
ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾದ ಶುಕ್ರನು ಮಿಥುನ ರಾಶಿಯಲ್ಲಿ ಸಂಚರಿಸಲಿದ್ದು ಶನಿ, ಬುಧ, ಮಂಗಳ ಮತ್ತು ಚಂದ್ರನ ಪ್ರಭಾವಕ್ಕೆ ಸಿಕ್ಕುವ ಸಂದರ್ಭಗಳು ಬರಲಿದ್ದು, ಸಂಯೋಜನೆಯು ಭೌತಿಕ ಮತ್ತು ಮಾನಸಿಕ ಸ್ತರಗಳಲ್ಲಿ ಬದಲಾವಣೆಗಳನ್ನು ತರಲಿವೆ.
ಬುಧನ ತ್ರಿಂಶಾಂಶದಲ್ಲಿ ಶುಕ್ರನಿರುವುದು ವಿದ್ಯಾರ್ಥಿಗಳಿಗೆ ಬಹಳ ಶುಭಕರ. ಸಂಸ್ಕೃತ, ಕನ್ನಡ ಸೇರಿದಂತೆ ಭಾಷಾ ಅಧ್ಯಯನ ಮಾಡುವವರಿಗೆ ಗ್ರಹಣ ಶಕ್ತಿ ಹೆಚ್ಚಲಿದೆ. ಶನಿಯ ದ್ರೇಕ್ಕಾಣವು ಶಿಸ್ತನ್ನು ನೀಡುತ್ತದೆ. ಉನ್ನತ ಮಟ್ಟದ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗೆ ಈ ಸಮಯವು ಆಳವಾದ ಅಧ್ಯಯನಕ್ಕೆ ಪೂರಕವಾಗಿದೆ. ವ್ಯಾಕರಣ ಮತ್ತು ತರ್ಕ ಶಾಸ್ತ್ರದಲ್ಲಿ ತೊಡಗಿಸಿಕೊಂಡವರಿಗೆ ಗ್ರಂಥಗಳ ಸೂಕ್ಷ್ಮ ಅರ್ಥಗಳು ಸುಲಭವಾಗಿ ಅರ್ಥವಾಗಲಿವೆ.
ಶನಿಯ ದ್ವಾದಶಾಂಶ ಮತ್ತು ದ್ರೇಕ್ಕಾಣದ ಪ್ರಭಾವವು ವೃತ್ತಿ ಜೀವನದಲ್ಲಿ ನಿಧಾನವಾದರೂ ಸ್ಥಿರವಾದ ಪ್ರಗತಿಯನ್ನು ನೀಡುತ್ತದೆ. ಶಾಲಾ-ಕಾಲೇಜು ಅಥವಾ ಗುರುಕುಲಗಳ ಆಡಳಿತ ನಿರ್ವಹಣೆ ಮಾಡುವವರಿಗೆ ವ್ಯವಸ್ಥಿತವಾದ ವೇಳಾಪಟ್ಟಿ ಮತ್ತು ವರದಿಗಳನ್ನು ಸಿದ್ಧಪಡಿಸಲು ಇದು ಸಕಾಲ. ಶುಕ್ರನು ಕೃಷಿಗೂ ಕಾರಕ. ಅಡಿಕೆ ತೋಟ ಅಥವಾ ತೋಟಗಾರಿಕೆಯಲ್ಲಿ ತೊಡಗಿರುವವರಿಗೆ ಶನಿಯ ಪ್ರಭಾವದಿಂದಾಗಿ ದೀರ್ಘಕಾಲಿಕ ಲಾಭದ ಯೋಜನೆಗಳು ಕೈಗೂಡಲಿವೆ. ಭೂಮಿಯ ಫಲವತ್ತತೆ ಹೆಚ್ಚಿಸಲು ಮಾಡುವ ಪ್ರಯೋಗಗಳು ಸಫಲವಾಗುತ್ತವೆ.
ಚಂದ್ರನ ಹೋರೆಯಲ್ಲಿ ಶುಕ್ರನಿರುವುದರಿಂದ ಆರ್ಥಿಕ ವಿಷಯಗಳಲ್ಲಿ ಚಂಚಲತೆ ಇರುತ್ತದೆ. ಆದಾಯ ಬಂದರೂ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಕುಟುಂಬದ ಅಗತ್ಯಗಳಿಗಾಗಿ ಅಥವಾ ಗೃಹೋಪಯೋಗಿ ವಸ್ತುಗಳಿಗಾಗಿ ಹಣ ವ್ಯಯವಾಗಲಿದೆ. ಮಂಗಳನ ನವಾಂಶವು ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಜಾಗರೂಕತೆ ಇರಲಿ ಎಂದು ಸೂಚಿಸುತ್ತದೆ. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಯಾವುದೇ ಆಸ್ತಿ ಖರೀದಿ ಮಾಡಬೇಡಿ.
ಶುಕ್ರನು ವೈವಾಹಿಕ ಜೀವನದ ಕಾರಕ. ಕುಜನ ನವಾಂಶದಲ್ಲಿರುವುದರಿಂದ ಸಂಬಂಧಗಳಲ್ಲಿ ಸ್ವಲ್ಪ ಖಾರ ಇರಬಹುದು. ಸಣ್ಣ ವಿಷಯಗಳಿಗೆ ಪತಿ-ಪತ್ನಿಯರ ನಡುವೆ ವಾದ ಉಂಟಾಗಬಹುದು. ಶನಿಯ ಪ್ರಭಾವವಿರುವುದರಿಂದ ತಾಳ್ಮೆಯಿಂದ ವರ್ತಿಸುವುದು ಅಗತ್ಯ. ಮನೆಯಲ್ಲಿ ಹಿರಿಯ ಸ್ತ್ರೀಯರ ಬಗ್ಗೆ ವಿಶೇಷವಾಗಿ ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸುವುದು ಮುಖ್ಯ. ಚಂದ್ರನ ಹೋರೆಯು ತಾಯಿಯ ಭಾವನೆಗಳಿಗೆ ಬೆಲೆ ನೀಡಲು ಸೂಚಿಸುತ್ತದೆ.
ಕುಜನ ನವಾಂಶವು ಶರೀರದಲ್ಲಿ ಪಿತ್ತ ಅಥವಾ ಉಷ್ಣದ ಪ್ರಮಾಣವನ್ನು ಹೆಚ್ಚಿಸಬಹುದು. ಬುಧನ ತ್ರಿಂಶಾಂಶವು ಮೆದುಳಿಗೆ ಹೆಚ್ಚಿನ ಕೆಲಸ ನೀಡುತ್ತದೆ, ಇದರಿಂದ ಮಾನಸಿಕ ದಣಿವು ಉಂಟಾಗಬಹುದು. ಪ್ರಾಣಾಯಾಮ ಮತ್ತು ಯೋಗದ ಮೂಲಕ ಸಮತೋಲನ ಕಾಯ್ದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ: ಈ ರಾಶಿಯವರಿಗೆ ಒದಗಿಬರಲಿದೆ ಕಂಕಣ ಭಾಗ್ಯ, ಯಾರಿಗೆ ಕಾಯ್ದಿದೆ ಗುಪ್ತ ಸಂಬಂಧದ ಗಂಡಾಂತರ?
ಉತ್ತಮ ಫಲವನ್ನು ವೃಷಭ, ಮಿಥುನ, ಕನ್ಯಾ, ತುಲಾ, ಕುಂಭ ರಾಶಿಗಳು ನೀಡಲಿದ್ದು ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಗೌರವ ಮತ್ತು ಧನಲಾಭ ದೊರೆಯಲಿದೆ. ಮಿಶ್ರ ಫಲವು ಮೇಷ, ಸಿಂಹ, ಧನು, ಮಕರ ರಾಶಿಯವರಿಗೆ ಲಭ್ಯವಾಗಲಿದ್ದು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಆತುರ ಬೇಡ. ಕರ್ಕಾಟಕ, ವೃಶ್ಚಿಕ, ಮೀನ ರಾಶಿಯವರಿಗೆ ಆರೋಗ್ಯ ಮತ್ತು ಖರ್ಚಿನ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಸಾಮಾನ್ಯ ಫಲವನ್ನು ನಿರೀಕ್ಷಿಸಬಹುದು.
ಒಟ್ಟಾರೆಯಾಗಿ ಈ ತಿಂಗಳು ಶುಕ್ರನು ನಿಮ್ಮಲ್ಲಿ ಬೌದ್ಧಿಕ ಚತುರತೆ ಮತ್ತು ಕೆಲಸದ ಜವಾಬ್ದಾರಿ ಎರಡನ್ನೂ ಹೆಚ್ಚಿಸಲಿದ್ದಾನೆ. ಶನಿಯ ಪ್ರಭಾವವು ನಿಮ್ಮನ್ನು ಹೆಚ್ಚು ಪ್ರಬುದ್ಧರನ್ನಾಗಿ ಮಾಡಿದರೆ, ಬುಧನ ಪ್ರಭಾವವು ನಿಮ್ಮ ಸಂವಹನ ಕಲೆಯನ್ನು ವೃದ್ಧಿಸಲಿದೆ.
– ಲೋಹಿತ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ