Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 6ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 6ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 6ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ದಿನ ಒಂದು ಬಗೆಯ ಉತ್ಸಾಹ ನಿಮ್ಮಲ್ಲಿ ಇರಲಿದೆ. ನಿಮ್ಮ ದಿರಿಸು, ಒಡವೆ, ವಸ್ತುಗಳು ಪ್ರತಿಯೊಂದರಲ್ಲೂ ಬಹಳ ಒಪ್ಪ- ಓರಣವಾಗಿ ಸಿದ್ಧವಾಗಿ, ಕನಿಷ್ಠ ಪಕ್ಷ ನಿಮ್ಮ ಮನೆಯ ಹತ್ತಿರದ ಮಾಲ್ ಗಾದರೂ ಹೋಗಿಬರಲಿದ್ದೀರಿ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗಂತೂ ಬಹಳ ಸಂತಸದ ದಿನ ಇದಾಗಿರಲಿದೆ. ಪ್ರೀತಿಪಾತ್ರರಾದವರು ನಿಮಗೆ ಉಡುಗೊರೆಗಳನ್ನು ಕೊಡುವ ಸಾಧ್ಯತೆ ಸಹ ಇದೆ. ಇನ್ನು ಮ್ಯೂಚುವಲ್ ಫಂಡ್, ಷೇರುಗಳು ಇಂಥದ್ದರಲ್ಲಿ ಹೂಡಿಕೆ ಮಾಡಿದ್ದವರಿಗೆ ಲಾಭ ಬರುವಂಥ ಯೋಗ ಇದೆ. ಈ ದಿನದ ದ್ವಿತೀಯಾರ್ಧದಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಅದರಲ್ಲೂ ಪಾರ್ಟಿಯೇ ಆಗಬಹುದು ಅಥವಾ ಅಂಥದ್ದೊಂದು ಸನ್ನಿವೇಶವಂತೂ ಇರಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಈ ದಿನ ನಿಮ್ಮ ವರ್ತನೆಯಲ್ಲಿ ನಿಮಗೇ ಅಚ್ಚರಿ ಆಗುವಂಥ ಬೆಳವಣಿಗೆಗಳು ಆಗಲಿವೆ. ಒಂದಿಷ್ಟು ಆಕ್ರಮಣಕಾರಿಯಾಗಿ ಆಲೋಚನೆ ಮಾಡಲಿದ್ದೀರಿ. ‘ದುಡ್ಡಿಟ್ಟು ಆ ಮೇಲೆ ಮಾತನಾಡು’ ಅನ್ನುವ ರೀತಿಯಲ್ಲಿ ಇರುತ್ತದೆ ನಿಮ್ಮ ಧ್ವನಿ. ಯಾರ ಮೇಲೂ ನಂಬಿಕೆಯಿಟ್ಟು, ವ್ಯವಹಾರ ನಡೆಸಬಹುದು ಎಂಬ ಭಾವನೆ ನಿಮ್ಮೊಳಗೆ ಮೂಡುವುದಿಲ್ಲ. ಇನ್ನು ಮುಂದೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವಂತವಾಗಿ, ಸ್ವತಂತ್ರವಾಗಿ ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಸ್ವಂತ ವಾಹನ ಖರೀದಿಗಾಗಿ ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿರುವವರಿಗೆ ಹಣ ಮಂಜೂರಾಗುವ ಸುದ್ದಿ ದೊರೆಯಲಿದೆ. ರಾಘವೇಂದ್ರ ಸ್ವಾಮಿಗಳ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಈ ದಿನ ಸಿಕ್ಕಾಪಟ್ಟೆ ಸಮಜಾಯಿಷಿಗಳನ್ನು, ವಿವರಣೆಗಳನ್ನು ನೀಡಬೇಕಾಗುತ್ತದೆ. ನನ್ನ ಮಾತು ಹಾಗೂ ಧ್ವನಿಯ ಅರ್ಥ ಇದಾಗಿತ್ತು ಅಂತ ಉದ್ದೇಶವನ್ನು ಬಿಡಿಸಿ ಹೇಳುವುದರಲ್ಲಿ ಹೈರಾಣಾಗುವಂಥ ಸಾಧ್ಯತೆಗಳಿವೆ. ಆದರೆ ಕುಟುಂಬದ ಸದಸ್ಯರ ಜತೆಗೆ ಹೆಚ್ಚು ಸಮಯ ಕಳೆಯುವುದಕ್ಕೆ, ಅದರಲ್ಲೂ ಸಂಗಾತಿ ಜತೆಗೆ ಸಂತೋಷದಿಂದ ಕಳೆಯುವುದಕ್ಕೆ ಸಾಧ್ಯವಾಗುತ್ತದೆ. ಸಮಸ್ಯೆ ಅಂತಾದಲ್ಲಿ ಉದ್ಯೋಗ ಸ್ಥಳದಲ್ಲಿ ಮತ್ತು ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ. ಹಳದಿ ಬಣ್ಣದ ಬಟ್ಟೆ ಧರಿಸುವುದರಿಂದ ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಮಾನಸಿಕವಾಗಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಮೀರಿ ನಿಲ್ಲುವುದಕ್ಕೆ ಸಾಧ್ಯವಾಗುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮ ಅನುಭವ, ಜ್ಞಾನ, ತಿಳಿವಳಿಕೆ ಏನೇನೂ ಅಲ್ಲ ಎಂಬ ರೀತಿಯಲ್ಲಿ ಮೇಲಧಿಕಾರಿಗಳ ವರ್ತನೆ ಇರಲಿದೆ. ಈ ದಿನ ಪ್ರಮುಖವಾದಂಥ ಭೇಟಿ, ಚರ್ಚೆಗಳು ಇದ್ದಲ್ಲಿ ಸಿದ್ಧತೆಯನ್ನು ಚೆನ್ನಾಗಿ ಮಾಡಿಕೊಳ್ಳಿ. ಇನ್ನು ನೀವು ಯಾರನ್ನು ಭೇಟಿ ಆಗುತ್ತೀರೋ ಅವರಿಗೆ ಹೆಚ್ಚು ಮಾತನಾಡುವುದಕ್ಕೆ ಅವಕಾಶವನ್ನು ನೀಡಿ. ಒಂದು ವೇಳೆ ಅಭಿಪ್ರಾಯ ಭೇದಗಳು ಇದ್ದಲ್ಲಿ ಅದನ್ನು ವಾಗ್ವಾದದ ಮಟ್ಟಕ್ಕೆ ತೆಗೆದುಕೊಂಡು ಹೋಗದಿರಿ. ಸೋದರ ಸಂಬಂಧಿಗಳು ನಿಮ್ಮ ಬಳಿ ನೆರವು ಕೇಳಿಕೊಂಡು ಬರುವಂಥ ಸಾಧ್ಯತೆಗಳಿವೆ. ಇನ್ನು ಮನೆ ನಿರ್ಮಾಣದಲ್ಲಿ ತೊಡಗಿರುವವರು ಬಜೆಟ್ ಕೈ ಮೀರಿ ಹೋಗುತ್ತದೆ ಎಂಬ ಕಾರಣಕ್ಕೆ ಕೆಲವು ಯೋಜನೆ- ಆಲೋಚನೆಗಳನ್ನು ಕೈ ಬಿಡಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಸಲಹೆ ಸೂಚನೆಗಳಿಂದ ಇತರರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ಆದರೆ ಇದನ್ನು ನಿಮ್ಮ ಅಹಂಕಾರದ ಮೂಲವಾಗಿ ಮಾಡಿಕೊಳ್ಳಬೇಡಿ. ನಿಮಗೆ ಮೇಲಧಿಕಾರಿಗಳು ಯಾವುದಾದರೂ ಮುಖ್ಯ ಕೆಲಸವನ್ನು ವಹಿಸುವ ಸಾಧ್ಯತೆ ಇದ್ದು, ಅದನ್ನು ಸಂಪೂರ್ಣ ಶ್ರದ್ಧೆಯಿಂದ ಮಾಡುವುದಕ್ಕೆ ಪ್ರಯತ್ನಿಸಿ. ಈ ಹಿಂದೆ ನಿಮಗೆ ಯಾವಾಗಲೂ ಆಗಿದ್ದ ಕೆಟ್ಟ ಅನುಭವದ ಆಧಾರದ ಮೇಲೆ ಈ ಕೆಲಸವನ್ನು ಮಾಡಲಾರೆ ಎಂದು ಹೇಳಿದರೆ ದೊಡ್ಡ ಅವಕಾಶ ಒಂದನ್ನು ಕಳೆದುಕೊಂಡಂತಾಗುತ್ತದೆ. ನಿಮಗೆ ಈ ದಿನ ಹೊಸದಾಗಿ ಪರಿಚಯ ಆಗುವ ವ್ಯಕ್ತಿಯಿಂದ ಭವಿಷ್ಯದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ. ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಮುಂಚೆ ತಾಳ್ಮೆ, ಸಂಯಮದಿಂದ ವರ್ತಿಸಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಅನುಮಾನ ಅಥವಾ ಸಂದೇಹದ ಸ್ವಭಾವ ನಷ್ಟಕ್ಕೆ ಕಾರಣ ಆಗಬಹುದು. ನಿಮಗೆ ಮಾಹಿತಿ ಇಲ್ಲದ ವಿಚಾರಗಳಲ್ಲಿ ಸುಮ್ಮನೆ ಇರುವುದು ಈ ದಿನ ಬಹಳ ಮುಖ್ಯವಾಗುತ್ತದೆ. ಎಲ್ಲ ವಿಷಯಗಳಿಗೂ ನನ್ನದೊಂದು ಅಭಿಪ್ರಾಯ ಇರಲಿ ಎಂಬಂತೆ ಏನಾದರೂ ವರ್ತಿಸಿದರೆ ಅವಮಾನದ ಪಾಲಾಗುತ್ತೀರಿ. ನಿಮ್ಮ ಪ್ರತಿಷ್ಠೆ ಕಾರಣಕ್ಕಾಗಿ ಯಾರಿಗಾದರೂ ಜಾಮೀನು ನೀಡುವುದಕ್ಕೆ ಮುಂದಾದರೆ ಭವಿಷ್ಯದಲ್ಲಿ ಭಾರೀ ಚಿಂತೆ ಮಾಡುವಂತಹ ಸಂದರ್ಭ ಎದುರಾಗಲಿದೆ. ಯಾವುದಾದರೂ ಕೆಲಸವನ್ನು ಮಾಡುವುದು ಬೇಡ ಎಂದು ನಿಮ್ಮ ಒಳ ಮನಸ್ಸಿಗೆ ಗಟ್ಟಿಯಾಗಿ ಅನಿಸಿದಲ್ಲಿ ಅಂತಹ ಕೆಲಸವನ್ನು ಮಾಡುವುದಕ್ಕೆ ಹೋಗಬೇಡಿ. ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಕಾರು ಅಥವಾ ಬೈಕ್ ಖರೀದಿ ಮಾಡುವ ಸಲುವಾಗಿ ಯಾರು ಹಣ ಹೊಂದಾಣಿಕೆ ಮಾಡುತ್ತಿರುವಿರೋ ಅಂತಹವರಿಗೆ ಅನುಕೂಲ ಒದಗಿ ಬರಲಿದೆ. ಆದರೆ ನಿಮ್ಮ ಆದಾಯ ಎಷ್ಟಿದೆ ಎಂಬುದನ್ನು ನೋಡಿಕೊಂಡು ಸಾಲ ಎಷ್ಟು ಮಾಡಬೇಕು ಎಂಬುದನ್ನು ತೀರ್ಮಾನಿಸುವುದು ಒಳ್ಳೆಯದು. ಇನ್ನು ನಿಮ್ಮ ಕೈ ಸೇರದ ಅಥವಾ ನಿಮ್ಮ ಆದಾಯದ ಹೊರತಾಗಿ ಬರುತ್ತಿರುವಂತಹ ಹೆಚ್ಚುವರಿ ಆದಾಯವನ್ನು ಮೆಚ್ಚಿಕೊಂಡು ಹೆಚ್ಚಿನ ಸಾಲ ಮಾಡಿಕೊಳ್ಳಬೇಡಿ. ನಿಮ್ಮ ಜೊತೆಗೆ ಈ ಹಿಂದೆ ಕೆಲಸ ಮಾಡುತ್ತಿದ್ದವರು ಹೊಸ ಉದ್ಯೋಗದ ಆಫರ್ ಗಳನ್ನು ತರುವ ಸಾಧ್ಯತೆ ಇದೆ. ಅದನ್ನು ಒಪ್ಪಿಕೊಳ್ಳುವುದೋ ಅಥವಾ ನಿರಾಕರಿಸುವುದೋ ಮಾಡುವುದಕ್ಕೆ ಮುಂಚೆ ಒಂದಕ್ಕೆ ನಾಲ್ಕು ಬಾರಿ ಆಲೋಚನೆಯನ್ನು ಮಾಡುವುದು ಒಳ್ಳೆಯದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಪ್ರಮೋಷನ್ ದೊರೆಯುವ ಬಗ್ಗೆ ಸುಳಿವು ದೊರೆಯಲಿದೆ. ನೀವು ತೆಗೆದುಕೊಂಡ ಅತಿ ದೊಡ್ಡ ಜವಾಬ್ದಾರಿ ಬಹಳ ಸಲೀಸಾಗಿ ಮಾಡಿ ಮುಗಿಸಲಿದ್ದೀರಿ. ಮೊಬೈಲ್, ಗ್ಯಾಜೆಟ್ ಅಥವಾ ಲ್ಯಾಪ್ ಟಾಪ್ ಖರೀದಿ ಮಾಡುವಂತಹ ಯೋಗ ನಿಮ್ಮ ಪಾಲಿಗೆ ಇದೆ. ನಿಮ್ಮಲ್ಲಿ ಕೆಲವರು ಮನೆ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ನಿಮ್ಮ ಮನಸ್ಸಿಗೆ ಬಹಳ ಇಷ್ಟವಾಗುವಂಥದ್ದು ಸಾಧ್ಯತೆಗಳಿವೆ. ವೃತ್ತಿಪರರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸಂಸ್ಥೆಗಳಿಂದ ಕೆಲಸಕ್ಕೆ ಆಹ್ವಾನ ಬರಲಿದೆ. ಇದಕ್ಕೆ ಏನು ಉತ್ತರ ಕೊಡಬೇಕು ಎಂದು ತಿಳಿಯದೆ ಗೊಂದಲಕ್ಕೆ ಈಡಾಗಲಿದ್ದೀರಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನೀವು ಬಹಳ ನಂಬಿಕೆ ಇಟ್ಟಿದ್ದ ವ್ಯಕ್ತಿಗಳು ದಿಢೀರನೆ ತಮ್ಮ ಧೋರಣೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿದ್ದಾರೆ. ನಿಮ್ಮಿಂದ ಕೆಲಸ ಆಗುವಾಗ ತುಂಬಾ ನಯವಾಗಿ ಕೆಲಸ ಮಾಡಿಕೊಂಡವರು ಇವತ್ತಿಗೆ ನಿಮ್ಮ ಪರಿಚಯವೇ ಇಲ್ಲವೇನೋ ಎಂಬಂತೆ ನಡೆದುಕೊಳ್ಳಲಿದ್ದಾರೆ. ಈ ದಿನ ನಿಮಗಾಗಿವ ಕೆಲವು ಕೆಟ್ಟ ಅನುಭವಗಳ ಆಧಾರದ ಮೇಲೆ ಭವಿಷ್ಯದ ನಿರ್ಧಾರಗಳನ್ನು ಮಾಡಲು ಹೋಗದಿರಿ. ಅಡುಗೆ ಕಾಂಟ್ರಾಕ್ಟ್ ಮಾಡಿಸುವಂತಹ ವ್ಯಕ್ತಿಗಳಿಗೆ ಈ ದಿನ ಒತ್ತಡದ ಸನ್ನಿವೇಶ ಎದುರಾಗಲಿದೆ. ನಿಮ್ಮ ಸ್ನೇಹ ವಲಯದಲ್ಲಿ ವಾದ- ವಾಗ್ವಾದಗಳು ನಡೆಯುವಂತಹ ಸನ್ನಿವೇಶಗಳು ಕಂಡುಬಂದರೆ ಮುಂದುವರಿಸಿಕೊಂಡು ಹೋಗಬೇಡಿ..
ಲೇಖನ- ಎನ್.ಕೆ.ಸ್ವಾತಿ