Fastest building construction: ಚೀನಾದ ಚಂಗ್ಷಾದಲ್ಲಿ 10 ಅಂತಸ್ತಿನ ಕಟ್ಟಡ ಕೇವಲ 28 ಗಂಟೆ 45 ನಿಮಿಷದಲ್ಲೇ ನಿರ್ಮಾಣ
ಚೀನಾದ ಚಂಗ್ಷಾದಲ್ಲಿ ಹತ್ತು ಅಂತಸ್ತಿನ ವಸತಿ ಕಟ್ಟಡ ನಿರ್ಮಾಣವನ್ನು ಕೇವಲ 28 ಗಂಟೆ 45 ನಿಮಿಷದಲ್ಲಿ ಕಟ್ಟಿ ಮುಗಿಸಲಾಗಿದೆ. ಆ ಬಗೆಗಿನ ಆಸಕ್ತಿಕರ ಅಂಶಗಳು ಇಲ್ಲಿವೆ.
ತುಂಬ ಕಡಿಮೆ ಸಮಯದಲ್ಲಿ ನಿರ್ಮಾಣವಾದ ದೊಡ್ಡ ಕಟ್ಟಡಗಳ ಬಗ್ಗೆ ಬೇಕಾದಷ್ಟು ಮಾತುಗಳನ್ನು ಕೇಳಿರುತ್ತೇವೆ. ಅಂಥ ಕಟ್ಟಡಗಳು ಸುಮ್ಮನೆ ನಿರ್ಮಾಣ ಆಗಿರುವುದಿಲ್ಲ. ಅದಕ್ಕೂ ಮುಂಚೆ ವಿಸ್ತೃತವಾದ ಯೋಜನೆ, ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿ ಮತ್ತು ಇತರ ಅಂಶಗಳನ್ನು ಸಹ ಅವಲೋಕನ ಮಾಡಿ, ಸಿದ್ಧತೆ ಬಹಳ ಚೆನ್ನಾಗಿ ಮಾಡಿಕೊಳ್ಳಲಾಗಿರುತ್ತದೆ. ಸಾಮಾನ್ಯವಾಗಿ ದಿನಗಳು, ವಾರಗಳು ಅಥವಾ ಕೆಲವು ಸಮಯ ತಿಂಗಳುಗಳ ಸಮಯ ತೆಗೆದುಕೊಂಡು ನಿರ್ಮಾಣ ಸಂಪೂರ್ಣ ಆಗುತ್ತದೆ. ಆದರೆ ಚೀನಾದ ಚಂಗ್ಷಾ ನಗರದಲ್ಲಿ ಹತ್ತು ಅಂತಸ್ತಿನ ವಸತಿ ಉದ್ದೇಶದ ಕಟ್ಟಡವನ್ನು ಕೇವಲ 28 ಗಂಟೆ 45 ನಿಮಿಷದಲ್ಲಿ ಕಟ್ಟಲಾಗಿದೆ. ಈ ಕಟ್ಟಡವನ್ನು ನಿರ್ಮಿಸಿದ ಡೆವಲಪರ್ ಬ್ರಾಡ್ ಗ್ರೂಪ್ನಿಂದ ಈ ಬಗ್ಗೆ ಐದು ನಿಮಿಷದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ನಲ್ಲಿ ಜೂನ್ 13ನೇ ತಾರೀಕು ಹಂಚಿಕೊಳ್ಳಲಾಗಿದೆ. ಹೇಗೆ ಸಂಪೂರ್ಣ ಕಟ್ಟಡವನ್ನು ನಿರ್ಮಿಸಲಾಯಿತು ಎಂಬುದನ್ನು ಅದರಲ್ಲಿ ತೋರಿಸಲಾಗಿದೆ. ಮನುಷ್ಯರಿಂದಲೋ ಅಥವಾ ತಾಂತ್ರಿಕತೆಯಿಂದಲೋ ಇಷ್ಟು ಕಡಿಮೆ ಸಮಯದಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಾಧ್ಯ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಪ್ರೀ ಫ್ಯಾಬ್ರಿಕೇಟೆಡ್ ನಿರ್ಮಾಣ ಪದ್ಧತಿಯಿಂದ ಇದು ಸಾಧ್ಯವಾಗಿದೆ. ನ್ಯೂ ಅಟ್ಲಾಸ್ನಲ್ಲಿ ಜೂನ್ 16ನೇ ತಾರೀಕು ಈ ಬಗ್ಗೆ ವರದಿ ಪ್ರಕಟವಾಗಿದೆ. ಪ್ರೀ ಫ್ಯಾಬ್ರಿಕೇಟೆಡ್ ಅಂದರೆ, ಮುಂಚಿತವಾಗಿಯೇ ಸಿದ್ಧಗೊಂಡ ಕಟ್ಟಡ ರಚನೆಗಳು. ಬಿಡಿ ಬಿಡಿಯಾಗಿ ಸಿದ್ಧಗೊಂಡ ಅವುಗಳನ್ನು ಒಪ್ಪವಾಗಿ ಜೋಡಿಸಿದರೆ, ಕಟ್ಟಡ ಸಿದ್ಧವಾಗುತ್ತದೆ. ಅದೂ ಶೀಘ್ರವಾಗಿ ನಿರ್ಮಾಣ ಮುಗಿದು ಹೋಗುತ್ತದೆ. ಕಟ್ಟಡದ ಮಾಡ್ಯುಲ್ಗಳು ದೊಡ್ಡ ಕಂಟೇನರ್ಗಳಂತೆ ಕಾಣುತ್ತವೆ. ಮೊದಲಿಗೆ ಅವುಗಳನ್ನು ಬ್ರಾಡ್ ಸಮೂಹದ ಕಾರ್ಖಾನೆಯಲ್ಲಿ ನಿರ್ಮಿಸಲಾಗುತ್ತದೆ. ಆ ನಂತರ ಕಟ್ಟಡ ನಿರ್ಮಾಣದ ಸ್ಥಳಕ್ಕೆ ಟ್ರಕ್ಗಳಲ್ಲಿ ಸಾಗಿಸಲಾಗುತ್ತದೆ. ಆ ನಂತರ ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ನಿಲ್ಲಿಸಲಾಗುತ್ತದೆ. ಯೂಟ್ಯೂಬ್ನಲ್ಲಿ ಇರುವ ಪ್ರಕಾರ, ಕ್ರೇನ್ಗಳನ್ನು ಬಳಕೆ ಮಾಡಿಕೊಂಡು, ಮಾಡ್ಯುಲ್ಗಳನ್ನು ಒಂದರ ಮೇಲೆ ಒಂದು ಜೋಡಿಸಲಾಗಿದೆ. ಒಂದು ಸಲ ಇವೆಲ್ಲ ಪೂರ್ತಿಯಾದ ಮೇಲೆ ಆ ಮಾಡ್ಯುಲ್ಗಳನ್ನು ಬೋಲ್ಟ್ಗಳು ಬಳಸಿ ಜೋಡಿಸುತ್ತಾರೆ. ಆ ನಂತರ ವಿದ್ಯುತ್ ಹಾಗೂ ನೀರಿನ ಸಂಪರ್ಕ ಸಂಪರ್ಕ ಮೊದಲಾದವಕ್ಕೆ ವ್ಯವಸ್ಥೆ ಮಾಡುತ್ತಾರೆ.
ನ್ಯೂ ಅಟ್ಲಾಸ್ ವರದಿಯ ಪ್ರಕಾರ, ಕನಿಷ್ಠ ಮೂರು ಕ್ರೇನ್ಗಳು ಇದ್ದಲ್ಲಿ ಚಂಗ್ಷಾದಲ್ಲಿನ ಹತ್ತು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಇನ್ನಷ್ಟು ವೇಗ ದೊರೆಯುತ್ತಿತ್ತು. ಆದರೆ ಸ್ಥಳದಲ್ಲಿ ಇದ್ದ ಕಟ್ಟಡ ನಿರ್ಮಾಣ ಕಾರ್ಮಿಕರು ಕಡಿಮೆ. ಬ್ರಾಡ್ ಸಮೂಹವು ಹೇಳಿರುವ ಪ್ರಕಾರ, ಇದು ಭೂಕಂಪನಗಳಿಂದ ರಕ್ಷಣೆ ಪಡೆದಿದೆ ಮತ್ತು ಇವುಗಳನ್ನು ಬೇರ್ಪಡಿಸಿ, ಬೇರೆ ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು.
ಇದನ್ನೂ ಓದಿ: ವಿಶ್ವದಲ್ಲೇ ಅತಿವೇಗದ ಕಂಪ್ಯೂಟರ್ಗಿಂತ 100 ಲಕ್ಷ ಕೋಟಿ ಪಟ್ಟು ಫಾಸ್ಟ್: ಇದು ಚೀನಾದ ಕ್ವಾಂಟಂ ಕಂಪ್ಯೂಟರ್
(Broad group constructed 10 storied building in China’s Changsha within 28 hours 45 minutes. Here is the details)