Taurus Ugadi Horoscope 2025: ವೃಷಭ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ವೃಷಭ ರಾಶಿ ಯುಗಾದಿ ವರ್ಷ ಭವಿಷ್ಯ 2025: ಈ ವರ್ಷ ಯುಗಾದಿಯಂದು ವೃಷಭ ರಾಶಿಯವರಿಗೆ ಶನಿ ಹನ್ನೊಂದನೇ ಮನೆಯಲ್ಲಿದ್ದು ವ್ಯಾಪಾರದಲ್ಲಿ ಲಾಭ, ಆಸ್ತಿ ಖರೀದಿ, ಉದ್ಯೋಗದಲ್ಲಿ ಏಳಿಗೆ ಸೂಚಿಸುತ್ತದೆ. ಗುರು ಎರಡು-ಮೂರನೇ ಮನೆಯಲ್ಲಿದ್ದು ಹಣಕಾಸಿನ ಲಾಭ, ವಿವಾಹ ಯೋಗ ಮತ್ತು ಆರೋಗ್ಯ ಸುಧಾರಣೆ ಸೂಚಿಸುತ್ತದೆ. ರಾಹು ಹತ್ತನೇ ಮನೆಯಲ್ಲೂ, ಕೇತು ನಾಲ್ಕನೇ ಮನೆಯಲ್ಲೂ ಇದ್ದು ಉದ್ಯೋಗದಲ್ಲಿ ಆರಂಭಿಕ ಸಮಸ್ಯೆಗಳು ನಂತರ ಅನುಕೂಲವಾಗಲಿದೆ. ಆದರೆ ಮಾತೃ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.

2025ನೇ ಇಸವಿಯ ಮಾರ್ಚ್ 30ನೇ ತಾರೀಕಿನ ಭಾನುವಾರದಂದು ಚಾಂದ್ರಮಾನ ಯುಗಾದಿ ಇದೆ. ಅಂದಿನಿಂದ ವಿಶ್ವಾವಸು ಸಂವತ್ಸರದ ಆರಂಭವಾಗುತ್ತದೆ. ಪ್ರತಿ ಹೊಸ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದನ್ನು ಗ್ರಹಗಳ ಗೋಚಾರ ಫಲದ ಆಧಾರದಲ್ಲಿ ನೋಡಲಾಗುತ್ತದೆ. ಅದರಲ್ಲೂ ದೀರ್ಘ ಕಾಲದ ತನಕ ಒಂದೇ ರಾಶಿಯಲ್ಲಿ ಸಂಚರಿಸುವಂಥ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನೆನಪಿರಲಿ, ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.
ಮೊದಲಿಗೆ ಗ್ರಹಸ್ಥಿತಿಗಳನ್ನು ತಿಳಿದುಕೊಳ್ಳಿ. ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿ ಪ್ರವೇಶ ಮಾಡುತ್ತದೆ. ಮೇ 14ನೇ ತಾರೀಕು ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಇನ್ನು ಗುರು ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.
ವೃಷಭ ರಾಶಿಯವರ ಯುಗಾದಿ ವರ್ಷ ಭವಿಷ್ಯ:
ಶನಿ (ಹನ್ನೊಂದನೇ ಮನೆ ಸಂಚಾರ):
ವ್ಯಾಪಾರ- ವ್ಯವಹಾರ ಮಾಡುವಂಥವರಿಗೆ ಲಾಭ ಮತ್ತು ಆದಾಯ ಜಾಸ್ತಿ ಆಗಲಿದೆ. ಒಂದು ವೇಳೆ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಇದ್ದಲ್ಲಿ ಅದು ಬಗೆಹರಿಸಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರವಾಗುತ್ತವೆ. ಯಾರು ಉದ್ಯೋಗ ಬದಲಾವಣೆ ಮಾಡಲೇಬೇಕು ಎಂದು ಪ್ರಯತ್ನ ಮಾಡುತ್ತಿದ್ದೀರಿ ಅಂಥವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಅದೇ ರೀತಿ ವೇತನ ಹೆಚ್ಚಳ, ಬಡ್ತಿ ಮೊದಲಾದ ಫಲಗಳನ್ನು ನಿರೀಕ್ಷೆ ಮಾಡಬಹುದು. ನಿಮ್ಮದಲ್ಲದ ತಪ್ಪಿಗೆ ನೀವು ಆರೋಪಿ ಸ್ಥಾನದಲ್ಲಿ ನಿಲ್ಲುವಂತೆ ಆಗಿದ್ದಲ್ಲಿ ಅದರಿಂದ ಹೊರಬರಲಿದ್ದೀರಿ. ಆಸ್ತಿ, ಮನೆ, ಭೂಮಿ, ವಿಲಾಸಿ ವಾಹನಗಳ ಖರೀದಿ ಮೊದಲಾದವು ಆಗಲಿವೆ. ನಿಮಗೆ ಸಿಗುವಂಥ ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವ ಕಡೆಗೆ ಗಮನವನ್ನು ನೀಡಿ.
ಗುರು (ಎರಡು- ಮೂರನೇ ಮನೆ):
ಹಣಕಾಸಿನ ಹರಿವು ಉತ್ತಮವಾಗುತ್ತದೆ. ವಿವಾಹ ವಯಸ್ಕರಾಗಿದ್ದು ಮದುವೆಗೆ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ವಿವಾಹ ನಿಶ್ಚಯ ಆಗುವ ಯೋಗ ಇದೆ. ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದವರಿಗೆ ಸರಿಯಾದ ವೈದ್ಯೋಪಚಾರ ದೊರೆತು, ಚೇತರಿಕೆ ಕಾಣಿಸಿಕೊಳ್ಳಲಿದೆ. ನೀವಾಗಿಯೇ ಪ್ರಚಾರದ ಹುಚ್ಚಿಗೆ ಏನಾದರೂ ಬಿದ್ದರೆ ಹಣ ಮತ್ತು ನೆಮ್ಮದಿ ಎರಡೂ ಕಳೆದುಕೊಳ್ಳುವಂತಾಗುತ್ತದೆ. ನಿಮ್ಮ ಮಾತು ಪ್ರಭಾವಶಾಲಿಯಾಗಿ ಇರಲಿದೆ. ವಿವಿಧ ಅಧಿಕಾರ, ಖ್ಯಾತಿ ದೊರೆಯಲಿದ್ದು, ಅದರಿಂದ ಮೈ ಮರೆಯದಂತೆ ನೋಡಿಕೊಳ್ಳಿ.
ಇದನ್ನೂ ಓದಿ: ಮೇಷ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ರಾಹು (ಹತ್ತನೇ ಮನೆ), ಕೇತು (ನಾಲ್ಕನೇ ಮನೆ):
ಉದ್ಯೋಗ ಸ್ಥಳದಲ್ಲಿ ಮೊದಮೊದಲಿಗೆ ಸಮಸ್ಯೆ ಎಂದುಕೊಂಡಿದ್ದು ನಿಮಗೆ ಅನುಕೂಲಕರವಾಗಿ ಮಾರ್ಪಡಲಿದೆ. ಇತರರ ಕೆಲಸದ ಸಲುವಾಗಿ ನಿಮ್ಮ ಓಡಾಟ ಹೆಚ್ಚಾಗಲಿದೆ. ನಿಮ್ಮ ಬಗ್ಗೆ ಗಾಸಿಪ್ ಗಳು ಹರಿದಾಡಲಿದ್ದು, ಇದರಿಂದ ಸಂತೋಷ- ದುಃಖ ಎರಡನ್ನೂ ಅನುಭವಿಸುತ್ತೀರಿ. ಇನ್ನು ತಾಯಿಯ ಅಥವಾ ಮಾತೃಸಮಾನರಾದವರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಇತರರ ವಾಹನಗಳನ್ನು ಓಡಿಸಬೇಡಿ. ಒಬ್ಬರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಇನ್ನೊಬ್ಬರಿಗೆ ಸಮಸ್ಯೆ ಮಾಡುವುದಕ್ಕೆ ಹೋಗಬೇಡಿ. ಏಕೆಂದರೆ ಇವೆಲ್ಲ ನಿಮ್ಮ ನೆಮ್ಮದಿಯನ್ನು ಹಾಳು ಮಾಡುತ್ತವೆ.
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Sat, 29 March 25