Sri Rama Horoscope Analysis: ಪ್ರಭು ಶ್ರೀರಾಮನ ಜಾತಕ ಹೇಗಿತ್ತು ಗೊತ್ತಾ? ಇಲ್ಲಿದೆ ಗ್ರಹ ಸ್ಥಿತಿಯೊಂದಿಗೆ ವಿಶ್ಲೇಷಣೆ

| Updated By: Digi Tech Desk

Updated on: Jan 12, 2024 | 12:17 PM

ಶ್ರೀರಾಮನು ಜನಿಸಿದ್ದು ವೈಶಾಖ ಮಾಸದ ಶುಕ್ಲ ಪಕ್ಷದ ನವಮಿ. ಅವನ ನಕ್ಷತ್ರ ಪುನರ್ವಸು, ರಾಶಿ ಕರ್ಕಾಟಕ. ಇನ್ನು ಲಗ್ನ ಕೂಡ ಕರ್ಕಾಟಕ. ಆ ಲಗ್ನದಲ್ಲೇ ನವಮಾಧಿಪತಿಯಾದ (ಮೀನ ರಾಶಿಯ ಅಧಿಪತಿ) ಮತ್ತು ಷಷ್ಟಾಧಿಪತಿಯಾದ (ಧನುಸ್ಸಿಗೂ ಅಧಿಪತಿ) ವರ್ಗೋತ್ತಮ ಗುರು ಉಚ್ಚನಾಗಿದ್ದಾನೆ. ಇಲ್ಲಿ ಗಜ- ಕೇಸರಿ ಯೋಗ, ಗುರು ಮಂಗಳ ಯೋಗ ಗುರುವಿನಿಂದ ಚಿಂತನೆ. ಇನ್ನೊಂದು ವಿಶೇಷ ಯೋಗವೂ ಇದೆ. ಇದು ಬಹಳ ಅಪರೂಪದ ಯೋಗ. ಲಕ್ಷಕ್ಕೆ ಒಂದು ಸಿಗಬಹುದಷ್ಟೆ.

Sri Rama Horoscope Analysis: ಪ್ರಭು ಶ್ರೀರಾಮನ ಜಾತಕ ಹೇಗಿತ್ತು ಗೊತ್ತಾ? ಇಲ್ಲಿದೆ ಗ್ರಹ ಸ್ಥಿತಿಯೊಂದಿಗೆ ವಿಶ್ಲೇಷಣೆ
Follow us on

ಮಹಾವಿಷ್ಣುವಿನ ಅವತಾರಗಳಲ್ಲೇ ಮರ್ಯಾದಾ ಪುರುಷೋತ್ತಮ ರಾಮನ ಅವತಾರ ತುಂಬ ವಿಶಿಷ್ಟವಾದದ್ದು. ಆತ ಸಾಮಾನ್ಯ ಮನುಷ್ಯರಂತೆ ಕಂಡುಬಂದ. ಆದರೆ ಆತನ ನಡವಳಿಕೆ, ಮೌಲ್ಯಗಳು, ಬದುಕಿದ ರೀತಿ ಯುಗಯುಗಗಳಿಗೂ ಆದರ್ಶವಾಗಿ ಉಳಿಯಿತು, ಇನ್ನು ಮುಂದೆಯೂ ಉಳಿಯುತ್ತದೆ. ಈಗಂತ ಭಾರತದಲ್ಲಷ್ಟೇ ಅಲ್ಲ, ಪ್ರಪಂಚದಾದ್ಯಂತ ನಿತ್ಯ ರಾಮ ಜಪ, ರಾಮನ ಗುಣಗಾನ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಡೆಗೆ ಅದೆಷ್ಟೋ ನೂರು ಕೋಟಿ ಕಣ್ಣುಗಳು ಎದುರು ನೋಡುತ್ತಿವೆ. ಇಂಥ ಸನ್ನಿವೇಶದಲ್ಲಿ ಆ ಶ್ರೀರಾಮನ ಜಾತಕ ವಿಶ್ಲೇಷಣೆ ನಿಮ್ಮೆದುರು ಇದೆ. ಅದಕ್ಕೂ ಮುನ್ನ ಹೇಳಿಕೊಳ್ಳಲಿಕ್ಕೆ ಒಂದಿಷ್ಟು ವಿಚಾರಗಳಿವೆ. ಪ್ರಭು ಶ್ರೀರಾಮನ ಜಾತಕದ ವಿಶ್ಲೇಷಣೆ ಇಲ್ಲಿದೆ.

ಅವನೇ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ

ಅಖಿಲಾಂಡ ಕೋಟಿ ಬ್ರಹ್ಮಾಂಡವು ಒಂದು ದಿವ್ಯ ಚೈತನ್ಯದ ಆಧೀನದಲ್ಲಿದೆ. ಅದುವೇ ನಾವೆಲ್ಲರೂ ಕರೆಯುವ ಹರಿನಾರಾಯಣ, ವಿಷ್ಣು, ಪರಮೇಶ್ವರ ಇತ್ಯಾದಿ ಹಲವು ನಾಮಗಳಿಂದ ಕರೆಯುವಂಥ ಆ ಪರಮಾತ್ಮನ ಅಧೀನದಲ್ಲಿ ಇರುವಂಥದ್ದು. ಈ ದಿವ್ಯ ಚೈತನ್ಯದ ಆಧೀನದಲ್ಲೇ ಆದಿತ್ಯಾದಿ ನವಗ್ರಹರೂ ಈ ಸೌರ ವ್ಯೂಹದೊಳಗಿರುವುದು. ಈ ಸೌರ ವ್ಯೂಹದಲ್ಲೇ ಭೂಮಿ ಇರುವುದು.ಇದನ್ನೇ ಮರ್ತ್ಯ ಲೋಕ ಎನ್ನುವುದು. ಇಲ್ಲಿ ಹುಟ್ಟಿದ ಸಕಲವೂ ಪಂಚ ಭೂತಗಳಿಂದಲೇ ಉಂಟಾದವುಗಳು. ಭೂಮಿರಾಪೋನಲೋನಿಲೋನವಃ ಎಂದಿದ್ದಾರೆ. ಭೂ, ಜಲ, ಅಗ್ನಿ, ವಾಯು, ಆಕಾಶ ತತ್ವಗಳಲ್ಲೇ ಸಕಲ ಚರಾಚರಗಳ ಕಾಯಗಳಿರುತ್ತದೆ. ಇದಕ್ಕೆಲ್ಲಾ ಅಳಿವು ಇದ್ದೇ ಇದೆ, ಅಂದರೆ ಇವ್ಯಾವುದೂ ಶಾಶ್ವತವಲ್ಲ. ಈ ಪಂಚ ಭೂತಗಳಿಗೆ ಆದಿತ್ಯಾದಿ ಸಪ್ತಗ್ರಹರೂ ಜತೆಗೆ ರಾಹು- ಕೇತುಗಳು ಮೋಹ-ದುಃಖಗಳ ಸೂಚಕರೂ ಆಗಿರುತ್ತಾರೆ.

ಈ ಬುವಿಗೆ ರಾಮ- ಕೃಷ್ಣ ಇತ್ಯಾದಿ ಮಾನುಷ ರೂಪದಲ್ಲಿ ಬಂದವರು ದೈವತ್ವ ಪಡೆದು ಮತ್ತೆ ಆ ದಿವ್ಯ ಚೈತನ್ಯದೊಳಗೆ ಲೀನರಾದರು. ಪುರಾಣಗಳಲ್ಲಿ ಬಂದ ವಿಷ್ಣುವಿನ ಅವತಾರಗಳಲ್ಲಿ ನೃಸಿಂಹ, ವರಾಹ, ಕೂರ್ಮ, ಮತ್ಸ್ಯ, ವಾಮನ, ತ್ರಿವಿಕ್ರಮ ಅವತಾರಗಳು ಮಾತ್ರ ವಿಭಿನ್ನ. ಇದಕ್ಕೆ ಹುಟ್ಟು, ಸಾವು, ಬಾಲ್ಯ, ಯೌವನ, ವೃದ್ಧಾಪ್ಯ ಮರಣಗಳಿರಲಿಲ್ಲ. ಒಂದು ಕ್ಷಣಕ್ಕೆ ಪ್ರತ್ಯಕ್ಷವಾಗಿ ನಂತರ ಅಂತರ್ದಾನವಾದ ಅವತಾರಗಳು. ಇದನ್ನು ಪೂರ್ಣಾವತಾರ ಎಂದರು. ಇದಕ್ಕೆ ಯಾವ ನವಗ್ರಹಗಳ ಪ್ರಭಾವವೂ ಇರಲಿಲ್ಲ. ಈ ವಿಷ್ಣುವಿನ ಪೂರ್ಣ ತತ್ವಗಳು ಶ್ರೀರಾಮನಲ್ಲಿ, ಶ್ರೀಕೃಷ್ಣನಲ್ಲಿ ಋಷಿ-ಮುನಿಗಳು ಕಂಡದ್ದರಿಂದಲೇ ಅವತಾರ ಸಮಾಪ್ತಿಯಾದ ಬಳಿಕ ದೇವರ ಗುಡಿಯಲ್ಲಿ ಇಟ್ಟು ಪೂಜಿಸಿದರು. ಆದರೆ ಈ ಅವತಾರಕ್ಕೆ ನವಗ್ರಹಗಳ ಪ್ರಭಾವಗಳಿತ್ತು. ಆದರೆ ನಮ್ಮಂತಹ ಮನುಷ್ಯರಿಗೆ ಇರುವ ಪ್ರಭಾವ ಮತ್ತು ಅದರ ಫಲಾಫಲಗಳಂತೆ ಈ ಮಹಾತ್ಮರಿಗಿಲ್ಲ. ಯಾಕೆಂದರೆ ಈ ಮಹಾತ್ಮರು ಗುಣಾತೀತರು, ಕಾಲಾತೀತರು, ವರ್ಣಾತೀತರು, ಧರ್ಮಾತೀತರು, ಹಾಗಾಗಿಯೇ ದೇವರೆಂದು ಪೂಜಿಸಲ್ಪಟ್ಟರು.

ವರ್ಣನೆಗೂ ಗ್ರಹ ಸ್ಥಿತಿಗೂ ಏನಿದೆ ಸಾಮ್ಯತೆ?

ಈ ಲೇಖನದ ಆರಂಭದಲ್ಲಿಯೇ ಹೇಳಿದಂತೆ ಇಲ್ಲಿ ನಾನು ಒಬ್ಬ ಜ್ಯೋತಿಷ್ಯ ಅಧ್ಯಯನ ವಿದ್ಯಾಥಿಯಾಗಿ ಪ್ರಭು ಶ್ರೀರಾಮನ ಜಾತಕ ಏನು ತಿಳಿಸಿತ್ತು ಎಂದಷ್ಟೇ ವಿಮರ್ಶೆಗೆ ಇಳಿದಿದ್ದೇನೆ. ಗ್ರಹರ ಅಧ್ಯಯನವು ಒಬ್ಬರ ವ್ಯಕ್ತಿತ್ವವನ್ನು ಹೇಳುತ್ತದೆ. ಶ್ರೀರಾಮನ ವ್ಯಕ್ತಿತ್ವವು ಪುರಾಣ ಕಥೆಗಳಲ್ಲಿ ವರ್ಣಿತವಾಗಿದ್ದು, ಅದಕ್ಕೂ ಈ ಗ್ರಹಸ್ಥಿತಿಗೂ ಏನೇನು ಸಾಮ್ಯತೆ ಇದೆ ಎಂಬ ಒಂದು ಕುತೂಹಲದಿಂದ ಇದನ್ನು ಬರೆಯುತ್ತಿದ್ದೇನೆ.

ಶ್ರೀರಾಮನು ಜನಿಸಿದ್ದು ವೈಶಾಖ ಮಾಸದ ಶುಕ್ಲ ಪಕ್ಷದ ನವಮಿ. ಅವನ ನಕ್ಷತ್ರ ಪುನರ್ವಸು, ರಾಶಿ ಕರ್ಕಾಟಕ. ಇನ್ನು ಲಗ್ನ ಕೂಡ ಕರ್ಕಾಟಕ. ಆ ಲಗ್ನದಲ್ಲೇ ನವಮಾಧಿಪತಿಯಾದ (ಮೀನ ರಾಶಿಯ ಅಧಿಪತಿ) ಮತ್ತು ಷಷ್ಟಾಧಿಪತಿಯಾದ (ಧನುಸ್ಸಿಗೂ ಅಧಿಪತಿ) ವರ್ಗೋತ್ತಮ ಗುರು ಉಚ್ಚನಾಗಿದ್ದಾನೆ. ಇಲ್ಲಿ ಗಜ- ಕೇಸರಿ ಯೋಗ, ಗುರು ಮಂಗಳ ಯೋಗ ಗುರುವಿನಿಂದ ಚಿಂತನೆ. ಇನ್ನೊಂದು ವಿಶೇಷ ಯೋಗವೂ ಇದೆ. ಇದು ಬಹಳ ಅಪರೂಪದ ಯೋಗ. ಲಕ್ಷಕ್ಕೆ ಒಂದು ಸಿಗಬಹುದಷ್ಟೆ. ಲಗ್ನಕ್ಕೆ ನವಮಾಧಿಪತಿಯಾಗಿ ಗುರು ಉಚ್ಚ ಅಥವಾ ಮೂಲ ತ್ರಿಕೋಣದಲ್ಲಿ ಇದ್ದು, ಲಗ್ನದ ದ್ವಿತಿಯಾಧಿಪತಿಯಾದ ರವಿ ಗ್ರಹವು ಚಂದ್ರನಿಗೆ ಕೇಂದ್ರದಲ್ಲಿ ಇರುವುದರಿಂದ ಇದು ಅಖಂಡ ಸಾಮ್ರಾಜ್ಯ ಯೋಗ. ಅಂದರೆ ಪ್ರಶ್ನಾತೀತ ವ್ಯಕ್ತಿತ್ವ ಶ್ರೀರಾಮನದು. ಈ ಜಾತಕದಲ್ಲಿ ನವಮಾಧಿಪತಿ ಗುರುವು ಉಚ್ಚನಾಗಿ ಚಂದ್ರನಿಗೆ ಕೇಂದ್ರದಲ್ಲೂ, ದ್ವಿತೀಯಾಧಿಪತಿ ರವಿಯು ಉಚ್ಚನಾಗಿ ನಿಪುಣ ಯೋಗದಲ್ಲೂ ಇರುವುದು ಅಖಂಡ ಸಾಮ್ರಾಜ್ಯ ಯೋಗ. ಇಂತಹ ಜಾತಕ ಹತ್ತು ಸಾವಿರ ವರ್ಷಕ್ಕೊಮ್ಮೆ ಲಕ್ಷಕ್ಕೊಂದು ಸಿಗಬಹುದಷ್ಟೆ.

ಸಪ್ತಮವು ನೀಗಡ ದ್ರೇಕ್ಕಾಣ

ಇನ್ನು ಕುಜನ ಸ್ಥಿತಿ ನೋಡೋಣ. ಕುಜನು ಕ್ಷಾತ್ರ ಗುಣದವನು. ರವಿಯೂ ಕ್ಷಾತ್ರನು. ಕುಜನು ಉಚ್ಚನಾಗಿ ಲಗ್ನ ಸಪ್ತಮದಲ್ಲಿ (ಮಕರದಲ್ಲಿ ಕುಜನಿಗೆ ಉಚ್ಚ ಸ್ಥಿತಿ) ಇರುವುದರಿಂದ ಇದು ಪಂಚ ಮಹಾ ಪುರುಷ ಯೋಗಗಳಲ್ಲಿ ಒಂದಾದ ರುಚಕ ಯೋಗ ಆಗುತ್ತದೆ. ಅಲ್ಲದೆ ಕುಜನ ಪೂರ್ಣ ಚತುರ್ಥ ವೀಕ್ಷಣೆಯೂ ರವಿಗೆ ಇದೆ. ಇದು ಅದ್ಭುತವಾದ ಯೋಗ. ಅಲಂಕಾರ, ಜ್ಞಾನ, ಸ್ವರೂಪ ಕಾರಕ ಶುಕ್ರನೂ ಉಚ್ಛ ಸ್ಥಿತಿ. ಮಾತೃ ಕಾರಕತ್ವ ಇರುವುದರಿಂದ ಲಕ್ಷ್ಮೀ ಸ್ವರೂಪದ ಆಯಿ ಕೌಸಲ್ಯಾ ದೇವಿ. ಕಳತ್ರ ಕಾರಕ ಶುಕ್ರನ ಯುತಿಯಲ್ಲಿ ಕೇತು ಬಂದುದರಿಂದ ಕಳತ್ರ ಭಾವಕ್ಕೆ ಹಾನಿ. ಸಪ್ತಮವು ನೀಗಡ (ಬಂಧನ) ದ್ರೇಕ್ಕಾಣ ಆದುದರಿಂದ ಪತ್ನಿ ಸೀತಾದೇವಿಗೆ ಬಂಧನವೂ ಆಯಿತು.

ಲಗ್ನಕ್ಕೆ ತೃತೀಯದಲ್ಲಿ ಇರುವಂಥ ರಾಹುವಿನಿಂದ ಪರಾಕ್ರಮ, ಮಿತ್ರರು, ಸಹೋದರ ಚಿಂತನೆ ಮಾಡಬೇಕಾಗುತ್ತದೆ. ಅಂದರೆ ಎಂತಹ ಕಷ್ಟ ಕಾಲದಲ್ಲಿ ಸಹೋದರರ ಸಹಾಯ ಸಿಗದಿರುವುದು ಅಥವಾ ರಾಮನ ರಕ್ಷಣೆ ಅಸಾಧ್ಯವಾದುದು. ತೃತಿಯಾಧಿಪತಿ ಬುಧನು ರವಿಯ ಜತೆಗೆ ಇದ್ದು ಮಹಾಯೋಗ ನೀಡಿದರೂ ಸಹೋದರ ಉದ್ದೇಶವಾಗಿ ರಾಜ್ಯಾಭಿಷೇಕದಿಂದ ವಂಚಿತನಾದನು ರಾಮ. ಲಾಭ ಸ್ಥಾನವು ಸಿಂಹಾಸನ. ಅದರ ಅಧಿಪತಿ ಶುಕ್ರನು ಕೇತು ಯುತಿಯಲ್ಲಿ ಇರುವುದರಿಂದ ಅಧಿಕಾರಕ್ಕೆ ಚ್ಯುತಿ, ದುಃಖಗಳಿತ್ತು.

ಪಂಚಮಾಧಿಪತಿಯು (ವೃಶ್ಚಿಕ ರಾಶಿಯ ಅಧಿಪತಿ ಕುಜ) ಬುಧನ ವೀಕ್ಷಣೆಯಲ್ಲಿ,( ಬುಧಾಂಗಾರಕಯೋರಿವ ಅಂದರೆ ಶತ್ರುಗಳು ಎಂದರ್ಥ) ಅಷ್ಟಮಾಧಿಪತಿ ಶನಿಯ ವೀಕ್ಷಣೆಯೂ ಇದ್ದುದರಿಂದ ಒಮ್ಮೆಗೆ ವೈರಿ ರಾವಣ ಮೆರೆದರೂ ಕೊನೆಗೆ ಧರೆಗುರುಳಬೇಕಾಯಿತು. ಒಟ್ಟಿನಲ್ಲಿ ಶ್ರೀರಾಮ ಚಂದ್ರನಿಗೆ ಯಾವುದೂ ದುಃಖವೆಂದೆನಿಸದೆ ಇರಲು ಇಂತಹ ಗ್ರಹಸ್ಥಿತಿಯೇ ಕಾರಣ. ಧರ್ಮ ರಕ್ಷಣೆಯ ಉತ್ಸಾಹ ಸಿಕ್ಕಿತು. ನಾವೆಲ್ಲರೂ ನಮ್ಮ ಚಿಂತನೆಯಲ್ಲೇ ರಾಮದೇವರಿಗೆ ಕಷ್ಟ ಬಂತು ಎಂದುಕೊಂಡರೂ ಶ್ರೀರಾಮನಿಗೆ ಇದೊಂದು ಧರ್ಮ ರಕ್ಷಣೆಯ ಸವಾಲಾಯಿತೇ ವಿನಾ ಕಷ್ಟವಾಗಲಿಲ್ಲ, ದುಃಖವಾಗಲಿಲ್ಲ. ಹಾಗಾಗಿಯೇ ಶ್ರೀರಾಮನು ದೈವತ್ವಕ್ಕೇರಿದ್ದು.

ಇದನ್ನೂ ಓದಿ: ಮಕರ ಸಂಕ್ರಾಂತಿ ಹಬ್ಬದಂದು ಸೂರ್ಯ ದೇವ ಮಕರ ರಾಶಿಗೆ ಪ್ರವೇಶ, ಏನಿದರ ವಿಶೇಷತೆ? 

ಶ್ರೀರಾಮನ ಜನನದ ಹಿನ್ನೆಲೆ:

ಸಂತಾನ ಹೀನಳಾದ ಕೌಸಲ್ಯೆಗೆ ವಸಿಷ್ಠರು ನವಮಿ ವ್ರತ ಪಾಲಿಸಲು ಉಪದೇಶಿಸಿದರು. ಅದರ ಫಲವಾಗಿ ಪುತ್ರಕಾಮೇಷ್ಟಿ ಯಾಗದ ಪಾಯಸ ದ್ರವ್ಯದ ಮೂಲಕ ಶ್ರೀರಾಮನ ಜನನವು ವೈಶಾಖ ಶುದ್ಧ ನವಮಿಯ ಪುನರ್ವಸು ನಕ್ಷತ್ರದಲ್ಲಿ, ಕರ್ಕಾಟಕ ರಾಶಿ- ಲಗ್ನದಲ್ಲಿ ಆಯಿತು. ಆ ಮೂಲಕ ಭಗವಂತನು ಶ್ರೀರಾಮಭದ್ರನಾಗಿ ಅವತರಿಸಿದ. ತಿಥಿ, ನಕ್ಷತ್ರಗಳು ಬ್ರಹ್ಮಾಂಡ ರಚನೆಯಾದಾಗಲೇ ಇತ್ತು. ಶ್ರೀರಾಮನ ಜನನದ ನಂತರ ರಾಮನವಮಿ ಎಂದು ಪ್ರಖ್ಯಾತವಾಯಿತು. ಅದೇ ರೀತಿ ಮಹಾಭಾರತದಲ್ಲಿ ವಸುದೇವ- ದೇವಕಿಯರಿಗೆ ಗಾರ್ಗ್ಯರು ಅಷ್ಟಮೀ ತಿಥಿಯ ವ್ರತೋಪಾಸನೆ ಮಾಡಲು ತಿಳಿಸಿದ್ದರು. ಹಾಗಾಗಿ ಸಿಂಹ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಲ್ಲಿ ರೋಹಿಣೀ ನಕ್ಷತ್ರದಲ್ಲಿ ಭಗವಂತನು ಶ್ರೀಕೃಷ್ಣನಾಗಿ ಅವತರಿಸಿದ.

ಶ್ರೀರಾಮ ಪಟ್ಟಾಭಿಷೇಕ ಮುಹೂರ್ತ ಸರಿ ಇರಲಿಲ್ಲವೇ?

ಬಹಳ ಕುತೂಹಲಕರವಾದ ಹಾಗೂ ಸಾಮಾನ್ಯವಾಗಿ ಚರ್ಚೆ ಆಗದೇ ಹೋಗುವಂಥ ವಿಚಾರವೊಂದನ್ನು ಇಲ್ಲಿ ತಿಳಿಸುತ್ತಿದ್ದೇನೆ. ರಾಮನ ಪಟ್ಟಾಭಿಷೇಕಕ್ಕೆ ದಿನ ಅಥವಾ ಮುಹೂರ್ತ ಗೊತ್ತಾಯಿತಲ್ಲಾ, ಆ ವರ್ಷ ಒಂದೇ ತಿಂಗಳಿನಲ್ಲಿ ಎರಡು ಅಮಾವಾಸ್ಯೆ ಹಾಗೂ ಎರಡು ಸೂರ್ಯಗ್ರಹಣಗಳಾಗುತ್ತವೆ. ಇದು ದೇಶದ ಸಿಂಹಾಸನಕ್ಕೆ ಅಪಶಕುನ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ಶ್ರೀರಾಮನ ಜನ್ಮ ನಕ್ಷತ್ರ, ತಿಥಿ, ವಾರ ಒಂದೇ ದಿವಸದಲ್ಲೂ ಬಂದಿತ್ತು (ಅಂದರೆ ಶ್ರೀರಾಮ ಹುಟ್ಟಿದ್ದ ನಕ್ಷತ್ರ, ತಿಥಿ, ವಾರ ಯಥಾವತ್ ಆ ವರ್ಷದಲ್ಲಿ ಜನ್ಮದಿನದಂದು ಬಂದಿತ್ತು). ಹೀಗೆ ಬಂದಲ್ಲಿ ಇದನ್ನು ಪಿತೃ ಕರ್ಮಯೋಗ ಸೂಚಕ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ; ಗುರು-ಪುಷ್ಯ ಯೋಗ ಎಂದರೇನು? ಈ ದಿನದಂದು ಚಿನ್ನ, ಬೆಳ್ಳಿ ಖರೀದಿಸುವುದು ಉತ್ತಮ

ಸೂರ್ಯ ಗ್ರಹಣಗಳೂ ಜನ್ಮ ದಿನವೂ ಎರಡೂ ಅಪಶಕುನ ಸೂಚಕಗಳಾದಾಗ ಮಹಾ ಜ್ಯೋತಿಷ್ಯ ಪಂಡಿತನೂ ಆದಂತಹ ದಶರಥ ಮಹಾರಾಜನು, ಇನ್ನು ಕಾಯುವುದು ತರವಲ್ಲ. ಆದಷ್ಟು ಬೇಗ ಶ್ರೀರಾಮನ ಪಟ್ಟಾಭಿಷೇಕ ನಾನಿರುವಾಗಲೇ ಮಾಡಿ ಮುಗಿಸಬೇಕು ಎಂಬ ನಿರ್ಧಾರಕ್ಕೆ ಬಂದು, ಮುಹೂರ್ತದ ದಿನ ನಿಗದಿ ಮಾಡಿಸಿದ. ಈ ಬೆಳವಣಿಗೆಯು ಮಂಥರೆಗೆ ಸಂಶಯ ಮೂಡಿಸಿ, ಭರತನು ಇಲ್ಲದ ವೇಳೆಯಲ್ಲೇ ಈ ನಿರ್ಧಾರ ಮಾಡುವ ಉದ್ದೇಶ ಏನಿತ್ತು ಎಂದು ಭರತನ ತಾಯಿಯ ಕಿವಿಗೆ ಅಪಸ್ವರ ಊದಿದಳು. ಮುಂದೆ ಏನೇನು ಆಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಮಹರ್ಷಿ ವಸಿಷ್ಠರೂ ಪರಿಹಾರ ಸೂಚಿಸಲಿಲ್ಲ .ತ್ರಿಕಾಲ ಜ್ಞಾನಿಗಳಿಗೆ ದುಃಖಗಳಿರದು. ಮುಂದೆ ಏನೇನು ಆಗಬೇಕೋ ಅದು ಆಗಲಿದೆ ಎಂದು ತಿಳಿದು ಸುಮ್ಮನಾದರು. ಇದು ರಾವಣ ವಧೆಗೆ ಕಾರಣ ಎಂಬುದನ್ನೂ ಆ ಮಹರ್ಷಿಗಳು ಅರಿತಿದ್ದರು.

ಅದೇ ರೀತಿ ಐನೂರು ವರ್ಷಗಳಿಂದ ದೇಗುಲವು ದೇಗುಲವಾಗಿರದೆ ಒಂದು ಕಟ್ಟಡವಾಗಿತ್ತು. ಮುಕ್ತಿ ಸಿಗಲಿಲ್ಲ. ಸ್ವಾತಂತ್ರ್ಯ ಬಂದ ಮೇಲೂ ಅದಕ್ಕೆ ಭಾರತದ ಪ್ರಜಾ ಪ್ರಭುಗಳು ಪ್ರಯತ್ನ ಮಾಡುತ್ತಿದ್ದರೆ ಸಂಬಂಧಪಟ್ಟವರ ಮನವೊಲಿಸಿ ಮಾಡಬಹುದಾಗಿತ್ತು. ಅವರು ಮಾಡಲಿಲ್ಲ. ನಾನಾ ಕಾರಣಗಳಿಂದ ಹಾಗೆಯೇ ಉಳಿಯಿತು. ಅದಕ್ಕೆ ಬಹುಶಃ ರಾಮನಲ್ಲಿದ್ದಂತಹ ಅಖಂಡ ಸಾಮ್ರಾಜ್ಯ ಯೋಗ ಇರುವ ಮತ್ತೊಬ್ಬ ವ್ಯಕ್ತಿಯೇ ಬರಬೇಕಿತ್ತೋ ಏನೋ! ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಅಖಂಡ ಸಾಮ್ರಾಜ್ಯ ಯೋಗ ಇದೆ ಎಂದು ನಾನು ಹಲವು ಬಾರಿ ಹೇಳಿದ್ದೆ. ಈಗ ಇದೇ ಜನವರಿ 22ರಂದು ಮಕರೇರ್ಕ ಉತ್ತರಾಯಣ, ಮೃಗಶಿರಾ ನಕ್ಷತ್ರ, ಶುಕ್ಲ ಪಕ್ಷದ ದ್ವಾದಶಿ, ಅಭಿಜಿನ್ ಮುಹೂರ್ತದಲ್ಲಿ ಪ್ರಭುಗಳು ಪೀಠದಲ್ಲಿ ಸ್ಥಿರವಾಗಿ ನೆಲೆಗೊಳ್ಳಲಿದ್ದಾರೆ. ನಮ್ಮ ರಾಮ ರಾಜ್ಯದ ಕನಸು ನನಸಾಗಲಿದೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)

(ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರದಾಗಿರುತ್ತದೆ. ಜ್ಯೋತಿಷ್ಯದ ಆಧಾರದಲ್ಲಿ ವಿವಿಧ ಅಂಶಗಳನ್ನು ವಿಶ್ಲೇಷಣೆ ಮಾಡುತ್ತಾ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು, ವಿಶ್ಲೇಷಣೆಗಳಿಗೆ ಲೇಖಕರೇ ಜವಾಬ್ದಾರಿ. ಇದಕ್ಕೆ ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಸಹೋದರ ಸಂಸ್ಥೆಗಳಾಗಲೀ ಜವಾಬ್ದಾರಿ ಅಲ್ಲ. -ಸಂಪಾದಕರು)

Published On - 6:11 pm, Thu, 11 January 24