ಒಂದೇ ಬಾರಿಗೆ ನೀಚ ಸ್ಥಿತಿಯಲ್ಲಿ ರವಿ, ಚಂದ್ರ ಹಾಗೂ ಶುಕ್ರ ಗ್ರಹ; ಏನಿದರ ಪರಿಣಾಮ?
ಇದೇ ಅಕ್ಟೋಬರ್ ತಿಂಗಳಲ್ಲಿ ಮೂರು ಗ್ರಹಗಳು- ರವಿ, ಶುಕ್ರ, ಚಂದ್ರ ತಂತಮ್ಮ ನೀಚ ಸ್ಥಾನದಲ್ಲಿ ಇರುತ್ತವೆ. ಇದರ ಪರಿಣಾಮ ಏನು ಹಾಗೂ ಮೇಷದಿಂದ ಮೀನದ ತನಕ ಯಾವ್ಯಾವ ರಾಶಿಯವರ ಮೇಲೆ ಬೀರುವ ಪ್ರಭಾವ ಏನು ಎಂಬುದರ ವಿವರ ಈ ಲೇಖನದಲ್ಲಿದೆ. ಇನ್ನು ಇದರ ಜೊತೆಗೆ ಪರಿಹಾರಕ್ಕಾಗಿ ಏನು ಮಾಡಬೇಕು ಎಂಬುದನ್ನು ಸಹ ವಿವರಿಸಲಾಗಿದೆ.

ಇದೇ ಅಕ್ಟೋಬರ್ 23, 24, 25, 26ನೇ ತಾರೀಕಿನಂದು ಜ್ಯೋತಿಷ್ಯ ರೀತಿಯಾಗಿ ಮೂರು ಗ್ರಹಗಳು ತಮ್ಮ ನೀಚ ಸ್ಥಿತಿಯಲ್ಲಿ (Debilitation) ಇರುತ್ತವೆ. ಈ ಅವಧಿಯಲ್ಲಿ ವೈಯಕ್ತಿಕವಾಗಿ ಮೇಷದಿಂದ ಮೀನ ರಾಶಿಯ ವ್ಯಕ್ತಿಗಳಿಗೆ ಹಾಗೂ ಪರಿಸರ ಮತ್ತು ವಿವಿಧ ಕ್ಷೇತ್ರಗಳಲ್ಲಿ ವೈಪರೀತ್ಯವನ್ನು ಕಾಣಬೇಕಾಗಲಿದೆ. ಮೇಲ್ಕಂಡ ದಿನಾಂಕದಲ್ಲಿ ಶುಕ್ರ (Venus) ಗ್ರಹವು ತನ್ನ ನೀಚ ಸ್ಥಿತಿಯಾದ ಕನ್ಯಾ (Virgo) ರಾಶಿಯಲ್ಲಿ ಸ್ಥಿತವಾಗಿರುತ್ತದೆ. ಇನ್ನು ರವಿ ಗ್ರಹ (Planet Sun) ತನ್ನ ನೀಚ ಸ್ಥಿತಿಯಾದ ತುಲಾ (Libra) ರಾಶಿಯಲ್ಲಿ ಹಾಗೂ ಚಂದ್ರ (Moon) ವೃಶ್ಚಿಕ (Scorpio) ರಾಶಿಯಲ್ಲಿ ನೀಚ ಸ್ಥಿತಿಯಲ್ಲಿ ಇರುತ್ತದೆ. ಇನ್ನು ಗುರು (Jupiter) ಗ್ರಹ ತನ್ನ ಪರಮೋಚ್ಚ ಸ್ಥಿತಿಯಾದ ಕರ್ಕಾಟಕ (Cancer) ರಾಶಿಯಲ್ಲಿ ಇರುತ್ತದೆ. ಆ ಕಾರಣದಿಂದ ಈ ಅವಧಿಯಲ್ಲಿ ನೀಚ ಸ್ಥಿತಿಯಲ್ಲಿ ಇರುವಂಥ ಚಂದ್ರನ ಮೇಲೆ ಪರಮೋಚ್ಚ ಸ್ಥಿತಿಯು ಗುರು ಗ್ರಹದ ದೃಷ್ಟಿ ಇರುತ್ತದೆ. ಅಷ್ಟರ ಮಟ್ಟಿಗೆ ಚಂದ್ರನ ನೀಚ ಸ್ಥಿತಿ ಪರಿಣಾಮ ಕಡಿಮೆ ಆಗುತ್ತದೆ. ಆದರೂ ಕೆಲವು ಎಚ್ಚರಿಕೆ- ಮುಂಜಾಗ್ರತೆಗಳನ್ನು ತೆಗೆದುಕೊಳ್ಳಲೇಬೇಕು.
ಚಂದ್ರನ ಪರಿಣಾಮ
ನೀಚ ಸ್ಥಿತಿಯ ಚಂದ್ರನ ಪರಿಣಾಮ ಮನಸ್ಸಿನ ಮೇಲೆ, ನೀರಿಗೆ ಸಂಬಂಧಿಸಿದಂತೆ, ಮನುಷ್ಯರ ಜೀರ್ಣ ಶಕ್ತಿಯ ಮೇಲೆ, ತಾಯಂದಿರ ಆರೋಗ್ಯದ ಮೇಲೆ ಆಗುತ್ತದೆ. ಯದ್ವಾತದ್ವಾ ತೀರ್ಮಾನಗಳನ್ನು ತೆಗೆದುಕೊಳ್ಳುವುದು, ನೀರಿನ ಅವಘಡಗಳು ಸಂಭವಿಸುವಂಥದ್ದು, ಹೊಸ ಕಾಯಿಲೆ ಅಥವಾ ಈಗಾಗಲೇ ಇರುವಂಥ ಕಾಯಿಲೆ ಮನುಷ್ಯರ ಜೀರ್ಣ ಶಕ್ತಿಯ ಮೇಲೆ ಪರಿಣಾಮ ಬೀರುವಂಥದ್ದು ಹಾಗೂ ಈಗಾಗಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ತಾಯಂದಿರಿಗೆ ತೊಂದರೆ ತೀವ್ರವಾಗುತ್ತದೆ. ಎಲ್ಲ ಸಮಸ್ಯೆಗಳ ಮೂಲ ಮನಸ್ಸಿನಲ್ಲಿಯೇ ಇದೆ. ಅದು ವಿಕಾರವಾದರೆ ಹೊಸದಾಗಿ ತೊಂದರೆಗಳನ್ನು ಆಹ್ವಾನ ಮಾಡಿದಂತೆ ಆಗುತ್ತದೆ.
ಮುಖ್ಯವಾಗಿ ವೃಷಭ ರಾಶಿ, ವೃಶ್ಚಿಕ ರಾಶಿ, ಧನುಸ್ಸು ರಾಶಿ, ಮೇಷ ರಾಶಿ ಹಾಗೂ ಕರ್ಕಾಟಕ ರಾಶಿಯವರು ಕ್ರಮವಾಗಿ ಸಂಸಾರ ವಿಚಾರದಲ್ಲಿ, ಹಣಕಾಸು ವಿಚಾರದಲ್ಲಿ, ವಾಹನ ಚಾಲನೆ- ಮಾತಿನಲ್ಲಿ ಬಳಸುವ ಪದಗಳು, ಅಲೋಚನೆಗಳು ಮತ್ತು ಅದರ ಆಧಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು.
ಮೀನ ರಾಶಿಯವರು ಅದೃಷ್ಟ ಪರೀಕ್ಷೆಗೆ ಇಳಿಯಬಾರದು, ಮಕರ ರಾಶಿಯವರು ಲಾಭದ ಆಸೆಗೆ ಅಥವಾ ಬೇರೆಯವರು ತೋರಿಸಿದ ಆಮಿಷಕ್ಕೆ ಪಿಗ್ಗಿ ಬಿದ್ದು ಹಣ ಕಳೆದುಕೊಳ್ಳುವಂತೆ ಆಗಬಹುದು ಜಾಗ್ರತೆ. ಇನ್ನು ಮಿಥುನ ರಾಶಿಯವರು ನೀರಿನ ಸೇವನೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಹಾಗೂ ಮುಖದ ಮೇಲೆ ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುವಂತೆ ಆಗಬಹುದು. ಇನ್ನು ಸಿಂಹ ರಾಶಿಯವರು ತಮ್ಮ ತಾಯಂದಿರ ಅಥವಾ ತಾಯಿ ಸಮಾನರಾದವರ ಆರೋಗ್ಯದ ಬಗ್ಗೆ ನಿಗಾ ಮಾಡಬೇಕು.
ಕನ್ಯಾ ರಾಶಿಯವರ ಸೋದರಿಯರ ಜೊತೆಗೆ ವ್ಯಾಜ್ಯ, ಜಗಳ, ಕೋರ್ಟ್- ಕಚೇರಿ ಮೆಟ್ಟಿಲೇರುವಂತೆ ಆಗುವಂತೆ ಈ ರೀತಿಯ ಫಲ ಇದೆ. ಸ್ತ್ರೀಯರ ವಿಚಾರದಲ್ಲಿ ಪ್ರತಿಷ್ಠೆಗೆ ಬಿದ್ದು, ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವಂತೆ ಆಗಲಿದೆ. ತುಲಾ ರಾಶಿಯವರು ಎಲ್ಲಿ ಮಾತನಾಡಬಾರದೋ ಅಲ್ಲಿ ಮಾತನಾಡಿ ಮಾನ, ಹಣ, ಗೌರವ ಕಳೆದುಕೊಳ್ಳುವಂತೆ ಆಗಲಿದೆ. ಕಣ್ಣಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ತೀವ್ರ ಸ್ವರೂಪದಲ್ಲಿ ಕಾಡಲಿದೆ.
ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 5ರಿಂದ 11ರ ತನಕ ವಾರಭವಿಷ್ಯ
ರವಿ ಗ್ರಹದ ಪರಿಣಾಮ
ತುಲಾ, ವೃಶ್ಚಿಕ, ಮೀನ, ಕನ್ಯಾ, ಕರ್ಕಾಟಕ, ಮಿಥುನ, ಕುಂಭ ಇಷ್ಟೂ ರಾಶಿಗಳ ಮೇಲೆ ತೀವ್ರವಾದ ಪ್ರಭಾವ ಇರುತ್ತದೆ.
ತುಲಾ ರಾಶಿಯವರಿಗೆ ಹೃದಯ, ಕಣ್ಣಿನ ಆರೋಗ್ಯ ಸಮಸ್ಯೆ ತೀವ್ರ ಆಗಬಹುದು. ಅದೇ ವೇಳೆ ಸರ್ಕಾರಕ್ಕೆ ಬಾಕಿ ಉಳಿಸಿಕೊಂಡ ತೆರಿಗೆ ಮತ್ತಿತರ ವಿಚಾರಕ್ಕೆ ನೋಟಿಸ್ ಬರಬಹುದು. ಅಹಂಕಾರ ಎಂಬುದು ವ್ಯಾಧಿಯ ರೀತಿಯಲ್ಲಿ ಉಪದ್ರವ ಕೊಡಲಿದೆ.
ವೃಶ್ಚಿಕ ರಾಶಿಯವರಿಗೆ ಸಿಕ್ಕಾಪಟ್ಟೆ ಹಣದ ಖರ್ಚು ಅನವಶ್ಯಕವಾಗಿ ಆಗಲಿದೆ. ಯಾವುದಾದರೂ ಕೆಲಸ ಮಾಡಿಸಿಕೊಡುವುದಾಗಿ ನಿಮಗೆ ಬೇರೆಯವರು ಹಣ ಕೇಳಿದಲ್ಲಿ ಅಂಥ ವ್ಯವಹಾರಗಳ ಕಡೆಗೆ ತಿರುಗಿಯೂ ನೋಡಬೇಡಿ.
ಮೀನ ರಾಶಿಯವರಿಗೆ ವಿಟಮಿನ್ ಕೊರತೆ ಅಥವಾ ದೇಹದಲ್ಲಿ ಇರಬೇಕಾದ ಚೈತನ್ಯ ತರುವ ಅಂಶಗಳಲ್ಲಿನ ಕೊರತೆಯಿಂದ ಸುಸ್ತು, ಆಲಸ್ಯ ಇವೆಲ್ಲ ಕಾಡಬಹುದು. ನಿಮ್ಮಲ್ಲಿ ಕೆಲವರು ಆಸ್ಪತ್ರೆಗೆ ಅಡ್ಮಿಟ್ ಆಗಬೇಕಾದ ಅಗತ್ಯ ಕೂಡ ಕಂಡುಬರಬಹುದು.
ಕನ್ಯಾ ರಾಶಿಯವರು ತಮ್ಮ ಹೇಳಿಕೆ, ಮಾತು, ಭರವಸೆಯನ್ನು ಉದ್ರೇಕತೆಯಿಂದ ನೀಡಿ, ಸಮಸ್ಯೆಗೆ ಸಿಲುಕಿಕೊಳ್ಳಲಿದ್ದೀರಿ. ಯಾವ ಪರಿಸ್ಥಿತಿ- ಸನ್ನಿವೇಶಕ್ಕೆ ಏನು ಮಾತನಾಡಬೇಕು, ಎಷ್ಟು ಮಾತನಾಡಬೇಕು ಎಂಬ ಬಗ್ಗೆ ಪರಿವೆ ಇರಿಸಿಕೊಳ್ಳಬೇಕು.
ಮಿಥುನ ರಾಶಿಯವರಿಗೆ ಸಂತಾನದ ಕಾರಣದಿಂದ ಚಿಂತೆ ಬಲವಾಗುತ್ತದೆ. ಐವಿಎಫ್ ಮೂಲಕ ಮಕ್ಕಳು ಪಡೆಯಲು ಪ್ರಯತ್ನಿಸುತ್ತಿರುವವರು, ಈಗಾಗಲೇ ಗರ್ಭ ಧರಿಸಿರುವವರು ಬಹಳ ಎಚ್ಚರಿಕೆ ವಹಿಸಬೇಕು. ಇನ್ನು ಮಕ್ಕಳ ವಿಚಾರವಾಗಿಯೇ ಚಿಂತೆ, ಬೇಸರ, ಮುಜುಗರ ಅನುಭವಿಸಬೇಕಾಗುತ್ತದೆ.
ಕುಂಭ ರಾಶಿಯವರ ತಂದೆ ಅಥವಾ ತಂದೆ ಸಮಾನರಾದವರ ಅನಾರೋಗ್ಯ ಆತಂಕಕ್ಕೆ ಕಾರಣ ಆಗಬಹುದು. ಇನ್ನು ಕೆಲವರಿಗೆ ತಂದೆಗೆ ಅಪಘಾತ ಆಗುವ ಸಾಧ್ಯತೆಗಳು ಸಹ ಇರುತ್ತವೆ. ಸರ್ಕಾರದ ಮೂಲಕ ಕೆಲಸ ಗುತ್ತಿಗೆ ಪಡೆದು ಮಾಡಿಸುವವರು ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ.
ಶುಕ್ರ ಗ್ರಹದ ಪರಿಣಾಮ
ಕನ್ಯಾ, ಮೇಷ, ಧನುಸ್ಸು, ಮೀನ ರಾಶಿಯವರು ಬಹಳ ಎಚ್ಚರಿಕೆ ವಹಿಸಬೇಕು. ಕನ್ಯಾ ರಾಶಿಯವರಿಗೆ ಗುಪ್ತ ರೋಗಗಳು ಕಾಣಿಸಿಕೊಳ್ಳಬಹುದು ಅಥವಾ ಈಗಾಗಲೇ ಆ ಸಮಸ್ಯೆ ಇದೆ ಅಂತಾದರೆ ತೀವ್ರವಾಗಲಿದೆ. ಇನ್ನು ಮೇಷ ರಾಶಿಯವರು ತಮ್ಮ ಹುದ್ದೆ- ಸ್ಥಾನ-ಮಾನಗಳನ್ನು ಕಳೆದುಕೊಳ್ಳುವಂತೆ ಆಗಲಿದೆ. ಧನುಸ್ಸು ರಾಶಿಯವರು ಉದ್ಯೋಗದಲ್ಲಿನ ನಿರ್ಲಕ್ಷ್ಯ- ಬೇಜವಾಬ್ದಾರಿಯಿಂದ ಹಾಗೂ ತಮ್ಮ ಕೆಲಸವನ್ನು ಇನ್ಯಾರಿಗೋ ವಹಿಸಿ, ಅದರಿಂದ ಹಣವನ್ನು ಕಳೆದುಕೊಳ್ಳುವಂತೆ ಆಗಲಿದೆ. ಮೀನ ರಾಶಿಯವರಿಗೆ ದಾಂಪತ್ಯದಲ್ಲಿ ವಿರಸ, ಪ್ರೇಮಿಗಳ ಜೊತೆಗೆ ಜಗಳ- ಕಲಹ, ಸ್ತ್ರೀಯರಿಗೆ ಸ್ತ್ರೀ ರೋಗಗಳು ಉಲ್ಬಣವಾಗುವ ಸಾಧ್ಯತೆ ಇದೆ. ಸ್ವಚ್ಛತೆ- ನೈರ್ಮಲ್ಯ ಕಾಪಾಡಿಕೊಳ್ಳುವ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು.
ಇತರ ಪರಿಣಾಮಗಳೇನು?
ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು, ಆರ್ಥಿಕ ಕುಸಿತ, ಹಿಂಜರಿತಗಳನ್ನು ಕಾಣುವಂತೆ ಆಗಲಿದೆ. ಸ್ತ್ರೀಯರು ಯಾವ ದೇಶದಲ್ಲಿ ಪ್ರಮುಖ ಹುದ್ದೆಯಲ್ಲಿ ಇದ್ದಾರೋ ಅವರ ಮೇಲೆ ಹಣಕಾಸಿನ ದುರುಪಯೋಗ ಸೇರಿದಂತೆ ನಾನಾ ಆರೋಪಗಳು ಬಂದು, ಅಧಿಕಾರದಿಂದ ಇಳಿಯಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ವಿವಾಹ ವಿಚ್ಛೇದನಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗಲಿದೆ.
ಸರ್ಕಾರಗಳು ಬದಲಾಗುವ, ಉರುಳುವ ಹಾಗೂ ಜನಾಭಿಪ್ರಾಯ ಸಂಗ್ರಹ ಆಗುವ ಸಮಯ ಇದಾಗಿರುತ್ತದೆ. ಒಂದು ವ್ಯವಸ್ಥೆಯಿಂದ ತೆಗೆದುಕೊಳ್ಳುವ ತೀರ್ಮಾನಗಳಿಂದ ಜನರು ರೊಚ್ಚಿಗೆದ್ದು, ತೀವ್ರ ಪ್ರತಿಭಟನೆ, ಆಕ್ರೋಶ ಹೊರಹಾಕಿ, ಅದರ ಮೂಲಕ ಸರ್ಕಾರವೇ ಬೀಳುವ, ದೇಶಗಳು ಅನಿಶ್ಚಿತತೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.
ನೀರಿಗೆ ಸಂಬಂಧಿಸಿದ ದೊಡ್ಡ ಮಟ್ಟದ ಅವಘಡಗಳು ಸಂಭವಿಸುತ್ತವೆ. ಫುಡ್ ಪಾಯಿಸನ್ ನಿಂದ ದೊಡ್ಡ ಮಟ್ಟದ ಅನಾಹುತಗಳು ವರದಿ ಆಗುತ್ತವೆ. ಮಾನಸಿಕ ಕ್ಷೋಭೆಯಿಂದ ಅಥವಾ ಮಾನಸಿಕ ಸಮಸ್ಯೆ ಇರುವಂಥ ವ್ಯಕ್ತಿ- ವ್ಯಕ್ತಿಗಳಿಂದ ಹಲವರ ಜೀವ ಹಾನಿ- ಆಸ್ತಿ ಹಾನಿ ಸಂಭವಿಸಬಹುದು.
ಸ್ತ್ರೀಯರ ಮೇಲೆ ಹೆಚ್ಚು ಪ್ರಭಾವ
ಈ ಗ್ರಹ ಸ್ಥಿತಿಯ ಪ್ರಭಾವ ಸ್ತ್ರೀಯರ ಮೇಲೆ ಹೆಚ್ಚಿರುತ್ತದೆ. ಸನ್ನಿವೇಶಕ್ಕೆ ಪ್ರತಿಕ್ರಿಯೆ ನೀಡುವಾಗ ಅದರ ಪರಿಣಾಮಗಳನ್ನು ಮತ್ತು ಅದರಿಂದ ಆಗಬಹುದಾದ ತೊಂದರೆಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯ. ಮಾನಸಿಕ ನಿಯಂತ್ರಣದಿಂದ ಹಲವು ಅಡ್ಡ ಪರಿಣಾಮಗಳನ್ನು ತಡೆಯುವುದಕ್ಕೆ ಅಥವಾ ಅದರ ಪರಿಣಾಮ ತಗ್ಗಿಸುವುದಕ್ಕೆ ಅವಕಾಶ ಇರುತ್ತದೆ.
ಪರಿಹಾರ ಏನು?
ರವಿ ಗ್ರಹಕ್ಕಾಗಿ ಗೋಧಿ ಹಾಗೂ ಕೆಂಪು ವಸ್ತ್ರವನ್ನು ಭಾನುವಾರದಂದು, ಚಂದ್ರನಿಗಾಗಿ ಅಕ್ಕಿಯನ್ನು ಹಾಗೂ ಬಿಳಿ ವಸ್ತ್ರವನ್ನು ಸೋಮವಾರದಂದು ಹಾಗೂ ಶುಕ್ರ ಗ್ರಹಕ್ಕಾಗಿ ಅವರೆ ಕಾಳನ್ನು ಮತ್ತು ಬಿಳಿ ವಸ್ತ್ರವನ್ನು ಶುಕ್ರವಾರದಂದು ದಾನ ಮಾಡಬೇಕು.
-ಸ್ವಾತಿ ಎನ್.ಕೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
