Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 9ರಿಂದ 15ರ ತನಕ ವಾರಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 9ರಿಂದ 15ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 9ರಿಂದ 15ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಆಹಾರ ಪಥ್ಯ ಅನುಸರಿಸುವಂಥವರು ಆ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ಒಂದು ವೇಳೆ ಈಗ ಯಾರ ಬಳಿ ಔಷಧೋಪಚಾರ ಪಡೆದುಕೊಳ್ಳುತ್ತೀರಿ, ಅಂಥ ವೈದ್ಯರನ್ನು ಬದಲಾವಣೆ ಮಾಡಬೇಕು ಎಂದು ಆಲೋಚನೆ ಮಾಡುತ್ತಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಯೋಚಿಸುವುದು ಉತ್ತಮ. ಇನ್ನು ಮನೆ ನಿರ್ಮಾಣದಲ್ಲಿ ತೊಡಗಿರುವಂಥವರು, ಸೈಟು ಖರೀದಿಗೆ ಹಣ ಹೊಂದಿಸುತ್ತಿರುವಂಥವರಿಗೆ ಹಣಕಾಸಿನ ಹರಿವಿನಲ್ಲಿ ಆಗಾಗ ಅಡೆತಡೆಗಳು ಉಂಟಾಗಿ ಚಿಂತೆಗೆ ಕಾರಣ ಆಗಲಿದೆ. ಹೆಚ್ಚಿನ ಬಡ್ಡಿಗೆ ಹಣ ತಂದರೂ ಪರವಾಗಿಲ್ಲ ಎಂದುಕೊಂಡು ನಿಮ್ಮ ಸಾಮರ್ಥ್ಯವನ್ನು ಮೀರಿದಂತೆ ಸಾಲ ಮಾಡಿದರೆ ಆ ನಂತರ ಪರಿತಪಿಸುವಂತೆ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಕೈ ಅಳತೆಯಲ್ಲೇ ಹಣವನ್ನು ಹೊಂದಿಸುವುದಕ್ಕೆ ಪ್ರಯತ್ನಿಸುವುದು ಒಳ್ಳೆಯದು. ಇನ್ನು ದೀರ್ಘ ಕಾಲದಿಂದ ಯಾವ ವ್ಯಕ್ತಿಗಳ ಜತೆಗೆ ವ್ಯಾಪಾರ- ವ್ಯವಹಾರ ಮಾಡುತ್ತಿದ್ದೀರಿ ಅಂಥವರ ಜತೆಗೆ ಮನಸ್ತಾಪ ಏರ್ಪಡಲಿದೆ. ಕೃಷಿಕರಿದ್ದಲ್ಲಿ ಅಂದುಕೊಂಡ ಸಮಯದಲ್ಲಿ ಮುಗಿಯಬೇಕಾದ ಕೆಲಸಗಳು ಬಹಳ ಮುಂದೆ ಹೋಗುತ್ತದೆ. ಕೈಯಲ್ಲಿ ಇಟ್ಟುಕೊಂಡ ಹಣ ಸಾಕಾಗುವುದಿಲ್ಲ. ನಿಮ್ಮಲ್ಲಿ ಕೆಲವರು ಸಹಕಾರ ಸಂಘಗಳು ಅಥವಾ ಇತರ ಕಡೆಗಳಿಂದ ಸಾಲ ಮಾಡಲೇಬೇಕಾದ ಅನಿವಾರ್ಯ ಎದುರಾಗಲಿದೆ. ಈ ಹಿಂದೆ ನೀವು ನೀಡಿದ್ದ ಮಾತಿನಂತೆ ಸೋದರ ಸಂಬಂಧಿಗಳು, ಅದರಲ್ಲೂ ಅಕ್ಕ-ತಂಗಿಯರಿಗೆ ದೊಡ್ಡ ಮೊತ್ತದ ಹಣವೊಂದನ್ನು ನೀಡಬೇಕಾಗುತ್ತದೆ. ಅವರ ಮನೆಯಲ್ಲಿನ ಮದುವೆ, ಶಿಕ್ಷಣ ಮೊದಲಾದವುಗಳಿಗೆ ಹಣದ ನೆರವು ನೀಡುವಂತೆ ಕೇಳಿಕೊಂಡು ಬರಲಿದ್ದಾರೆ. ನಿಮ್ಮ ಅಸಹಾಯಕತೆಯನ್ನು ಹೇಳಿಕೊಂಡರೂ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ವೃತ್ತಿನಿರತರು ತುಂಬ ನಿರೀಕ್ಷೆ ಇರಿಸಿಕೊಂಡಿದ್ದ ಕೆಲಸವೊಂದಕ್ಕೆ ಸಂಬಂಧಿಸಿದಂತೆ ಮಾಡಿಕೊಂಡ ಸಿದ್ಧತೆಯೆಲ್ಲ ವ್ಯರ್ಥವಾಗುವಂಥ ಸನ್ನಿವೇಶ ನಿರ್ಮಾಣ ಆಗಲಿದೆ. ನೀವು ಬಹಳ ನಂಬಿದ್ದ ಉದ್ಯೋಗಿಯೋ ಅಥವಾ ನಿಮ್ಮ ಪಾಲುದಾರರೋ ತಮ್ಮದೇ ಕಚೇರಿಯನ್ನು ಆರಂಭಿಸುವುದಕ್ಕಾಗಿಯೋ ಅಥವಾ ಬೇರೆಯವರ ಜತೆಗೂಡಿ ವೃತ್ತಿಯ ಸೇವೆಗಳನ್ನು ನೀಡುವುದಕ್ಕೋ ನಿರ್ಧಾರ ಮಾಡಲಿದ್ದಾರೆ. ಇದರಿಂದಾಗಿ ನಿಮಗೆ ಆತಂಕ ಆಗಲಿದೆ. ವಿದ್ಯಾರ್ಥಿಗಳು ಕೆಲವು ವ್ಯಕ್ತಿಗಳ ಮಾತನ್ನು ಕೇಳಿ ಒಂದೇ ಕೆಲಸವನ್ನು ಎರಡೆರಡು ಸಲ ಮಾಡುವಂತಾಗುತ್ತದೆ. ಆದ್ದರಿಂದ ಇತರರ ಮಾತನ್ನು ಕೇಳುವ ಮುನ್ನ ಅದರ ಪರಿಣಾಮವನ್ನು ಆಲೋಚಿಸುವುದು ಮುಖ್ಯ. ಮಹಿಳೆಯರು ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಕೆಲವು ದಾಖಲಾತಿಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಲಿದೆ. ಆದ್ದರಿಂದ ಉದ್ಯೋಗದ ವಿಚಾರಕ್ಕೆ ಅಗತ್ಯ ದಾಖಲಾತಿಗಳು ಎಲ್ಲವೂ ನಿಮ್ಮ ಬಳಿ ಇವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಸ್ನೇಹಿತರು ಅಥವಾ ಆಪ್ತರಿಗಾಗಿ ವಹಿಸಿಕೊಂಡಿದ್ದ ಕೆಲವು ಕೆಲಸಗಳು ತಲೆನೋವಾಗಿ ಪರಿಣಮಿಸಲಿದೆ. ನಿಮಗೆ ಬೇಡ ಅನಿಸಿದ್ದನ್ನು ಯಾವುದೇ ಕಾರಣಕ್ಕೂ ಆ ಕೆಲಸವನ್ನು ಒಪ್ಪಿಕೊಳ್ಳುವುದಕ್ಕೆ ಅಥವಾ ಮಾಡುವುದಕ್ಕೆ ಹೋಗಬೇಡಿ. ಮಕ್ಕಳ ಶಿಕ್ಷಣಕ್ಕಾಗಿ ನೀವು ಮೀಸಲಿಟ್ಟಿದ್ದ ಹಣಕ್ಕಿಂತ ಹೆಚ್ಚು ಖರ್ಚಾಗಲಿದೆ. ಇದಕ್ಕಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಬೇಕಾಗುತ್ತದೆ ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾಗುತ್ತದೆ. ಹೊಸದಾಗಿ ದ್ವಿಚಕ್ರ ವಾಹನ ತೆಗೆದುಕೊಳ್ಳಬೇಕು ಅಂದುಕೊಳ್ಳುತ್ತಿರುವವರು ಅದಕ್ಕೆ ಅಡ್ವಾನ್ಸ್ ನೀಡಲಿದ್ದೀರಿ. ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ನೀವು ಬಯಸಿದಂಥ ಮನೆ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಮ್ಯೂಚುವಲ್ ಫಂಡ್ ಅಥವಾ ಎಫ್ ಡಿ ಮಾಡಿದಂಥ ಹಣವನ್ನು ತೆಗೆದುಕೊಳ್ಳಬೇಕಾದ ಸನ್ನಿವೇಶ ಎದುರಾಗಲಿದೆ. ಹಣ್ಣು- ತರಕಾರಿ ಮಾರಾಟಗಾರರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ. ಕೃಷಿಕರು ಜಮೀನಿನಲ್ಲಿ ನೀರಿನ ವ್ಯವಸ್ಥೆ, ಪಂಪ್ ಸೆಟ್, ವಿದ್ಯುತ್ ಪೂರೈಕೆ ಇತ್ಯಾದಿಗಳನ್ನು ಮಾಡಿಸುವುದಕ್ಕೆ ಬಜೆಟ್ ಮಾಡಿಕೊಳ್ಳಲಿದ್ದೀರಿ. ಇದೇ ವೇಳೆ ಗೋದಾಮು ನಿರ್ಮಾಣ ಸೇರಿದಂತೆ ಇತರ ಕೆಲಸಗಳನ್ನು ಮಾಡಿಸಲು ಅಡ್ವಾನ್ಸ್ ಕೂಡ ನೀಡುವ ಸಾಧ್ಯತೆಗಳಿವೆ. ನಿಮಗೆ ಬಹಳ ಹತ್ತಿರವಾದವರು ಅಥವಾ ಸ್ನೇಹಿತರು ತಮ್ಮ ಹಣಕಾಸಿನ ಅಗತ್ಯಕ್ಕಾಗಿ ನೆರವು ಕೇಳಿಕೊಂಡು ಬರಲಿದ್ದಾರೆ. ವೃತ್ತಿನಿರತರು ಈಗ ಇರುವ ಕಚೇರಿಯನ್ನು ಬದಲಾಯಿಸುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಇಲ್ಲಿಯ ತನಕ ನೀವು ನೀಡಿದ್ದಂಥ ವೃತ್ತಿನಿರತ ಸೇವೆಗೆ ಹಣಕಾಸಿನ ಬಾಕಿ ಬರಬೇಕಿದ್ದಲ್ಲಿ ಈ ವಾರ ಪ್ರಯತ್ನ ಪಟ್ಟಲ್ಲಿ ಅದು ಬರಲಿದೆ. ನೀವು ಕೈಗೊಳ್ಳಬೇಕು ಎಂದುಕೊಂಡಿದ್ದ ಕೋರ್ಸ್, ಖರೀದಿ ಮಾಡಬೇಕು ಎಂದುಕೊಂಡಿದ್ದ ವಾಹನ ಇದ್ದಲ್ಲಿ ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೀರಿ. ಇನ್ನು ಕೆಲವರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವುದಕ್ಕೆ ನಿರ್ಧಾರವನ್ನು ಮಾಡಲಿದ್ದೀರಿ. ವಿದ್ಯಾರ್ಥಿಗಳು ನೀವು ಅಂದುಕೊಂಡಿದ್ದಂಥ ಶಿಕ್ಷಣ ಸಂಸ್ಥೆಗೆ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅದು ಸಿಗಲಿದೆ. ಈ ವಾರದಲ್ಲಿ ನೀವು ಸೇವಿಸುವ ಆಹಾರ- ನೀರಿನ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು. ನಿಮ್ಮಲ್ಲಿ ಯಾರು ಹಾಸ್ಟೆಲ್ ಅಥವಾ ಪಿ..ಜಿ.ಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದೀರೋ ಅಂಥವರಿಗೆ ಖರ್ಚಿನ ಪ್ರಮಾಣವು ವಿಪರೀತ ಹೆಚ್ಚಾಗಲಿದೆ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಬೇಕಾಗುತ್ತದೆ. ಇನ್ನು ಯುವತಿಯರಿಗೆ ತಮ್ಮ ಮನಸ್ಸಿನಲ್ಲಿರುವ ಪ್ರೀತಿಯನ್ನು ಮನೆಯಲ್ಲಿ ಹೇಳಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಬ್ಯೂಟಿಪಾರ್ಲರ್, ಬ್ಯಾಂಗಲ್ ಸ್ಟೋರ್ಸ್ ನಡೆಸುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಉದ್ಯೋಗದಲ್ಲಿ ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಒಂದು ಹಂತದಲ್ಲಿ ನಿಮಗೆ ಈಗಿರುವ ಕೆಲಸವನ್ನು ಬದಲಾಯಿಸಿ ಬಿಡೋಣ ಅಂತಲೂ ಅನಿಸಲಿದೆ. ಆದರೆ ಗಾಬರಿಯಲ್ಲಿ ಯಾವುದೇ ತೀರ್ಮಾನವನ್ನು ಮಾಡಬೇಡಿ. ಒಂದು ಅವಕಾಶ ನಿಮ್ಮ ಕೈಗೆ ಬರುವ ತನಕ ಈಗಿರುವ ಯಾವ ಪ್ರಾಜೆಕ್ಟ್ ನಿಂದಲೂ ಹೊರಬರಬೇಡಿ. ನೆರೆಮನೆಯವರ ಜತೆಗೆ ಹಣಕಾಸಿನ ವ್ಯವಹಾರಗಳು ಇದ್ದಲ್ಲಿ ಈ ವಾರ ಬಗೆಹರಿಸಿಕೊಳ್ಳುವಂಥ ಅವಕಾಶ ದೊರೆಯಲಿದೆ. ಇದಕ್ಕಾಗಿ ಒಂದು ಗಟ್ಟಿ ಪ್ರಯತ್ನವನ್ನು ಮಾಡುವುದು ಮುಖ್ಯವಾಗುತ್ತದೆ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಕೂಡ ಈ ಅವಧಿಯಲ್ಲಿ ಹೆಚ್ಚಾಗುವಂಥ ಸಾಧ್ಯತೆಗಳು ಇವೆ. ಹೊಸ ಕಲಿಕೆಗೆ ಸ್ನೇಹಿತರು ಅಥವಾ ಕುಟುಂಬದ ಸದಸ್ಯರೇ ಸೂಚಿಸಲಿದ್ದಾರೆ. ಇಂಥ ಸಂದರ್ಭದಲ್ಲಿ ಸಕರಾತ್ಮಕವಾಗಿ ಸಲಹೆಯನ್ನು ಸ್ವೀಕರಿಸಿ. ಇಎಂಐನಲ್ಲಿ ಲ್ಯಾಪ್ ಟಾಪ್, ಮೊಬೈಲ್ ಫೋನ್, ಗ್ಯಾಜೆಟ್ ಗಳನ್ನು ಖರೀದಿಸುವುದಕ್ಕೆ ಮನಸ್ಸು ಮಾಡಲಿದ್ದೀರಿ. ಕೊನೆ ಕ್ಷಣದಲ್ಲಿ ಆಯ್ಕೆ ವಿಚಾರವಾಗಿ ಸ್ವಲ್ಪ ಗೊಂದಲ ಏರ್ಪಡುತ್ತದೆ. ಕೃಷಿಕರು ಈಗೇನಾದರೂ ಗದ್ದೆ ಮಾಡುತ್ತಿದ್ದಲ್ಲಿ ಬೆಳೆಯ ವಿಧಾನವನ್ನು ಬದಲಿಸಿಕೊಳ್ಳೋಣ ಎಂದು ಅಲೋಚನೆ ಮಾಡುತ್ತೀರಿ. ಆದಾಯಕ್ಕೆ ಸಂಬಂಧಿಸಿದಂತೆ ದೈನಂದಿನ ಖರ್ಚು, ತಿಂಗಳ ವೆಚ್ಚ, ವರ್ಷಗಳ ಉಳಿತಾಯ ಹೀಗೆ ಆಲೋಚನೆ ಮಾಡಿ, ಕೆಲವು ತೀರ್ಮಾನಗಳನ್ನು ಜಾರಿಗೆ ತರಲಿದ್ದೀರಿ. ಇದಕ್ಕಾಗಿ ಮನೆಯಲ್ಲಿನ ಚಿನ್ನವನ್ನೋ ಅಥವಾ ಭೂಮಿಯನ್ನೋ ಅಡಮಾನ ಮಾಡಿ, ಸಾಲವನ್ನು ಪಡೆಯಲಿದ್ದೀರಿ. ಸ್ವಂತಕ್ಕೆ ಅಥವಾ ಆಪತ್ ಕಾಲಕ್ಕೆ ಎಂದು ಕೂಡಿಟ್ಟುಕೊಂಡಿದ್ದ ಹಣವನ್ನು ಸಹ ಬಳಸಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ವೃತ್ತಿನಿರತರು ನಿಮ್ಮ ಸಮಯಪ್ರಜ್ಞೆಯಿಂದ ದೊಡ್ಡ ಮೊತ್ತದ ಹಣಕಾಸಿನ ನಷ್ಟವನ್ನು ತಪ್ಪಿಸಲಿದ್ದೀರಿ. ನೀವು ಬಹಳ ಸಮಯದಿಂದ ಆರಂಭಿಸಬೇಕು ಎಂದುಕೊಂಡಿದ್ದ ಕೆಲವು ವೃತ್ತಿಪರ ಸೇವೆಗಳನ್ನು ಶುರು ಮಾಡುವುದಕ್ಕೆ ಸಾಧ್ಯವಾಗಲಿದೆ ಅಥವಾ ಅಂತಿಮ ರೂಪು-ರೇಖೆಯನ್ನು ರೂಪಿಸಲಿದ್ದೀರಿ. ಸರ್ಕಾರದಿಂದ ಬರಬೇಕಾದ ಹಣವಿದ್ದಲ್ಲಿ ಈ ಅವಧಿಯಲ್ಲಿ ಪ್ರಯತ್ನಿಸಿದರೆ ಪಡೆದುಕೊಳ್ಳುವ ಅವಕಾಶ ಹೆಚ್ಚಿದೆ. ವಿದ್ಯಾರ್ಥಿಗಳು ನೀವು ವ್ಯಾಸಂಗ ಮಾಡುವ ಶಿಕ್ಷಣ ಸಂಸ್ಥೆಯಲ್ಲಿ ಖ್ಯಾತಿ ಹೆಚ್ಚಾಗಲಿದೆ. ಸ್ನೇಹಿತರ ಬಳಗ ದೊಡ್ಡದಾಗಲಿದೆ. ಸ್ಕಾಲರ್ ಷಿಪ್ ಗಾಗಿಯೋ ಅಥವಾ ಹಾಸ್ಟೆಲ್ ಗಾಗಿ ಅರ್ಜಿ ಸಲ್ಲಿಸಿದವರಿಗೆ ದೊರೆಯಲಿದ್ದು, ಇದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಮಹಿಳೆಯರು ಮನೆಯಲ್ಲಿನ ಜವಾಬ್ದಾರಿಯಿಂದ ಹೈರಾಣಾಗುತ್ತೀರಿ. ಇಷ್ಟು ಸಮಯ ನಿಮಗೆ ನೆರವಾಗುವುದಕ್ಕೆ ಜನ ಇದ್ದರು ಎಂದಾದಲ್ಲಿ ಈ ವಾರ ಅವರು ಸಹ ಬಾರದೆ ಒತ್ತಡ ಹೆಚ್ಚಾಗಲಿದೆ. ಉದ್ಯೋಗಿಗಳಾಗಿದ್ದರೆ ರಜಾ ಕೇಳಿ, ಅದಕ್ಕೆ ಒಪ್ಪಿಗೆಯೂ ಸಿಕ್ಕಿದ್ದು ಕೊನೆ ಕ್ಷಣದಲ್ಲಿ ರಜಾ ದೊರೆಯದಂತಾಗುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನೀವು ಲೆಕ್ಕಾಚಾರ ಹಾಕಿಕೊಂಡು ಮಾಡಿದ್ದ ಕೆಲಸಗಳು ಫಲ ನೀಡುವುದಕ್ಕೆ ಶುರುವಾಗುತ್ತದೆ. ರಾಜಕಾರಣದಲ್ಲಿ ಇರುವಂಥವರು ಭಾರೀ ಚೌಕಾಶಿ ಮಾಡಿ, ನಿಮಗೆ ಬೇಕಾದ್ದನ್ನು ದಕ್ಕಿಸಿಕೊಳ್ಳುವುದರಲ್ಲಿ ಯಶಸ್ಸನ್ನು ಕಾಣುತ್ತೀರಿ. ಈಗಾಗಲೇ ಸೈಟು ಇದೆ ಎನ್ನುವಂಥವರು ಬಹಳ ದೊಡ್ಡ ಮನೆ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸುತ್ತೀರಿ. ಅಥವಾ ಮನೆಯ ನವೀಕರಣವನ್ನಾದರೂ ಭಾರೀ ಬದಲಾವಣೆಯೊಂದಿಗೆ ಕೈಗೊಳ್ಳುವ ಸಾಧ್ಯತೆಗಳಿವೆ. ಮ್ಯೂಚುವಲ್ ಫಂಡ್ ಅಥವಾ ಷೇರು ಮಾರಾಟವನ್ನು ಮಾಡಿ, ಅದನ್ನು ರಿಯಲ್ ಎಸ್ಟೇಟ್ ಅಥವಾ ಚಿನ್ನ ಮೊದಲಾದವುಗಳಲ್ಲಿ ಹೂಡಿಕೆ ಮಾಡುವುದಕ್ಕೆ ನಿರ್ಧಾರವನ್ನು ಮಾಡುತ್ತೀರಿ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ದೊರೆಯಲಿದೆ. ತಕ್ಷಣವೇ ನಿಶ್ಚಿತಾರ್ಥ ಸಹ ಆಗಿಬಿಡುವ ಸಾಧ್ಯತೆಗಳಿವೆ. ಮನೋವೈದ್ಯರಾಗಿ ಕಾರ್ಯ ನಿರ್ವಹಿಸುವವರಿಗೆ ಸನ್ಮಾನಗಳು ಆಗಬಹುದು. ಅದೇ ರೀತಿ ಸ್ವಂತ ಕ್ಲಿನಿಕ್ ಆರಂಭಿಸುವ ಸಾಧ್ಯತೆಗಳು ಸಹ ಇವೆ. ಕೃಷಿಕರಿಗೆ ನಿಮ್ಮದೇ ವೃತ್ತಿಯಲ್ಲಿ ಇರುವಂಥ ಕೆಲವರು ಸಹಾಯ ಕೇಳಿಕೊಂಡು ಬರಲಿದ್ದಾರೆ. ಸರ್ವೇ, ಸ್ಕೆಚ್, ಪೋಡಿ, ಖಾತಾ ಬದಲಾವಣೆ ಇಂಥವುಗಳಿಗೆ ಅರ್ಜಿ ಹಾಕಿಕೊಂಡಂಥವರಿಗೆ ಕೆಲಸ ಸಲೀಸಾಗಿ ಮುಗಿಯುವುದಕ್ಕೆ ಬೇಕಾದ ಸಹಾಯ ದೊರೆಯಲಿದೆ. ಮನೆಯಲ್ಲಿ ದೇವತಾ ಕಾರ್ಯಗಳನ್ನು ಆಯೋಜನೆ ಮಾಡುವುದಕ್ಕೆ ತೀರ್ಮಾನವನ್ನು ಮಾಡಲಿದ್ದೀರಿ. ನಿಮ್ಮ ಹಣಕಾಸಿನ ಅಗತ್ಯಗಳಿಗೆ ಸೋದರ- ಸೋದರಿಯರಿಂದ ನೆರವು ದೊರೆಯಲಿದೆ. ವೃತ್ತಿನಿರತರು ಕೆಲವು ಕೆಲಸಗಳನ್ನು ಮೊದಲಿಂದ ಶುರು ಮಾಡಬೇಕಾಗುತ್ತದೆ. ಈಗಾಗಲೇ ಮಾಡಿದ ಖರ್ಚಿನ ಜತೆಗೆ ಹೊಸದಾಗಿ ಖರ್ಚುಗಳು ಸೇರ್ಪಡೆ ಆಗುತ್ತವೆ. ಅಭಿಪ್ರಾಯ ಭೇದದ ಕಾರಣದಿಂದಾಗಿ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಿಂದ ಹೊರಗೆ ಬರಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಇದಕ್ಕೆ ಪರ್ಯಾಯವಾಗಿ ಆದಾಯದ ದಾರಿ ಮಾಡಿಕೊಳ್ಳುವುದಕ್ಕೆ ಒತ್ತಡ ಸೃಷ್ಟಿ ಆಗಲಿದೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿನ ಬಿಡುವಿಲ್ಲದ ಕೆಲಸವು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುವಂತೆ ಆಗುತ್ತದೆ. ನೀವು ಬಹಳ ನಿರೀಕ್ಷೆ ಇಟ್ಟುಕೊಂಡು ತೆರಳಿದ್ದ ಟ್ಯೂಷನ್ ನಿಮ್ಮ ನಿರೀಕ್ಷೆಯ ಮಟ್ಟದಲ್ಲಿ ಇಲ್ಲದೆ ಬೇಸರಕ್ಕೆ ಕಾರಣವಾಗಲಿದೆ. ಇದೇ ಸಂದರ್ಭದಲ್ಲಿ ನೀವು ಬಳಸುತ್ತಿರುವ ವಾಹನದ ಸಮಸ್ಯೆ ಕೂಡ ಆಗಬಹುದು. ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗುತ್ತದೆ. ಮಹಿಳೆಯರು ಸಂಘ- ಸಂಸ್ಥೆಗಳಲ್ಲಿ ಸ್ಥಾನಮಾನ ಪಡೆದುಕೊಳ್ಳಲಿದ್ದೀರಿ. ತವರು ಮನೆಯಿಂದ ಬರಬೇಕಾದ ಪಿತ್ರಾರ್ಜಿತ ಆಸ್ತಿಗಳು ಇದ್ದಲ್ಲಿ ಆ ಬಗ್ಗೆ ಬಹಳ ಮುಖ್ಯವಾದ ಅಪ್ ಡೇಟ್ ದೊರೆಯಲಿದೆ. ಕಾನೂನು ವ್ಯಾಜ್ಯಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಬೇಕಾದಂಥ ವೇದಿಕೆ ದೊರೆಯಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಅನುಕೂಲ ಆಗಬಹುದು ಎಂದು ನೀವು ಭಾವಿಸಿ, ಹಣ ಹೂಡಿಕೆಯನ್ನು ಮಾಡಿದ್ದ ಕೆಲವು ವಿಚಾರಗಳಲ್ಲಿ ಹಿನ್ನಡೆಯನ್ನು ಕಾಣುವಂತಾಗುತ್ತದೆ. ವ್ಯಕ್ತಿಗಳು ಹಾಗೂ ಸಂಬಂಧದ ವಿಚಾರವಾಗಿ ಈ ಹಿಂದೆ ನೀವು ತೆಗೆದುಕೊಂಡಿದ್ದ ತೀರ್ಮಾನದಿಂದಾಗಿ ಬಹಳ ಚಿಂತೆ ಮಾಡುವಂತಾಗುತ್ತದೆ. ಇತರರ ತಪ್ಪಿಗೆ ನೀವು ತಲೆ ಕೊಡಬೇಕಾಗುತ್ತದೆ. ಅಥವಾ ಅನಿವಾರ್ಯವಾಗಿ ಅವರ ಪರ ವಕಾಲತ್ತು ವಹಿಸುವಂತಾಗುತ್ತದೆ. ಇನ್ನು ಸಾಕು, ಬೇಡ ಅಂದುಕೊಂಡಿದ್ದನ್ನೇ ಮತ್ತೆ ಮತ್ತೆ ಮಾಡುವಂತಾಗುತ್ತದೆ. ಆದರೆ ಈ ವೇಳೆ ನಿಮಗೆ ಒಳ್ಳೆ ಆದಾಯ ಬರುತ್ತದೆ, ಉತ್ತಮ ಆದಾಯ ಮೂಲವಾಗುತ್ತದೆ ಎಂದು ಭಾವಿಸಿ ಒಪ್ಪಿಕೊಂಡಿದ್ದ ಒಪ್ಪಂದದಿಂದ ಈಗ ಹೊರಗೆ ಬಂದು ಬಿಡೋಣ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಸ್ನೇಹಿತರು ಕೂಡ ನಿಮ್ಮ ತೀರ್ಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಲಿದ್ದಾರೆ. ಸಂಭಾವಿತರಂತೆ ಮೇಲುನೋಟಕ್ಕೆ ಕಾಣುತ್ತಿದ್ದಾರೆ ಎಂಬ ಕಾರಣಕ್ಕೆ ಅವರು ಹೇಳಿದ್ದಕ್ಕೆಲ್ಲ ಹೂಂಗುಟ್ಟಬೇಕು ಎಂದೇನಿಲ್ಲ. ಕೃಷಿಕರು ವ್ಯವಹಾರದಲ್ಲಿ ಒಳ್ಳೇತನ, ವೈಯಕ್ತಿಕ ವಿಚಾರಗಳು ಅಡ್ಡ ಬಾರದಂತೆ ನೋಡಿಕೊಳ್ಳಿ. ಮಕ್ಕಳ ಭವಿಷ್ಯಕ್ಕಾಗಿ ನೀವು ಏನು ಆಲೋಚನೆ ಮಾಡುತ್ತಿದ್ದೀರೋ ಅದು ಸಾಕಾರ ಆಗುವುದಕ್ಕೆ ಏನು ಮಾಡಬೇಕು ಎಂಬ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬೇಡಿ. ಈ ವಾರದಲ್ಲಿ ಸಾಧ್ಯವಾದರೆ ಕೆಲ ಸಮಯ ಧ್ಯಾನವನ್ನು ಮಾಡುವುದಕ್ಕೆ ಪ್ರಯತ್ನಿಸಿ. ಸಣ್ಣ ಪುಟ್ಟ ಸಂಗತಿಗಳಿಗೂ ಕ್ಷಮೆ ಕೇಳುವಂಥ ಸ್ಥಿತಿ ನಿರ್ಮಾಣ ಆಗಬಹುದು. ನಿಮ್ಮ ಆತ್ಮವಿಶ್ವಾಸವೇ ಕರಗಿಹೋಗುವಂತಹ ಕೆಲವು ಬೆಳವಣಿಗೆಗಳು ಆಗಲಿವೆ. ಮೂರನೇ ವ್ಯಕ್ತಿಗಳು ನಿಮ್ಮ ನಿರ್ಧಾರಗಳಲ್ಲಿ ವಿಪರೀತ ಮೂಗು ತೂರಿಸುತ್ತಿದ್ದಾರೆ ಎಂಬ ಭಾವನೆ ಕಾಡುವುದಕ್ಕೆ ಆರಂಭಿಸುತ್ತದೆ. ಕೆಲವು ತೀರ್ಮಾನಗಳು ಸದ್ಯಕ್ಕೆ ತೆಗೆದುಕೊಳ್ಳುವುದು ಬೇಡ ಎಂದೇನಾದರೂ ಅನಿಸಿದರೆ ಮುಂದೂಡಿ. ವೃತ್ತಿನಿರತರಿಗೆ ಆದಾಯ ತೆರಿಗೆ, ಜಿಎಸ್ ಟಿ ವಿಷಯಗಳಲ್ಲಿ ಗಮನಕ್ಕೆ ಬಾರದೆ ಹಾಗೇ ಉಳಿದುಹೋದ ಕೆಲವು ತಪ್ಪುಗಳಿಂದಾಗಿ ನಿಮ್ಮ ಸಾಮರ್ಥ್ಯದ ಬಗ್ಗೆಯೇ ಕೊಂಕು ಮಾತುಗಳನ್ನು ಕೇಳುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ಇದೇ ಕಾರಣಕ್ಕಾಗಿ ಮನಸ್ಸಿಗೆ ಬೇಸರವಾಗಿ, ಕೆಲಸ- ಕಾರ್ಯಗಳಲ್ಲಿ ಮೊದಲಿನ ವಿಶ್ವಾಸದಿಂದ ತೊಡಗಿಸಿಕೊಳ್ಳುವುದು ಕಷ್ಟ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ದೃಷ್ಟಿ ದೋಷ ಕೂಡ ಕಾಡಬಹುದು. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಜತೆಗೆ ಸಹ ಸಂಬಂಧ ಹಾಳಾಗುವಂತೆ ಜೋರು ಜಗಳ ಆಗಬಹುದು, ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳ ಮೇಲೆ ಪೋಷಕರ ಆರ್ಥಿಕ ಸ್ಥಿತಿಯ ಒತ್ತಡ ಬೀಳುತ್ತದೆ. ಏಕಾಗ್ರತೆಯಿಂದ ಅಧ್ಯಯನ ಮಾಡುವುದು ಅಸಾಧ್ಯ ಎಂದೆನಿಸುವುದಕ್ಕೆ ಶುರುವಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಕಣ್ಣಿನ ಸಮಸ್ಯೆಗಳು ಕಾಡಬಹುದು. ಮಹಿಳೆಯರಿಗೆ ಫುಡ್ ಪಾಯಿಸನ್, ವೈರಲ್ ಜ್ವರ, ಪಿತ್ತ ಸೇರಿದಂತೆ ಇತರ ಅನಾರೋಗ್ಯ ಸಮಸ್ಯೆಗಳು ಕಾಡಬಹುದು, ಜಾಗ್ರತೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಆತ್ಮವಿಶ್ವಾಸ ಹಾಗೂ ಅಹಂಕಾರ ಹೆಚ್ಚಾಗುವ ವಾರ ಇದಾಗಿರುತ್ತದೆ. ಇದಕ್ಕೆ ಕಾರಣ ಏನೆಂದರೆ, ನಿಮ್ಮಿಂದ ಆಗಬೇಕಾದದ್ದು ಏನೂ ಇಲ್ಲ. ಎಂಥ ಪರಿಸ್ಥಿತಿಯಲ್ಲಿ ಇದ್ದರೂ ನಿಮ್ಮ ಬಳಿ ಸಹಾಯ ಕೇಳಿಕೊಂಡು ಬರುವುದಿಲ್ಲ ಎಂದು ಯಾರ ಮಾತನಾಡಿರುತ್ತಾರೋ ಅಂಥವರೇ ಈ ವಾರ ಒಂದಿಲ್ಲೊಂದು ನೆರವು ಕೇಳಿಕೊಂಡು ಬರಬಹುದು. ಮುಖ್ಯವಾಗಿ ಅನುಭವದ ಮೂಲಕ ಹಾಗೂ ಓದಿನ ಮೂಲಕ ನೀವು ಪಡೆದಂಥ ಜ್ಞಾನಕ್ಕೆ ವಿಪರೀತ ಬೇಡಿಕೆ ಕಾಣಿಸಿಕೊಳ್ಳಲಿದೆ. ದೊಡ್ಡ ದೊಡ್ಡ ಸಂಸ್ಥೆಗಳಿಗೆ ಕನ್ಸಲ್ಟಂಟ್ ಆಗಿ ನಿಮ್ಮನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಈ ಬಗ್ಗೆ ನಿಮ್ಮಲ್ಲಿ ವಿಚಾರಿಸಿಕೊಂಡು ಬರಬಹುದು. ಪ್ರಯಾಣದಿಂದ ಅನುಕೂಲಗಳು ಆಗಲಿವೆ. ಬಟ್ಟೆ ವ್ಯಾಪಾರಿಗಳು, ನೀರಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುತ್ತಿರುವವರು ಅಥವಾ ಔಷಧ ವ್ಯಾಪಾರಿಗಳಿಗೆ ಆದಾಯದಲ್ಲಿ ಉತ್ತಮ ಹೆಚ್ಚಳ ಆಗಲಿದೆ, ಜತೆಗೆ ಆದಾಯ ಮೂಲಗಳು ಸಹ ಜಾಸ್ತಿ ಆಗಲಿವೆ. ಕೃಷಿಕರು ಹೈನುಗಾರಿಕೆಯಲ್ಲಿ ಆದಾಯ ಹಾಗೂ ಲಾಭ ಎರಡರಲ್ಲೂ ಹೆಚ್ಚಳವನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಮಕ್ಕಳ ಹೆಸರಿಗೆ ಆಸ್ತಿ ಹಂಚಿಕೆ ಮಾಡುವ ಬಗ್ಗೆ ಕೂಡ ಆಲೋಚಿಸುವ ಸಾಧ್ಯತೆಗಳಿವೆ. ದೈಹಿಕವಾಗಿ ಸ್ವಲ್ಪ ಕಾಲ ವಿರಾಮ ಪಡೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇನ್ನು ಈ ವಾರದಲ್ಲಿ ಪಶು ಸಾಕಣೆ ಆರಂಭಿಸುವುದಕ್ಕೆ ಯೋಜನೆ ರೂಪಿಸಬಹುದು, ಅದಕ್ಕಾಗಿ ಬ್ಯಾಂಕ್ ಮೊದಲಾದ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದುಕೊಳ್ಳುವ ಸಾಧ್ಯತೆ ಇದೆ. ಮನೆಯಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಈಗಾಗಲೇ ನಿರ್ಧಾರ ಮಾಡಿದ್ದಲ್ಲಿ ಅದರ ನವೀಕರಣ, ವಿಸ್ತರಣೆ ಮಾಡಬಹುದು. ವೃತ್ತಿನಿರತರಿಗೆ ನಿಮ್ಮ ಮಾತಿನ ಮೂಲಕ ಹಲವರನ್ನು ಆಕರ್ಷಿಸುವುದರಲ್ಲಿ ಯಶಸ್ವಿ ಆಗಲಿದ್ದೀರಿ. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳ ಮೂಲಕವಾಗಿ ಹೊಸ ಕ್ಲೈಂಟ್ ಗಳು ಹುಡುಕಿಕೊಂಡು ಬರಲಿದ್ದಾರೆ. ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಹೊಸ ಸೇವೆಗಳನ್ನು ನೀಡಲು ಶುರು ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಏಕಾಏಕಿ ಹಲವು ಕೆಲಸಗಳು ಒಟ್ಟಿಗೆ ಮಾಡಬೇಕಾಗಲಿದೆ. ಆದರೆ ಸಂತೋಷದ ವಿಷಯ ಏನೆಂದರೆ ನಿಮ್ಮ ಸಾಮರ್ಥ್ಯ ಸಹ ಅದಕ್ಕೆ ತಕ್ಕ ಹಾಗೆ ವೃದ್ಧಿ ಆಗಲಿದೆ. ಕುಟುಂಬದಲ್ಲಿ, ಸ್ನೇಹಿತರ ಕಡೆಯಿಂದ ನಿಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಲಿವೆ. ಮಹಿಳೆಯರು ಸಂತಾನದ ನಿರೀಕ್ಷೆಯಲ್ಲಿ ಇದ್ದರೆ ಶುಭ ಸುದ್ದಿ ಕೇಳಲಿದ್ದೀರಿ. ಹೊಸ ವಸ್ತ್ರಾಭರಣಗಳನ್ನು ಖರೀದಿಸುವ ಯೋಗ ಇದೆ. ಇದಕ್ಕಾಗಿ ನಿಮ್ಮ ಸಂಗಾತಿ ಹಣಕಾಸಿನ ನೆರವು ನೀಡಲಿದ್ದಾರೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮ ಜೀವನದ ಅತಿ ಮುಖ್ಯ ತೀರ್ಮಾನಗಳನ್ನು ಈ ವಾರ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಗುರಿ ತಲುಪುವುದಕ್ಕೆ ಆರಿಸಿಕೊಳ್ಳುವ ದಾರಿಯು ಉತ್ತಮ ಫಲಿತಾಂಶವನ್ನು ನೀಡಲಿದೆ. ಹಣಕಾಸನ್ನು ಹೊಂದಿಸಿಕೊಳ್ಳಲೇ ಬೇಕಾದ ಅನಿವಾರ್ಯ ಸೃಷ್ಟಿ ಆಗಲಿದ್ದು, ಅದಕ್ಕಾಗಿ ನಿಮಗೆ ಬರಬೇಕಾದ ಹಣವನ್ನು ಶತಾಯಗತಾಯ ವಸೂಲಿ ಮಾಡಲೇಬೇಕಾಗುತ್ತದೆ. ಇನ್ನು ಇದೇ ವೇಳೆ ಇತರರಿಗೂ ಸಹಾಯ ಮಾಡುತ್ತಾ ನಿಮ್ಮ ಕೆಲಸಗಳನ್ನು ಮುಗಿಸಿಕೊಳ್ಳುತ್ತಾ ಸಾಗುವುದರಿಂದ ಒಂದು ಬಗೆಯ ತೃಪ್ತಿ ನಿಮ್ಮಲ್ಲಿ ಇರಲಿದೆ. ಮನೆಯಲ್ಲಿ ಇರುವಂಥ ಕೆಲವು ಹಳೇ ವಸ್ತುಗಳನ್ನು ಮಾರಾಟ ಮಾಡುವುದಕ್ಕೋ ಅಥವಾ ಹಾಗೇ ಕೊಟ್ಟು ಬಿಡುವುದಕ್ಕೋ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಉದ್ಯೋಗ ವಿಚಾರವಾಗಿ ನೀವು ಈ ಹಿಂದೆ ತೆಗೆದುಕೊಂಡ ತೀರ್ಮಾನದಿಂದಾಗಿ ಈ ವಾರ ಉತ್ತಮ ಫಲಿತಾಂಶಗಳನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ. ನಿಮಗೆ ದೊರೆಯಬಹುದಾದ ಬಡ್ತಿ, ವೇತನ ಹೆಚ್ಚಳ ಅಥವಾ ಪ್ರಮುಖ ಜವಾಬ್ದಾರಿಗಳ ಬಗ್ಗೆ ಮೇಲಧಿಕಾರಿಗಳು ಸೂಚನೆ ನೀಡಲಿದ್ದಾರೆ. ಸ್ವತಃ ನಿಮಗೇ ಮುಂದೆ ನಡೆಯಬಹುದಾದ ಒಳ್ಳೆಯ ವಿಚಾರ ಅನುಭವಕ್ಕೆ ಬರಲಿದೆ. ಕೃಷಿಕರು ಹಾಕಿಕೊಂಡ ಲೆಕ್ಕಾಚಾರದಂತೆಯೇ ಕೆಲಸ- ಕಾರ್ಯಗಳನ್ನು ಮಾಡಿ ಮುಗಿಸಲಿದ್ದೀರಿ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಸೇರಿದಂತೆ ಸರ್ಕಾರಿ ಯೋಜನೆಗಳಿಗಾಗಿ ನೀವು ಹಾಕಿಕೊಂಡಿದ್ದ ಅರ್ಜಿಯು ಇಷ್ಟು ಸಮಯ ಒಂದಲ್ಲ ಒಂದು ಕಾರಣಕ್ಕೆ ತಡವಾಗುತ್ತಿತ್ತು ಎಂದಾದಲ್ಲಿ ಈ ವಾರ ಅದು ಮುಗಿಯಲಿದೆ. ಇನ್ನು ನಿಮ್ಮ ಬಳಿ ಕೆಲವರು ಜಮೀನು ಮಾರಾಟ ಮಾಡುತ್ತೀರಾ ಎಂದು ಕೇಳಿಕೊಂಡು ಬರಬಹುದು. ಹಾಗೂ ಉತ್ತಮ ಬೆಲೆಯನ್ನು ಕೊಡಿಸುವುದಾಗಿಯೂ ಹೇಳಬಹುದು. ವೃತ್ತಿಪರರಿಗೆ ಕೆಲವು ಪ್ರತಿಷ್ಠಿತ ಕಂಪನಿಗಳಿಂದ ಉದ್ಯೋಗಕ್ಕಾಗಿ ಆಫರ್ ಬರುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಈಗಿರುವ ಕಚೇರಿಯಲ್ಲಿ ಕೆಲವು ಬದಲಾವಣೆಗಳು ಮಾಡಿಸಬೇಕು ಎಂದೆನಿಸಬಹುದು. ಒಂದು ವೇಳೆ ಇತರರ ಬಳಿ ವೃತ್ತಿ ನಿರ್ವಹಣೆ ಮಾಡುತ್ತಿರುವವರು ಸ್ವಂತವಾಗಿ ಶುರು ಮಾಡುವ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ಸ್ವಲ್ಪ ಹೆಚ್ಚಾಗಲಿದೆ. ಮನೆಗೆ ಕೆಲವು ಸಂಬಂಧಿಗಳು, ನೆಂಟರು ಬರುವುದರಿಂದ ನಿಮ್ಮ ಲಕ್ಷ್ಯ ಆಚೀಚೆ ಆಗಬಹುದು. ಅದು ಮನೆಯ ಕೆಲಸವೇ ಇರಬಹುದು ಅಥವಾ ಉದ್ಯೋಗ, ವೃತ್ತಿ- ವ್ಯವಹಾರಗಳೇ ಇರಬಹುದು ಮಹಿಳೆಯರು ಹೆಚ್ಚು ಹುಮ್ಮಸ್ಸಿನಲ್ಲಿ ಕೆಲಸ- ಕಾರ್ಯಗಳಲ್ಲಿ ತೊಡಗಲಿದ್ದೀರಿ. ಚಿನ್ನದ ಚೀಟಿ ಅಥವಾ ಬೇರೆ ಯಾವುದೇ ಚೀಟಿಯನ್ನು ಹಾಕಿದಲ್ಲಿ ಅದನ್ನು ತೆಗೆದುಕೊಳ್ಳುವುದಕ್ಕೆ ನಿರ್ಧಾರವನ್ನು ಮಾಡಲಿದ್ದೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಈ ವಾರ ಭಾವನಾತ್ಮಕವಾಗಿ ನಿಮಗೆ ಒಂದಿಷ್ಟು ಬೇಸರ ಆಗುವಂಥ ಬೆಳವಣಿಗೆಗಳು ಆಗಲಿವೆ. ನಿಮ್ಮಿಂದಲೇ ಏನೋ ತಪ್ಪಾಗಿದೆಯಾ ಅಥವಾ ಅದು ನಿಮ್ಮ ಎದುರಿಗೆ ಇರುವಂಥವರ ಸಮಸ್ಯೆಯೋ ತಿಳಿಯದೆ ಕಸಿವಿಸಿಗೆ ಗುರಿ ಆಗುತ್ತೀರಿ. ಇನ್ನು ಕುಟುಂಬದಲ್ಲೂ ಸನ್ನಿವೇಶ ಅಷ್ಟೇನೂ ಚೆನ್ನಾಗಿರುವುದಿಲ್ಲ. ಸಂಬಂಧಗಳನ್ನು ತುಂಬಾ ಚೆನ್ನಾಗಿ ನಿಭಾಯಿಸಬೇಕು ಎಂಬ ನಿಮ್ಮ ಪ್ರಯತ್ನ ಅಷ್ಟೇನೂ ಉತ್ತಮ ಫಲವನ್ನು ನೀಡುವುದಿಲ್ಲ. ನಿಮಗೆ ಗೊತ್ತಾಗದೆ ಅಥವಾ ಅರಿವಿಗೆ ಬಾರದೆ ಯಾರ ಎದುರು ಏನನ್ನು ಮಾತನಾಡಬಾರದೋ ಅವರೆದುರು ಕೆಲವು ವಿಚಾರಗಳನ್ನು ಮಾತನಾಡಿ, ಆ ನಂತರದಲ್ಲಿ ಪರಿತಪಿಸುವಂತಾಗುತ್ತದೆ. ಒಂದು ವೇಳೆ ಇದೇ ವಿಚಾರಕ್ಕೆ ಕುಟುಂಬ ಸದಸ್ಯರ ದೃಷ್ಟಿಯಲ್ಲಿ ನೀವು ಬಹಳ ಚಿಕ್ಕವರಂತೆ ಆದಲ್ಲಿ ನಿಮ್ಮದೇ ಸರಿ ಎಂದು ಮೊಂಡು ವಾದ ಹೂಡುತ್ತಾ ಕೂರಬೇಡಿ. ಅದನ್ನು ಒಪ್ಪಿಕೊಂಡು, ಹೇಗೆ ಸರಿಪಡಿಸಿಕೊಳ್ಳಬೇಕು ಎಂಬ ಬಗ್ಗೆ ಆಲೋಚನೆಯನ್ನು ಮಾಡಿ. ನಿಮ್ಮಲ್ಲಿ ಕೆಲವರಿಗೆ ರಕ್ತದ ಕೊರತೆ ಕಾಡಬಹುದು. ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವಂತೆ ವೈದ್ಯರು ಸೂಚಿಸಬಹುದು. ಇದರಿಂದ ಖರ್ಚು ಜಾಸ್ತಿ ಆಗುವುದು ಒಂದು ಕಡೆಯಾದರೆ, ಆತಂಕ ಇನ್ನೊಂದು ಕಡೆ ಕಾಡಲಿದೆ. ಕೃಷಿಕರಿಗೆ ಕೃಷಿ ಉತ್ಪನ್ನಗಳ ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಬಹಳ ನಂಬಿಕೆ ಇಟ್ಟು ಮಾಡಿದ್ದ ಕೆಲಸಗಳು ಅಂದುಕೊಂಡಂತೆ ಆಗದೆ ಭಾರೀ ಬೇಸರ ಆಗಲಿದೆ. ಇದರಿಂದ ಸಮಯ, ಹಣ, ಶ್ರಮ ಎಲ್ಲವೂ ವ್ಯರ್ಥವಾಯಿತು ಎಂದು ಬೇಸರ ಮಾಡಿಕೊಳ್ಳಲಿದ್ದೀರಿ. ಇನ್ನು ನೀವು ಕಾರ್ಯ ನಿರ್ವಹಿಸುವಂಥ ವಲಯದಲ್ಲಿ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ಅಪಪ್ರಚಾರ ಮಾಡುವ ಸಾಧ‌್ಯತೆ ಇದೆ. ಇದರಿಂದ ಎದೆಗುಂದಬೇಡಿ. ಈ ಸಮಸ್ಯೆ ತಾತ್ಕಾಲಿಕ ಮಾತ್ರ. ವೃತ್ತಿನಿರತರು ಈಗಾಗಲೇ ಮುಗಿದು ಹೋಗಿದ್ದ ಒಪ್ಪಂದಗಳು ಮತ್ತೆ ಮುಂದುವರಿಯುತ್ತದೆ ಎಂದು ನಿರೀಕ್ಷೆ ಮಾಡುತ್ತಿದ್ದಲ್ಲಿ ನಿರಾಸೆ ಆಗಬಹುದು. ಆ ಒಪ್ಪಂದ ಮುಂದುವರಿಯದೇ ಹೋಗಬಹುದು. ಆದರೆ ನೀವು ಅದನ್ನು ನೆಚ್ಚಿಕೊಂಡು, ಬೇರೆ ಕಮಿಟ್ ಮೆಂಟ್ ಮಾಡಿಕೊಂಡಿದ್ದಲ್ಲಿ ಸಂಕಷ್ಟ ಎದುರಿಸುವಂತಾಗುತ್ತದೆ. ಇದರಿಂದ ಆರ್ಥಿಕವಾಗಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ವಾಹನಗಳಿಂದ ಬಿದ್ದು ಪೆಟ್ಟು ಮಾಡಿಕೊಳ್ಳುವಂಥ ಸಾಧ್ಯತೆಗಳಿವೆ. ಆದ್ದರಿಂದ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಅದರಲ್ಲೂ ವೇಗವಾಗಿ ಚಾಲನೆ ಮಾಡಲೇಬಾರದು. ಮಹಿಳೆಯರಿಗೆ ಮದುವೆ ವಿಚಾರದಲ್ಲಿ ನಾನಾ ಅಡೆತಡೆಗಳು ಎದುರಾಗಬಹುದು. ಈಗಾಗಲೇ ಆಗಿರುವ ನಿಶ್ಚಿತಾರ್ಥ ಮುರಿದು ಬೀಳುವಂಥ ಸನ್ನಿವೇಶ ಸೃಷ್ಟಿ ಆಗಬಹುದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಈ ವಾರ ಒಂದು ಬಗೆಯ ಮೊಂಡುತನ, ಯಾವುದನ್ನೂ ಕೇಳಿಸಿಕೊಳ್ಳದ ರೀತಿಯಲ್ಲಿ ನಿರ್ಲಕ್ಷ್ಯ ನಿಮ್ಮಲ್ಲಿ ಮನೆ ಮಾಡಲಿದೆ. ಯಾವುದೇ ಕೆಲಸವನ್ನು ಇತರರಿಗೆ ಒಪ್ಪಿಸುವುದಕ್ಕೆ ನಿಮಗೆ ಮನಸ್ಸಾಗುವುದಿಲ್ಲ ಅಥವಾ ಧೈರ್ಯ ಸಾಕಾಗುವುದಿಲ್ಲ. ಆದರೆ ಇದು ವಾರದ ಮೊದಲಾರ್ಧ ಮಾತ್ರ, ಆ ನಂತರದಲ್ಲಿ ಯಾರು ಏನೇ ಅಂದುಕೊಳ್ಳಲಿ ನನಗೆ ಅನಿಸಿದ್ದನ್ನೇ ಮಾಡುತ್ತೇನೆ ಎಂದು ಹೊರಡಲಿದ್ದೀರಿ. ಆರಂಭದಲ್ಲಿ ನಿಮಗೂ ನಿಮ್ಮ ನಿರ್ಧಾರದಿಂದ ಆತಂಕ, ಭಯ ಕಾಡುತ್ತದೆ. ಆದರೆ ಅದರಿಂದ ಕ್ರಮೇಣ ಒಳ್ಳೆಯದಾಗುತ್ತಾ ಇದೆ ಎಂಬುದು ಅರಿವಿಗೆ ಬರಲಿದೆ. ಇತರರಿಗೆ ಮಾದರಿ ಆಗುವಂಥ ಕೆಲವು ಕೆಲಸಗಳನ್ನು ನೀವು ಮಾಡಿ ಮುಗಿಸಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳು ಅಚ್ಚರಿಯಿಂದ ನಿಮ್ಮ ಕಡೆಗೆ ನೋಡುವಂತಾಗುತ್ತದೆ. ಇನ್ನು ಮನೆಯಲ್ಲೂ ಸಂಭ್ರಮದ ವಾತಾವರಣ ಇರುತ್ತದೆ. ವಿವಾಹ ವಯಸ್ಕರಾಗಿದ್ದು, ಮದುವೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಮನಸ್ಸಿಗೆ ಮೆಚ್ಚುವಂಥ ಸಂಬಂಧಗಳು ಹುಡುಕಿಕೊಂಡು ಬರಲಿವೆ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಅವಕಾಶಗಳು ಹುಡುಕಿಕೊಂಡು ಬರಬಹುದು. ಈಗಿರುವ ಹುದ್ದೆಗಿಂತ ಬಹಳ ಉತ್ತಮವಾದ ಸ‌್ಥಾನ- ಮಾನ ದೊರೆಯಬಹುದು. ಕೃಷಿಕರು ಈಗಿರುವ ಭೂಮಿಯ ಅಕ್ಕಪಕ್ಕದಲ್ಲೇ ಇನ್ನಷ್ಟು ಭೂಮಿಯನ್ನು ಖರೀದಿಸಬಹುದು ಅಥವಾ ಗುತ್ತಿಗೆಗೆ ಪಡೆಯುವಂಥ ಯೋಗ ಕಂಡುಬರುತ್ತಿದೆ. ಇನ್ನು ಕೆಲವರು ತಾವಾಗಿಯೇ ದುಂಬಾಲು ಬಿದ್ದು, ಕೆಲವರಿಗೆ ಸದ್ಯಕ್ಕೆ ಎಷ್ಟು ಹಣ ಇದೆಯೋ ಅಷ್ಟನ್ನು ಕೊಡಿ, ಬಾಕಿ ಉಳಿದಿದ್ದಕ್ಕೆ ಸಮಯ ನೀಡುವುದಾಗಿ ಮಾರಾಟಕ್ಕೆ ಇಟ್ಟವರೇ ಹೇಳುವ ಸಾಧ್ಯತೆಗಳು ಹೆಚ್ಚಿವೆ. ಈಗಿನ ಸಮಯದ ಅನುಕೂಲ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಆಲೋಚಿಸುವುದು ಒಳ್ಳೆಯದು. ವೃತ್ತಿನಿರತರು ವಿಲಾಸಿ ವಾಹನಗಳನ್ನು ಖರೀದಿಸಬಹುದು ಅಥವಾ ನಿಮ್ಮ ಕ್ಲೈಂಟ್ ಗಳೇ ನಿಮಗೆ ನೀಡಬೇಕಾದ ಹಣದ ಬದಲಿಗೆ ವಾಹನವನ್ನು ತೆಗೆದುಕೊಳ್ಳುವಂತೆ ಹೇಳಬಹುದು. ಸಾಮಾಜಿಕವಾಗಿಯೂ ನಿಮ್ಮನ್ನು ಗುರುತಿಸುವವರು ಹೆಚ್ಚಾಗಲಿದ್ದಾರೆ. ಪ್ರತಿಷ್ಠಿತ ಸಂಸ್ಥೆಗಳ ಸದಸ್ಯತ್ವ ಕೂಡ ದೊರೆಯುವ ಯೋಗ ಇದೆ. ಈ ಹಿಂದೆ ನೋಡಿಕೊಂಡು ಬಂದು, ಹಣಕಾಸು ವಿಚಾರಕ್ಕೆ ಬಿಟ್ಟುಹೋಗಿದ್ದ ಭೂಮಿಯೋ ಅಥವಾ ಕಟ್ಟಡವೋ ಮತ್ತೆ ಖರೀದಿಗಾಗಿ ನಿಮ್ಮ ಬಳಿಯೇ ಹುಡುಕಿಕೊಂಡು ಬರಲಿದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಮೋಘ ಸಾಧನೆ ಮಾಡುವಂಥ ಯೋಗ ಕಂಡುಬರುತ್ತಿದೆ. ಇತರರು ನಿಮ್ಮ ಕಡೆಗೆ ಬೆರಗಿನಿಂದ ನೋಡುವಂಥ ದಿನಗಳು ಇದಾಗಿರುತ್ತವೆ. ಮಹಿಳೆಯರು ಉದ್ಯೋಗ ಸ್ಥಳದಲ್ಲಿ ಬಡ್ತಿ, ವೇತನ ಹೆಚ್ಚಳ, ವಿದೇಶಕ್ಕೆ ಪ್ರಯಾಣ, ಪ್ರಮುಖ ಹುದ್ದೆಗಳಿಗೆ ನಿಮ್ಮ ಹೆಸರು ಕೇಳಿಬರಬಹುದು.