ಆಸ್ತಿ, ಸಂತಾನ ಭಾಗ್ಯ ಎಲ್ಲವೂ ಸಿಗಲಿದೆ: ಈ ರಾಶಿಯಲ್ಲಿ ಮೂರು ಗ್ರಹಗಳ ಸಂಚಾರ

ಏಪ್ರಿಲ್ 2026 ಸಿಂಹ ರಾಶಿಗೆ ಗುರು, ಸೂರ್ಯ, ಶುಕ್ರರ ಶುಭ ಸಂಚಾರದಿಂದ ಆರ್ಥಿಕ ಲಾಭ, ವೃತ್ತಿ ಪ್ರಗತಿ ಹಾಗೂ ಗೌರವ ಪ್ರಾಪ್ತಿಯಿದೆ. ಆದಾಗ್ಯೂ, ಅಷ್ಟಮ ಶನಿ ದಶೆ, ಕುಜ ಮತ್ತು ಬುಧರ ಸ್ಥಾನದಿಂದ ಆರೋಗ್ಯ ಸಮಸ್ಯೆ, ಕುಟುಂಬದಲ್ಲಿ ವೈಮನಸ್ಸು, ಶತ್ರು ಕಾಟವಿರಬಹುದು. ಎಚ್ಚರಿಕೆ ಹಾಗೂ ಸುಬ್ರಹ್ಮಣ್ಯ ಸ್ವಾಮಿ ಆರಾಧನೆಗಳಿಂದ ಅಶುಭ ಫಲಗಳನ್ನು ತಗ್ಗಿಸಿಕೊಳ್ಳಿ. ಹಣಕಾಸಿನ ಲಾಭಗಳಿದ್ದರೂ, ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿ.

ಆಸ್ತಿ, ಸಂತಾನ ಭಾಗ್ಯ ಎಲ್ಲವೂ ಸಿಗಲಿದೆ: ಈ ರಾಶಿಯಲ್ಲಿ ಮೂರು ಗ್ರಹಗಳ ಸಂಚಾರ
ಸಾಂದರ್ಭಿಕ ಚಿತ್ರ
Edited By:

Updated on: Apr 28, 2026 | 10:15 PM

ಏಪ್ರಿಲ್ 2026ರಲ್ಲಿ ಸಿಂಹ ರಾಶಿಯವರಿಗೆ ಮಘಾ, ಪೂರ್ವಾಫಲ್ಗುಣೀ, ಉತ್ತರಾಫ್ಗುಣೀ 1ನೇ ಪಾದಗಳಲ್ಲಿ ಜನಿಸಿದವರಿಗೆ ಹೇಗಿರಲಿವೆ ಎಂಬುದನ್ನು ವಿಸ್ತಾರವಾಗಿ ತಿಳಿಯಬಹುದು. ರಾಶಿಯ ಅಧಿಪತಿ ಉಚ್ಚನಾದ ಕಾರಣ ವಿಶೇಷ ಅಂಶಗಳು ರಾಶಿಯವರದ್ದಾಗಲಿದೆ.

​ಶುಭ ಫಲ ನೀಡುವ ಗ್ರಹಗಳು :

ಗುರುವು ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ನಿಮಗೆ ಅತ್ಯಂತ ದೊಡ್ಡ ವರದಾನ. ಇದು “ಲಾಭ ಸ್ಥಾನವಾದ್ದರಿಂದ ನಿಮ್ಮ ಆದಾಯ ಹೆಚ್ಚಾಗಲಿದೆ. ಹಳೆಯ ಹೂಡಿಕೆಗಳಿಂದ ಲಾಭ ಸಿಗಲಿದೆ. ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು. ಸಂತಾನ ಭಾಗ್ಯ ಅಥವಾ ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ.

​ನಿಮ್ಮ ರಾಶ್ಯಾಧಿಪತಿಯಾದ ಸೂರ್ಯನು ಮೇಷದಲ್ಲಿ ಉಚ್ಚ ಸ್ಥಿತಿಯಲ್ಲಿ ಇರುವುದು ಅದ್ಭುತ ಫಲ ನೀಡುತ್ತದೆ. ಇದು ಪಿತೃಾರ್ಜಿತ ಆಸ್ತಿಯ ಲಾಭ, ತಂದೆಯ ಕಡೆಯಿಂದ ಸಹಕಾರ ಮತ್ತು ಸಮಾಜದಲ್ಲಿ ಗೌರವವನ್ನು ತಂದುಕೊಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಉನ್ನತ ಅಧಿಕಾರ ಪ್ರಾಪ್ತಿಯ ಯೋಗವಿದೆ.

​ಶುಕ್ರನು ವೃಷಭ ರಾಶಿಯಲ್ಲಿ ಸ್ವಕ್ಷೇತ್ರದಲ್ಲಿ ಇರುವುದರಿಂದ ವೃತ್ತಿ ಜೀವನದಲ್ಲಿ ಐಷಾರಾಮಿ ವಾತಾವರಣವಿರುತ್ತದೆ. ಕಲೆ, ಮಾಧ್ಯಮ ಅಥವಾ ವ್ಯಾಪಾರದಲ್ಲಿ ಇರುವವರಿಗೆ ದೊಡ್ಡ ಮಟ್ಟದ ಪ್ರಗತಿ ಕಂಡುಬರುತ್ತದೆ. ಕೆಲಸದ ಸ್ಥಳದಲ್ಲಿ ಸ್ತ್ರೀ ವರ್ಗದವರಿಂದ ಸಹಕಾರ ಸಿಗಲಿದೆ.

​ಅಶುಭ ಫಲ ನೀಡುವ ಗ್ರಹಗಳು

​ಸಿಂಹ ರಾಶಿಯವರಿಗೆ ಪ್ರಸ್ತುತ ಅಷ್ಟಮ ಶನಿ ದಶೆ ನಡೆಯುತ್ತಿದೆ. ಮೀನ ರಾಶಿಯಲ್ಲಿ ಶನಿಯೊಂದಿಗೆ ಕುಜ ಮತ್ತು ಬುಧ ಸೇರಿರುವುದು ಸಂಕೀರ್ಣ ಪರಿಸ್ಥಿತಿ ಸೃಷ್ಟಿಸುತ್ತದೆ.

​ವಾಹನ ಚಾಲನೆಯಲ್ಲಿ ಅತಿ ಹೆಚ್ಚು ಎಚ್ಚರಿಕೆ ಅಗತ್ಯ. ಬುಧನು ಅಷ್ಟಮದಲ್ಲಿ ಇರುವುದರಿಂದ ನಿಮ್ಮ ಮಾತು ತಪ್ಪಾಗಿ ಅರ್ಥೈಸಲ್ಪಡಬಹುದು. ರಕ್ತದೊತ್ತಡ ಅಥವಾ ಶಸ್ತ್ರಚಿಕಿತ್ಸೆಯಂತಹ ಸಾಧ್ಯತೆಗಳಿರುವುದರಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

​ರಾಹು-ಕೇತುಗಳ ಪ್ರಭಾವ: ಇವು ನಿಮ್ಮ ಜೀವನದ ಸ್ಥಿರತೆಯಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಉಂಟುಮಾಡಬಹುದು, ವಿಶೇಷವಾಗಿ ಹಣಕಾಸಿನ ವ್ಯವಹಾರಗಳಲ್ಲಿ ಅಪರಿಚಿತರನ್ನು ನಂಬಲೇಬೇಡಿ.

ವೃತ್ತಿ ಮತ್ತು ಆರ್ಥಿಕತೆ:

ಗುರುವು ಲಾಭ ಸ್ಥಾನದಲ್ಲಿ ಇರುವುದರಿಂದ ಆರ್ಥಿಕ ಪರಿಸ್ಥಿತಿ ಸದೃಢವಾಗಿರುತ್ತದೆ. ಆದರೆ, ಅಷ್ಟಮದಲ್ಲಿ ಶನಿ-ಕುಜರ ಸಂಯೋಗವಿರುವುದರಿಂದ ಶತ್ರುಗಳ ಕಾಟ ಅಥವಾ ಕೆಲಸದಲ್ಲಿ ಪಿತೂರಿಗಳು ನಡೆಯಬಹುದು. ನೀವು ಮಾಡುವ ಕೆಲಸದಲ್ಲಿ ಎಷ್ಟು ನಿಷ್ಠರಾಗಿದ್ದರೂ ಸಹ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡಿ ತೋರಿಸುವ ಸಾಧ್ಯತೆ ಇರುತ್ತದೆ. ವ್ಯಾಪಾರಸ್ಥರು ಈ ತಿಂಗಳು ಹೊಸ ಪಾಲುದಾರಿಕೆಯನ್ನು ಮಾಡಿಕೊಳ್ಳದಿದ್ದರೆ ಒಳಿತು.

​ಕುಟುಂಬ ಮತ್ತು ದಾಂಪತ್ಯ:

ಭಾಗ್ಯದಲ್ಲಿ ಸೂರ್ಯನಿರುವುದರಿಂದ ಕುಟುಂಬದ ಹಿರಿಯರ ಬೆಂಬಲ ಸದಾ ನಿಮ್ಮ ಮೇಲಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಆದರೆ, ಶನಿಯ ದೃಷ್ಟಿಯಿಂದಾಗಿ ಸಂಗಾತಿಯೊಂದಿಗೆ ಸಣ್ಣಪುಟ್ಟ ವೈಮನಸ್ಸು ಉಂಟಾಗಬಹುದು. ಪರಸ್ಪರ ಸಂಶಯ ಮಾಡುವುದನ್ನು ಬಿಟ್ಟು ತಾಳ್ಮೆಯಿಂದ ವರ್ತಿಸುವುದು ಅಗತ್ಯ.

​ಶಿಕ್ಷಣ ಮತ್ತು ಆರೋಗ್ಯ:

ವಿದ್ಯಾರ್ಥಿಗಳಿಗೆ ಈ ತಿಂಗಳು ಹೆಚ್ಚಿನ ಶ್ರಮದ ಅಗತ್ಯವಿದೆ. ಬುಧನು ಅಷ್ಟಮದಲ್ಲಿ ಇರುವುದರಿಂದ ಏಕಾಗ್ರತೆಯ ಕೊರತೆ ಕಾಡಬಹುದು. ಆರೋಗ್ಯದ ವಿಷಯದಲ್ಲಿ ಉದರ ಸಂಬಂಧಿ (ಹೊಟ್ಟೆಯ) ಸಮಸ್ಯೆ ಅಥವಾ ಮೂಳೆ ನೋವು ಕಾಣಿಸಿಕೊಳ್ಳಬಹುದು. ಮಸಾಲೆಯುಕ್ತ ಆಹಾರದಿಂದ ದೂರವಿರುವುದು ಉತ್ತಮ.

​ಈ ತಿಂಗಳ ಅಶುಭ ಫಲಗಳನ್ನು ತಗ್ಗಿಸಲು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ ಅಥವಾ ಮಂಗಳವಾರ ಸುಬ್ರಹ್ಮಣ್ಯ ಭುಜಂಗ ಪಠಿಸಿ. ಪ್ರತಿದಿನ ಬೆಳಗ್ಗೆ ಸೂರ್ಯ ನಮಸ್ಕಾರ ಮತ್ತು ಆದಿತ್ಯ ಹೃದಯ ಸ್ತೋತ್ರ ಪಠಿಸಿ.

ಸಿಂಹ ರಾಶಿಯವರಿಗೆ ಈ ತಿಂಗಳು ಬರುವ ಲಾಭವನ್ನು ಅಷ್ಟಮ ಶನಿಯಿಂದ ರಕ್ಷಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿರಲಿ. ಹಣಕಾಸಿನ ವಿಷಯದಲ್ಲಿ ಜಯ ಸಿಕ್ಕರೂ, ಆರೋಗ್ಯ ಮತ್ತು ಸುರಕ್ಷತೆಯ ವಿಷಯದಲ್ಲಿ ಮೈಮರೆಯಬಾರದು.

– ಲೋಹಿತ ಹೆಬ್ಬಾರ್

Published On - 10:14 pm, Tue, 28 April 26

Follow Us