕ್ಷೇಮ. ನಿಮಗೆ ಎಷ್ಟೇ ಆಪ್ತರಾರಾದರೂ ಅವರ ವೈಯಕ್ತಿಕ ವಿಷಯದಲ್ಲಿ ಸಲುಗೆ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾಧ್ಯವಾಗದಂಥ ಸ್ಥಿತಿ ಇರುತ್ತದೆ. ನಿಮಗೆ ಹೇಳಿದಂಥ ಕೆಲಸಗಳನ್ನು ತಕ್ಷಣದಲ್ಲಿಯೇ ಮಾಡುವ ಕಡೆಗೆ ಗಮನವನ್ನು ನೀಡಿ. ಒಂದು ವೇಳೆ ಆಮೇಲೆ ಮಾಡಿದರಾಯಿತು ಎಂದುಕೊಂಡು ಮುಂದಕ್ಕೆ ಹಾಕಿದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಒಂದು ವೇಳೆ ನೀವೇನಾದರೂ ಬೇರೆಯವರ ವಾಹನವನ್ನು ಬಳಸುತ್ತಾ ಬಂದಿದ್ದೀರಿ ಎಂದಾದಲ್ಲಿ ಈ ವಾರ ಸಾಧ್ಯವಾದಷ್ಟು ಅಂಥದ್ದರಿಂದ ದೂರ ಇರಿ. ಇದನ್ನೂ ಮೀರಿದಲ್ಲಿ ಕೈಯಿಂದ ವಿಪರೀತ ಹಣ ಕಳೆದುಕೊಳ್ಳುತ್ತೀರಿ ಮತ್ತು ಜೊತೆಗೆ ಅವಮಾನದ ಪಾಲಾಗುತ್ತೀರಿ. ಮಹಿಳೆಯರು ವಿವಾಹಿತರಾಗಿದ್ದಲ್ಲಿ ದಂಪತಿ ಮಧ್ಯೆ ಇರುವಂಥ ವಿರಸ- ಅಭಿಪ್ರಾಯ ಭೇದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಆದ್ಯತೆ ನೀಡಲಿದ್ದೀರಿ. ತವರು ಮನೆಯ ಕಾರ್ಯಕ್ರಮಗಳಲ್ಲಿ ಭಾಗೀ ಆಗುವಂತೆ ಹೇಳಿಕಳುಹಿಸಲಿದ್ದಾರೆ. ಒಂದು ವೇಳೆ ಪಿತ್ರಾರ್ಜಿತ ಆಸ್ತಿ ವಿಚಾರಗಳು ತೀರ್ಮಾನ ಆಗಬೇಕಿದ್ದಲ್ಲಿ ಅದು ಬಗೆಹರಿಯುವ ಸಾಧ್ಯತೆಗಳು ಇವೆ. ಇನ್ನು ನಿಮ್ಮಲ್ಲಿ ಕೆಲವರು ಮುಂದಾಳತ್ವ ವಹಿಸಿಕೊಂಡು ಶುಭ ಕಾರ್ಯಗಳು ನೆರವೇರುವಂತೆ ಮಾಡಲಿದ್ದೀರಿ. ನಿಮ್ಮ ಸಲಹೆ- ಸೂಚನೆ, ಮಾರ್ಗದರ್ಶನದಿಂದಾಗಿ ಅನುಕೂಲಗಳು ಆಗಲಿವೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನೀವು ಈ ಹಿಂದೆ ಯಾವಾಗಲೋ ಪ್ರಯತ್ನ ಮಾಡಿದ್ದ ಉದ್ಯೋಗದ ಅವಕಾಶ ಈಗ ನಿಮ್ಮನ್ನು ಹುಡುಕಿಕೊಂಡು ಬರಬಹುದು. ಅಥವಾ ಸಂಬಳದ ವಿಚಾರಕ್ಕೋ/ ಶಿಫ್ಟ್ ವಿಚಾರಕ್ಕೋ ನೀವಾಗಿಯೇ ಬೇಡ ಅಂದುಕೊಂಡಿದ್ದ ಕೆಲಸಕ್ಕೆ ಈಗ ಹೋಗುವ ನಿರ್ಧಾರ ತೆಗೆದುಕೊಳ್ಳುವಂತಾಗಲಿದೆ. ಕಾಂಡಿಮೆಂಟ್ಸ್ ಅಥವಾ ಫಾಸ್ಟ್ ಫುಡ್- ಚೈನೀಸ್ ಫುಡ್ ಗಳ ಮಾರಾಟ ಮಳಿಗೆಯನ್ನು ಇಟ್ಟುಕೊಂಡಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ಕೆಲವು ತಿಂಗಳು ಅಥವಾ ವರ್ಷಗಳ ಕಾಲ ನಿಮ್ಮ ಮನೆಯಲ್ಲಿ ಉಳಿದುಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಸಹಾಯ ಕೇಳಿಕೊಂಡು ಸಂಬಂಧಿಗಳು ಹುಡುಕಿಕೊಂಡು ಬರುವ ಯೋಗ ಇದೆ. ಇದಕ್ಕೆ ಏನು ಉತ್ತರ ಹೇಳಬೇಕು ಅಥವಾ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಯದೆ ಗೊಂದಲಕ್ಕೆ ಬೀಳುತ್ತೀರಿ. ಕೃಷಿಕರು ಹೊಸದಾಗಿ ಜಮೀನು ಖರೀದಿ ಮಾಡುವುದಕ್ಕೆ ಅಥವಾ ಭೂಮಿಯನ್ನು ಗುತ್ತಿಗೆ ಪಡೆಯುವುದಕ್ಕೆ ಆಲೋಚಿಸಬಹುದು. ಈಗಾಗಲೇ ಮಾತುಕತೆಯಾಡಿ ಅದು ಮುಂದುವರಿಯದೆ ಅಲ್ಲೇ ನಿಂತಿದೆ ಎಂದಾದಲ್ಲಿ ಈ ವಾರ ಮುಂದುವರಿಯುವ ವ್ಯವಹಾರ ಅಂತಿಮ ಆಗುವಂತಹ ಯೋಗ ಇದೆ. ನಿಮ್ಮ ಹಿತೈಶಿಗಳು ನೆರವಿಗೆ ನಿಲ್ಲಲಿದ್ದಾರೆ. ಹಣಕಾಸು ವಿಚಾರದಲ್ಲಿ ಕಾಡುತ್ತಿರುವ ಗೊಂದಲಗಳನ್ನು ನಿವಾರಣೆ ಮಾಡಲಿದ್ದಾರೆ. ವೃತ್ತಿನಿರತರಿಗೆ ಗೌರವ ಹುದ್ದೆಗಳು ದೊರೆಯುವ ಸಾಧ್ಯತೆಗಳಿವೆ. ಒಂದು ವೇಳೆ ತಾತ್ಕಾಲಿಕವಾಗಿ ಹುದ್ದೆಗಳನ್ನು ನಿಭಾಯಿಸುತ್ತಾ ಇದ್ದಲ್ಲಿ ಅದು ಕಾಯಂ ಆಗುವಂಥ ಸಾಧ್ಯತೆ ಇದೆ. ಮಕ್ಕಳ ಶಿಕ್ಷಣಕ್ಕಾಗಿ ನಿಮ್ಮ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದಕ್ಕೆ ಮುಂದಾಗಬಹುದು. ಈ ಎಲ್ಲ ಬೆಳವಣಿಗೆಗಳಿಂದ ಮನಸ್ಸಿಗೆ ಸಮಾಧಾನ ದೊರೆಯಲಿದೆ. ವಿದ್ಯಾರ್ಥಿಗಳು ಗ್ಯಾಜೆಟ್, ಮೊಬೈಲ್ ಫೋನ್ ಹೀಗೆ ಕೆಲವು ಸಮಯದಿಂದ ನೀವು ಅಂದುಕೊಳ್ಳುತ್ತಿದ್ದುದನ್ನು ಖರೀದಿ ಮಾಡುವಂಥ ಯೋಗ ಇದೆ. ತಂದೆ- ತಾಯಿಗೆ ನೀವು ಹೇಳಬೇಕು ಎಂದು ಅಂದುಕೊಂಡಿದ್ದ ವಿಷಯವನ್ನು ಹೇಳುವುದಕ್ಕೆ ಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಆದರೆ ನಿಮ್ಮಲ್ಲಿ ಕೆಲವರಿಗೆ ಒಂಟಿತನ ಕಾಡಬಹುದು. ಆದರೆ ಇದು ನಿಮ್ಮ ಮೇಲೆ ಅಡ್ಡ ಪರಿಣಾಮ ಬೀರದಂತೆ ಎಚ್ಚರಿಕೆಯನ್ನು ವಹಿಸಿ. ಮಹಿಳೆಯರು ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಉತ್ತಮವಾದ ಸಂಬಂಧ ಹುಡುಕಿಕೊಂಡು ಬರುವಂಥ ಯೋಗ ಇದೆ. ಒಂದು ವೇಳೆ ಪ್ರೀತಿಯಲ್ಲಿ ಇದ್ದು, ಈ ವಿಚಾರವನ್ನು ಮನೆಯಲ್ಲಿ ಪ್ರಸ್ತಾವ ಮಾಡಬೇಕು ಅಂತೇನಾದರೂ ಇದ್ದಲ್ಲಿ ಅದಕ್ಕೆ ವೇದಿಕೆ- ಅವಕಾಶ ದೊರೆಯಲಿದೆ. ಒಂದು ವೇಳೆ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದು, ಸೂಕ್ತ ವೈದ್ಯೋಪಚಾರ ಸಿಗುತ್ತಿಲ್ಲ ಎಂದು ಆತಂಕವಾಗಿದ್ದಲ್ಲಿ ಈ ವಾರ ನೀವು ಹುಡುಕುತ್ತಿರುವ ವೈದ್ಯರು ದೊರೆತು, ಅವರ ನೆರವು ಸಿಗಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮ ಖರ್ಚಿನ ಪ್ಯಾಟರ್ನ್ ನಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಕೆಲವು ಬದಲಾವಣೆಗಳನ್ನು ಶತಾಯಗತಾಯ ಮಾಡಲೇಬೇಕು ಎಂದು ತೀರ್ಮಾನ ಕೈಗೊಳ್ಳುತ್ತೀರಿ. ಸಂಕೋಚ ಮಾಡಿಕೊಂಡು ಇಷ್ಟು ಸಮಯ ಯಾವ ವಿಚಾರವನ್ನು ಹೇಳಬಾರದು ಎಂದುಕೊಂಡಿದ್ದಿರೋ ಅದನ್ನು ಸಂಬಂಧಪಟ್ಟವರ ಎದುರು ಹೇಳಿಬಿಡಲಿದ್ದೀರಿ. ನಿಮಗಿಂತ ಕಿರಿಯ ವಯಸ್ಸಿನವರಿಗೆ ಹೊಸ ಬಟ್ಟೆ, ಶೂ, ವಾಚ್ ಇಂಥದ್ದನ್ನು ಕೊಡಿಸುವ ಸನ್ನಿವೇಶ ಎದುರಾಗಲಿದೆ. ಕ್ರೆಡಿಟ್ ಕಾರ್ಡ್ ಬಳಸುವಂಥವರು ಅದರ ಪಾವತಿ ದಿನಾಂಕ- ಮೊತ್ತ ಇತ್ಯಾದಿಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕಾಗುತ್ತದೆ. ಸ್ನೇಹಿತರೋ ಸಂಬಂಧಿಕರೋ ಕಷ್ಟದಲ್ಲಿ ಇದ್ದಾಗ ನೀವು ನೀಡಿದಂಥ ಸಲಹೆ- ಮಾರ್ಗದರ್ಶನದಿಂದ ಅವರಿಗೆ ಬಹಳ ಸಹಾಯ ಆಗಲಿದೆ. ಅದರಿಂದ ನಿಮಗೆ ಒಂದು ಬಗ್ಗೆಯಲ್ಲಿ ಸಮಾಧಾನ ದೊರೆಯಲಿದೆ. ಕೃಷಿಕರಿಗೆ ಸಂಬಂಧಿಕರು ಯಾಕಾದರೂ ಕರೆ ಮಾಡುತ್ತಾರೋ ಅಥವಾ ಯಾಕಾದರೂ ಮನೆಗೆ ಬರುತ್ತಾರೋ ಎಂದು ಬಹಳ ಬೇಸರ ಮಾಡಿಕೊಳ್ಳುವಂತಾಗುತ್ತದೆ. ಅವರಿಂದಾಗಿಯೇ ಮನೆಯಲ್ಲಿ ಜಗಳ, ಬೇಸರದ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಇನ್ನು ಸಂಗಾತಿ ಜತೆಗೆ ಮಾತನಾಡುವಾಗ ಸಣ್ಣ ಸಂಗತಿಗೂ ಸಿಟ್ಟು ಮಾಡಿಕೊಂಡು, ನಿಮ್ಮ ಮೇಲೆ ರೇಗಾಡುವಂಥ ಸಾಧ್ಯತೆಗಳಿವೆ. ಇದೇ ವೇಳೆ ಸ್ನೇಹಿತರು ನಿಮ್ಮಿಂದ ನಿರೀಕ್ಷೆ ಮಾಡುವುದು ವಿಪರೀತ ಆಗುತ್ತದೆ. ಕೆಲಸವೇ ಇಲ್ಲದಿದ್ದರೂ ಬಹಳ ಕೆಲಸ ಮಾಡುತ್ತಿರುವಂತೆ ತೋರಿಸಿಕೊಳ್ಳುತ್ತಿದ್ದೀರಿ ಎಂಬ ರೀತಿಯಲ್ಲಿ ನಿಮ್ಮನ್ನು ಮೂದಲಿಸಬಹುದು. ಹೊಸ ಬಟ್ಟೆಯೋ ಅಥವಾ ಗೃಹ ಬಳಕೆ ವಸ್ತುವನ್ನೋ ಇತರರಿಗಾಗಿ ಖರೀದಿಸಿದ್ದಕ್ಕೆ ನೀವೇ ಹಣ ಕೊಟ್ಟು, ಇಟ್ಟುಕೊಳ್ಳಬೇಕಾಗುತ್ತದೆ. ವೃತ್ತಿನಿರತರಿಗೆ ದಮ್ಮಯ್ಯಗುಡ್ಡೆ ಹಾಕಿ ನಿಮ್ಮ ಬಳಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಕೆಲವರು ಪ್ರಯತ್ನಿಸಲಿದ್ದಾರೆ. ಇದು ಈ ಕ್ಷಣದ ಅಗತ್ಯ. ಹಣಕಾಸಿನ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ನೇರಾನೇರವಾಗಿ ಮಾತನಾಡಿ. ಏಕೆಂದರೆ, ನೀವು ಹಣಕ್ಕೆ ಬೇಡಿಕೆ ಇಡುವ ಸ್ಥಿತಿಯಲ್ಲಿ ಇರುತ್ತೀರಿ. ಇನ್ನು ನಿಮ್ಮ ವೃತ್ತಿಗೆ ಅಗತ್ಯ ಇರುವ ಎಲೆಕ್ಟ್ರಾನಿಕ್ ವಸ್ತುಗಳು ಅಥವಾ ಸಲಕರಣೆಗಳನ್ನು ಖರೀದಿ ಮಾಡುವಂಥ ಸಾಧ್ಯತೆ ಇದೆ. ಇವುಗಳನ್ನು ಕಡಿಮೆ ದುಡ್ಡಲ್ಲಿ ಖರೀದಿಸುವುದಕ್ಕೆ ಸ್ನೇಹಿತರು, ಸಂಬಂಧಿಕರು ಸಹಾಯ ಮಾಡುವುದಕ್ಕೆ ಸಾಧ್ಯತೆ ಇದೆ. ಅಥವಾ ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ಪರಿಚಿತರು ಇದ್ದಾರಾ ಎಂಬುದನ್ನು ನೆನಪಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ನಿಮ್ಮ ಸ್ನೇಹಿತರ ವಲಯದಲ್ಲಿ ಅವಮಾನ, ನಿಮ್ಮ ಮೇಲೆ ವೃಥಾ ಆರೋಪಗಳು, ವಾದ- ವಿವಾದ ಆಗುವಂಥ ಸಾಧ್ಯತೆಗಳು ಹೆಚ್ಚು. ನಿಮ್ಮ ಬಗ್ಗೆ ಪೋಷಕರ ಬಳಿ ದೂರುಗಳು ಹೇಳುವವರ ಸಂಖ್ಯೆ ಹೆಚ್ಚಾಗಲಿವೆ. ದುರಭ್ಯಾಸಗಳು ಇವೆ ಅಂತಲೋ ದುಷ್ಟ ಜನರ ಸಹವಾಸ ಮಾಡುತ್ತಿದ್ದಾರೆ ಅಂತಲೋ ದೂರುಗಳು ಹೇಳುತ್ತಾರೆ. ನೀವೇನೂ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಮಾಡುವಷ್ಟರಲ್ಲಿ ಹೈರಾಣಾಗುತ್ತೀರಿ. ಮಹಿಳೆಯರಿಗೆ ನರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಲಿವೆ. ಈಗಾಗಲೇ ಅಂಥ ಸಮಸ್ಯೆಗಳು ಇದ್ದಲ್ಲಿ ಉಲ್ಬಣ ಆಗಲಿದೆ. ಯಾವುದೇ ಕೆಲಸ ಮಾಡುವಾಗ ಗಾಬರಿ ಗಾಬರಿ ಆಗುತ್ತದೆ. ಮುಖ್ಯ ಮಾಹಿತಿಯನ್ನು ನೀವೇ ಮಿಸ್ ಮಾಡಿಕೊಂಡು ಬಯ್ಯಿಸಿಕೊಳ್ಳುವ, ನಿಮ್ಮ ಕೈಯಿಂದಲೇ ಹಣ ಕಳೆದುಕೊಳ್ಳುವ ಯೋಗ ಸಹ ಇದೆ. ನಿಮ್ಮ ಅರಿವಿಗೆ ಬಾರದಂತೆಯೇ ಕೆಟ್ಟ ಬೈಗುಳ ಬಂದು, ಇತರರಿಗೆ ನಿಮ್ಮ ಬಗ್ಗೆ ಗೌರವ ಹೋಗಬಹುದು. ಸ್ನೇಹಿತರ ಜತೆಗೆ ಜಗಳ- ಕದನಗಳಾಗಿ, ಸ್ನೇಹ ಕಳೆದುಕೊಳ್ಳುವ ಯೋಗ ಇದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರು ಅದರ ವಿಸ್ತರಣೆಗಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಆರ್ಥಿಕ ಕಾರಣಗಳಿಗಾಗಿ ಇಷ್ಟು ಸಮಯ ಹಿಂಜರಿಕೆ ಏನಾದರೂ ಮಾಡುತ್ತಾ ಬಂದಿದ್ದಲ್ಲಿ ಈ ಅವಧಿಯಲ್ಲಿ ನಿಮ್ಮ ಮಿತಿಯನ್ನು ಮೀರಿ, ನಿರ್ಧಾರ ಕೈಗೊಳ್ಳಲಿದ್ದೀರಿ. ಕುಟುಂಬ ಸದಸ್ಯರ ಜೊತೆಗೆ ಪ್ರವಾಸಕ್ಕೆ ತೆರಳುವಂಥ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ನಿಮ್ಮಲ್ಲಿ ಇನ್ನೂ ಕೆಲವರಿಗೆ ಉದ್ಯೋಗ ಮಾಡುವ ಸ್ಥಳದಿಂದಲೇ ಪ್ರವಾಸಕ್ಕೆ ಕಳಿಸಿಕೊಡುವಂತೆ ಆಗುತ್ತದೆ. ನೀವು ಅಂದಾಜು ಮಾಡಿ, ಮುಂಜಾಗ್ರತೆ ತೆಗೆದುಕೊಂಡ ಕಾರಣದಿಂದ ಕೆಲವು ಅನುಕೂಲಗಳು ಆಗಲಿದ್ದು, ದೊಡ್ಡ ಅಪಾಯವೊಂದರಿಂದ ತಪ್ಪಿಸಿಕೊಳ್ಳಲಿದ್ದೀರಿ. ಎಐ, ಮಶೀನ್ ಲರ್ನಿಂಗ್ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರು ಹೊಸ ಕೋರ್ಸ್ ಗೆ ಸೇರ್ಪಡೆ ಆಗುವಂಥ ಯೋಗ ಇದೆ. ಇದರಿಂದ ಭವಿಷ್ಯದಲ್ಲಿ ತುಂಬ ಅನುಕೂಲ ಆಗಲಿದೆ. ಕೃಷಿಕರಿಗೆ ನಿಮ್ಮ ವರ್ತನೆಯಲ್ಲಿ ನಿಮಗೇ ಅಚ್ಚರಿ ಆಗುವಂಥ ಬೆಳವಣಿಗೆಗಳು ಆಗಲಿವೆ. ಎಲ್ಲರೂ ನಿಮ್ಮಿಂದ ಹಣದ ಸಾಲ ಪಡೆಯುವ ತನಕ ಚೆನ್ನಾಗಿದ್ದು, ಆ ನಂತರ ಅದನ್ನು ಹಿಂತಿರುಗಿಸುವಾಗ ಸತಾಯಿಸುತ್ತಾರೆ ಎಂದು ಬಲವಾಗಿ ಅನಿಸುತ್ತದೆ. ಅದರ ಜತೆಗೆ ನಿಮ್ಮ ವೃತ್ತಿಗೆ ಯಾರೂ ಒತ್ತಾಸೆಯಾಗಿ ನಿಲ್ಲುತ್ತಿಲ್ಲ ಅಂತಲೂ ಅನಿಸುತ್ತದೆ. ಆದ್ದರಿಂದ ಒಂದಿಷ್ಟು ಆಕ್ರಮಣಕಾರಿಯಾಗಿ ಆಲೋಚನೆ ಮಾಡಲಿದ್ದೀರಿ. ‘ದುಡ್ಡಿಟ್ಟು ಆ ಮೇಲೆ ಮಾತನಾಡು’ ಅನ್ನುವ ರೀತಿಯಲ್ಲಿ ಇರುತ್ತದೆ ನಿಮ್ಮ ಧ್ವನಿ. ಯಾರ ಮೇಲೂ ನಂಬಿಕೆಯಿಟ್ಟು, ವ್ಯವಹಾರ ನಡೆಸಬಹುದು ಎಂಬ ಭಾವನೆ ನಿಮ್ಮೊಳಗೆ ಮೂಡುವುದಿಲ್ಲ. ಇನ್ನು ಮುಂದೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವಂತವಾಗಿ, ಸ್ವತಂತ್ರವಾಗಿ ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಟ್ರ್ಯಾಕ್ಟರ್, ಟಿಲ್ಲರ್ ಸೇರಿಂದ ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡುವುದಕ್ಕಾಗಿ ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿರುವವರಿಗೆ ಹಣ ಮಂಜೂರಾಗುವ ಸುದ್ದಿ ದೊರೆಯಲಿದೆ. ನಿಮ್ಮ ಗ್ರಾಮದಲ್ಲಿ ನೀವು ನಡೆದುಕೊಳ್ಳುವಂಥ ದೇವರಿಗೆ ಸೋಮವಾರದಂದು ಹೂವು- ಕಾಯಿ ಮಾಡಿಸಿಕೊಂಡು ಬನ್ನಿ. ಹೀಗೆ ಮಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ವೃತ್ತಿನಿರತರು ಈ ವಾರ ಹೇಳಿದ್ದನ್ನೇ ಹೇಳಬೇಕಾದ ಹಾಗೂ ಮತ್ತೆ ಮತ್ತೆ ವಿವರಿಸಬೇಕಾದ ಸನ್ನಿವೇಶಗಳು ಎದುರಾಗುತ್ತವೆ. ಇನ್ನು ನಿಮ್ಮಲ್ಲಿ ಕೆಲವರಂತೂ ನನ್ನ ಮಾತು ಹಾಗೂ ಧ್ವನಿಯ ಅರ್ಥ ಇದಾಗಿತ್ತು ಅಂತ ಉದ್ದೇಶವನ್ನು ಬಿಡಿಸಿ ಹೇಳುವುದರಲ್ಲಿ ಹೈರಾಣಾಗುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಕುಟುಂಬದ ಸದಸ್ಯರು ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ಆತಂಕವನ್ನೂ ಹಾಗೂ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಪೋಷಕರು, ಸೋದರ- ಸೋದರಿಯರ ಅನಾರೋಗ್ಯ ಸಮಸ್ಯೆ ನಿಮ್ಮನ್ನು ವಿಚಲಿತರನ್ನಾಗಿ ಮಾಡಬಹುದು. ಹಸಿರು ಬಣ್ಣದ ಬಟ್ಟೆ ಧರಿಸುವುದರಿಂದ ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಮಾನಸಿಕವಾಗಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಮೀರಿ ನಿಲ್ಲುವುದಕ್ಕೆ ಸಾಧ್ಯವಾಗುತ್ತದೆ. ಮಹಿಳೆಯರು ದಿರಿಸು, ಒಡವೆ, ವಸ್ತುಗಳು ಪ್ರತಿಯೊಂದರಲ್ಲೂ ಒಪ್ಪ- ಓರಣವಾಗಿ ಸಿದ್ಧವಾಗಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗೀ ಆಗುವ ಯೋಗ ಇದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಸಂತಸದ ವಾರ ಇದಾಗಿರಲಿದೆ. ಪ್ರೀತಿಪಾತ್ರರಾದವರು ನಿಮಗೆ ಉಡುಗೊರೆಗಳನ್ನು ಕೊಡುವ ಸಾಧ್ಯತೆ ಇದೆ. ಇನ್ನು ಮ್ಯೂಚುವಲ್ ಫಂಡ್, ಷೇರುಗಳು ಇಂಥದ್ದರಲ್ಲಿ ಹೂಡಿಕೆ ಮಾಡಿದ್ದವರಿಗೆ ಲಾಭ ಬರುವಂಥ ಯೋಗ ಇದೆ. ಪಾರ್ಟಿಗಳಲ್ಲಿ ಭಾಗೀ ಆಗಲಿದ್ದೀರಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನೀವು ಯಾರನ್ನು ಗುರು ಸಮಾನರು, ನಿಮಗೆ ಹಿರಿಯರು ಎಂದು ಭಾವಿಸುತ್ತೀರೋ ಅಂಥವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಆತುರಕ್ಕೆ ಬಿದ್ದು ಯಾವುದೇ ನಿರ್ಧಾರಕ್ಕೆ ಬರಬೇಡಿ. ಉದ್ಯೋಗ ವಿಚಾರಕ್ಕೆ ಬಹಳ ಗೊಂದಲಗಳು ನಿಮ್ಮನ್ನು ಕಾಡಬಹುದು. ಒಂದು ವೇಳೆ ಈಚೆಗಷ್ಟೇ ನೀವು ಜಾಬ್ ಆಫರ್ ಒಂದನ್ನು ಒಪ್ಪಿಕೊಂಡಿದ್ದೀರಿ ಅಂತಾದಲ್ಲಿ ಅದನ್ನು ಬೇಡ ಎಂದು ಹೇಳಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು. ಅಥವಾ ನಿಮ್ಮ ಮನಸ್ಸಿನಲ್ಲಿ ಒಂದು ಬಗೆಯ ಆತಂಕ ಕಾಡಿ, ಮನೆಯಲ್ಲಿ ವಿಪರೀತ ಒತ್ತಡ ಹಾಕಿ ನಿಮ್ಮ ನಿರ್ಧಾರ ಬದಲಿಸಲೇಬೇಕಾದ ಸ್ಥಿತಿ ಎದುರಾಗಬಹುದು. ಕೃಷಿಕರು ಈಗಾಗಲೇ ವಿವಾಹಿತರಾಗಿದ್ದಲ್ಲಿ ಸಂಗಾತಿಗಾಗಿ ಚಿನ್ನದ ಒಡವೆ ಖರೀದಿಸುವ ಸಾಧ್ಯತೆಗಳಿವೆ ಅಥವಾ ಅವಿವಾಹಿತರಾಗಿದ್ದಲ್ಲಿ ಮದುವೆಗಾಗಿಯೇ ಚಿನ್ನದ ನಾಣ್ಯಗಳನ್ನು ಅತವಾ ಗಟ್ಟಿಗಳನ್ನು ಖರೀದಿಸುವಂತಹ ಯೋಗ ಈ ವಾರ ನಿಮ್ಮ ಪಾಲಿಗೆ ಇದೆ. ನಿಮ್ಮ ಸೋದರ ಸಂಬಂಧಿಗಳಿಗೆ ಹಣಕಾಸಿನ ಅಗತ್ಯ ಕಂಡುಬಂದು, ಹೇಗಾದರೂ ಹಣ ಬೇಕೇ ಬೇಕು ಎಂದು ಬರಲಿದ್ದು, ನೀವು ಸಾಲ ಮಾಡಿಯಾದರೂ ಅವರಿಗೆ ನೀಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮ ಕುಟುಂಬದ ಅಗತ್ಯಕ್ಕೆ ಇನ್ನೂ ದೊಡ್ಡ ಮನೆ ಬೇಕು ಎಂದು ಆಲೋಚಿಸುತ್ತಿರುವವರು ನಿಮಗೆ ಈಗಾಗಲೇ ಸೈಟ್ ಇದೆ ಅಂತಾದರೆ ಅಲ್ಲಿ ಮನೆ ಕಟ್ಟುವ ಬಗ್ಗೆ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸಲಿದ್ದೀರಿ. ಯಾರು ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದೀರಿ ಅಂಥವರಿಗೆ ಆದಾಯದಲ್ಲಿ ಏರಿಕೆ ಕಂಡು ಬರಲಿದೆ. ನಿಮ್ಮಲ್ಲಿ ಕೆಲವರು ವಾಹನಗಳನ್ನು ಖರೀದಿಸುವ ಸಾಧ್ಯತೆ ಕೂಡ ಇದೆ. ವೃತ್ತಿನಿರತರು ಸಂಬಂಧಿಕರು ಸ್ನೇಹಿತರ ಮನೆಯ ಶುಭ ಸಮಾರಂಭಗಳಿಗಾಗಿ ಹಣಕಾಸಿನ ನೆರವನ್ನು ನೀಡಲಿದ್ದೀರಿ. ಇನ್ನು ಇದೇ ಸಮಯದಲ್ಲಿ ಈ ಹಿಂದೆ ನೀವು ನೀಡಿದ್ದ ಸಾಲ ವಾಪಸ್ ಬರಬಹುದು ಅಥವಾ ಮ್ಯೂಚುವಲ್ ಫಂಡ್ ನಂಥ ಹೂಡಿಕೆಯಿಂದ ಹಣ ತೆಗೆದು, ನೀಡುವಂಥ ಸಾಧ್ಯತೆಗಳಿವೆ. ನಿಮ್ಮ ನೇರಾ ನೇರ ಮಾತುಗಳಿಂದ ವ್ಯವಹಾರಗಳಲ್ಲಿ ಲಾಭವಾಗಲಿದೆ. ನಿಮಗೆ ಸರಿ ಎಂದು ಎನಿಸಿದ ಕೆಲಸಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳಬೇಡಿ. ಸರ್ಕಾರದ ಜತೆಗಿನ ಪತ್ರ ವ್ಯವಹಾರಗಳು ಅಥವಾ ಯಾವುದೇ ಸಂವಹನ ಇದ್ದರೂ ನೀವೇ ಅವುಗಳನ್ನು ಒಮ್ಮೆ ವೈಯಕ್ತಿಕವಾಗಿ ಪರಿಶೀಲಿಸಿ, ಆ ನಂತರ ಅದನ್ನು ಕಳುಹಿಸುವುದು ಉತ್ತಮ. ಇಲ್ಲದಿದ್ದಲ್ಲಿ ನಿಮಗೆ ಇದರಿಂದ ಒಂದಲ್ಲಾ ಒಂದು ರೀತಿಯಿಂದ ನಷ್ಟ ಆಗುವಂತಾಗುತ್ತದೆ. ವಿದ್ಯಾರ್ಥಿಗಳು ಯಾರು ಮನೆಯಿಂದ ದೂರ, ಹಾಸ್ಟೆಲ್ ಗಳಲ್ಲಿ ಇದ್ದು ಓದುತ್ತಿದ್ದೀರಿ ಅಥವಾ ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದೀರಿ ಅಥವಾ ಈಗ ಟ್ಯೂಷನ್ ಸೇರುವುದು ಅನಿವಾರ್ಯ ಎಂಬ ಸ್ಥಿತಿ ಎದುರಿಸುತ್ತಿದ್ದೀರಿ ಅಂಥವರಿಗೆ ಹೆಚ್ಚುತ್ತಿರುವ ಖರ್ಚು ಹಾಗೂ ವೆಚ್ಚ ಆತಂಕಕ್ಕೆ ಗುರಿ ಮಾಡಲಿದೆ. ನಿಮಗೆ ಅರಿವಿಲ್ಲದಂತೆಯೂ ಅಥವಾ ಯಾವುದೋ ಉತ್ಸಾಹದಲ್ಲಿ ಒಪ್ಪಿಕೊಂಡು ಬಂದಂಥ ಕೋರ್ಸ್ ಅಥವಾ ಜವಾಬ್ದಾರಿಯು ಬಹಳ ಕಷ್ಟ ಎಂಬುದು ಆ ನಂತರ ಅರಿವಿಗೆ ಬರಲಿದೆ. ಮಹಿಳೆಯರಿಗೆ ನಿಮಗೆ ಬಹಳ ಅಗತ್ಯ ಇರುವ ಹಣಕಾಸಿನ ವಿಚಾರಕ್ಕೆ ನೆರವು ನೀಡುವುದಾಗಿ ಹೇಳಿದಂಥ ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥೆಯವರು ಕೊನೆ ಕ್ಷಣದಲ್ಲಿ ತಮ್ಮಿಂದ ಆಗುವುದಿಲ್ಲ ಎಂದು ಹೇಳುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಅರ್ಧದಷ್ಟು ಮುಗಿಸಿ ಆಗಿದೆ ಎಂಬಂತಹ ಕೆಲಸ- ಪ್ರಕ್ರಿಯೆಗಳನ್ನು ಮತ್ತೆ ಮೊದಲಿಂದ ಆರಂಭಿಸಬೇಕಾದ ಹಾಗೂ ಅದರಿಂದ ಒತ್ತಡ ಬೀಳುವಂಥ ಸನ್ನಿವೇಶಗಳು ಎದುರಾಗಲಿವೆ.




