Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 13ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 13ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 13ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಇತರರ ವೈಯಕ್ತಿಕ ವಿಚಾರಗಳಿಗೆ, ಪ್ರೀತಿ- ಪ್ರೇಮದ ಸಂಗತಿಗಳಿಗೆ ನೀವು ತಲೆ ಹಾಕಲು ಹೋಗಬೇಡಿ. ಒಂದು ವೇಳೆ ಮಧ್ಯಸ್ಥರಾಗಿ ನಿಮ್ಮನ್ನು ಆಹ್ವಾನ ನೀಡಿದರು ಸಹ ಅದನ್ನು ಒಪ್ಪಿಕೊಳ್ಳದೇ ಇರುವುದು ಒಳ್ಳೆಯದು. ಒಂದು ವೇಳೆ ನೀವೇ ಅತ್ಯುತ್ಸಾಹದಿಂದ ಯಾವುದಾದರೂ ಇಂಥ ವಿಚಾರಗಳಲ್ಲಿ ತೊಡಗಿಕೊಂಡಿರೋ ನಿಂದೆ ಆರೋಪಗಳಿಗೆ ಗುರಿಯಾಗುವುದು ನಿಶ್ಚಿತ. ಈ ಹಿಂದೆ ಯಾವಾಗಲೂ ಮಾಡಿದ್ದ ಹೂಡಿಕೆ, ಅದರಲ್ಲೂ ಭೂಮಿಗೆ ಸಂಬಂಧಪಟ್ಟಂತಹ ಹೂಡಿಕೆ ಇದ್ದಲ್ಲಿ ಅದನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಈ ವಿಚಾರದಲ್ಲಿ ಗೊಂದಲಗಳು ಏನಾದರೂ ಮಾಡಿದರೆ ಅನುಭವಿಗಳು- ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ವ್ಯಾಪಾರ, ವ್ಯವಹಾರ ಅಥವಾ ಉದ್ಯಮವನ್ನು ಆರಂಭಿಸುವ ಉದ್ದೇಶದಿಂದ ಹಣಕಾಸನ್ನು ಹೊಂದಾಣಿಕೆ ಮಾಡಲು ಪ್ರಯತ್ನ ಪಡುತ್ತಿರುವವರಿಗೆ ಈ ದಿನ ಒಳ್ಳೆ ಸುದ್ದಿ ಇದೆ. ಇಷ್ಟು ಸಮಯ ಒಂದು ವೇಳೆ ಕುಟುಂಬದ ಒಳಗಿಂದ ಏನಾದರೂ ವಿರೋಧಗಳು ಬರುತ್ತಿದ್ದಲ್ಲಿ ಅದಕ್ಕೆ ಈಗ ಅವರ ಸಹಕಾರ ದೊರೆಯಲಿದೆ. ವಿದೇಶಗಳಲ್ಲಿ ಉದ್ಯೋಗಕ್ಕೋ ಅಥವಾ ವ್ಯಾಸಂಗಕ್ಕೋ ಪ್ರಯತ್ನ ಪಡುತ್ತಾ ಇರುವವರಿಗೆ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಸಹಾಯಗಳು ದೊರೆಯಲಿವೆ. ಉಳಿತಾಯದ ಹಣವನ್ನು ತೆಗೆದು ಬೇರೆಲ್ಲಾದರೂ ಹೂಡಿಕೆ ಮಾಡುವ ಬಗ್ಗೆ ಗಂಭೀರವಾದ ಆಲೋಚನೆಯನ್ನು ಮಾಡಲಿದ್ದೀರಿ ಮತ್ತು ಇದೇ ವಿಚಾರವಾಗಿ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸಲಿದ್ದೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಅದೆಷ್ಟೇ ಸಣ್ಣ ಕೆಲಸ ಅಂತಾದರೂ ನಿರೀಕ್ಷೆ ಮಾಡಿದ್ದಕ್ಕಿಂತ ಜಾಸ್ತಿ ಖರ್ಚು ಆಗಲಿದೆ. ಮನೆಯ ದುರಸ್ತಿ, ಕಚೇರಿ ನವೀಕರಣ, ವಾಹನಗಳನ್ನು ಸರ್ವೀಸ್ ಗೆ ಬಿಡುವುದು ಇಂಥ ಯಾವುದೇ ಕೆಲಸ ಆದರೂ ಎಷ್ಟು ಖರ್ಚು ಬರಬಹುದು ಎಂಬುದನ್ನು ಮೊದಲಿಗೇ ಲೆಕ್ಕ ಹಾಕಿಟ್ಟುಕೊಳ್ಳುವುದು ಮುಖ್ಯ. ಅದ್ದೂರಿಯಾಗಿ ಮಾಡಬೇಕು ಎಂದುಕೊಂಡಿದ್ದ ಕಾರ್ಯಕ್ರಮವೊಂದನ್ನು ಸರಳವಾಗಿ ಮಾಡುವ ಬಗ್ಗೆ ಅಥವಾ ತಾತ್ಕಾಲಿಕವಾಗಿ ಮುಂದೂಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಪರಿಸರ ಪ್ರೇಮಿಗಳಿಗೆ, ಎನ್ ಜಿಒಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ತಾವು ಮಾಡಿದ ಕೆಲಸದಿಂದ ಮನಸ್ಸಿಗೆ ಸಮಾಧಾನ ದೊರೆಯಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನವ ವಿವಾಹಿತರ ಮಧ್ಯೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅದರಲ್ಲಿಯೂ ಹಣಕಾಸಿನ ವಿಚಾರಕ್ಕೆ ಸಣ್ಣದಾಗಿ ಆರಂಭವಾಗುವ ಕಲಹ ತೀರಾ ಮನಶ್ಶಾಂತಿ ಹಾಳು ಮಾಡುವ ಮಟ್ಟಕ್ಕೆ ಹೋಗಲಿದೆ. ನೀವು ಒಂದು ವೇಳೆ ಈಗಾಗಲೇ ಸಾಲವನ್ನು ಪಡೆದುಕೊಂಡಿದ್ದೀರಿ ಎಂದಾದಲ್ಲಿ ತಕ್ಷಣವೇ ಹಿಂತಿರುಗಿಸುವಂತೆ ಕೆಲವರು ಕುತ್ತಿಗೆ ಮೇಲೆ ಕುಳಿತಂತಹ ಅನುಭವ ನಿಮಗೆ ಆಗಲಿದೆ. ಇತರರನ್ನು ಓಲೈಕೆ ಮಾಡುವ ಸಲುವಾಗಿ ನಿಮ್ಮ ಕೈಯಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಈ ದಿನ ಕಾಣಿಸುತ್ತಿದೆ. ಮುಖ್ಯವಾದ ಕಾಗದ ಪತ್ರಗಳ ವಿಚಾರಗಳು ಇದ್ದಲ್ಲಿ ಈ ದಿನ ಸಾಧ್ಯವಾದಷ್ಟು ಮುಂದಕ್ಕೆ ಹಾಕುವುದು ಉತ್ತಮ. ಇನ್ನು ಖರ್ಚಿನ ಮೇಲೆ ಹತೋಟಿ ಇರುವುದು ತುಂಬಾ ಮುಖ್ಯ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಹಠಮಾರಿತನ ಧೋರಣೆಯಿಂದ ಸಮಸ್ಯೆಗಳನ್ನು ಮಾಡಿಕೊಳ್ಳಲಿದ್ದೀರಿ. ಆದ್ದರಿಂದ ಈ ದಿನ ನಾನು ಹೇಳಿದ್ದೇ ಆಗಬೇಕು ಎಂಬ ಮೊಂಡುತನ ಬೇಡ. ಹೊಸದಾಗಿ ಪರಿಚಯವಾಗುವ ವ್ಯಕ್ತಿಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಸೆಕೆಂಡ್ ಹ್ಯಾಂಡ್ ಮನೆ ನಿರ್ಮಾಣ ವಸ್ತುಗಳು, ಕುರ್ಚಿ- ಸೋಫಾ ಅಥವಾ ಬೇರೆ ಯಾವುದೇ ಆದರೂ ಈ ದಿನ ಖರೀದಿ ಮಾಡದಿರುವುದು ಉತ್ತಮ. ಮಕ್ಕಳ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಚಿಂತೆಗೆ ಗುರಿ ಮಾಡಲಿವೆ. ಒಂದು ವೇಳೆ ಈಗಾಗಲೇ ಸಾಲ ಇದ್ದಲ್ಲಿ ಅಥವಾ ವಸ್ತುಗಳನ್ನು ಕೇಳಿಕೊಂಡು, ತೆಗೆದುಕೊಂಡು ಬಂದಿದ್ದಲ್ಲಿ ಅದರಲ್ಲೂ ಸ್ನೇಹಿತರು, ಸಂಬಂಧಿಕರ ಬಳಿ ಪಡೆದುಕೊಂಡಿದ್ದಲ್ಲಿ ತಕ್ಷಣದಲ್ಲೇ ಬೇಕು ಎಂದು ಕೇಳಿ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಈ ದಿನ ಪ್ರತಿ ವಿಚಾರದಲ್ಲೂ ವಿಷಯದಲ್ಲೂ ವ್ಯವಹಾರದಲ್ಲೂ ಹಣಕಾಸಿನ ಲೆಕ್ಕಾಚಾರವನ್ನೇ ಹಾಕಲಿದ್ದೀರಿ. ಇದನ್ನು ಮಾಡುವುದರಿಂದ ನನಗೇನು ಲಾಭ ಎಂಬ ಧೋರಣೆ ಇರಲಿದೆ. ನಿಮ್ಮ ಈ ಸ್ವಭಾವ ಸ್ನೇಹಿತರು ಅಥವಾ ಸಂಬಂಧಿಕರನ್ನು ಗೊಂದಲಕ್ಕೆ ಸಿಲುಕಿಸಲಿದೆ. ನಿಮ್ಮಲ್ಲಿ ಕೆಲವರಿಗೆ ಐಷಾರಾಮಿ ಕಾರು ಖರೀದಿ ಮಾಡುವಂಥ ಯೋಗ ಇದೆ. ಕೆಲವರು ಈ ದಿನ ಅಡ್ವಾನ್ಸ್ ನೀಡಿ ಬುಕ್ ಸಹ ಮಾಡುವ ಸಾಧ್ಯತೆಗಳಿವೆ. ಒಂದು ವೇಳೆ ಹಣಕಾಸಿನ ಕೊರತೆ ಕಂಡುಬಂದರೂ ಬಹಳ ಸರಾಗವಾಗಿ ಹೊಂದಾಣಿಕೆ ಆಗಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ನೀಡಿ, ಜಿಮ್ ಅಥವಾ ಯೋಗ ಅಥವಾ ಪ್ರಾಣಾಯಾಮ ಇಂಥದ್ದಕ್ಕೆ ಸೇರ್ಪಡೆ ಆಗುವ ಬಗ್ಗೆ ನಿರ್ಧಾರ ಮಾಡಲಿದ್ದೀರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಪರಿಸರ ಪ್ರೇಮಿಗಳು, ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರು, ಪ್ರಾಣಿ ದಯಾ ಸಂಘಗಳಲ್ಲಿ ಇರುವಂಥವರಿಗೆ ಪ್ರಮುಖವಾದ ದಿನ ಇದಾಗಿರುತ್ತದೆ. ಅದೆಷ್ಟೇ ಸಣ್ಣ ಕೆಲಸ ಅಂತಾದರೂ ಹೆಚ್ಚಿನ ಗಮನ ಇಟ್ಟು, ಮಾಡುವುದಕ್ಕೆ ಪ್ರಯತ್ನಿಸಿ. ಇತರರ ಪ್ರಭಾವಕ್ಕೆ ನೀವು ಒಳಗಾಗುವ ಸಾಧ್ಯತೆಗಳಿವೆ, ಯಾರನ್ನು ನೀವು ಅನುಸರಿಸುತ್ತಿದ್ದೀರಿ ಎಂಬ ಕಡೆಗೆ ಲಕ್ಷ್ಯ ಇರಲಿ. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಲ್ಲಿ ನಿಮ್ಮಿಂದ ಸಾಧ್ಯವಾ ಎಂಬ ಬಗ್ಗೆ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿದ ನಂತರವಷ್ಟೇ ಒಪ್ಪಿಕೊಳ್ಳಿ. ಪ್ರೀತಿಪಾತ್ರರ ಯಶಸ್ಸಿನಿಂದ ಮನಸ್ಸಿಗೆ ಸಮಾಧಾನ, ಸಂತೋಷ ಇದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮಲ್ಲಿ ಕೆಲವರಿಗೆ ಈ ದಿನ ಆಭರಣಗಳನ್ನು ಖರೀದಿಸುವಂತಹ ಯೋಗ ಇದೆ. ಅದರಲ್ಲೂ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಅಥವಾ ವಜ್ರಾಭರಣಗಳನ್ನು ಖರೀದಿ ಮಾಡಲಿದ್ದೀರಿ. ಚಿನ್ನದ ಚೀಟಿಯನ್ನು ಕಟ್ಟುವುದಕ್ಕೆ ಆರಂಭ ಮಾಡುವ ಅಥವಾ ಈಗಾಗಲೇ ಕಟ್ಟುತ್ತಿದ್ದಲ್ಲಿ ಇನ್ನೂ ಒಂದು ಹೆಚ್ಚುವರಿಯಾಗಿ ಆರಂಭಿಸುವ ಸಾಧ್ಯತೆಗಳಿವೆ. ಉದ್ಯೋಗಸ್ಥ ಮಹಿಳೆಯರಿಗೆ ಭವಿಷ್ಯದಲ್ಲಿ ಸಿಗುವಂತಹ ಅತಿ ದೊಡ್ಡ ಅವಕಾಶ ಒಂದರ ಬಗ್ಗೆ ಸುಳಿವು ಅಥವಾ ಸೂಚನೆ ದೊರೆಯಲಿದೆ. ಇನ್ನೂ ಯಾರು ಈಗಾಗಲೇ ಪ್ರೇಮ ನಿವೇದನೆ ಮಾಡಿಕೊಂಡಿರುತ್ತೀರೋ ಅಂಥವರಿಗೆ ಸಮ್ಮತಿ ದೊರೆಯುವ ಸಾಧ್ಯತೆಗಳು ಹೆಚ್ಚಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಆರ್ಥಿಕ ಪರಿಸ್ಥಿತಿ ಚಿಂತೆಗೆ ಕಾರಣವಾಗಲಿದೆ. ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂಬ ನಿಮ್ಮ ಪ್ರಯತ್ನಗಳು ಅಂದುಕೊಂಡಂತೆ ಫಲ ನೀಡದೆ ಗೊಂದಲಕ್ಕೆ ಗುರಿಯಾಗಲಿದ್ದೀರಿ. ಇತರರು ನಿಮಗೆ ಸಹಾಯ ಮಾಡುತ್ತಾರೆ ಎಂದುಕೊಂಡು ಯಾವುದೇ ದೊಡ್ಡ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಬೇಡಿ. ಇನ್ನೂ ನಿಮ್ಮ ಕೈಗೆ ಸೇರದ ಹಣವನ್ನು ನೆಚ್ಚಿಕೊಂಡು ಯಾರಿಗೂ ಮಾತು ಕೊಡಲು ಹೋಗಬೇಡಿ. ಸಂಗಾತಿಯ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ನಿಮ್ಮ ಉದ್ದೇಶದ ಉದ್ದೇಶದ ಬಗ್ಗೆ ಸ್ನೇಹಿತರು, ಸಂಬಂಧಿಕರಲ್ಲಿ ನಾನಾ ಅನುಮಾನಗಳು ಮೂಡಲಿವೆ. ನಿಮಗೆ ಬಹಳ ಆಪ್ತರಾದವರ ಜೊತೆಗೆ ಮನಸ್ತಾಪಗಳು ಏರ್ಪಡಬಹುದು. ಆದ್ದರಿಂದ ಈ ದಿನ ಸಾಧ್ಯವಾದಷ್ಟೂ ಪಾರದರ್ಶಕವಾಗಿ ನಡೆದುಕೊಳ್ಳಿ.
ಲೇಖನ- ಎನ್.ಕೆ.ಸ್ವಾತಿ