ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 21ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಕೈಲಿ ಇನ್ನಷ್ಟು ಮೊತ್ತವನ್ನು ಇಟ್ಟುಕೊಳ್ಳಬೇಕು ಎಂದು ಆಲೋಚನೆ ಮಾಡಲಿದ್ದೀರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದಂಥವರು ಈ ದಿನ ಸ್ವಲ್ಪ ಮಟ್ಟಿಗೆ ಒತ್ತಡಕ್ಕೆ ಗುರಿ ಆಗಬೇಕಾಗುತ್ತದೆ. ನೀವು ಬಹಳ ಆತ್ಮವಿಶ್ವಾಸದಿಂದ ನೀಡಿದಂಥ ಹಣಕಾಸಿನ ಸಲಹೆಗಳು ಬೂಮ್ ರಾಂಗ್ ಆಗಬಹುದು. ಆದ್ದರಿಂದ ಇತರರಿಗೆ ಸಲಹೆ ನೀಡುವ ಮುಂಚೆ ಸಾಧಕ- ಬಾಧಕಗಳ ಬಗ್ಗೆ ಆಲೋಚಿಸಿ, ಹೆಜ್ಜೆಯಿಡುವುದು ಒಳ್ಳೆಯದು. ಬ್ಯಾಂಕ್ ಲಾಕರ್ ನಲ್ಲಿ ಚಿನ್ನದ ಒಡವೆಗಳನ್ನು ಇಡುವುದಕ್ಕೋ ಅಥವಾ ತೆಗೆಯುವುದಕ್ಕೋ ಈ ದಿನ ಮುಂದಾಗುತ್ತೀರಿ ಎಂದಾದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ ಹಾಗೂ ಸಾಮಾನ್ಯ ದಿನಗಳಲ್ಲಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ನಿಗಾ ವಹಿಸುವುದು ಮುಖ್ಯ. ಒಂದು ವೇಳೆ ನೀವೇನಾದರೂ ಚೂಪಾದ ವಸ್ತುಗಳನ್ನು ಬಳಸುತ್ತೀರಿ ಅಥವಾ ಅಂಥ ವಸ್ತುಗಳನ್ನು ಬಳಸುವಂಥ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೀರಿ ಅಂತಾದಲ್ಲಿ ಸಣ್ಣ-ಪುಟ್ಟ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಏನಾಗುತ್ತಿದೆ ನಿಮ್ಮ ಸುತ್ತ ಎಂಬ ಬಗ್ಗೆ ವಾಸ್ತವ ಸಂಗತಿ ತಿಳಿಯಲಿದೆ. ಕೆಲವರು ನಿಮ್ಮನ್ನು ದೂರವಿಟ್ಟು ಕೆಲಸ ಮಾಡುತ್ತಿದ್ದಾರೆ ಎಂಬ ಸಂಗತಿ ತಿಳಿದುಬರಲಿದೆ. ಕಮಿಷನ್ ಆಧಾರದಲ್ಲಿ ಕೆಲಸ ಮಾಡುವಂಥವರು ನಿಮಗೆ ಬರಬೇಕಾದ ಹಣದ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಏಕೆಂದರೆ ನಿಮ್ಮ ಜತೆಗೆ ಚೆನ್ನಾಗಿರುವಂತೆಯೇ ಕಾಣಿಸುವಂಥವರು ನಿಮಗೆ ಬರಬೇಕಾದ ಆದಾಯವನ್ನು ತಮ್ಮದಾಗಿಸಿಕೊಳ್ಳುವಂಥ ಸಾಧ್ಯತೆಗಳಿವೆ. ಒಂದು ವೇಳೆ ತುರ್ತಾದ ಕೆಲಸದ ಮೇಲೆ ದೂರದ ಊರುಗಳಿಗೆ ತೆರಳಬೇಕಾದವರು ಅಲ್ಲಿಂದ ಬಂದ ನಂತರದಲ್ಲಿ ಕೆಲಸ ಮಾಡಿಕೊಳ್ಳಿ. ಅದರ ಬದಲಿಗೆ ಇನ್ಯಾರಿಗಾದರೂ ಆ ಕೆಲಸವನ್ನು ವಹಿಸಿದರೆ ಆ ನಂತರ ಪರಿತಪಿಸಬೇಕಾಗುತ್ತದೆ. ವಿವಾಹಿತರಾಗಿದ್ದಲ್ಲಿ ಸಂಗಾತಿಯ ಸಂಬಂಧಿಕರು ನಿಮ್ಮ ಬಗ್ಗೆ ನೆಗೆಟಿವ್ ವಿಚಾರಗಳನ್ನು ಹಬ್ಬಿಸುವುದಕ್ಕೆ ಪ್ರಯತ್ನಿಸುತ್ತಾರೆ. ಈ ಹಿಂದೆ ಯಾವಾಗಲೋ ನೀವು ಆಡಿದ ಮಾತು ಅಥವಾ ಕಾಮೆಂಟ್ ಗಳು ಈ ದಿನ ಸಮಸ್ಯೆಯಾಗಿ ತಲೆ ಎತ್ತಬಹುದು. ಅದಕ್ಕೆ ಸಮಜಾಯಿಷಿ ನೀಡುವುದರಲ್ಲಿ ಹೈರಾಣಾಗುತ್ತೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮಲ್ಲೊಂದು ಸಮಾಧಾನ ಮೂಡುವ ದಿನ ಇದಾಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವಂಥವರಿಗೆ ಮುಖ್ಯವಾದ ಜವಾಬ್ದಾರಿ, ಹುದ್ದೆ ದೊರೆಯುವಂಥ ಸುಳಿವು ದೊರೆಯಲಿದೆ. ವಿದೇಶಗಳಲ್ಲಿ ಉದ್ಯೋಗಕ್ಕೆ ಅಥವಾ ವ್ಯಾಸಂಗಕ್ಕೆ ತೆರಳಬೇಕು ಎಂದಿರುವವರಿಗೆ ಅನಿರೀಕ್ಷಿತವಾಗಿ ದೊಡ್ಡ ಮಟ್ಟದ ನೆರವು ದೊರೆಯಲಿದೆ. ಮದುವೆ ವಯಸ್ಕರಾಗಿದ್ದು ಮ್ಯಾಟ್ರಿಮೋನಿ ವೆಬ್ ಸೈಟ್ ಗಳ ಮೂಲಕ ಪ್ರಯತ್ನ ಮಾಡುತ್ತಿರುವವರಿಗೆ ನಿಮ್ಮ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯುವ ಅವಕಾಶಗಳು ಹೆಚ್ಚಿವೆ. ಬ್ಯಾಂಕಿಂಗ್ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿರುವವರಿಗೆ ಸಕಾರಾತ್ಮಕವಾದ ಬೆಳವಣಿಗೆ ಆಗಿಲಿದ್ದು, ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೃಷಿಕರಾಗಿದ್ದಲ್ಲಿ ಹೊಸದಾಗಿ ಜಮೀನು ಖರೀದಿ ಮಾಡುವ ಅಥವಾ ಗುತ್ತಿಗೆಗೆ ಭೂಮಿ ಪಡೆಯುವಂಥ ಯೋಗ ಇದ್ದು, ಕುಟುಂಬ ಸದಸ್ಯರು ಸಹ ನಿಮ್ಮ ಬೆನ್ನಿಗೆ ಬೆಂಬಲವಾಗಿ ನಿಲ್ಲಲಿದ್ದಾರೆ. ಮನೆಗೆ ಅಗತ್ಯ ಇರುವಂಥ ವಾಹನವನ್ನು ಖರೀದಿ ಮಾಡುವುದಕ್ಕೆ ಅಡ್ವಾನ್ಸ್ ನೀಡಲಿದ್ದೀರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಉದ್ಯೋಗ ಬದಲಾವಣೆ ಮಾಡಬೇಕು ಎಂದು ಯೋಚಿಸುತ್ತಿರುವವರಿಗೆ ಸದ್ಯಕ್ಕೆ ಬದಲಾವಣೆ ಮಾಡುವುದು ಬೇಡ ಎಂದೆನಿಸುವುದಕ್ಕೆ ಶುರು ಆಗುತ್ತದೆ. ಪ್ರಕೃತಿ ಮಧ್ಯದಲ್ಲಿ ಸಮಯ ಕಳೆಯಬೇಕು, ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ನಿಶ್ಚಯ ಮಾಡಲಿದ್ದೀರಿ. ಜಿಮ್, ಯೋಗ ಅಥವಾ ಪ್ರಾಣಾಯಾಮಕ್ಕೆ ಸೇರ್ಪಡೆ ಆಗುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಸ್ವಂತವಾಗಿ ವ್ಯವಹಾರ ಶುರು ಮಾಡುವುದಕ್ಕೆ ಸ್ನೇಹಿತರು ಹಾಗೂ ಸಂಬಂಧಿಕರು ಸಹ ಉತ್ತೇಜನ ನೀಡುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಯಾರು ಸ್ವ ಉದ್ಯೋಗ ಮಾಡಬೇಕು ಎಂದು ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವಿರೋ ಅಂಥವರಿಗೆ ಸಲೀಸಾಗಿ ಹಣ ಸಿಗುವ ಸಾಧ್ಯತೆ ಇದೆ. ಪ್ರಭಾವಿಗಳು ಶಿಫಾರಸು ಮಾಡಲಿದ್ದು, ಇದರಿಂದ ನಿಮಗೆ ಹಲವು ಬಗೆಯಲ್ಲಿ ಅನುಕೂಲ ಆಗಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನೀವೇ ನಂಬುವುದಕ್ಕೆ ಸಾಧ್ಯವಿಲ್ಲದ ಗಾಸಿಪ್ ನಿಮ್ಮ ಬಗ್ಗೆ ಹರಿದಾಡಲಿದೆ. ಸಂಬಂಧಿಕರ ಬಳಿ ಈ ಹಿಂದೆ ನೀವು ಮಾಡಿದಂಥ ಸಾಲವೋ ಅಥವಾ ಆಸ್ತಿ ವ್ಯವಹಾರವೋ ವಿಪರೀತ ಒತ್ತಡವನ್ನು ಸೃಷ್ಟಿ ಮಾಡಲಿದೆ. ನಕ್ಕು ಸುಮ್ಮನಾಗ ಬೇಕಾದ ಆಕ್ಷೇಪ, ಆಪಾದನೆಗಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳುವಂತಾಗುತ್ತದೆ. ಮುಖ್ಯವಾದ ವಸ್ತುವೊಂದನ್ನು ಒಂದು ಕಡೆ ಇಟ್ಟು, ಮತ್ತೊಂದು ಕಡೆ ಹುಡುಕಾಟ ನಡೆಸುವಂತಾಗುತ್ತದೆ. ಆದ್ದರಿಂದ ಯಾವುದೇ ಮುಖ್ಯ ವಸ್ತುಗಳು, ಕಾಗದ- ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಗಮನ ನೀಡಿ. ನಿಮ್ಮ ಆಪ್ತ ಸ್ನೇಹಿತರು ಈ ದಿನ ಯಾವುದಾದರೂ ಪ್ರಸ್ತಾವವನ್ನು ತಂದರೆ ಅದರ ಬಗ್ಗೆ ಗಂಭೀರವಾಗಿ ಆಲೋಚನೆಯನ್ನು ಮಾಡಿ. ಅದರಲ್ಲೂ ಕಟ್ಟಡಗಳ ಕಾಂಟ್ರಾಕ್ಟ್ ಕೆಲಸಗಳನ್ನು ಮಾಡುವಂಥವರಿಗೆ ಬರುವಂಥ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ,
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹಣಕಾಸು ವಿಚಾರದಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗು ಆಗುವಷ್ಟು ಕೈ ಮೀರಿ ಹೋಗಲಿದೆ. ಒಂದು ವಿಷಯ, ವಿಚಾರ ಅಥವಾ ಸಂಗತಿಯನ್ನು ಮುಂದಿಟ್ಟುಕೊಂಡು ಕೆಲವರು ಹಿಗ್ಗಾಮುಗ್ಗಾ ಜಗ್ಗಾಡಲಿದ್ದಾರೆ. ನಿಮಗೆ ಬೇಕಾದಂತೆ ಮಾಡಿಕೊಂಡು ಹೋಗಿ ಎಂದು ನೀವು ಹೇಳಬೇಕು ಅಂತ ಬಯಸಿದರೂ ಅದನ್ನು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನು ದೂರ ಪ್ರಯಾಣ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ನಿಮ್ಮ ಆಪ್ತರು ಅಥವಾ ಜತೆಗೆ ಕೆಲಸ ಮಾಡುವವರ ಒಟ್ಟಿಗೆ ಪ್ರಯಾಣ ಮಾಡುವ ಅವಕಾಶಗಳಿವೆ. ಕುಟುಂಬದ ಸದಸ್ಯರ ಅಗತ್ಯಕ್ಕಾಗಿ ಸ್ವಲ್ಪ ಮಟ್ಟದ ಅಥವಾ ಸ್ವಲ್ಪ ಮೊತ್ತವನ್ನಾದರೂ ಸಾಲ ಮಾಡಬೇಕಾಗಿ ಬರಬಹುದು. ಕೊನೆ ಕ್ಷಣದಲ್ಲಿ ಕೆಲವು ಬದಲಾವಣೆಗಳು ಆಗುವುದರಿಂದ ವೃತ್ತಿನಿರತರು ಮಾಡಿಕೊಳ್ಳಬೇಕು ಎಂದಿರುವ ಒಪ್ಪಂದದಿಂದ ಹಿಂದಕ್ಕೆ ಸರಿಯಬೇಕಾಗುತ್ತದಾ ಎಂಬ ಪ್ರಶ್ನೆ ಮೂಡಲಿದೆ. ತೀರಾ ಒತ್ತಡ ಕಂಡುಬಂದಲ್ಲಿ ಅನುಭವಿಗಳು ಮಾರ್ಗದರ್ಶನ ಪಡೆಯಿರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಹಲವು ಕೆಲಸಗಳು ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಅಥವಾ ಅಪೇಕ್ಷಿಸಿದ್ದಕ್ಕಿಂತ ಸುಲಭವಾಗಿ ಮುಗಿಯಲಿವೆ. ನಿಮ್ಮಲ್ಲಿ ಕೆಲವರು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗಬಹುದು. ಅದರಲ್ಲೂ ಫಾಲೋ ಅಪ್ ಚೆಕ್ ಅಪ್ ಗಳು ಹೆಚ್ಚಾಗಿ ಇರುತ್ತವೆ. ಈಗ ಆಗಿರುವ ಸುಧಾರಣೆಯಿಂದ ನಿಮ್ಮ ಮನಸ್ಸಿಗೆ ಒಂದು ಬಗೆಯ ಸಮಾಧಾನ ದೊರೆಯಲಿದೆ. ಈಗೇನಾದರೂ ಹೆಚ್ಚು ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಆ ಪ್ರಮಾಣವನ್ನು ಕಡಿಮೆ ಮಾಡುವಂಥ ಸಾಧ್ಯತೆಗಳಿವೆ. ಉದ್ಯೋಗದ ಕಾರಣಕ್ಕಾಗಿ ನಿಮ್ಮಲ್ಲಿ ಕೆಲವರು ಪ್ರಯಾಣಗಳನ್ನು ಮಾಡಬೇಕಾಗಬಹುದು. ಇದರಿಂದ ಸ್ವಲ್ಪ ಮಟ್ಟಿಗೆ ದೇಹಾಯಾಸ, ದಣಿವು ಆಗಲಿದೆ. ಆದರೆ ನಿಮ್ಮ ಬೆಳವಣಿಗೆಗೆ ಪೂರಕವಾಗಿ ಸಹಾಯ ಮಾಡಲಿದೆ. ಇತರರ ಜವಾಬ್ದಾರಿಗಳನ್ನು ನೀವು ವಹಿಸಿಕೊಳ್ಳುವುದಕ್ಕೆ ಮುಂಚೆ ಅದಕ್ಕಾಗಿ ನೀವು ಎಷ್ಟು ಶ್ರಮ ಹಾಕಬೇಕಾಗುತ್ತದೆ, ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ಗಮನ ಇರಲಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನೀವು ಈ ದಿನ ಇತರರನ್ನು ಸುಲಭವಾಗಿ ನಂಬಲಿದ್ದೀರಿ. ಆದರೆ ಯಾರಿಗೆ ಏನು ಹೇಳಬೇಕು, ಯಾವ ವಿಚಾರ ಹಂಚಿಕೊಳ್ಳಬೇಕು ಎಂಬ ಬಗ್ಗೆ ಒಂದು ಸ್ಪಷ್ಟತೆ ಇಟ್ಟುಕೊಳ್ಳುವುದು ಒಳ್ಳೆಯದು. ಮೇಲುನೋಟಕ್ಕೆ ಏನು ಕಾಣುತ್ತದೋ ಅದನ್ನೇ ನಿಜವೆಂದು ನಂಬಿಕೊಂಡು ಹಣ ಹಾಕುವುದಕ್ಕೆ ಅಥವಾ ಕೆಲಸ ಮಾಡುವುದಕ್ಕೆ ಮುಂದಾಗಬೇಡಿ. ಸೈಟು ಅಥವಾ ಜಮೀನು ಖರೀದಿ ಮಾಡಬೇಕು ಎಂದಿರುವವರಿಗೆ ನಿಮ್ಮ ಮನಸಿಗೆ ಒಪ್ಪುವಂಥದ್ದು ಸಿಕ್ಕಿದೆ ಎಂಬ ಕಾರಣಕ್ಕೆ ಕಾಗದ- ಪತ್ರಗಳ ವಿಚಾರದಲ್ಲಿ ಸ್ವಲ್ಪ ಮೈ ಮರೆತರೂ ಆ ನಂತರ ಪಶ್ಚಾತಾಪ ಪಡುವಂತಾಗುತ್ತದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಅಹಂಕಾರಕ್ಕೆ ಪೆಟ್ಟು ಬೀಳುವಂಥ ಮಾತುಗಳಿಂದ ಮನಸ್ತಾಪಗಳು ಸೃಷ್ಟಿ ಆಗಬಹುದು. ಈ ದಿನ ಯಾವುದೇ ಮುಖ್ಯ ಕೆಲಸಕ್ಕೆ ಮನೆಯಿಂದ ಹೊರಡುವ ಮೊದಲಿಗೆ ಈಶ್ವರನ ಆರಾಧನೆಯನ್ನು ಮಾಡಿಕೊಂಡು ಹೊರಡಿ. ಇನ್ನು ಬಿಳಿ ಬಟ್ಟೆಯ ತುಂಡು ಒಂದನ್ನಾದರೂ ನಿಮ್ಮ ಬಳಿ ಇಟ್ಟುಕೊಳ್ಳಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಹೊಸ ಹುಮ್ಮಸ್ಸು, ಉತ್ಸಾಹ ಮೂಡಲಿದೆ. ಸಣ್ಣ ಮೊತ್ತವನ್ನು ಹೂಡಿಕೆ ಮಾಡಿ, ಪ್ರಯೋಗ ಎನಿಸುವಂಥ ವ್ಯವಹಾರ ಅಥವಾ ಉದ್ಯಮ ಶುರು ಮಾಡುವ ಬಗ್ಗೆ ಸಂಬಂಧಿಗಳು, ಸ್ನೇಹಿತರ ಜತೆಗೆ ಮಾತುಕತೆ ಆಡಲಿದ್ದೀರಿ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ದೊಡ್ಡದಾದ ಜಾಗವನ್ನು ಅಭಿವೃದ್ಧಿ ಮಾಡುವ ಬಗ್ಗೆ ಯೋಜನೆ ಮಾಡಿಕೊಳ್ಳಲಿದ್ದೀರಿ. ಈ ಹಿಂದೆ ಯಾವಾಗಲೋ ನೀಡಿದಂಥ ಅಡ್ವಾನ್ಸ್ ಹಣದ ವ್ಯವಹಾರಕ್ಕೆ ಈ ದಿನ ಜೀವ ದೊರೆಯುವಂಥ ಅವಕಾಶಗಳು ಹೆಚ್ಚಿವೆ. ಅಂಥ ಸಂದರ್ಭ ಬಂದಲ್ಲಿ ಅದನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಸರಿಯಾಗಿ ಆಲೋಚನೆ ಮಾಡುವುದು ಮುಖ್ಯ. ಪೋಷಕರಿಗಾಗಿ ಹೆಲ್ತ್ ಇನ್ಷೂರೆನ್ಸ್ ಖರೀದಿ ಮಾಡುವುದಕ್ಕೆ ದೊಡ್ಡ ಮೊತ್ತವನ್ನು ಖರ್ಚು ಮಾಡಲಿದ್ದೀರಿ. ಇನ್ನು ಈ ದಿನ ಕುಟುಂಬದ ಸಂಗತಿಗಳು ಆದ್ಯತೆ ಪಡೆದುಕೊಳ್ಳುತ್ತವೆ. ಮಕ್ಕಳ ಶಿಕ್ಷಣದ ಬಗ್ಗೆ ಬಹಳ ಮುಖ್ಯವಾದ ನಿರ್ಧಾರವನ್ನು ಮಾಡಬೇಕಾಗುತ್ತದೆ.
ಲೇಖನ- ಎನ್.ಕೆ.ಸ್ವಾತಿ