AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahu Ketu Transit: ಕುಂಭಕ್ಕೆ ರಾಹು, ಸಿಂಹಕ್ಕೆ ಕೇತು ಪ್ರವೇಶ; ಮೇಷದಿಂದ ಮೀನದ ತನಕ ಯಾರಿಗೇನು ಫಲ?

ರಾಹು- ಕೇತುಗಳ ಸಂಚಾರದಲ್ಲಿ ಬದಲಾವಣೆ ಆಗಿದೆ. ಒಂದು ರಾಶಿಯಲ್ಲಿ ಹದಿನೆಂಟು ತಿಂಗಳ ಕಾಲ ಇರುವ ಈ ಎರಡು ಗ್ರಹಗಳು ಗೋಚಾರ ರೀತಿಯಲ್ಲಿ ಹನ್ನೆರಡು ರಾಶಿಗಳ ಮೇಲೆ ಬೀರುವ ಪರಿಣಾಮ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಕುಂಭ, ಮೀನ, ಕರ್ಕಾಟಕ ಹಾಗೂ ಸಿಂಹ, ಕನ್ಯಾ ಮತ್ತು ಮಕರ ಈ ಆರು ರಾಶಿಗಳಿಗೆ ಕ್ರಮವಾಗಿ ರಾಹು- ಕೇತುವಿನ ಪ್ರಭಾವ ತೀಕ್ಷ್ಣವಾಗಿರುತ್ತದೆ.

Rahu Ketu Transit: ಕುಂಭಕ್ಕೆ ರಾಹು, ಸಿಂಹಕ್ಕೆ ಕೇತು ಪ್ರವೇಶ; ಮೇಷದಿಂದ ಮೀನದ ತನಕ ಯಾರಿಗೇನು ಫಲ?
Rahu Ketu
ಸ್ವಾತಿ ಎನ್​ಕೆ
| Edited By: |

Updated on:May 20, 2025 | 11:17 AM

Share

ಮೇ 18ನೇ ತಾರೀಕು ರಾಹು- ಕೇತು (Rahu Ketu) ಗ್ರಹಗಳು ತಮ್ಮ ಸಂಚಾರ ಬದಲಾವಣೆ ಮಾಡಿವೆ. ಇವೆರಡು ಗ್ರಹಗಳ ಸಂಚಾರ ಅಪ್ರದಕ್ಷಿಣೆಯಾಗಿ ಇರುತ್ತದೆ. ಉಳಿದ ಗ್ರಹಗಳು ಸಾಮಾನ್ಯವಾಗಿ ಗಡಿಯಾರದ ರೀತಿಯಲ್ಲಿ ಸಂಚರಿಸುತ್ತವೆ. ಆದರೆ ಈ ಎರಡು “ಛಾಯಾ ಗ್ರಹಗಳು” ಗಡಿಯಾರ ಉಲ್ಟಾ ಸುತ್ತಿದಂತೆ ಸುತ್ತುತ್ತವೆ. ಈ ಗ್ರಹಗಳನ್ನು ಸಮಸಪ್ತಕ ಎಂದು ಸಹ ಕರೆಯುವುದುಂಟು. ಏಕೆಂದರೆ, ಏಳು ಸ್ಥಾನಗಳು ಅಥವಾ ಏಳು ಮನೆಗಳ ಅಂತರದಲ್ಲಿಯೇ ಇವೆರಡು ಇರುತ್ತವೆ. ಒಂದು ರಾಶಿಯಲ್ಲಿ ಹದಿನೆಂಟು ತಿಂಗಳು ಇದ್ದು, ಆ ನಂತರ ಆ ತನಕ ಇದ್ದ ರಾಶಿಯ ಹಿಂದಿನ ರಾಶಿಗೆ ತೆರಳುತ್ತವೆ. ಈಗಿನದೇ ಹೇಳಬೇಕು ಅಂದರೆ, ಇಲ್ಲಿಯ ತನಕ, ಅಂದರೆ ಮೇ ಹದಿನೆಂಟನೇ ತಾರೀಕಿನವರೆಗೆ ಮೀನ ರಾಶಿಯಲ್ಲಿ ರಾಹು ಹಾಗೂ ಕನ್ಯಾ ರಾಶಿಯಲ್ಲಿ ಕೇತು ಗ್ರಹ ಇತ್ತು. ಇದೀಗ ರಾಹು ಕುಂಭ ರಾಶಿಯನ್ನೂ ಮತ್ತು ಕೇತು ಸಿಂಹವನ್ನೂ ಪ್ರವೇಶಿಸಿದೆ. ಹಾಗೆ ನೋಡಿದರೆ ಪ್ರಾಚೀನ ಗ್ರಂಥಗಳಲ್ಲಿ ಇರುವುದು ಸಪ್ತ ಗ್ರಹ ಎಂಬ ಉಲ್ಲೇಖ. ಅಂದರೆ ರಾಹು- ಕೇತುಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಹು- ಕೇತು ಗ್ರಹಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಮತ್ತೂ ಒಂದು ಮಾಹಿತಿ ಇದೆ. ರಾಹು ಗ್ರಹವು ಶನಿಯಂತೆಯೇ ಫಲ ನೀಡಿದರೆ ಕೇತು ಗ್ರಹವು ಕುಜ ಗ್ರಹದಂತೆ ಫಲ ನೀಡುತ್ತದೆ. ಅದಕ್ಕೆ ಜ್ಯೋತಿಷ್ಯದಲ್ಲಿ ಶನಿವತ್ ರಾಹು, ಕುಜವತ್ ಕೇತು ಎನ್ನಲಾಗುತ್ತದೆ.

ಮೇಷ: ನಿಮ್ಮಲ್ಲಿ ಆಸೆ ಹೆಚ್ಚಾಗುತ್ತದೆ. ಎಲ್ಲವನ್ನೂ ಖರೀದಿಸಿ ತರುವ ಹಪಹಪಿ ಕಾಣಿಸಿಕೊಳ್ಳುತ್ತದೆ. ಭೂಮಿಯಿಂದ ಲಾಭ ಕಾಣುವ ಯೋಗವಿದೆ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಮನೋಭಾವ ಕಾಣಿಸಿಕೊಳ್ಳುತ್ತದೆ. ನಿಮ್ಮಲ್ಲಿ ಕೆಲವರು ವಿದೇಶ ಪ್ರಯಾಣಗಳನ್ನು ಮಾಡುತ್ತೀರಿ. ದಿಢೀರ್ ಜನಪ್ರಿಯತೆ ಸಿಗುತ್ತದೆ. ಷೇರು ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದ್ದೀರಿ ಅಂತಾದಲ್ಲಿ ಅಂದುಕೊಳ್ಳದ ರೀತಿಯಲ್ಲಿ ಲಾಭ ದೊರೆಯಲಿದೆ. ಒಂದು ವೇಳೆ ನಷ್ಟ ಅನುಭವಿಸುತ್ತಿದ್ದಲ್ಲಿ ಅದು ಲಾಭಕ್ಕೆ ತಿರುಗಬಹುದು ಅಥವಾ ನೀವು ಹಾಕಿದ ಬಂಡವಾಳ ಕೈ ಸೇರುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಕೊರತೆ ಕಾಡುತ್ತದೆ. ಗರ್ಭ ಧರಿಸಿದ ಸ್ತ್ರೀಯರು ತುಂಬ ಜಾಗ್ರತೆಯಿಂದ ಇರಬೇಕು. ಮಕ್ಕಳಿಂದಾಗಿ ಪೋಷಕರು ದುಃಖ ಪಡುವಂಥ ಯೋಗ ಇದೆ. ಯಾರಿಗೆ ಮಾನಸಿಕ ಸಮಸ್ಯೆ ಇದೆಯೋ ಅಂಥವರು ಕೌನ್ಸೆಲಿಂಗ್ ತೆಗೆದುಕೊಳ್ಳುವುದು ಒಳ್ಳೆಯದು. ಇನ್ನು ಒಂದು ವೇಳೆ ಮನೆ ದೇವರ ಆರಾಧನೆಯನ್ನು ಬಾಕಿ ಉಳಿಸಿಕೊಂಡಿದ್ದಲ್ಲಿ ತಪ್ಪದೇ ಮಾಡಿ.

ವೃಷಭ: ಉದ್ಯೋಗ ಸ್ಥಳದಲ್ಲಿ ಒಳ್ಳೆಯ ಹಾಗೂ ಕೆಟ್ಟ ಹೀಗೆ ಎರಡೂ ಕಾರಣಗಳಿಗೆ ನಿಮ್ಮ ಹೆಸರು ಓಡಾಡುತ್ತದೆ. ನಿಮ್ಮ ಉದ್ವೇಗದ ಮಾತುಗಳಿಂದ- ಕ್ರಿಯೆಗಳಿಂದ ಬೇರೆಯವರು ನಿಮ್ಮ ಸಾಮರ್ಥ್ಯದ ಮೇಲೆ ಹಾಗೂ ಉದ್ದೇಶದ ಮೇಲೆ ಅನುಮಾನ ವ್ಯಕ್ತಪಡಿಸುವಂತೆ ಆಗುತ್ತದೆ. ನಿಮ್ಮ ಉದ್ದೇಶವು ಒಳ್ಳೆಯದೇ ಇದ್ದರೂ ಅದರ ಅನುಷ್ಠಾನ ಹಾಗೂ ಯಾರ ಜೊತೆಗೆ ಸೇರಿ ಅದನ್ನು ಜಾರಿಗೆ ತರುವುದಕ್ಕೆ ಹೊರಟಿದ್ದೀರಿ ಎಂಬ ಕಡೆಗೆ ಗಮನ ನೀಡುವುದು ಮುಖ್ಯವಾಗುತ್ತದೆ. ಈ ಹಿಂದೆಂದಿಗಿಂತಲೂ ನಿಮ್ಮ ಧೈರ್ಯ ಜಾಸ್ತಿಯಿರುತ್ತದೆ. ಅದರ ಸದುಪಯೋಗ ಮಾಡಿಕೊಳ್ಳುವ ಕಡೆಗೆ ಲಕ್ಷ್ಯವಿರಲಿ. ಈ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿ ಮಾಡಬೇಡಿ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಿ. ಮನೆ ಅಥವಾ ಕಚೇರಿ, ಜಮೀನು ದುರಸ್ತಿ ಮಾಡಿಸಬೇಕು ಎಂಬ ಉದ್ದೇಶವಿದ್ದಲ್ಲಿ ಸರಿಯಾದ ಯೋಜನೆ- ಬಜೆಟ್ ಹಾಕಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಸಿಕ್ಕಾಪಟ್ಟೆ ಹಣ ಕೈ ಬಿಟ್ಟು ಹೋಗುತ್ತದೆ.

ಮಿಥುನ: ತಂದೆಯವರ ಅಥವಾ ತಂದೆ ಸಮಾನರಾದವರ ಆರೋಗ್ಯ ಸಮಸ್ಯೆ ನಿಮ್ಮನ್ನು ಕಂಗೆಡಿಸುತ್ತದೆ. ಕಿಡ್ನಿಗೆ ಸಂಬಂಧಿಸಿದಂತೆ ತೊಂದರೆಗಳು ಈಗಾಗಲೇ ಇದ್ದಲ್ಲಿ ಸರಿಯಾದ ಫಾಲೋಅಪ್ ಚೆಕ್ ಅಪ್ ಮಾಡಿಸುವುದು ಉತ್ತಮ. ಸಟ್ಟಾ ವ್ಯವಹಾರಗಳಿಂದ ದೂರವಿದ್ದಲ್ಲಿ ಕ್ಷೇಮ- ಉತ್ತಮ. ವಿದೇಶಗಳಲ್ಲಿ ವ್ಯವಹಾರ ಮಾಡುತ್ತಿರುವವರು ಅಥವಾ ಮಾಡಬೇಕು ಎಂದಿರುವವರು ಬಹಳ ಜಾಗ್ರತೆಯಿಂದ ಇರಬೇಕು. ವಿನಾಕಾರಣದ ಅಲೆದಾಟ, ಒಂದಕ್ಕೆ ನಾಲ್ಕರಷ್ಟು ಖರ್ಚು ಮಾಡಿಯೂ ಅಂದುಕೊಂಡ ಫಲಿತಾಂಶ ಬಾರದಂತೆ ಆಗಬಹುದು. ಒಂದು ಕೆಲಸವನ್ನು ಮುಗಿಸಲು ಹಲವು ಸಲ ಪ್ರಯತ್ನ ಮಾಡಬೇಕಾಗುತ್ತದೆ. ಧಾರ್ಮಿಕ ವೃತ್ತಿಯಲ್ಲಿ ಇರುವಂಥವರಿಗೆ ಖ್ಯಾತಿ ದೊರೆಯುತ್ತದೆ. ದೇವಾಲಯ ಪಾರುಪತ್ತೆದಾರರಿಗೆ ಸನ್ಮಾನ- ಗೌರವಗಳು ದೊರೆಯಲಿವೆ. ಸೋದರ- ಸೋದರಿಯರ ಜೊತೆಗೆ ವ್ಯವಹರಿಸುವಾಗ ಪಾರದರ್ಶಕವಾಗಿ ನಡೆದುಕೊಳ್ಳಿ. ಕೆಲವು ಉತ್ತಮ ಕಾರ್ಯಗಳನ್ನು ಮಾಡುವುದಕ್ಕೆ ಧೈರ್ಯ ಸಾಕಾಗುವುದಿಲ್ಲ. ಹಿರಿಯರು- ಅನುಭವಿಗಳ ಮಾರ್ಗದರ್ಶನ ಪಡೆದುಕೊಳ್ಳಿ.

ಕರ್ಕಾಟಕ: ನಿಮಗೆ ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಲಿವೆ. ಕೋರ್ಟ್- ಕಚೇರಿ, ಪೊಲೀಸ್ ಠಾಣೆಗೆ ಅಲೆದಾಡುವಂತಾಗಲಿದೆ. ಸಂಬಂಧಿಕರು- ಸ್ನೇಹಿತರಿಂದ ಅವಮಾನ ಎದುರಿಸುವಂತೆ ಆಗಲಿದೆ. ವಾಹನಗಳಲ್ಲಿ ಹೆಚ್ಚು ಸಂಚಾರ ಮಾಡುವವರಾಗಿದ್ದಲ್ಲಿ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಜಾಗ್ರತೆಯನ್ನು ವಹಿಸಿ. ಅತಿ ವೇಗದಲ್ಲಿ ವಾಹನ ಚಲಾಯಿಸುವ ಉಮೇದು ಬೇಡ. ಒಂದು ವೇಳೆ ನಿಮ್ಮ ಸ್ನೇಹಿತರ ಜೊತೆಗೆ ತೆರಳುತ್ತೀರಿ ಎಂದಾದಲ್ಲಿ ಅಂಥ ಸಮಯದಲ್ಲಿ ಕೂಡ ವೇಗವಾಗಿ ವಾಹನ ಚಲಾಯಿಸುವವರ ಜೊತೆಗೆ ಹೋಗದಿರುವುದು ಕ್ಷೇಮ. ಈ ಅವಧಿಯಲ್ಲಿ ನೀವೇನಾದರೂ ಸಾಲ ಪಡೆದುಕೊಂಡಲ್ಲಿ ಅದನ್ನು ಹಿಂತಿರುಗಿಸುವುದಕ್ಕೆ ನಾನಾ ಅಡೆತಡೆಗಳು ಎದುರಾಗಿ ಅವಮಾನಕ್ಕೆ ಗುರಿ ಆಗುತ್ತೀರಿ. ಇನ್ನು ಮಾತಿನ ಮೇಲೆ ನಿಗಾ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಣಕಾಸಿನ ಹರಿವಿನಲ್ಲಿ ಇಳಿಕೆಯಾಗುತ್ತಾ ಆತಂಕ ಎದುರಾಗುತ್ತದೆ. ದಂಪತಿ ಮಧ್ಯೆ ತೀವ್ರ ಮನಸ್ತಾಪ- ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತದೆ. ಪ್ರೇಮಿಗಳ ಮಧ್ಯೆ ವಿರಹ ಏರ್ಪಡುತ್ತದೆ. ಕಣ್ಣಿಗೆ ಸಂಬಂಧಿಸಿದ ತೊಂದರೆಗಳಾಗುತ್ತವೆ.

ಸಿಂಹ: ಈಗಾಗಲೇ ವಿವಾಹ ನಿಶ್ಚಯ ಆಗಿದ್ದಲ್ಲಿ ನಾನಾ ಕಾರಣಗಳಿಂದ ಅದು ಮುರಿದುಬೀಳುವ ಸನ್ನಿವೇಶ ಎದುರಾಗಬಹುದು. ದಂಪತಿ ಮಧ್ಯೆ ಡೈವೋರ್ಸ್ ತನಕ ಪರಿಸ್ಥಿತಿ ಹೋಗಬಹುದು ಅಥವಾ ಈಗಾಗಲೇ ಈ ವಿಚಾರ ಕೋರ್ಟ್ ನಲ್ಲಿದೆ ಎನ್ನುವವರಿಗೆ ಡೈವೋರ್ಸ್ ಆಗಲಿದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿದ್ದಲ್ಲಿ ಮನಸ್ತಾಪಗಳು ಆಗಲಿವೆ. ವಿದೇಶ ಪ್ರಯಾಣ ಮಾಡಬೇಕು ಎಂದಿರುವವರು ಸೂಕ್ತ ಮುಂಜಾಗ್ರತೆಯನ್ನು ತೆಗೆದುಕೊಳ್ಳಿ. ನಾನು ಮಾಡಿದ್ದೇ ಸರಿ, ನಾನು ಹೇಳಿದಂತೆಯೇ ಆಗಬೇಕು ಎಂದು ಹಠ ಮಾಡುವುದಕ್ಕೆ ಹೋಗಬೇಡಿ. ಕುಟುಂಬದಲ್ಲಿ ಬೇಡ ಎಂದು ಹೇಳಿದ ಕೆಲಸಗಳನ್ನು ಮಾಡದಿರುವುದು ಒಳ್ಳೆಯದು. ಒಂದು ವೇಳೆ ಪಟ್ಟು ಹಿಡಿದು, ಮೊಂಡು ಹಠ ಮಾಡಿ ಮುಂದುವರಿದಲ್ಲಿ ಆ ನಂತರ ಪರಿತಪಿಸಬೇಕಾಗುತ್ತದೆ. ಈ ಅವಧಿಯಲ್ಲಿ ಮಾನಸಿಕ ಖಿನ್ನತೆ ಬಹುವಾಗಿ ಕಾಡುತ್ತದೆ. ಯಾವುದೇ ಕೆಲಸದಲ್ಲಿ ಪೂರ್ಣವಾದ ಉತ್ಸಾಹ ಇರುವುದಿಲ್ಲ. ವಯಸ್ಸಿನಲ್ಲಿ ನಿಮಗಿಂತ ಹಿರಿಯರಾದವರನ್ನು ನಿಂದಿಸಿ ಅವರ ಶಾಪಕ್ಕೆ ಗುರಿಯಾಗುತ್ತೀರಿ. ಅದೇ ರೀತಿ ದೇವತಾ ಕಾರ್ಯಗಳಲ್ಲಿಯೂ ನಿರ್ಲಕ್ಷ್ಯ- ತಿರಸ್ಕಾರ ಹೆಚ್ಚಾಗಲಿದೆ.

ಕನ್ಯಾ: ನಿಮ್ಮ ವಿರುದ್ಧ ಇರುವ ವ್ಯಕ್ತಿಗಳು ಅಥವಾ ಗುಂಪುಗಳ ಮಧ್ಯೆಯೇ ಗೊಂದಲಗಳು ಉಂಟಾಗಿ, ನಿಮ್ಮ ಕಡೆಗೆ ಗಮನ ಇಲ್ಲದಂತಾಗಲಿದೆ. ಇದರಿಂದಾಗಿ ನೀವು ಮಾಡಿಕೊಳ್ಳಬೇಕು ಎಂದುಕೊಂಡಿರುವ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗಲಿದೆ. ಭೂಮಿ ವ್ಯವಹಾರಗಳಲ್ಲಿ ಲಾಭವನ್ನು ಕಾಣಲಿದ್ದೀರಿ. ಹಣ ಖರ್ಚಾದರೂ ಸರಿ, ಹಿಡಿದ ಪಟ್ಟನ್ನು ಬಿಡದೆ ಕೆಲಸ ಮಾಡಿಸಿಕೊಳ್ಳಲಿದ್ದೀರಿ. ನೀವು ಅನುಸರಿಸುವ ಮಾರ್ಗದ ಬಗ್ಗೆ ಆಕ್ಷೇಪಗಳು ಕೇಳಿಬರಲಿವೆ. ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳು ಆಗಲಿವೆ. ಸೋಷಿಯಲ್ ಲೈಫ್ ಕಡೆಗೆ ಹೆಚ್ಚು ವಾಲಲಿದ್ದೀರಿ. ಇದರಿಂದಾಗಿ ನಿಮಗೆ ಅನುಕೂಲ ಸಹ ಆಗಲಿದೆ. ಈ ಅವಧಿಯಲ್ಲಿ ಎಲೆಕ್ಟ್ರಿಕಲ್- ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಇನ್ನು ಈ ಅವಧಿಯಲ್ಲಿ ದೇವತಾ ಕಾರ್ಯಗಳಿಗೆ ನಿಮ್ಮ ಹಣದ ಖರ್ಚು ಹೆಚ್ಚು ಆಗುವ ಸಾಧ್ಯತೆ ಸಹ ಇದೆ. ವೈರಾಗ್ಯದ ಕಾರಣಕ್ಕೋ ಅಥವಾ ಹೆಚ್ಚಿನ ಖರ್ಚಾಗುತ್ತಿದೆ ಎಂಬ ಕಾರಣಕ್ಕೋ ನಿಮ್ಮ ಬಳಿ ಇರುವ ವಾಹನಗಳನ್ನು ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ವೈದ್ಯಕೀಯ ವೆಚ್ಚಗಳು ಹೆಚ್ಚಾಗಲಿವೆ.

ತುಲಾ: ಮಕ್ಕಳ ಅನಾರೋಗ್ಯ, ಶೈಕ್ಷಣಿಕ ಹಿನ್ನಡೆ ಚಿಂತೆಯನ್ನು ನೀಡುತ್ತದೆ. ನಿಮ್ಮ ಆತುರದ ತೀರ್ಮಾನಗಳಿಂದ ನೊಂದುಕೊಳ್ಳುವಂತೆ ಆಗಲಿದೆ. ವಿತಂಡ ವಾದವನ್ನು ಹೂಡಲಿದ್ದೀರಿ. ಇನ್ನು ಸಂತಾನ ಅಪೇಕ್ಷಿತರಾಗಿ ಪ್ರಯತ್ನವನ್ನು ಮಾಡಿದಲ್ಲಿ ನಾನಾ ಅಡೆ- ತಡೆಗಳು, ಸಮಸ್ಯೆಗಳನ್ನು ಎದುರಿಸಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರಿಗೆ ಸಮಸ್ಯೆಯ ಮೂಲವನ್ನು ಕಂಡುಹಿಡಿಯುವುದಕ್ಕೆ ಸಾಧ್ಯವಾಗದ ರೀತಿಯಲ್ಲಿ ದೈಹಿಕವಾದ ಅಸ್ವಾಸ್ಥ್ಯ- ಬಾಧೆಗಳು ಕಾಡಲಿವೆ. ನಿಮ್ಮ ತೀರ್ಮಾನ-ನಿರ್ಧಾರಗಳ ಕಾರಣದಿಂದಾಗಿ ಸಾಮಾಜಿಕವಾಗಿ ಕೆಲವು ಅವಮಾನಗಳನ್ನು ಎದುರಿಸುವಂತೆ ಆಗಲಿದೆ. ಸ್ತ್ರೀಯರು ಈ ಅವಧಿಯಲ್ಲಿ ಗರ್ಭ ಧರಿಸಿದಲ್ಲಿ ವೈದ್ಯಕೀಯ ಸಲಹೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಮಗುವಿನ ಬೆಳವಣಿಗೆ ಬಗ್ಗೆ ಬಹಳ ಗಮನವನ್ನು ನೀಡಬೇಕಾಗುತ್ತದೆ. ಇನ್ನು ದೇವತಾ ಕಾರ್ಯ, ತೀರ್ಥಯಾತ್ರೆಗಳಿಗೆ ಪ್ರಯಾಣ ವಿಪರೀತ ಆಗಲಿದೆ. ನಿಮ್ಮಲ್ಲಿ ಕೆಲವರು ದೇವಸ್ಥಾನಗಳು- ಗುಡಿಗಳ ನಿರ್ಮಾಣ ಅಥವಾ ಸಣ್ಣ- ಪುಟ್ಟ ನಿರ್ಮಾಣ ಮಾಡುವ ಸಾಧ್ಯತೆಗಳಿವೆ. ಕೆಲವು ವ್ಯಾಜ್ಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಹಿರಿಯರು- ಅನುಭವಿಗಳು ನಿಮ್ಮ ನೆರವಿಗೆ ಬರುತ್ತಾರೆ.

ವೃಶ್ಚಿಕ: ಮಾತಿನ ಮೇಲೆ ನಿಗಾ ಇರಲಿ. ಅತ್ಯುತ್ಸಾಹ ಯಾವುದೇ ಕಾರಣಕ್ಕೂ ಬೇಡ. ನಿಮಗೆ ಈ ಹಿಂದೆ ಏನೇ ಅನುಭವ ಇರಬಹುದು, ನಿಮಗೆ ಒಂದು ವಿಷಯದ ಬಗ್ಗೆ ಎಷ್ಟೇ ಜ್ಞಾನ ಇರಬಹುದು. ಆದರೆ ಈ ಅವಧಿಯಲ್ಲಿ ಅವು ಯಾವುವೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ನಿಮ್ಮ ತಾಯಿ ಅಥವಾ ತಾಯಿ ಸಮಾನರಾದವರು ತೀವ್ರ ಅನಾರೋಗ್ಯವೋ ಅಥವಾ ದೈಹಿಕ ಅಸ್ವಾಸ್ಥ್ಯವೋ ಬಹಳ ಆತಂಕಕ್ಕೆ ಕಾರಣವಾಗಲಿದೆ. ಮುಖ್ಯವಾದ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಉದ್ವೇಗಕ್ಕೆ ಒಳಗಾಗದಂತೆ ಇರುವುದು ತುಂಬ ಮುಖ್ಯವಾದ ಸಂಗತಿಯಾಗುತ್ತದೆ. ಎಲ್ಲವೂ ಗೊತ್ತಿದೆ ಎಂಬ ಉದ್ವೇಗಕ್ಕೆ ಗುರಿಯಾದಲ್ಲಿ ಒಂದು ಸಲಕ್ಕೆ ನೆನಪಿನ ಶಕ್ತಿ ಕೈಕೊಟ್ಟು, ಆ ನಂತರ ಪರಿತಪಿಸುವಂತೆ ಆಗಲಿದೆ. ಈ ಅವಧಿಯಲ್ಲಿ ಮರೆವಿನ ಸಮಸ್ಯೆ ನಿಮ್ಮನ್ನು ಬಹುವಾಗಿ ಕಾಡಲಿದೆ. ಉದ್ಯೋಗ ಸ್ಥಳದಲ್ಲಿ ಬಹಳ ಕಿರಿಕಿರಿ- ಮುಜುಗರ ಎದುರಿಸುತ್ತೀರಿ. ನಿಮ್ಮಲ್ಲಿ ಕೆಲವರು ಕೆಲಸ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ನಿಮಗೆ ಸಂಬಂಧಪಡ ವಿಚಾರಗಳಲ್ಲಿ ಮೂಗು ತೂರಿಸಿಕೊಂಡು ಹೋಗಬೇಡಿ.

ಧನುಸ್ಸು: ಈ ಅವಧಿಯಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಂಡು ಕೆಲಸ- ಕಾರ್ಯಗಳನ್ನು ಮಾಡುವುದಕ್ಕೆ ಮುಂದಾಗಲಿದ್ದೀರಿ. ನಿಮ್ಮ ಕೈಯಲ್ಲಿ ಸ್ವಲ್ಪವೇ ಬಂಡವಾಳ ಇದ್ದರೂ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಇತರರ ಮಾತನ್ನು ಕೇಳದೆ ಮುನ್ನುಗ್ಗಿ ಕೆಲಸ- ಕಾರ್ಯಗಳನ್ನು ಮಾಡುವುದರಿಂದ ಅನಿರೀಕ್ಷಿತವಾದ ಯಶಸ್ಸು ನಿಮಗೆ ದೊರೆಯಲಿದೆ. ಭೂಮಿ ಖರೀದಿ ಮಾಡಬೇಕು ಎಂದು ಹುಡುಕಾಟ ನಡೆಸುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಮಕ್ಕಳ ಶಿಕ್ಷಣ- ಭವಿಷ್ಯಕ್ಕಾಗಿ ನಿಮ್ಮಲ್ಲಿ ಕೆಲವರು ವಿವಿಧೆಡೆಗಳಲ್ಲಿ ಹೂಡಿಕೆ ಮಾಡುವಂಥ ಯೋಗ ಇದೆ. ಮಹತ್ವಾಕಾಂಕ್ಷಿಗಳಾಗಿ ಹಲವು ಕೆಲಸಗಳನ್ನು ಒಂದೇ ಸಲಕ್ಕೆ ಕೈಗೆತ್ತಿಕೊಳ್ಳಲಿದ್ದೀರಿ. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಮೂಲಕವಾಗಿ ನಿಮಗಿರುವ ಹೆಸರು, ವರ್ಚಸ್ಸನ್ನು ಜಾಸ್ತಿ ಮಾಡಿಕೊಳ್ಳಲಿದ್ದೀರಿ. ತಂದೆಯೊಂದಿಗೆ ಅಥವಾ ತಂದೆ ಸಮಾನರಾದವರ ಜೊತೆಗೆ ಅಭಿಪ್ರಾಯ ಭೇದ- ಮನಸ್ತಾಪ ಆಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಕೆಲವು ಹೂಡಿಕೆಗಳಲ್ಲಿ ಗೊತ್ತಿದ್ದೂ ಗೊತ್ತಿದ್ದು ನಷ್ಟವನ್ನು ಅನುಭವಿಸುತ್ತೀರಿ.

ಮಕರ: ಕಣ್ಣಿನ ಸಮಸ್ಯೆ, ಯೂರಿನ್ ಇನ್ ಫೆಕ್ಷನ್, ಕಿಡ್ನಿ ಸ್ಟೋನ್, ಮೈಗ್ರೇನ್ ಸಮಸ್ಯೆ ಈ ರೀತಿಯಾದಂಥ ತೊಂದರೆಗಳನ್ನು ನೀವು ಅನುಭವಿಸುವಂತೆ ಆಗಲಿದೆ. ವಿವಾಹಿತರಿಗೆ ಸಂಗಾತಿ ಜೊತೆಗಿನ ಕಲಹವು ಮಾನಸಿಕ ನೆಮ್ಮದಿಯನ್ನು ಹಾಳು ಮಾಡಲಿದೆ. ಇನ್ನು ಪ್ರೀತಿ- ಪ್ರೇಮದಲ್ಲಿ ಇರುವವರು ಅಹಂಕಾರದಿಂದ ಮಾತು ಬಿಡುವಂತೆ ಆಗಲಿದೆ. ಅಥವಾ ಪ್ರೀತಿಯೇ ಮುರಿದುಬೀಳುವ ಸಾಧ್ಯತೆ ಕೂಡ ಇದೆ. ನೀವೇನಾದರೂ ಚೀಟಿ ಹಾಕಿದ್ದಲ್ಲಿ ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸರಿಯಾಗಿ ಆಲೋಚಿಸಿ ಇಟ್ಟುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ನೀವು ಹಣವನ್ನು ಕಳೆದುಕೊಳ್ಳುತ್ತೀರಿ. ಗಂಟಲಿಗೆ ಸಂಬಂಧಿಸಿದ ಕೆಲವು ಅನಾರೋಗ್ಯ ಸಮಸ್ಯೆಗಳು ಸಹ ಕಾಡಬಹುದು. ಸ್ವಚ್ಛ ಹಾಗೂ ಶುದ್ಧವಾದ ಆಹಾರ- ನೀರಿನ ಸೇಬನೆ ಕಡೆಗೆ ಗಮನವನ್ನು ನೀಡಿ. ನಿಮ್ಮಲ್ಲಿ ಕೆಲವರಿಗೆ ಗಂಭೀರ ಸ್ವರೂಪದ ಅಪಘಾತಗಳು ಆಗಬಹುದು. ಅನಿವಾರ್ಯ ಅಲ್ಲದಿದ್ದಲ್ಲಿ ರಾತ್ರಿ ಪ್ರಯಾಣವನ್ನು ಮಾಡದಿರುವುದು ಕ್ಷೇಮ. ಹಲವು ಪ್ರಾಜೆಕ್ಟ್ ಗಳನ್ನು ಅರ್ಧಕ್ಕೆ ನಿಲ್ಲಿಸುವಂತೆ ಸನ್ನಿವೇಶ ಸೃಷ್ಟಿಯಾಗಬಹುದು. ಮಾನಸಿಕ ಒತ್ತಡ ಉಂಟಾಗಿ, ವೈದ್ಯರ ಸಹಾಯ ಪಡೆಯಲೇಬೇಕಾದ ಸ್ಥಿತಿ ಉದ್ಭವಿಸಲಿದೆ.

ಕುಂಭ: ನೀವು ಬಹಳ ಪ್ರೀತಿಸುವ- ಗೌರವಿಸುವ ಹಾಗೂ ಹಚ್ಚಿಕೊಂಡಿರುವವರ ಅನಾರೋಗ್ಯ ಸಮಸ್ಯೆ- ದೈಹಿಕ ಅಸ್ವಾಸ್ಥ್ಯದಿಂದ ಬಹಳ ಕುಗ್ಗಿ ಹೋಗುತ್ತೀರಿ. ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ, ಬೆನ್ನು ನೋವು, ನರಗಳ ಸಮಸ್ಯೆ ನಿಮ್ಮನ್ನು ಬಹುವಾಗಿ ಕಾಡಲಿವೆ. ನಿಮ್ಮಲ್ಲಿ ಕೆಲವರು ನೀವಾಗಿಯೇ ಉದ್ಯೋಗವನ್ನು ಬಿಟ್ಟು ಆರ್ಥಿಕವಾಗಿ ಬಹಳ ತೊಂದರೆಗೆ ಗುರಿ ಆಗಲಿದ್ದೀರಿ. ಸಾಲ ಮಾಡಿ ವ್ಯಾಪಾರ ಮಾಡುವ ಉದ್ದೇಶ ಏನಾದರೂ ನಿಮಗೆ ಇದ್ದಲ್ಲಿ ಅದನ್ನು ಕೈ ಬಿಡಿ. ಅದರಲ್ಲೂ ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ ಮಾಡುವ ಇರಾದೆ ಇದ್ದರಂತೂ ಆ ಆಲೋಚನೆಯನ್ನೇ ಬಿಟ್ಟುಬಿಡಿ. ನಿಮ್ಮಲ್ಲಿ ಯಾರು ಕನ್ಸಲ್ಟೆನ್ಸಿ ವ್ಯವಹಾರ ಮಾಡುತ್ತಿರುವಿರೋ ಅಂಥವರಿಗೆ ಮಾನಸಿಕವಾಗಿ ಕಿರಿಕಿರಿ ಆಗುವಂಥ ಬೆಳವಣಿಗೆಗಳು ಆಗಲಿವೆ. ವಿವಾಹಿತರಿಗೆ ಮದುವೆ ಆಚೆಗಿನ ಸಂಬಂಧಗಳ ಸೆಳೆತದಿಂದ ತೊಂದರೆ ಆಗಬಹುದು. ಅಥವಾ ಆ ರೀತಿ ನಿಮ್ಮ ಮೇಲೆ ಆರೋಪಗಳು ಬರಬಹುದು. ವಿದೇಶಕ್ಕೆ ತೆರಳಬೇಕು ಎಂದಿರುವವರಿಗೆ ನಾನಾ ರೀತಿಯ ಅಡ್ಡಿ- ಆತಂಕಗಳು ಕಾಡಬಹುದು. ವಿವಾಹ ಪ್ರಯತ್ನಗಳಿಗೆ ನಾನಾ ಅಡೆ- ತಡೆಗಳು ಎದುರಾಗುತ್ತವೆ.

ಮೀನ: ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ. ಅದರಲ್ಲೂ ವಿಲಾಸಿ ವಸ್ತುಗಳಿಗೆ ಸಿಕ್ಕಾಪಟ್ಟೆ ವೆಚ್ಚ ಮಾಡಲಿದ್ದೀರಿ. ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಅಥವಾ ನೋ ಕಾಸ್ಟ್ ಇಎಂಐ ಸಿಗುತ್ತದೆ ಎಂಬ ಕಾರಣಕ್ಕೆ ಅಗತ್ಯ ಇಲ್ಲದವುಗಳನ್ನೆಲ್ಲ ಖರೀದಿ ಮಾಡುವುದಕ್ಕೆ ಹೊರಡಬೇಡಿ. ಅದೇ ರೀತಿ ಕಾರು ಸೇರಿದಂತೆ ವಿವಿಧ ರಿಪೇರಿಗಳಿಗಾಗಿ ಸಹ ನೀವು ಅಂದುಕೊಂಡಿಲ್ಲದ ಮಟ್ಟಕ್ಕೆ ಖರ್ಚು- ವೆಚ್ಚಗಳು ತಲೆ ಮೇಲೆ ಬೀಳಲಿವೆ. ನಿಮ್ಮಲ್ಲಿ ಯಾರು ಷೇರು- ಮ್ಯೂಚುವಲ್ ಫಂಡ್ ಇಂಥವುಗಳ ಮೇಲೆ ಹೂಡಿಕೆ ಮಾಡಬೇಕು ಎಂದಿದ್ದೀರಿ ಅಥವಾ ಈಗಾಗಲೇ ಮಾಡಿದ್ದೀರಿ ಅಂಥವರು ಸೂಕ್ತ ವ್ಯಕ್ತಿಗಳ ಮೂಲಕ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಅತಿ ಬುದ್ಧಿವಂತಿಕೆಯನ್ನು ಮಾಡುವುದಕ್ಕೆ ಹೋಗಬೇಡಿ. ಅದರಲ್ಲೂ ಹಣಕಾಸಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಸರಳ ಹಾಗೂ ಸಹಜವಾದ ತೀರ್ಮಾನಗಳನ್ನು ತೆಗೆದುಕೊಳ್ಳಿ. ಇನ್ನು ನಿಮ್ಮಲ್ಲಿ ದೈವಭಕ್ತಿ ವಿಪರೀತ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ಇರುವಂಥ ಕೆಲವು ಹಳೇ ಸಾಮಾನು- ಸರಂಜಾಮುಗಳನ್ನು ಮಾರಾಟ ಮಾಡುವ ತೀರ್ಮಾನಕ್ಕೆ ಬರಲಿದ್ದೀರಿ. ಇದರಿಂದ ನಿಮಗೆ ಅನುಕೂಲ ಆಗಲಿದೆ.

ಪರಿಹಾರ: ಕುಂಭ, ಮೀನ, ಕರ್ಕಾಟಕ ಹಾಗೂ ಸಿಂಹ, ಕನ್ಯಾ ಮತ್ತು ಮಕರ ಈ ಆರು ರಾಶಿಗಳಿಗೆ ಕ್ರಮವಾಗಿ ರಾಹು- ಕೇತುವಿನ ಪ್ರಭಾವ ತೀಕ್ಷ್ಣವಾಗಿರುತ್ತದೆ. ರಾಹುವಿನ ನಕಾರಾತ್ಮಕ ಪ್ರಭಾವ ತಗ್ಗಬೇಕು ಅಂತಾದಲ್ಲಿ ದುರ್ಗಾದೇವಿ ಆರಾಧನೆ, ಕೇತುವಿನ ನಕಾರಾತ್ಮಕ ಪ್ರಭಾವ ತಗ್ಗಲು ಗಣಪತಿ ಆರಾಧನೆ ಮಾಡಿಕೊಳ್ಳಬೇಕು. ರಾಹು ಗ್ರಹದ ಶಾಂತಿಗೆ ದುರ್ಗಾ ಹೋಮ, ದುರ್ಗಾ ದೀಪ ನಮಸ್ಕಾರ, ದುರ್ಗಾ ಸೂಕ್ತ ಪಠಣ- ಶ್ರವಣ, ರಾಹು ಜಪ ಮಾಡಿಕೊಳ್ಳಬೇಕು. ಕೇತು ಗ್ರಹದ ಶಾಂತಿ ಗಣಪತಿ ಅಥರ್ವಶೀರ್ಷ ಶ್ರವಣ- ಪಠಣ, ಗಣ ಹೋಮ ಅಥವಾ ಕೇತು ಜಪ ಮಾಡಿಕೊಳ್ಳಬೇಕು.

Published On - 11:11 am, Tue, 20 May 25