ಹೆಣ್ಣಿನಂತೆಯೇ ಅಲಂಕಾರ ಮಾಡಿಕೊಂಡು ದೀಪ ಬೆಳಗುವ ಗಂಡಸರು; ಕೇರಳದಲ್ಲಿದೆ ಚಮಯವಿಳಕ್ಕ್ ಎಂಬ ವಿಶಿಷ್ಟ ಆಚರಣೆ

ಚಮಯವಿಳಕ್ಕ್ ಮುಖ್ಯವಾಗಿ ಆಸೆಗಳನ್ನು ಪೂರೈಸಲು ಮತ್ತು ಪಾಪಗಳಿಗೆ ಕ್ಷಮೆ ಪಡೆಯಲು ತೆಗೆದುಕೊಳ್ಳಲಾಗುತ್ತದೆ.  ಪುರುಷರು ಮಹಿಳೆಯರಂತೆ ವೇಷ ಧರಿಸಿ ಇಲ್ಲಿಗೆ ಬರುತ್ತಾರೆ. ಇಲ್ಲಿ ಪುರುಷರು, ಮಕ್ಕಳು, ವಿವಿಧ ಲಿಂಗಗಳ ಜನರು ಹೆಣ್ಣಿನ ವೇಷ ಧರಿಸಿ ದೀಪ ಬೆಳಗುವ ಸುಂದರ ದೃಶ್ಯವನ್ನು ಕಾಣಬಹುದು.

ಹೆಣ್ಣಿನಂತೆಯೇ ಅಲಂಕಾರ ಮಾಡಿಕೊಂಡು ದೀಪ ಬೆಳಗುವ ಗಂಡಸರು; ಕೇರಳದಲ್ಲಿದೆ ಚಮಯವಿಳಕ್ಕ್ ಎಂಬ ವಿಶಿಷ್ಟ ಆಚರಣೆ
ಚಮಯವಿಳಕ್ಕ್ ಹಬ್ಬದಲ್ಲಿ ಕಂಡ ಮುಖಗಳು
Follow us
ರಶ್ಮಿ ಕಲ್ಲಕಟ್ಟ
|

Updated on: Jan 08, 2024 | 5:38 PM

ಕೊಲ್ಲಂ (ಕೇರಳ)ಜನವರಿ 08: ಹೆಣ್ಣಿನಂತೆಯೇ ಶೃಂಗಾರ ಮಾಡಿಕೊಂಡು ಬರುವ ಗಂಡಸರು ಇಲ್ಲಿ ದೀಪ ಬೆಳಗುತ್ತಾರೆ. ಸೀರೆಯುಟ್ಟು ಅಥವಾ ಲಂಗ ದಾವಣಿ ತೊಟ್ಟು ಬರುವ ಗಂಡಸರು ಅಂದವಾಗಿ ಮೇಕಪ್ ಮಾಡಿಕೊಂಡು ದೇವಸ್ಥಾನದ ಅಂಗಣದಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಾರೆ. ಕೇರಳದ (Kerala) ಕೊಲ್ಲಂ ಜಿಲ್ಲೆಯಲ್ಲಿರುವ ಚವರ ಕೋಟಂಕುಳಂಗರ ದೇವಿ (Kottankulangara Devi temple) ದೇವಸ್ಥಾನದಲ್ಲಿ ಪ್ರತೀ ವರ್ಷ ಮಲಯಾಳಂ ತಿಂಗಳು ಮೀನ ಮಾಸದ 10 ಮತ್ತು 11ರಂದು (2024ರ ಕ್ಯಾಲೆಂಡರ್ ಪ್ರಕಾರ ಮಾರ್ಚ್ ತಿಂಗಳು 23 ಮತ್ತು 24) ಈ ದೃಶ್ಯ ಕಾಣಸಿಗುತ್ತದೆ. ಚಮಯವಿಳಕ್ಕ್ (Chamayavilakku) ಎಂಬ ಪದದ ಅರ್ಥ ಹೀಗಿದೆ. ಮಲಯಾಳಂನಲ್ಲಿ ಚಮಯಂ ಅಂದರೆ ಮೇಕಪ್, ವಿಳಕ್ಕ್ ಅಂದ್ರೆ ದೀಪ.

ಈ ದಿನ ಸಾವಿರಾರು ಪುರುಷರು ಸ್ತ್ರೀಯರ ವೇಷ ಧರಿಸಿ ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವಾಲಯದ ಪ್ರಧಾನ ದೇವತೆ ದುರ್ಗಾ ದೇವಿ, ಇದನ್ನು ವನದುರ್ಗಾ ಎಂದೂ ಕರೆಯುತ್ತಾರೆ. ಹಬ್ಬಕ್ಕೆ ತಯಾರಾಗುವಾಗ ಪುರುಷರು ಉಪವಾಸ ಮಾಡುತ್ತಾರೆ ಮತ್ತು ಶಿಸ್ತುಬದ್ಧ ಜೀವನವನ್ನು ಅನುಸರಿಸುತ್ತಾರೆ.

ಆಸೆ ಈಡೇರಿಕೆಗೆ ಸ್ತ್ರೀ ವೇಷ

ಉತ್ಸವದ ಸಮಯದಲ್ಲಿ, ದೇವಾಲಯದ ಆವರಣದಲ್ಲಿ  ಹಲವಾರು ಮೇಕಪ್ ಕೋಣೆಗಳಿರುತ್ತವೆ. ದೇವಾಲಯವು ಅಗತ್ಯವಿದ್ದರೆ, ವೇಷಭೂಷಣಗಳನ್ನು ಸಹ ಒದಗಿಸುತ್ತದೆ. ಚಮಯವಿಳಕ್ಕ್ ಮುಖ್ಯವಾಗಿ ಆಸೆಗಳನ್ನು ಪೂರೈಸಲು ಮತ್ತು ಪಾಪಗಳಿಗೆ ಕ್ಷಮೆ ಪಡೆಯಲು ತೆಗೆದುಕೊಳ್ಳಲಾಗುತ್ತದೆ.  ಪುರುಷರು ಮಹಿಳೆಯರಂತೆ ವೇಷ ಧರಿಸಿ ಇಲ್ಲಿಗೆ ಬರುತ್ತಾರೆ. ಇಲ್ಲಿ ಪುರುಷರು, ಮಕ್ಕಳು, ಟ್ರಾನ್ಸ್ ಜೆಂಡರ್ ಜನರು ಹೆಣ್ಣಿನ ವೇಷ ಧರಿಸಿ ದೀಪ ಬೆಳಗುವ ಸುಂದರ ದೃಶ್ಯವನ್ನು ಕಾಣಬಹುದು. ಚಮಯವಿಳಕ್ಕ್​​ನಲ್ಲಿ ಪಾಲ್ಗೊಳ್ಳಲು ಕೊಲ್ಲಂ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳಿಂದಲೂ ಜನರು ಬರುತ್ತಾರೆ. ಆ ದಿನ ಹೆಣ್ಣಿನ ವೇಷ ಧರಿಸಿದವರನ್ನು ನಾಡು ಮತ್ತು ಜನ ಮಹಿಳೆ ಎಂದು ಗುರುತಿಸುವ ದಿನವೂ ಹೌದು. ಹೆಣ್ಣಿನ ವೇಷ ಧರಿಸುವವರನ್ನು ಪುರುಷಾಂಗನಮಾರ್ (ಪುರುಷ ಅಂಗನೆಯರು) ಎಂದು ಕರೆಯುತ್ತಾರೆ. ಈ ಉತ್ಸವವು ಕೇರಳ ಪ್ರವಾಸೋದ್ಯಮದ ಪ್ರಮುಖ ಪಟ್ಟಿಯಲ್ಲಿದ್ದು, ವಿವಿಧ ಭಾಗಗಳಿಂದ ಜನರನ್ನು ಆಕರ್ಷಿಸುತ್ತದೆ.

ಪುರಾಣ ಕತೆಗಳಲ್ಲೇನಿದೆ?

ಈ ಹಬ್ಬ ಬಗ್ಗೆ ಹಲವಾರು ಕತೆಗಳು ಪ್ರಚಲಿತದಲ್ಲಿವೆ. ಒಂದು ಕಥೆ ಪ್ರಕಾರ, ಭೂತಕುಳಂನ ದಕ್ಷಿಣ ಭಾಗದಲ್ಲಿ ದನ ಕಾಯುವವರ ಗುಂಪಿಗೆ  ತೆಂಗಿನಕಾಯಿ ಸಿಕ್ಕಿತ್ತು. ತೆಂಗಿನಕಾಯಿಗೆ ಕಲ್ಲಿನಿಂದ ಹೊಡೆದಾಗ, ಕಲ್ಲಿನಿಂದ ರಕ್ತ ಬರುವುದನ್ನ ಅವರು ನೋಡಿದರು. ಅವರು ಕೂಡಲೇ ಹಿರಿಯರಿಗೆ ತಿಳಿಸಿದರು. ದೇವಿಯು ನೆಲೆಸಿರುವ ಕಾರಣ ದೇವಾಲಯವನ್ನು ನಿರ್ಮಿಸಿದ ತಕ್ಷಣ ಪೂಜೆಗಳನ್ನು ಮಾಡಬೇಕು ಎಂದು ಜ್ಯೋತಿಷಿ ಹೇಳಿದರು. ಹಿರಿಯರು ಮತ್ತು ಗೋಪಾಲಕರು ತಾತ್ಕಾಲಿಕ ದೇವಾಲಯವನ್ನು ನಿರ್ಮಿಸಿದರು. ಆ ದಿನಗಳಲ್ಲಿ ಕೇವಲ ಬಾಲಕಿಯರಿಗೆ ಮಾತ್ರ ದೇವಿಯನ್ನು ಪೂಜಿಸಲು ಅವಕಾಶವಿದ್ದುದರಿಂದ ಸಂಪ್ರದಾಯದ ಭಾಗವಾಗಿ ಮೊದಲು ಪೂಜೆಯನ್ನು ಮಾಡಿದ ಗೋಪಾಲಕರು ಸ್ತ್ರೀಯರ ವೇಷವನ್ನು ಧರಿಸುತ್ತಿದ್ದರು.

ಇನ್ನೊಂದು ಕತೆಯಲ್ಲಿಯೂ ಇದೇ ವಿವರಣೆ ಇದೆ. ಒಂದಾನೊಂದು ಕಾಲದಲ್ಲಿ ಅಂದರೆ ದೇವಸ್ಥಾನ ಬರುವ ಮೊದಲು ಈ ಜಾಗ ದೊಡ್ಡ ಕಾಡಾಗಿತ್ತು. ಎತ್ತರದ ಮರಗಳು ಮತ್ತು ಗಿಡಗಳಿಂದ ಹಸಿರಿನಿಂದ ಆವೃತವಾದ ಸ್ಥಳ. ಅದರ ಇನ್ನೊಂದು ಬದಿಯಲ್ಲಿ ಭೂತಕುಳಂ ಎಂಬ ಕೊಳವಿತ್ತು. ಈ ಸ್ಥಳವು ಮೊದಲು ವಿಷಕಾರಿ ಹಾವುಗಳ ನೆಲೆಯಾಗಿತ್ತು. ಮಳೆಗಾಲದಲ್ಲಿ ಇಲ್ಲಿಂದ ಬರುವ ಚಿಲುಮೆ ಈ ಭೂಮಿಯನ್ನು ಫಲವತ್ತಾಗಿಸುತ್ತಿತ್ತು. ಇಲ್ಲಿ ಸಾಕಷ್ಟು ಹಸಿರು ಹುಲ್ಲು ಬೆಳೆದಿದ್ದರಿಂದ ದನ ಕಾಯುವವರು ಇಲ್ಲಿಗೆ ಬರುತ್ತಿದ್ದರು. ಒಮ್ಮೆ ಅವರಿಗೆ ಕೊಳದ ಬಳಿ ತೆಂಗಿನಕಾಯಿ ಸಿಕ್ಕಿತು. ಅವರು ತೆಂಗಿನಕಾಯಿಯನ್ನು ಒಡೆಯುವ ಸಲುವಾಗಿ ಅಲ್ಲಿದ್ದ ಕಲ್ಲಿಗೆ ಹೊಡೆದರು. ಇದ್ದಕ್ಕಿದ್ದಂತೆ ರಕ್ತ ಹರಿಯಲಾರಂಭಿಸಿತು. ಗ್ರಾಮದ ಹಿರಿಯರೆಲ್ಲ ಆಗಮಿಸಿ ಸಮಸ್ಯೆ ಹೇಳಿದಾಗ ಅಲ್ಲಿ ದೇವಿಯ ದರ್ಶನವಾಯಿತು. ನಂತರ, ಪ್ರಸ್ತುತ ದೇವಾಲಯದ ಮೊದಲ ರೂಪವು ಇಲ್ಲಿ ಹುಟ್ಟಿಕೊಂಡಿತು. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಹೂಮಾಲೆ, ದೀಪಗಳೊಂದಿಗೆ ಕುಟುಂಬದ ದೇವಸ್ಥಾನಗಳಿಗೆ ಹೋಗುವುದು ಒಂದು ಆಚರಣೆಯಾಗಿತ್ತು. ಇದರಿಂದ ಪ್ರೇರಿತರಾದ ಆ ಗೋಪಾಲಕರು ಹೆಣ್ಣಿನ ವೇಷ ಧರಿಸಿ ಈ ದೇವಸ್ಥಾನಕ್ಕೆ ಹೋಗಲಾರಂಭಿಸಿದರು ಎಂದು ಪುರಾಣ ಹೇಳುತ್ತದೆ.

ಇದನ್ನೂ ಓದಿ: Festival Calendar 2024: ಜನವರಿಯಿಂದ ಡಿಸೆಂಬರ್​​ವರೆಗಿನ ಎಲ್ಲಾ ಹಬ್ಬಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಈ ಹೆಸರು ಹೇಗೆ ಬಂತು?

ಕೋಟಂಕುಳಂಗರ ದೇವಸ್ಥಾನದ ಹೆಸರಿನ ಹಿಂದೆಯೂ ಕಥೆಗಳಿವೆ. ಇಲ್ಲಿ ವನದುರ್ಗೆ ನೆಲೆಸಿರುವ ದೇವಾಲಯವನ್ನು ನಿರ್ಮಿಸುವ ನಿರ್ಧಾರವಾಗಿತ್ತು. ಆಗ ದೇವಿಗೆ ನೈವೇದ್ಯಕ್ಕೆ ತೆಂಗಿನಕಾಯಿ ತುರಿದ ನೈವೇದ್ಯವಾಗಬೇಕೆಂದು ತೀರ್ಮಾನವಾಯಿತು. ಹಾಗಾಗಿಯೇ ಈ ಸ್ಥಳಕ್ಕೆ ಕೋಟಂಕುಳಂಗರ ಎಂಬ ಹೆಸರು ಬಂತು.

ಹಬ್ಬಗಳ ಬಗ್ಗೆ ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ