Guru- Pushya Yoga: ಗುರು-ಪುಷ್ಯ ಯೋಗ ಎಂದರೇನು? ಈ ದಿನದಂದು ಚಿನ್ನ, ಬೆಳ್ಳಿ ಖರೀದಿಸುವುದು ಉತ್ತಮ
ಈ ಗುರು- ಪುಷ್ಯ ಯೋಗ ಅಂದರೆ, ಅಂದಿನ ದಿನ ಗುರುವಾರ ಆಗಿರಬೇಕು ಹಾಗೂ ಪುಷ್ಯ ನಕ್ಷತ್ರ ಇರಬೇಕು. ಈ ಎರಡೂ ಇದ್ದರೆ ಗುರು- ಪುಷ್ಯ ಯೋಗ ಎಂದು ಕರೆಯಲಾಗುತ್ತದೆ. ಯಾರು ಜನಿಸುವ ಸಮಯದಲ್ಲಿ ಪುಷ್ಯ ನಕ್ಷತ್ರದಲ್ಲಿ ಗುರು ಗ್ರಹ ಇರುತ್ತದೋ ಅಂಥವರಿಗೆ ಅತ್ಯುತ್ತಮ ಯೋಗ ಎನ್ನಲಾಗುತ್ತದೆ. ಏಕೆಂದರೆ ಪುಷ್ಯ ನಕ್ಷತ್ರದಲ್ಲಿ ಗುರು ಸ್ಥಿತನಾಗಿರುವಾಗ ಅತ್ಯುತ್ತಮವಾದ ಫಲಗಳನ್ನು ನೀಡುತ್ತಾನೆ.
ಮನೆಗೆ ಚಿನ್ನ- ಬೆಳ್ಳಿ ಮೊದಲಾದ ಬೆಲೆ ಬಾಳುವ ವಸ್ತುಗಳನ್ನು ತರುವಾಗ ಅಥವಾ ತಂದಿವಿ ಅಂತ ಹೇಳಿದಾಗ ನಿಮಗೆ ಒಳಿತನ್ನೇ ಬಯಸುವಂಥವರು ಹೀಗೆ ನಿಮ್ಮ ಮನೆಗೆ ಬರ್ತಾನೆ ಇರಲಿ ಅಂತ ಹಾರೈಸುತ್ತಾರೆ. ಜತೆಗೆ ಮದುವೆಗೋ ಅಥವಾ ಮತ್ಯಾವುದಾದರೂ ಶುಭ ಸಮಾರಂಭವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಒಡವೆ- ವಸ್ತುಗಳನ್ನು ತರಬೇಕು ಅಂದುಕೊಂಡರೆ ಒಂದೊಳ್ಳೆ ದಿನ ನೋಡಿ ಖರೀದಿಸಬೇಕು ಅಂದುಕೊಳ್ಳುತ್ತೇವೆ. ಅಂಥದ್ದೊಂದು ದಿನ ಯಾವುದು, ಅದರ ವಿಶೇಷ ಏನು ಅನ್ನುವುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗುತ್ತಿದೆ. ಮತ್ತು ಆ ದಿನ ಇದೇ ಜನವರಿ ತಿಂಗಳ 25ನೇ ತಾರೀಕಿನಂದು ಬಂದಿದೆ. ಇದನ್ನು ಗುರು-ಪುಷ್ಯ ಯೋಗ ಎಂದು ಕರೆಯಲಾಗುತ್ತದೆ. ಒಂದು ವರ್ಷದಲ್ಲಿ ಇಂಥದ್ದೊಂದು ದಿನ ಬರುವುದು ಬೆರಳೆಣಿಕೆಯಷ್ಟು ಮಾತ್ರ. ಆದ್ದರಿಂದ ನೀವು ಯಾವುದೇ ಎಲೆಕ್ಟ್ರಾನಿಕ್- ಎಲೆಕ್ಟ್ರಿಕಲ್ ವಸ್ತು ತರುವಂತೆ ಇದ್ದರೂ ವಾಹನಗಳ ಖರೀದಿಗೆ ಅಡ್ವಾನ್ಸ್ ಕೊಡಬೇಕು ಅಂತ ಇದ್ದರೂ ಇನ್ನು ಆಯುರ್ವೇದದಲ್ಲಿ ಸ್ವರ್ಣ ಬಿಂದು ಪ್ರಾಶನ ಎಂದು ಮಕ್ಕಳಿಗೆ ಮಾಡುತ್ತಾರೆ. ಅದಕ್ಕಾಗಿಯೂ ಇದು ಉತ್ತಮ ದಿನ.
ಈ ಗುರು- ಪುಷ್ಯ ಯೋಗ ಅಂದರೆ, ಅಂದಿನ ದಿನ ಗುರುವಾರ ಆಗಿರಬೇಕು ಹಾಗೂ ಪುಷ್ಯ ನಕ್ಷತ್ರ ಇರಬೇಕು. ಈ ಎರಡೂ ಇದ್ದರೆ ಗುರು- ಪುಷ್ಯ ಯೋಗ ಎಂದು ಕರೆಯಲಾಗುತ್ತದೆ. ಯಾರು ಜನಿಸುವ ಸಮಯದಲ್ಲಿ ಪುಷ್ಯ ನಕ್ಷತ್ರದಲ್ಲಿ ಗುರು ಗ್ರಹ ಇರುತ್ತದೋ ಅಂಥವರಿಗೆ ಅತ್ಯುತ್ತಮ ಯೋಗ ಎನ್ನಲಾಗುತ್ತದೆ. ಏಕೆಂದರೆ ಪುಷ್ಯ ನಕ್ಷತ್ರದಲ್ಲಿ ಗುರು ಸ್ಥಿತನಾಗಿರುವಾಗ ಅತ್ಯುತ್ತಮವಾದ ಫಲಗಳನ್ನು ನೀಡುತ್ತಾನೆ. ಕೆಲವು ಶಾಸ್ತ್ರಕಾರರ ಅಭಿಪ್ರಾಯವನ್ನೇ ಹೇಳುವುದಾದರೆ ಕರ್ಕಾಟಕ ರಾಶಿಯಲ್ಲಿ ಗುರು ಸಂಚರಿಸುವಾಗ ಉಪನಯನವನ್ನು ಮಾಡುವುದಕ್ಕೆ ಆ ವಟುವಿಗೆ ಗುರು ಬಲ ಇರಲೇಬೇಕು ಎಂದು ಕಾಯುತ್ತಾ ಕೂರುವ ಅಗತ್ಯ ಇಲ್ಲ. ಅಂಥ ಉಚ್ಚ ಸ್ಥಿತಿಯಲ್ಲಿ ಇರುವ ಗುರು ಅತ್ಯುತ್ತಮವಾದದ್ದನ್ನು ಅನುಗ್ರಹಿಸುತ್ತಾನೆ ಎಂಬುದು ನಂಬಿಕೆ ಹಾಗೂ ಅಭಿಪ್ರಾಯ.
ಈಗ ಮತ್ತೆ ಗುರು- ಪುಷ್ಯ ಯೋಗದ ವಿಚಾರಕ್ಕೆ ಬರೋಣ. ಇದೇ ತಿಂಗಳ 25ನೇ ತಾರೀಕು ಗುರುವಾರ ಬಂದಿದ್ದು, ಬೆಳಗ್ಗೆ ಎಂಟೂ ಇಪ್ಪತ್ತರ ನಂತರ ಪುಷ್ಯ ನಕ್ಷತ್ರ ಆರಂಭವಾಗುತ್ತದೆ. ಆದ್ದರಿಂದ ಆ ದಿನ ಬೆಲೆ ಬಾಳುವ ವಸ್ತುಗಳು ಏನನ್ನಾದರೂ ಖರೀದಿಸಿ ತಂದಲ್ಲಿ ವೃದ್ಧಿಯಾಗುತ್ತದೆ, ಇನ್ನೂ ಹೆಚ್ಚೆಚ್ಚು ಬರುತ್ತದೆ ಎಂಬುದರಲ್ಲಿ ಅನುಮಾನವೇ ಬೇಡ. ಇನ್ನು ಈ ದಿನ ಹೊಸದಾಗಿ ಮನೆ ಕಟ್ಟುವುದಕ್ಕೆ ಆರಂಭಿಸುವುದಕ್ಕೆ, ಕಚೇರಿ ಬದಲಾವಣೆ, ಮನೆ ಬದಲಾವಣೆಗೆ ಸಹ ಪ್ರಶಸ್ತವಾದದ್ದು ಎಂಬ ಅಭಿಪ್ರಾಯ ಕೆಲವರಲ್ಲಿ ಇದೆ. ಆದರೆ ಈ ಬಗ್ಗೆ ಅಭಿಪ್ರಾಯ ಭೇದಗಳು ಇದ್ದು, ಅಂದಿನ ತಿಥಿ, ತಾರಾ ಬಲ ಇತ್ಯಾದಿಗಳನ್ನು ನೋಡಲೇಬೇಕು ಎಂದು ಸಹ ಅಭಿಪ್ರಾಯ ಇದೆ.
ಜನವರಿ ಇಪ್ಪತ್ತೈದನೇ ತಾರೀಕು ಪೌರ್ಣಮಿ ಇದ್ದು, ಆ ದಿನ ಮದುವೆ, ಮನೆ ಕಟ್ಟುವುದಕ್ಕೆ ಆರಂಭಿಸುವುದು, ಹೊಸ ವ್ಯಾಪಾರ- ವ್ಯವಹಾರ ಆರಂಭ ಇತ್ಯಾದಿಗಳನ್ನು ಮಾಡುವ ಪರಿಪಾಠ ಇಲ್ಲ. ಆದ್ದರಿಂದ ಚಿನ್ನ- ಬೆಳ್ಳಿ, ಪ್ಲಾಟಿನಂ ಲೋಹಗಳ ವಸ್ತುಗಳ ಖರೀದಿ, ಮದುವೆ ಮೊದಲಾದ ಶುಭ ಸಮಾರಂಭಗಳಿಗೆ ಜವಳಿ ಖರೀದಿ, ಮನೆಗೆ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವುದು ಇಂಥದ್ದನ್ನು ಮಾಡಬಹುದು. ಮುಖ್ಯವಾಗಿ ಚಿನ್ನದ ಒಡವೆ, ಬೆಳ್ಳಿಯ ಪದಾರ್ಥಗಳನ್ನು ತರಬೇಕು ಎಂದೇನಾದರೂ ನೀವು ಇದ್ದಲ್ಲಿ ಆ ದಿನದ ತನಕ ಕಾದಿದ್ದು, ಖರೀದಿಸಿದಲ್ಲಿ ನಿಮ್ಮ ಮನೆಗೆ ಇನ್ನಷ್ಟು, ಮತ್ತಷ್ಟು ವಸ್ತುಗಳು ಬರುತ್ತವೆ. ಹಾಗಂತ ಸಾಲ ಮಾಡಿ, ಖರೀದಿಸುವುದಕ್ಕೆ ಹೋಗಬೇಡಿ. ನಿಮ್ಮ ಬಳಿ ಎಷ್ಟು ಹಣವಿದೆ ಹಾಗೂ ಏನು ಅಗತ್ಯವಿದೆ ಎಂಬುದನ್ನು ಆಲೋಚಿಸಿ, ಅದನ್ನು ಹಾಗೂ ಅಷ್ಟಕ್ಕೆ ಮಾತ್ರ ಖರೀದಿಸಿ.
ಇನ್ನು ಈ ದಿನ ದೇವತಾ ಕಾರ್ಯಗಳನ್ನು ಮಾಡಿದರೂ ಹೆಚ್ಚಿನ ಫಲವನ್ನು ನಿರೀಕ್ಷೆ ಮಾಡಬಹುದು. ನಿಮ್ಮಲ್ಲಿ ಯಾರಿಗಾದರೂ ಗುರು ಗ್ರಹಕ್ಕೆ ಸಂಬಂಧಿಸಿದ ದೋಷ ಇದ್ದಲ್ಲಿ, ಅದೇ ಕಾರಣದಿಂದ ಮದುವೆ ಅಥವಾ ಸಂತಾನ ವಿಳಂಬ ಆಗುತ್ತಿದ್ದಲ್ಲಿ ಅಂಥವರು ಯಾರನ್ನು ಗುರುಗಳು ಎಂದು ಭಾವಿಸುತ್ತೀರಿ ಅಂಥವರಿಗೆ ವಸ್ತ್ರ ಸಮರ್ಪಣೆ ಮಾಡುವುದರಿಂದ ಅಥವಾ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ, ರಾಘವೇಂದ್ರ ಸ್ವಾಮಿಗಳು, ಶಿರಡಿ ಸಾಯಿಬಾಬ ಸೇರಿದಂತೆ ಯಾರನ್ನು ಗುರುಗಳಾಗಿ ಭಾವಿಸಿರುತ್ತೀರಿ, ಅವರ ವಿಗ್ರಹ ಅಥವಾ ವೃಂದಾವನಕ್ಕೆ ಕೂಡ ವಸ್ತ್ರ ಸಮರ್ಪಣೆ ಮಾಡುವುದರಿಂದ ಗುರುಗಳ ಅನುಗ್ರಹ ಆಗುತ್ತದೆ. ರಾಶಿಯ ಪ್ರಕಾರ ನೋಡುವುದಾದರೆ, ಮೇಷ, ವೃಷಭ ಹಾಗೂ ಕನ್ಯಾ ರಾಶಿಯವರು ಯಾರಿದ್ದೀರಿ ಅವರು ವಸ್ತ್ರ ಸಮರ್ಪಣೆ ಮಾಡುವುದರಿಂದ ಈಗ ಎದುರಿಸುತ್ತಿರುವ ಗುರು ಸಂಬಂಧಿ ಸಮಸ್ಯೆಗಳಿಂದ ಮುಕ್ತಿಯನ್ನು ಕಾಣಬಹುದು.
ಇದನ್ನೂ ಓದಿ: ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಸಿಗುವುದಿಲ್ಲವಂತೆ! ಪುರಾಣ ಕಥೆಗಳು ಹೇಳುವುದೇನು?
ಆರಂಭದಲ್ಲೇ ಹೇಳಿದಂತೆ ಒಂದು ವರ್ಷದಲ್ಲಿ ಬೆರಳೆಣಿಕೆಯಷ್ಟು ದಿನಗಳು ಗುರು- ಪುಷ್ಯ ಯೋಗ ಬರುತ್ತದೆ. ಈ ವರ್ಷದಲ್ಲಿ ಹಾಗೆ ಯಾವ್ಯಾವ ದಿನಗಳು ಬಂದಿವೆ ಎಂಬುದನ್ನು ನೋಡಿದರೆ, ಆ ದಿನಾಂಕಗಳು ಹೀಗಿವೆ:
* ಜನವರಿ 25
* ಆಗಸ್ಟ್ 30
* ಸೆಪ್ಟೆಂಬರ್ 26
* ಅಕ್ಟೋಬರ್ 24
ಈ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಿ, ಆ ದಿನದಂದು ಅನುಕೂಲವಾದಲ್ಲಿ ಹಾಗೂ ಅಗತ್ಯವಿದ್ದಲ್ಲಿ ಚಿನ್ನ- ಬೆಳ್ಳಿ ಮೊದಲಾದ ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡಿ. ಹಾಗೂ ಇನ್ನು ಮುಂದೆ, ಅಂದರೆ ಜನವರಿ ನಂತರದಲ್ಲಿ ಬರುವಂಥ ದಿನಗಳಲ್ಲಿ ವೃಷಭ, ಮಿಥುನ, ತುಲಾ ರಾಶಿಯವರು ಹೆಚ್ಚೆಚ್ಚು ಗುರು ಗ್ರಹದ ಆರಾಧನೆಯನ್ನು ಮಾಡಿಕೊಳ್ಳಿ. ಏಕೆಂದರೆ ಮೇ ಒಂದನೇ ತಾರೀಕಿನಿಂದ ವೃಷಭ ರಾಶಿಗೆ ಜನ್ಮ ಗುರು, ಮಿಥುನಕ್ಕೆ ವ್ಯಯ ಸ್ಥಾನಕ್ಕೆ ಗುರು ಹಾಗೂ ತುಲಾ ರಾಶಿಗೆ ಅಷ್ಟಮ ಸ್ಥಾನದ ಗುರುವಿನ ಪ್ರಭಾವ ಇರುತ್ತದೆ. ಅಂದರೆ ಕಠಿಣವಾದ ದಿನಗಳನ್ನು ಎದುರಿಸುವಂತಾಗುತ್ತದೆ. ಆದ್ದರಿಂದ ಈ ಮೇಲ್ಕಂಡ ಮೂರು ರಾಶಿಯವರು ಆಗಸ್ಟ್, ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಗುರು- ಪುಷ್ಯ ಯೋಗ ಇರುವ ದಿನದಂದು ಗುರುವಿನ ಪ್ರೀತ್ಯರ್ಥವಾಗಿ ಆರಾಧನೆಗಳನ್ನು ಮಾಡಿ.
ಅಧ್ಯಾತ್ಮ ಸಂಬಂಧಿತ ಇನ್ನಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ